• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯು.ಆರ್‌.ಅನಂತಮೂರ್ತಿ ಸಂದರ್ಶನ

By Staff
|
  • ಅರವಿಂದ ನಾವಡ
ಇದು ದಿಢೀರ್‌ ನಿರ್ಧಾರವೇ?

ಹಾಗೇನೂ ಇಲ್ಲ. 1991ರಲ್ಲೇ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದಿದ್ದೆ. ಚಿಕ್ಕಂದಿನಿಂದಲೂ ಬೆಳೆದು ಬಂದ ಕ್ಷೇತ್ರವದು. ಕಾಗೋಡು ಸತ್ಯಾಗ್ರಹದ ಸಂದರ್ಭದಲ್ಲೂ ನನಗೆ ಅವರ ಸಂಪರ್ಕವಿತ್ತು. ಆದರೆ ವೈಯುಕ್ತಿಕ ಕಾರಣಗಳಿಂದ ನಿಲ್ಲಲಿಲ್ಲ. ಜನತಾ ಪಕ್ಷದ ಕಡೆಗೆ ಒಲವಿತ್ತು. ಈಗ ಮತ್ತೆ ಆ ಆಲೋಚನೆ ಬಂದಿದೆ. ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುವ ಇಚ್ಛೆಯನ್ನು ಮುಖ್ಯಮಂತ್ರಿ ಕೃಷ್ಣ ಅವರಿಗೆ ತಿಳಿಸಿದ್ದೇನೆ. ಜಾತ್ಯಾತೀತ ಜನತಾದಳದ ದೇವೇಗೌಡರಿಗೆ ಪತ್ರ ಬರೆದಿದ್ದೇನೆ. ಅವರಿಂದಲೇ ತಿರ್ಮಾನವಾಗಬೇಕು.

Interview with Dr. U R Anantha Murthyಒಂದು ವೇಳೆ ಅವರು ಬೆಂಬಲ ನೀಡದಿದ್ದರೆ?

ಬೆಂಬಲ ನೀಡದಿದ್ದರೆ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌, ಜಾತ್ಯಾತೀತ ದಳ ಗಂಭೀರ ಪ್ರಯತ್ನ ಮಾಡಲು ತಯಾರಿಲ್ಲವೆಂದೇ ಅರ್ಥ. ಆಗ ನಾನು ಸ್ಪರ್ಧಿಸುವ ಬಗ್ಗೆ ಪುನರ್‌ ಆಲೋಚಿಸುತ್ತೇನೆ. ಸುಮ್ಮನೆ ಸಾಂಕೇತಿಕವಾಗಿ ಸ್ಪರ್ಧಿಸುವುದರಲ್ಲಿ ಅರ್ಥವಿಲ್ಲ. ಜಾತ್ಯಾತೀತತೆಯನ್ನು ಬೆಂಬಲಿಸುವ ಮತದಾರರ ಮತಗಳು ಹರಿದು ಹಂಚಿ ಹೋಗಬಾರದು. ಆದ್ದರಿಂದ ನನಗೆ ಬಂಬಲಿಸಿದರೆ ಒಳ್ಳೆಯದು. ಸದ್ಯ ಚೆಂಡು ಅವರಿಬ್ಬರ ಅಂಗಳದಲ್ಲಿದೆ. ನಿರ್ಧಾರ ಅಲ್ಲಿಂದಲೇ ಬರಬೇಕು.

ಪಕ್ಷ ಸೇರುತ್ತೀರಾ? ಪಕ್ಷ ರಾಜಕಾರಣದ ಬಗ್ಗೆ ನಿಮ್ಮ ನಿಲುವು?

ಸದ್ಯ ಯಾವುದೇ ಪಕ್ಷ ಸೇರುವ ಬಗ್ಗೆ ನಿರ್ಧಾರ ತಳೆದಿಲ್ಲ. ರಾಜಕೀಯ ಜೀವನ ನಡೆಸಬೇಕೆಂಬುದು ನನ್ನ ಇಚ್ಛೆಯಲ್ಲ. ಸಮಾಜವಾದಿಯಾಗಿಯೇ ಇದ್ದು ಪಕ್ಷೇತರನಾಗಿಯೇ ಸ್ಪರ್ಧಿಸುತ್ತೇನೆ. ನಾನೆಂದೂ ರಾಜಕೀಯವಾಗಿಯೇ ಆಲೋಚಿಸುವವನು. ಇದು ಕೇವಲ ಸ್ಪರ್ಧೆಯಲ್ಲ ; ಗೆದ್ದು ಸಂಸತ್ತಿನಲ್ಲಿ ನನ್ನ ವಿಚಾರಗಳನ್ನು ಹೇಳಬೇಕೆಂಬ ತುಡಿತವೂ ಹೌದು. ನಮ್ಮಲ್ಲಿ ಪಕ್ಷ ರಾಜಕಾರಣ ಅನಿವಾರ್ಯ. ಆದರೆ ಪಕ್ಷ ತಮ್ಮೊಳಗೆ ಪ್ರಜಾತಂತ್ರ ಅಳವಡಿಸಿಕೊಂಡಿರಬೇಕು. ಬಹಳ ಪಕ್ಷಗಳಲ್ಲಿ ಇದಿಲ್ಲ. ಜೆಪಿ, ಲೋಹಿಯಾ ಮುಂತಾದವರ ಹಿಂದಿನ ಜನತಾ ಪರಿವಾರದ ಬಗ್ಗೆ ಸಹಾನುಭೂತಿಯಿದೆ. ಜತೆಗೆ ಈಗಿನ ಜನತಾ ಪರಿವಾರ ಹಿಂದೆಯೇ ಒಂದಾಗಿದ್ದರೆ ಅದನ್ನು ಬೆಂಬಲಿಸ ಬಹುದಿತ್ತೇನೊ. ಅದರೆ ಅದಾಗಲಿಲ್ಲವಲ್ಲ.

ಬೆಂಬಲಕ್ಕೆ ಪ್ರತಿಯಾಗಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದ ಷರತ್ತು ವಿಧಿಸಿದರೆ?

ಎರಡೂ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸೋದು ನೈತಿಕತೆಯಲ್ಲ. ಯಾವ ಪಕ್ಷ ಬೆಂಬಲಿಸಿದಾಗಲೂ ನನ್ನ ಬೆಂಬಲ ಯಾವ ರೀತಿಯಲ್ಲಿರಬೇಕು ಎಂಬುದನ್ನೂ ಆಲೋಚಿಸಿಲ್ಲ. ಆದರೆ ಸೈದ್ಧಾಂತಿಕವಾಗಿ ನನ್ನನ್ನು ಲಾಭ ಮಾಡಿಕೊಳ್ಳಲು ಅವಕಾಶ ಕೊಡುವುದಿಲ್ಲ. ದೊಡ್ಡ ಮಟ್ಟದ ನಿಜವಾದ ಜಾತ್ಯಾತೀತ ನಿಲುವಿನ ಪಕ್ಷಗಳ ಪರವಾಗಿ ಪ್ರಚಾರ ಮಾಡುವುದರಲ್ಲಿ ತಪ್ಪಿಲ್ಲ.

ನಿಮ್ಮ ದೃಷ್ಟಿಯಲ್ಲಿ ಜಾತ್ಯತೀತತೆಯ ವ್ಯಾಖ್ಯಾನವೇನು?

ಜಾತೀಯತೆ ಮತ್ತು ಮತೀಯತೆ ಮಧ್ಯೆ ಸೂಕ್ಷ್ಮ ವ್ಯತ್ಯಾಸವಿದೆ. ನಮ್ಮ ಪ್ರಜಾತಂತ್ರ ಜಾತೀಯತೆಯ ಒತ್ತಡಗಳನ್ನು ನಿರ್ವಹಿಸುವ ಮೂಲಕವೇ ಜಾತಿಯನ್ನು ಮೀರುವ ಯತ್ನದಲ್ಲಿದೆ. ಜಾತಿಯಾಳಗಿನ ಸತ್ಯಗಳನ್ನು ವಿವೇಕದಿಂದ ನಿಭಾಯಿಸಬೇಕು. ಬಿಹಾರದಲ್ಲಿ ಕರ್ಪೂರಿ ಠಾಕೂರ್‌, ಕರ್ನಾಟಕದಲ್ಲಿ ದೇವರಾಜು ಅರಸು ಹಾಗೇ ನಿಭಾಯಿಸಿದ್ದರು. ಜಾತಿಯಲ್ಲಿನ ಅಸಮಾನತೆ ನಿಭಾಯಿಸಲು ಜಾತಿಯನ್ನು ಬಳಸುವುದು ರಾಮಾನುಜಾರ್ಚಾಯರ ಮಾದರಿ. ಜಾತಿಯನ್ನೆ ವಿನಾಶ ಮಾಡಲು ಹೊರಡುವುದು ಬಸವಣ್ಣನ ಮಾದರಿ. ಹಾವನೂರು, ಮಂಡಲ್‌ ಆಯೋಗಗಳದ್ದು ಜಾತಿ ವಿನಾಶ ಪ್ರಯತ್ನವಲ್ಲ . ಅಸಮಾನತೆ ಹೋಗಲಾಡಿಸುವ ಪ್ರಯತ್ನ. ಕಾಂಗ್ರೆಸ್‌, ದಳ ಈ ಸತ್ಯಗಳನ್ನು ಮನಗಂಡಿರುವ ಪಕ್ಷ. ಬಿಜೆಪಿಯೂ ಇತ್ತೀಚೆಗೆ ಮನಗಾಣುತ್ತಿದೆ.

ಮತೀಯತೆ ಬಳಸಿಕೊಳ್ಳದ ಪಕ್ಷಗಳಿವೆಯೇ?

ಎಲ್ಲ ಪಕ್ಷಗಳು ಮತೀಯತೆಯನ್ನು ಬಳಸಿಕೊಂಡಿವೆ. ಉದಾಹರಣೆಗೆ ದಕ್ಷಿಣ ಕನ್ನಡದಲ್ಲಿ ಮತೀಯ ಗಲಭೆಗಳಾಗಿ ಹಿಂದೂ ಸತ್ತರೆ ಬಿಜೆಪಿ ಗೆಲ್ಲುತ್ತಿತ್ತು. ಮುಸ್ಲಿಂನವರು ಸತ್ತರೆ ಕಾಂಗ್ರೆಸ್‌ ಗೆಲ್ಲುತ್ತಿತ್ತು. ನಮ್ಮಲ್ಲಿ ಸೇತುವೆ ಕಟ್ಟುವಾಗ ಬಲಿಗೊಡುವಂತೆ ಎಲ್ಲರೂ ತಮ್ಮ ಓಟ್‌ ಬ್ಯಾಂಕ್‌ ರಾಜಕಾರಣಕ್ಕೆ ಬಲಿ ಕೊಡುತ್ತಿದ್ದರು. ಇಂತಹ ಪಾಪವನ್ನು ಎಲ್ಲರೂ ಮಾಡಿದವರೇ. ಎಲ್ಲಿವರೆಗೆ ಎಂದರೆ ಇಂತಹ ಚುನಾವಣೆ ಗೆಲುವಿಗೆ ನಿರೀಕ್ಷಿಸುವುದಿದೆಯಲ್ಲಾ ಅದು ಘೋರ. ಆ ಮಟ್ಟಕ್ಕೆ ಇಳಿದಿದೆ. ಆದರೆ ಇಂತಹ ಮತೀಯತೆಯನ್ನು ಪ್ರವೀಣ್‌ಭಾಯಿ ತೊಗಾಡಿಯನಂತವರು ತಾತ್ವಿಕವಾಗಿ ಬೆಂಬಲಿಸುತ್ತಾರೆ. ಈ ಸಮರ್ಥನೆ ಅತ್ಯಂತ ಅಪಾಯಕಾರಿ.

‘ಜಾತ್ಯತೀತತೆ‘ ಎಂದರೆ ದೇವರನ್ನು ಬಳಸಿಕೊಳ್ಳಬಾರದು. ದೇವರನ್ನು ಹುಡುಕಬೇಕು. ಹುಡುಕಾಟದಲ್ಲಿ ವೈವಿಧ್ಯ ಆಲೋಚನೆಗಳಿಗೆ ಅವಕಾಶವಿರಬೇಕು. ಅಲ್ಲಾ, ಜೀಸಸ್‌, ಬುದ್ಧ ಎಲ್ಲರನ್ನೂ ಹುಡುಕಲು ಸಾಧ್ಯವಾಗುವ ಧಾರಾಳತೆ ಬೇಕು. ಆದರೆ ಹಿಂದೂ, ಮುಸ್ಲಿಂ ಇಬ್ಬರೂ ಪೈಪೋಟಿಯಲ್ಲಿ ಧಾರಾಳತೆ, ಹುಡುಕಾಟದ ಸಾಹಸ ಪ್ರವೃತ್ತಿ ಕಳೆದುಕೊಳುತ್ತಿದ್ದಾರೆ. ಎಲ್ಲ ಮತದ ಮೂಲಭೂತವಾದಿಗಳೂ ದೈವತ್ವದ ದುರುಪಯೋಗಕ್ಕೆ ತೊಡಗಿದ್ದಾರೆ. ಇದಕ್ಕೆ ಕಡಿವಾಣ ಅಗತ್ಯ.

ರಾಜಕಾರಣದಲ್ಲಿ ಸಾಹಿತ್ಯದ ವರ್ಚಸ್ಸು ಬಳಕೆಯಾಗುವುದೇ? ಶಿವರಾಮ ಕಾರಂತ, ಗೋಪಾಲ ಕೃಷ್ಣ ಅಡಿಗ ಸ್ಪರ್ಧಿಸಿದ್ದರಲ್ಲಾ ?

ಇಲ್ಲಿ ವ್ಯಕ್ತಿಯ ಯಶಸ್ಸಲ್ಲ ; ವಿಚಾರಗಳ ಯಶಸ್ಸು. ಮನುಷ್ಯರಲ್ಲಿ ವಿಚಾರಗಳನ್ನು ಬಿತ್ತಿ ಬೆಳೆಸಬಹುದು ಎಂಬ ನಂಬಿಕೆ ಇರದಿದ್ದರೆ ಸಾಹಿತಿಯಾಗಲಾರ. ವಿಚಾರಕ್ಕೆ ಅಂತಹ ಬೆಳೆಸುವ ಶಕ್ತಿಯಿದೆ. ಸತ್ಯವಿದ್ದರೆ ಬೆಳೆಯುತ್ತೆ. ತಮಿಳುನಾಡಿನಲ್ಲಿ ಸಾಂಸ್ಕೃತಿಕ ವ್ಯಕ್ತಿಗಳದ್ದೇ ರಾಜಕಾರಣ. ರವೀಂದ್ರನಾಥ ಠಾಗೋರರ ಕಾಲದಿಂದಲೂ ಸಾಹಿತಿಗಳ ವೈಚಾರಿಕತೆಗೆ ಅವಕಾಶವಿದ್ದೇ ಇದೆ. ಇಂತಹ ಆಲೋಚನಾ ಕ್ರಮದ ಜನರಿಗೆ ಧ್ವನಿಯಾಗುವುದೆ ನನ್ನ ಉದ್ದೇಶ.

ಇಂದಿನ ರಾಜಕಾರಣದ ಬಗ್ಗೆ?

ಬಂಗಾರಪ್ಪ ಬಿಜೆಪಿಗೆ ಸೇರ್ತಾರೆ. ಕಾಂಗ್ರೆಸ್‌ ಪಕ್ಷವನ್ನು ದೂರುತ್ತಿದ್ದವರು ಆ ಪಕ್ಷಕ್ಕೆ ಸೇರುತ್ತಾರೆ. ಮತ್ತೆ ಅವರನ್ನೇ ಬೈಯ್ದು ಮತ್ತೊಂದು ಪಕ್ಷ ಸೇರುತ್ತಾರೆ. ರಾಜಕಾರಣವೆಂದರೆ ವೇಷ ತೊಟ್ಟ ಹಾಗೆ. ಕೊಟ್ಟ ವೇಷವನ್ನು ತೊಟ್ಟು ಕೊಳ್ಳುತ್ತಾರೆ ಎಂಬ ಅಭಿಪ್ರಾಯ ಜನರಲ್ಲಿದೆ. ನಮ್ಮ ಯಕ್ಷಗಾನದಲ್ಲಿ ದುರ್ಯೋಧನನ ವೇಷ ತೊಟ್ಟವನೇ ಕೃಷ್ಣನೂ ಆಗಬಲ್ಲ. ಅದು ಕಲೆಯಲ್ಲಿ ಸಾಧ್ಯ. ಆದರೆ ಇದು ರಾಜಕಾರಣದಲ್ಲಿ ನೈತಿಕತೆಯಲ್ಲ. ನೈತಿಕತೆಯಿಲ್ಲದ ಪ್ರಜಾಪ್ರಭುತ್ವದಿಂದ ದೇಶಕ್ಕೆ ಭವಿಷ್ಯವಿಲ್ಲ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more