• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಯತ್ರಿ ಮಹಾಯಜ್ಞ- ಶರಣ ಮೇಳ : ಧನ್ಯವಾಯಿತು ದೆಲ್ಲಿ !

By Staff
|
  • ಉಷಾ ಭರತಾದ್ರಿ, ನವದೆಹಲಿ
ಕಳೆದ ಅಕ್ಟೋಬರ್‌ ತಿಂಗಳ ಕೊನೆ ವಾರಾಂತ್ಯ ದೆಹಲಿಗನ್ನಡಿಗರಿಗೆ ಕ್ಷಣವೂ ಬಿಡುವಿಲ್ಲದ ಕಾರ್ಯಕ್ರಮಗಳ ಸುಗ್ಗಿ. ಎಲ್ಲ ಒಂದಕ್ಕಿಂತ ಒಂದು ಚೆನ್ನಾಗಿರುವ ಕಾರ್ಯಕ್ರಮಗಳು. ಯಾವುದು ಬೇಕು? ಯಾವುದು ಬೇಡ? ಪರದಾಡುವ ಸ್ಥಿತಿ.

ತಾಯ್ನಾಡಿನಿಂದ ಪ್ರತಿಯಾಬ್ಬರಿಗೂ ಒಬ್ಬರಲ್ಲಾ ಒಬ್ಬರು ನೆಂಟರು, ಬಂಧುಗಳು, ಗುರುತು-ಪರಿಚಿತರನ್ನು ಬರಮಾಡಿಕೊಳ್ಳುವ, ಭೆಟ್ಟಿಯಾಗುವ ಸಂಭ್ರಮ. ಎಲ್ಲೆಲ್ಲೂ ಹಬ್ಬದ ವಾತಾವರಣ. ಒಂದು ಕಡೆ ಅಕ್ಟೋಬರ್‌30 ಮತ್ತು 31ರಂದು ನಡೆದ ‘ಕೋಟಿ ಗಾಯತ್ರಿ ಮಹಾಯಜ್ಞ‘ಕ್ಕಾಗಿ ಕರುನಾಡಿನಿಂದ ಆಗಮಿಸಿದ ಅಸಂಖ್ಯಾತ ಗಾಯತ್ರಿ ಭಕ್ತರು, ಅನೇಕ ಮಠಗಳ ಪೂಜ್ಯ ಗುರುಗಳು. ಪರಮ ಪೂಜ್ಯ ಶ್ರೀ ವಲ್ಲಭ ಚೈತನ್ಯ ಗುರುಗಳು, ಪರಮ ಪೂಜ್ಯ ಪ್ರೇಮಾನಂದ ಸರಸ್ವತಿ ಮಹಾರಾಜ್‌, ಶ್ರೀ ವಿಶ್ವೇಶ್ವರ ತೀರ್ಥ ಗುರುಗಳು -ಪೇಜಾವರ ಮಠ, ಪರಮಪೂಜ್ಯ ಶ್ರೀ ಸುಶಮೀಂದ್ರ ತೀರ್ಥ ಮಹಾಸ್ವಾಮಿಗಳು- ಮಂತ್ರಾಲಯ, ಪರಮಪೂಜ್ಯ ಶ್ರೀ ಬಸವರಾಜೇಂದ್ರ ಸ್ವಾಮಿಗಳು- ಅಧ್ಯಾತ್ಮಕ ಕೇಂದ್ರ , ರಾಯಚೂರು, ಬೆಂಗಳೂರಿನ ಸಾಧನ ಸಂಗಮದ ಗುರುಗಳಾದ ಶ್ರೀ ಪಟ್ಟಾಭಿರಾಮರು, ದೆಹಲಿಯ ಉತ್ತರಾಧಿ ಮಠದ ಯಾದವಾಚಾರ್ಯಸ್ವಾಮಿಗಳು, ಇವರೆಲ್ಲರ ದಿವ್ಯ ಸಮನ್ವಯ ಸಂದರ್ಶನ, ಮುಂದಾಳತ್ವದಲ್ಲಿ ದೇವಿ ಶ್ರೀಗಾಯತ್ರಿಯ ಕೋಟಿ ಮಹಾ ಯಜ್ಞ ಸಾಂಗೋಪಂಗವಾಗಿ ನೆರವೇರಿತು.

Dr. Karan Singh inaugurating Karnataka religious and sharana community events in New Delhiಶ್ರಿಶ್ರೀಗಳ ಆಶೀರ್ವಚನದಿಂದ ಅಲೌಕಿಕತೆಯ ಧನ್ಯತೆಯನ್ನು ನೆರೆದ ಕನ್ನಡಿಗರು ಪಡೆದರು. ಉತ್ತರಭಾರತೀಯರೆಂಬ ಭೇದವೆಣಿಸದೆ ಭಕ್ತಾದಿಗಳು ಏಕೋಭಾವದಿಂದ ಭಗವತಿ ಗಾಯತ್ರಿಯ ಯಜ್ಞದಲ್ಲಿ ಪಾಲ್ಗೊಂಡರು. ಅರ್‌.ಕೆ.ಪುರಮ್‌, ಸೆಕ್ಟರ್‌ 12, ರಾಯರ ಮಠದ ಹಿಂಭಾಗದ ದೊಡ್ಡ ಮೈದಾನದಲ್ಲಿ ಹದಿನೈದು ಸಾವಿರ ಜನ ಸೇರಬಹುದಾದಂಥ ಭವ್ಯ ಪೆಂಡಾಲ್‌, ಯಜ್ಞಕುಂಡ, ಮಧ್ಯದಲ್ಲಿ ದೊಡ್ಡ ಪ್ರವಚನಾ ಸಭಾಸ್ಥಾನ, ಇನ್ನೊಂದು ಭೋಜನ ಶಾಲೆ. ಹೀಗೆ ಸುವ್ಯವಸ್ಥಿತವಾದ ಸಮಾರೋಹದಲ್ಲಿ ಪರಮ ಪಾವನ ದಿನ 30ರಂದು ಮತ್ತು 31ರಂದು ಸಾವಿರಾರು ಭಕ್ತಾದಿಗಳೆಲ್ಲ ಗಾಯತ್ರಿ ಮಹಾಕೋಟಿ ಯಜ್ಞದಲ್ಲಿ ಭಾಗವಹಿಸಿದರು. ಅದೇ ದಿನ 31 ರಂದು ದೆಹಲಿಯ ಇನ್ನೊಂದು ಮೂಲೆಯಲ್ಲಿ, ಅಂದರೆ, ದೆಹಲಿಯ ಹೃದಯಭಾಗವೆನಬಹುದಾದ ರಫೀ ಮಾರ್ಗ, ‘ಮಾಳವಂಕರ ಭವನ‘ದಲ್ಲಿ ಕರ್ನಾಟಕ ಅಖಿಲ ಭಾರತ ಶರಣ ಸಾಹಿತ್ಯಪರಿಷತ್ತು, ಮೈಸೂರು, ಹಾಗೂ ದೆಹಲಿಯ ಜೆ.ಎಸ್‌.ಎಸ್‌. ತಾಂತ್ರಿಕ ಶಿಕ್ಷಣ ಕೇಂದ್ರ, ನೋಯಡಾ, ಇವರ ಸಹಯೋಗದಲ್ಲಿ ಆಯೋಜಿಸಲಾದ ‘‘ಹನ್ನೆರಡನೆ ಶತಮಾನದ ಶರಣರ ಕ್ರಾಂತಿಕಾಲ ಮತ್ತು ಭಾರತೀಯ ಪ್ರಜಾಪ್ರಭುತ್ವ‘ದ ಬಗೆಗಿನ ವಿಚಾರಗೋಷ್ಠಿಗೆ ಕರ್ನಾಟಕದಿಂದ ದೆಹಲಿಗೆ ಕರ್ನಾಟಕದ ವಿವಿಧ ಪ್ರಾಂತ್ಯಗಳಿಂದ ಕರ್ನಾಟಕ ರಾಜ್ಯವಲ್ಲದೆ ಹೊರನಾಡಿನ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದ ಬಂದಿದ್ದ 800ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ದೆಹಲಿಯ ಕನ್ನಡಿಗರಿಂದ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲದೇ ಸಾಹಿತ್ಯಾಸಕ್ತರು ಇಡೀ ದಿನ ನಿಂತು ಕಾರ್ಯಕ್ರಮ ವೀಕ್ಷಿಸಿದರು.

ತರಳುಬಾಳು ಮಠಾಧೀಶ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಯವರ ದಿವ್ಯ ಸನ್ನಿಧಿಯಲ್ಲಿ ಕೇಂದ್ರದ ಮಾಜಿ ಸಚಿವರಾದ ಡಾ.ಕರಣ್‌ಸಿಂಗ್‌ರವರು ವಿಚಾರ ಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿದರು. ತಮ್ಮ ವಿದ್ವತ್‌ಪೂರ್ಣ ಭಾಷಣದಲ್ಲಿ ಶರಣರ ತತ್ವ, ಕ್ರಾಂತಿ, ಧೋರಣೆ ಹಾಗೂ ಮಹತ್ವಗಳನ್ನು ಎಲ್ಲರ ಮನಮುಟ್ಟುವಂತೆ ತಿಳಿಸಿದರು.

ತರಳಬಾಳು ಮಠಾಧೀಶ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಯವರು ಆಶೀರ್ವಚನ ನೀಡಿ, ಕಾಯಕವೇ ಪೂಜೆ ಎಂಬ ಸಿದ್ದಾಂತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದು ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿದ್ದು ಶರಣ ಚಳವಳಿ ಎಂದು ನುಡಿದರು.

ಜಾತಿ-ಮತ ಭೇದವನ್ನು ನಿರ್ಮೂಲನ ಮಾಡಿ, ಸಮಾನತೆಯನ್ನು ಶರಣರು ಜಗತ್ತಿಗೇ ಸಾರಿದರು ಎಂದು ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಯವರು ಪ್ರತಿಪಾದಿಸಿದರು. ನಮ್ಮ ಸಂವಿಧಾನದ ಕೆಲವು ಭಾಗಗಳು ಹನ್ನೆರಡನೆಯ ಶತಮಾನದ ವಚನಗಳ ಪ್ರತಿಫಲವಾಗಿ ಕಂಡುಬರುತ್ತದೆ. ಕಾಯಕ, ದಾಸೋಹಗಳು ಶರಣ ಚಳವಳಿಯ ಮೂಲ ಗುರಿ. ಸಮಾಜವಾದದ ಸಮಾಜ 800 ವರ್ಷಗಳ ಹಿಂದೆಯೇ ಸೃಷ್ಟಿಯಾಗಿತ್ತು. 21ನೇ ಶತಮಾನದಲ್ಲೂ ಆಧುನಿಕ ಚಿಂತಕರು ಅಭಿವ್ಯಕ್ತಪಡಿಸಲು ಹಿಂಜರಿಯುವಂತಹ ಆಶೋತ್ತರಗಳಿಗೆ ಸಮರ್ಪಣಾ ಭಾವದ ಶರಣರು ಅಂದೇ ದನಿ ನೀಡಿದ್ದಾಗಿ ಸ್ವಾಮೀಜಿ ವಿವರಿಸಿದರು.

ಮೊದಲನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಸುಪ್ರೀಂಕೋರ್ಟಿನ ಘನತೆವೆತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ವಹಿಸಿದ್ದರು. ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಪಿ.ಪಿ.ರಾವ್‌ರವರು ಮುಕ್ತ ಚಿಂತನೆ ಮತ್ತು ವಾಕ್‌ ಸ್ವಾತಂತ್ರ್ಯ ವಿಷಯವನ್ನು ಮಂಡಿಸಿದರು.

ಶರಣ ಹಾಗೂ ಸತ್ಪ್ರಜೆಗಳ ಪರಿಕಲ್ಪನೆ ವಿಚಾರವನ್ನು ಜವಾಹರಲಾಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಚ್‌.ಎಸ್‌.ಶಿವಪ್ರಕಾಶ್‌ ಸಭಾಂಗಣದಲ್ಲಿ ನೆರೆದಿದ್ದ ಕನ್ನಡಿಗರ ಮನಮುಟ್ಟುವಂತೆ ಕನ್ನಡದಲ್ಲಿ ಸರಳವಾಗಿ ತಿಳಿಸಿದರು. American Institute of Indian Studies ಸಂಸ್ಥೆಯ ನಿರ್ದೇಶಕರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಆಧ್ಯಾತ್ಮಿಕ ಕಲ್ಯಾಣ ಪ್ರಭುತ್ವ ಹಾಗೂ ಸಾಮಾಜಿಕ ಕಲ್ಯಾಣ ಪ್ರಭುತ್ವ ವಿಷಯದ ಚಿಂತನ-ಮಂಥನ ನಡೆಸಿದರು. ಇಂಗ್ಲೀಷ್‌ನಲ್ಲಿ ನಡೆಯಬೇಕಿದ್ದ ಗೋಷ್ಠಿ ಕನ್ನಡವಾಗಿ ಮಾರ್ಪಟ್ಟಿದ್ದು ಈ ಗೋಷ್ಠಿಯ ವೈಶಿಷ್ಟ್ಯ.

ಮಧ್ಯಾಹ್ನ ಊಟದ ನಂತರ ಆರಂಭವಾದ ಎರಡನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ರಾಜ್ಯ ಸಭಾ ಸದಸ್ಯರಾದ ಸನ್ಮಾನ್ಯ ಆರ್‌.ಕೆ.ಆನಂದ್‌ ವಹಿಸಿದ್ದರು. ಪ್ರಜಾಪ್ರಭುತ್ವ,: ಆಧ್ಯಾತ್ಮಿಕ ಹಾಗೂ ರಾಜಕೀಯ ನೆಲೆಗಳಲ್ಲಿ- ಈ ಮಹತ್ವದ ವಿಷಯವನ್ನು ವಿಶ್ಲೇಷಿಸಿದವರು ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಸನ್ಮಾನ್ಯ ಸಲ್ಮಾನ್‌ ಖುರ್ಷಿದ್‌. ನೈತಿಕ ಹಾಗೂ ತಾತ್ವಿಕ ಅಧಿನಿಯಮಗಳು- ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದವರು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಟಿ.ಎಸ್‌.ಸತ್ಯನಾಥ್‌. ಆಧುನಿಕ ಜಗತ್ತಿನ ಸಂದರ್ಭದಲ್ಲಿ ಕಾಯಕ ಹಾಗೂ ದಾಸೋಹಗಳ ಮಹತ್ವ- ಈ ಕುರಿತು ತಮ್ಮ ಚಿಂತನೆಯನ್ನು ಸಾದರಪಡಿಸಿದವರು ICSSR ನ ನಿರ್ದೇಶಕರಾದ ಡಾ.ಅರುಣ್‌ ಪಿ.ಬಾಲಿ.

ಬಿಜಾಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಯೋಜನಾ ಖಾತೆಯ ರಾಜ್ಯ ಸಚಿವರಾದ ಎಂ.ವಿ.ರಾಜಶೇಖರನ್‌, ಸಂವಿಧಾನದಲ್ಲಿ ಪ್ರತಿಫಲಿತವಾಗಿರುವ ಸ್ವಾತಂತ್ರ್ಯ, ಸಮಾನತೆ, ಸೋದರತೆ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಿಗೆ ಬಸವಣ್ಣನವರ ವಚನಗಳೇ ಆಧಾರ ಎಂದು ನುಡಿದರು. ಸಮಾರೋಪ ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ಶಿವರಾಜ್‌ ಪಾಟೀಲ್‌ ಒಂದು ಧರ್ಮ ಮತ್ತೊಂದು ಧರ್ಮವನ್ನು ಗೌರವಿಸಬೇಕು, ಧರ್ಮಗಳು ಸಮಾಜದಲ್ಲಿ ಒಡಕು ಮೂಡಿಸುವ ಮತ್ತು ರಕ್ತ ಹರಿಸುವ ಸಂಘರ್ಷಕ್ಕೆ ಕಾರಣ ಆಗಕೂಡದು ಎಂದು ಹೇಳಿದರು. ಪರಿಷತ್ತಿನ ಉಪಾಧ್ಯಕ್ಷ ಡಾ.ಎಚ್‌.ಎಂ. ಮರುಳಸಿದ್ದಯ್ಯ ವಿಚಾರ ಸಂಕಿರಣದ ನಾನಾ ಚಿಂತನೆಗಳ ಸಿಂಹಾವಲೋಕನ ಮಾಡಿದರು. ಪರಿಷತ್ತಿನ ಅಧ್ಯಕ್ಷರಾದ ಗೊ.ರು.ಚೆನ್ನಬಸಪ್ಪನವರು ವಂದನೆ ಸಲ್ಲಿಸಿದರು. ಕೆ.ವಿ.ನಾಗರಾಜಮೂರ್ತಿಯವರ ನಿರ್ದೇಶನದ ಸಿಂಗೀರಾಜನ ಪುರಾಣ ನೃತ್ಯರೂಪಕದೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

ಇಡೀ ದಿನ ನಡೆದ ಅರ್ಥಪೂರ್ಣ ವಿಚಾರ ಸಂಕಿರಣದಲ್ಲಿ ಹಲವಾರು ವಿಚಾರ ಧಾರೆಗಳು ಹೊರಹೊಮ್ಮಿದವು. ಶರಣರ ವೈಚಾರಿಕ ಚಿಂತನೆಗಳು, ಮೌಲ್ಯಗಳು, ರಾಷ್ಟ್ರಮಟ್ಟದಲ್ಲಿ ಪಸರಿಸಲು ಇಂತಹ ವಿಚಾರ ಸಂಕಿರಣಗಳು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಾಗಿರುವುದು ಅತ್ಯಂತ ಆವಶ್ಯಕ. ಈ ಮಹತ್ವಪೂರ್ಣ ವಿಚಾರ ಸಂಕಿರಣ ದೆಹಲಿ ಕನ್ನಡಿಗರ ಮನಸ್ಸಿನಲ್ಲಿ ಮರೆಯಲಾಗದ ಒಂದು ವಿಶಿಷ್ಟ ಅನುಭವ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more