ಕಿಷ್ಕಿಂದೆಯಲ್ಲೊಂದು ಜಾಂಬವಲೋಕ
- ಸಮದ್ ಕೊಟ್ಟೂರು
ಭಾರತ ದೇಶವನ್ನು ಜಂಬೂ ದ್ವೀಪವೆಂದು ಕರೆಯುತ್ತಾರೆ. ಜಾಂಬವ ಅಂದರೆ ಕರಡಿಗಳ ನಾಡು. ಅದೇಕೆ ಹಾಗೆ ಕರೆದರೋ ವಿದ್ವಾಂಸರಿಗೇ ಗೊತ್ತು. ಆದರೆ ಕರಡಿಗಳ ರಕ್ಷಣೆಗಾಗಿಯೇ ಮೀಸಲಾಗಿರುವ ಕರಡಿಧಾಮವನ್ನು ಕಿಷ್ಕಿಂದೆಯ ಮಡಿಲ ಕಲ್ಲುಗುಡ್ಡಗಳ ಮಧ್ಯೆ ರಚಿಸಿ ಈಗ ಬರೋಬ್ಬರಿ ಹತ್ತು ವರ್ಷವಾಗುತ್ತಿದೆ. ಕರ್ನಾಟಕದಲ್ಲೇ ಅತ್ಯಂತ ಎಳೆಯ ಈ ವನ್ಯಧಾಮ ಮಾಡುತ್ತಿರುವ ಸಾಧನೆ ಶ್ಲಾಘನೀಯ.
ಹಿನ್ನೆಲೆ : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದರೋಜಿ ಗ್ರಾಮದಿಂದ ಹಿಡಿದು ಹೊಸಪೇಟೆ ತಾಲೂಕಿನ ರಾಮಸಾಗರದವರೆಗೆ ಹರಡಿ ನಿಂತಿರುವ ಕಲ್ಲುಬಂಡೆಗಳ ಬೆಟ್ಟಗುಡ್ಡಗಳು ಅನಾದಿ ಕಾಲದಿಂದಲೂ ಕರಡಿಗಳ ನೆಲೆವೀಡು. ತುಂಗಭದ್ರ ಆಣೆಕಟ್ಟು ಬರಡು ಭೂಮಿಯನ್ನೆಲ್ಲ ಹಸಿರಾಗಿಸಿತು. ಇಲ್ಲಿನ ಗದ್ದೆಗಳಲ್ಲಿ ಬೆಳೆಯುತ್ತಿದ್ದ ಕಬ್ಬು, ಬಾಳೆಯ ಸೆಳೆತದಿಂದ ಕರಡಿಗಳು ಲಗ್ಗೆ ಇಡಲಾರಂಭಿಸಿದವು. ಅಲಕ್ಷ್ಯದಿಂದ ಓಡಾಡುತ್ತಿದ್ದ ಜನರ ಮೇಲೆ ದಾಳಿ ಮಾಡತೊಡಗಿದವು. ಇದಕ್ಕೆ ಪ್ರತಿಯಾಗಿ ಗ್ರಾಮಸ್ಥರು ಕರಡಿಗಳನ್ನು ಕೊಂದು ಹಾಕುತ್ತಿದ್ದರು. ಮಾನವ-ಕರಡಿಗಳ ಸಂಘರ್ಷದ ದೂರುಗಳೂ ದಿನೇ ದಿನೇ ಹೆಚ್ಚಾಗತೊಡಗಿದವು. ಖ್ಯಾತ ವನ್ಯಜೀವಿ ಛಾಯಾಗ್ರಾಹಕರೂ ಹಾಗೂ ಮಾಜಿ ಸಚಿವರೂ ಆದ ಎಂ.ವೈ.ಘೋರ್ಪಡೆಯವರಿಗೆ ಈ ವಿಷಯ ತಿಳಿಯುತ್ತಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ನಿರ್ಧರಿಸಿದರು. ದರೋಜಿಯಿಂದ ರಾಮಸಾಗರದವರೆಗೆ ಓಡಾಡಿ ಸ್ಥಳ ಪರಿಶೀಲನೆ ಮಾಡಿ, ಕರಡಿಗಳನ್ನು ರಕ್ಷಿಸಲು ಒಂದು ಪ್ರತ್ಯೇಕ ವನ್ಯಧಾಮ ರಚಿಸುವ ಅವಶ್ಯಕತೆಯನ್ನು ಪ್ರತಿಪಾದಿಸಿದರು. ಎಲ್ಲಾ ವಿಧದಲ್ಲೂ ಕರಡಿಗಳಿಗೆ ಅತ್ಯಂತ ಪ್ರಶಸ್ತವಾದ ಈ ಸ್ಥಳದಲ್ಲಿ ಕರಡಿಧಾಮ ರಚಿಸಲು ಅವಿರತವಾಗಿ ಶ್ರಮಿಸಿದರು. ಇದರ ಫಲಶೃತಿಯಾಗಿ ಕರ್ನಾಟಕ ಸರ್ಕಾರವು ಅಕ್ಟೋಬರ್ 1994 ರಲ್ಲಿ ಅಧಿಸೂಚನೆ ಹೊರಡಿಸಿ ಸುಮಾರು 5587.30 ಹೆಕ್ಟೇರ್ ಬಿಳಿಕಲ್ಲು ಅರಣ್ಯವನ್ನು ‘ದರೋಜಿ ಕರಡಿಧಾಮ’ ಎಂದು ಘೋಷಿಸಿತು.
ಆದರೆ ಧಾಮ ರಚಿಸಿದಾಗ ಅಲ್ಲಿದ್ದುದು ಬರೀ ಕಲ್ಲು ಬಂಡೆಗಳು, ಮುಳ್ಳುಪೊದೆಗಳು ಹಾಗೂ ಕಡಿದ ಮರದ ಬೊಡ್ಡೆಗಳು ಮಾತ್ರ. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಅವಿರತ ಶ್ರಮದಿಂದಾಗಿ ಇಂದು ಹಸಿರಿನಿಂದ ನಳನಳಿಸುತ್ತಿದೆ. ಧಾಮದ 55 ಚ.ಕಿ.ಮೀ. ವ್ಯಾಪ್ತಿಯಲ್ಲಿ ಕನಿಷ್ಠ 120 ಕರಡಿಗಳಿವೆ. ಈ ವರ್ಷ ಬಿಳಿಕಲ್ಲು ಗುಡ್ಡವೊಂದರಲ್ಲೇ ಐದು ಕರಡಿಗಳು ಮರಿಹಾಕಿವೆ. ಆ ಮುದ್ದು ಮರಿಗಳು ತಮ್ಮ ತಾಯಿಯ ಬೆನ್ನ ಮೇಲೆ ಕುಳಿತುಕೊಂಡು ಬರುವ ದೃಶ್ಯ ನೋಡಬೇಕು. ವಾಹ್ ! ಎರಡು ಕಣ್ಣು ಸಾಲವು. ಇವುಗಳೊಂದಿಗೆ ಚಿರತೆ, ತೋಳ, ಕತ್ತೆ ಕಿರುಬ, ಕಾಡು ಹಂದಿ, ನಕ್ಷತ್ರ ಆಮೆ, ಮುಳ್ಳುಹಂದಿ, ಪ್ಯಾಂಗೋಲಿನ್, ಉಡ, ಮುಂಗುಸಿ, ನವಿಲು, ಕೌಜುಗ, ಮುಂತಾದ ವನ್ಯಜೀವಿಗಳೂ ಇಲ್ಲಿ ವೃದ್ಧಿಸಿವೆ. ‘ನೂರಾರು ಜಾತಿಯ ಸಸ್ಯಗಳು, 40ಕ್ಕೂ ಹೆಚ್ಚು ವಿಧದ ಪಕ್ಷಿಗಳು, 20 ಕ್ಕೂ ಹೆಚ್ಚು ವಿಧದ ಚಿಟ್ಟೆಗಳು ಈ ಧಾಮದಲ್ಲಿವೆ’ ಎನ್ನುತ್ತಾರೆ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ಹರೀಶ್ ಭಟ್.
ಹೌದು, ಇಷ್ಟೊಂದು ಕರಡಿಗಳನ್ನು ಹೇಗಪ್ಪಾ ಈ ಧಾಮದೊಳಗೇ ಹಿಡಿದಿಟ್ಟುಕೊಂಡಿದ್ದಾರೆ ಎಂಬ ಶಂಕೆಯೇ? ಧಾಮದ ವಲಯ ಅರಣ್ಯಾಧಿಕಾರಿಗಳಾದ ಸಂಗಮೇಶ್ ಎನ್.ಮಠ್ ಇವರ ಪ್ರಕಾರ, ‘ಕರಡಿಗಳಿಗೆ ಬೇಕಾದ ಆಹಾರ ಈ ಧಾಮದೊಳಗೇ ದೊರಕುವಂತೆ ಮಾಡಲಾಗಿದೆ’. ಅವು ತಿನ್ನುವ ಕಾರೆ, ಕವಳೆ, ಬಿಕ್ಕೆ, ಉಲುಪಿ, ಜಾನೆ, ಬೋರೆ, ನೇರಳೆ, ಮುಂತಾದ ಕಾಡು ಹಣ್ಣಿನ ಮರಗಿಡಗಳು ಇಲ್ಲಿ ಹೇರಳವಾಗಿವೆ. ಇತ್ತೀಚೆಗೆ ಸೀತಾಫಲ, ಮೆಕ್ಕೆಜೋಳ, ಸಿಂಗಾಪುರ ಚೆರ್ರಿ, ಮಾವು ಹಾಗೂ ಬಾಳೆಯ ನೆಡುತೋಪುಗಳನ್ನು ಬೆಳೆಸಲಾಗಿದೆ. ನೀರಿನ ತೊಟ್ಟಿಗಳು, ಚೆಕ್ ಡ್ಯಾಂ ಹಾಗೂ ಪುಟ್ಟ ಕೆರೆಗಳನ್ನು ನಿರ್ಮಿಸಲಾಗಿದೆ. ಕರಡಿಗಳಿಗೆ ಪ್ರಿಯವಾದ ಗೆದ್ದಲು ಹಾಗೂ ಜೇನು ಸ್ವಾಭಾವಿಕವಾಗಿ ಇಲ್ಲಿ ಲಭ್ಯ. ಇಷ್ಟೆಲ್ಲಾ ಸವಲತ್ತುಗಳಿದ್ದ ಮೇಲೂ ಅವು ಹೊಲಗದ್ದೆಗಳಿಗೆ ದಾಳಿ ಇಡುವುದು ಅಪರೂಪ.
ಕರಡಿ ತುಂಬಾ ಕೆಟ್ಟದ್ದಂತೆ ಹೌದಾ!
ಜನರಲ್ಲಿ ಅಪಾರ ಅಪನಂಬಿಕೆಗಳಿಗೆ ಕಾರಣವಾಗಿರುವ ಕರಡಿಯನ್ನು ಇಂಡಿಯನ್ ಸ್ಲಾಥ್ ಬೇರ್ (Indian sloth bear) ಎಂದು ಕರೆಯುತ್ತಾರೆ.ಇದರ ವ್ಶೆಜ್ಞಾನಿಕ ಹೆಸರು ಮೆಲುರ್ಸಸ್ ಅರ್ಸಿನಸ್ (Melursus ursinus). ಭಾರತ ಹಾಗೂ ಶ್ರೀಲಂಕಾದಲ್ಲಿ ಮಾತ್ರ ಕಂಡು ಬರುವ ಈ ಕರಡಿಯ ಮೈತುಂಬ ಉದ್ದನೆಯ ಕಪ್ಪು ಕೂದಲಿದ್ದು, ಎದೆಯ ಮೇಲೆ ಬಿಳಿಯ ಗುರುತೊಂದಿದೆ. ಹಿಂಗಾಲುಗಳಿಗಿಂತ ಮುಂಗಾಲು ಎತ್ತರ. ಮನುಷ್ಯರ ಹಾಗೆ ರೋಮ ರಹಿತ ಪಾದ, ಅದರ ಮುಂದೆ ಮೂರು ಇಂಚು ಉದ್ದದ ಡೊಂಕಾದ ಉಗುರು.
ತಲೆ ದೊಡ್ಡದಾದರೂ ಕಣ್ಣು, ಕಿವಿ ಚಿಕ್ಕವು. ಶ್ರವಣ ಹಾಗೂ ದೃಷ್ಟಿ ಸಾಮರ್ಥ್ಯ ಮಂದ. ಉದ್ದನೆಯ ಮುಸುಡಿ, 2 ಬಾಚಿ ಹಲ್ಲುಗಳಿಲ್ಲದ ಮೇಲ್ದವಡೆ, ಸಡಿಲವಾದ ಉದ್ದನೆ ತುಟಿ. ಕರಡಿ ಉಗುರಿನಿಂದ ಗೆದ್ದಲು ಗೂಡನ್ನು ಒಡೆದು ಅದರೊಳಗೆ ತನ್ನ ಉದ್ದನೆಯ ಮುಸುಡಿಯನ್ನು ತೂರಿಸಿ, ಸೊರ್..ರ್..ರ್.. ಎಂದು ಉಸಿರೆಳೆದು ಗೆದ್ದಲು, ಇರುವೆಗಳನ್ನು ಚಪ್ಪರಿಸುತ್ತೆ. ಜೇನೆಂದರೆ ಇದಕ್ಕೆ ಪಂಚ ಪ್ರಾಣ. ಮರಹತ್ತಿ ಜೇನುಗೂಡನ್ನು ನೆಲಕ್ಕೆ ಕೆಡವಿ ತಿನ್ನುವುದು. ಜೇನು ಹುಳ ಕಚ್ಚುತ್ತಿದ್ದರೂ ಕಯ್ಯಂಯ್ಯೋ... ಎಂದು ಕಿರುಚಿಕೊಳ್ಳುತ್ತಲೇ ರಸಸ್ವಾದ ಅನುಭವಿಸುವುದು. ಇದು ಮರ ಏರಿ ಹೆಂಡ ಕುಡಿದು ಎಗರಾಡುವುದಂತೆ. ಒಳ್ಳೆ ಈಜು ಪಟುವೂ ಹೌದಂತೆ. ಸಾಧಾರಣ ಸಂದರ್ಭದಲ್ಲಿ ನಿಧಾನವಾಗಿ ಬಳಕುತ್ತಾ ನಡೆಯುವ ಕರಡಿ ಅಪಾಯದ ಸಂದರ್ಭದಲ್ಲಿ ಮನುಷ್ಯನಿಗಿಂತ ವೇಗವಾಗಿ ನಾಗಾಲೋಟದಲ್ಲಿ ಓಡುತ್ತದೆ. ಕಣ್ಣು ಹಾಗೂ ಕಿವಿ ಮಂದವಾದ ಕಾರಣ ಮನುಷ್ಯ ತೀರಾ ಹತ್ತಿರ ಬಂದಾಗ ತಕ್ಷಣ ಗಾಬರಿಗೊಂಡು ಓಡುತ್ತದೆ. ಕೆಲವೊಮ್ಮೆ ದಾಳಿ ಮಾಡಿ ಗಾಯಗೊಳಿಸುತ್ತದೆ. ಆದರೆ ಮರಿಗಳೊಂದಿಗಿರುವ ಹೆಣ್ಣು ಕರಡಿ ಮಾತ್ರ ಯಾವುದೇ ಪ್ರಚೋದನೆ ಇಲ್ಲದೆ ದಾಳಿ ಮಾಡಬಹುದು. ಇದು ಕೆಲವೊಮ್ಮೆ ಮಾರಣಾಂತಕವಾಗಬಲ್ಲದು. ಗಾಬರಿಯಾದ ಸಂದರ್ಭದಲ್ಲಿ ಅದು ಮನುಷ್ಯನನ್ನು ಬಿಗಿಯಾಗಿ ಅಪ್ಪಿಹಿಡಿದು ತನ್ನ ಹಿಂಗಾಲುಗಳ ಮೇಲೆ ನಡೆಯುತ್ತದೆ. ಇದನ್ನೇ bear hug ಎನ್ನುತ್ತಾರೆ. ಬಹುಶಃ ಈ ವಿಶಿಷ್ಠ ವರ್ತನೆಯನ್ನು ನೋಡಿದ ಹಳ್ಳಿಗರು ‘ಕರಡಿ ಮನುಷ್ಯನ ಜೊತೆ ಸಂಸಾರ ಮಾಡುತ್ತದೆ’ ಎಂದು ಅಪಾರ್ಥ ಮಾಡಿಕೊಂಡು ಕತೆ ಕಟ್ಟಿ ಹೇಳುತ್ತಾರೆ. ಸಿಕ್ಕ ಸಿಕ್ಕಲ್ಲಿ ಕೊಂದು ಹಾಕುತ್ತಾರೆ. ಹೀಗಾಗಿ ಕರಡಿಗಳು ಅಳಿವಿನಂಚಿಗೆ ಸರಿದಿವೆ. ಇದನ್ನು ಭಾರತೀಯ ವನ್ಯಜೀವಿ ಕಾಯ್ದೆ 1972 ರಲ್ಲಿ ಶೆಡ್ಯೂಲ್ 1 (31ಸಿ) ಅಡಿಯಲ್ಲಿ ಸಂರಕ್ಷಿತ ಸಸ್ತನಿ ಎಂದು ವರ್ಗೀಕರಿಸಲಾಗಿದೆ. ಈ ದಿಸೆಯಲ್ಲಿ ದರೋಜಿ ಕರಡಿ ಧಾಮ ಇವುಗಳಿಗೆ ಸುರಕ್ಷಿತ ನೆಲೆಯನ್ನೊದಗಿಸಿದೆ.
‘ಕೆಲವೇ ವರ್ಷಗಳ ಹಿಂದೆ ಆರಂಭವಾಗಿದ್ದರೂ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳ ಸಹಕಾರದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಹಗಲಿರುಳು ಶ್ರಮಿಸಿ ಕಲ್ಲು ಬಂಡೆಗಳಲ್ಲಿ ಹಸಿರು ವನರಾಶಿಯನ್ನು ಅರಳಿಸಿದ್ದಾರೆ. ಅರಣ್ಯದ ನೈಸರ್ಗಿಕ ಪುನರುತ್ಪತ್ತಿಯ ಅತ್ಯುತ್ತಮ ಉದಾಹರಣೆ ಇದಾಗಿದೆ’ ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹೆಚ್.ಎಸ್.ಒಬೇದುಲ್ಲಾ ಖಾನ್.
ಸುತ್ತಮುತ್ತಲಿನ 22 ಹಳ್ಳಿಗಳ 30 ಸಾವಿರ ಜನಸಂಖ್ಯೆಯ ಒತ್ತಡದಲ್ಲೂ ಧಾಮ ಸಾಧಿಸಿದ ಪ್ರಗತಿಯನ್ನು ಇಲ್ಲಿಗೆ ಭೇಟಿ ನೀಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಾಮ ಮೋಹನ ರೇ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಧಾಮಕ್ಕೆ ನೀವೂ ಭೇಟಿ ನೀಡಿ, ಜಾಂಬವಂತನ ದರ್ಶನ ಪಡೆಯಬೇಕೆ? ಹಾಗಾದರೆ ಬೆಳಿಗ್ಗೆ 5.30 ರಿಂದ 6.30 ರೊಳಗೆ ಅಥವಾ 4 ರಿಂದ 6 ಗಂಟೆಯ ಅವಧಿಯಲ್ಲಿ ವೀಕ್ಷಣಾ ಗೋಪುರದಲ್ಲಿ ಗಪ್ಪನೆ ಕುಳಿತುಕೊಳ್ಳಿ. ಬಿಳಿ ಬಟ್ಟೆಗೆ ಬದಲಾಗಿ ಹಸಿರು, ಕಂದು, ಖಾಕಿಯಂತಹ ಸಹಜ ವರ್ಣದ ವಸ್ತ್ರ ಧರಿಸಿದರೆ ಒಳಿತು. ಎದುರಿಗಿರುವ ಕರಡಿ ಗುಡ್ಡದ ಮೇಲಿನಿಂದ ಕರಡಿಗಳು ಇಳಿದು ಬರುವುದನ್ನು ನಿಮ್ಮ ಬೈನಾಕುಲರ್ ನಲ್ಲಿ ನೋಡಿ ಆನಂದಿಸಿ. ಆದರೆ ವನ್ಯಧಾಮದ ಅಧಿಕಾರಿಗಳ ಪರವಾನಿಗೆ ಪಡೆದು ಹಾಗೂ ಅವರ ಮಾರ್ಗದರ್ಶನದಲ್ಲಿ ಧಾಮಕ್ಕೆ ಪ್ರವೇಶಿಸಿ. ಕಾಡಿನಲ್ಲಿ ಓಡಾಡಬೇಡಿ. ತಿಂಡಿ ತಿನಿಸುಗಳನ್ನು, ಪ್ಲಾಸ್ಟಿಕ್ ಚೀಲಗಳನ್ನು ಧಾಮದೊಳಗೆ ಚೆಲ್ಲಬೇಡಿ. ಪರವಾನಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಎಸ್.ಎನ್.ಮಠ್, ವಲಯ ಅರಣ್ಯಾಧಿಕಾರಿಗಳು, ದರೋಜಿ ಕರಡಿಧಾಮ, ಕಮಲಾಪುರ, ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ. ದೂರವಾಣಿ: 08394-441869.
(ಲೇಖಕರ ವಿಳಾಸ : ಕೆ.ಎಸ್.ಅಬ್ದುಲ್ ಸಮದ್, ಬಳ್ಳಾರಿ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕ, 392,‘ಆಶಾ’, ಬಸವೇಶ್ವರ ಬಡಾವಣೆ, ಹೊಸಪೇಟೆ-583 201. ಬಳ್ಳಾರಿ ಜಿಲ್ಲೆ.)












Click it and Unblock the Notifications