• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಡಗೀತೆ ಮತ್ತು ಮಧ್ವಾಚಾರ್ಯ

By Super
|

ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ' ಗೀತೆಯ ಸಾಹಿತ್ಯದಲ್ಲಿ ‘ಹಸ್ತಕ್ಷೇಪ' ನಡೆದಿದೆಯಾ ? ಸದ್ಯದ ಘಟನೆಗಳನ್ನು ನೋಡಿದರೆ ಇಂಥದೊಂದು ಅನುಮಾನ ಬಲವಾಗುತ್ತದೆ.

ನಾಡಗೀತೆಯಲ್ಲಿ ಕುವೆಂಪು ಅವರು ಮಧ್ವಾಚಾರ್ಯರ ಹೆಸರನ್ನು ಬರೆದಿದ್ದರೇ ಅಥವಾ ಇಲ್ಲವೇ ಎನ್ನುವುದು ಇಲ್ಲಿನ ಜಿಜ್ಞಾಸೆ. ರಾಜ್ಯ ಸರ್ಕಾರ ಜಯ ಭಾರತ ಜನನಿಯನ್ನು ನಾಡಗೀತೆಯಾಗಿ ಅಂಗೀಕರಿಸಿರುವ ಸಂದರ್ಭದಲ್ಲಿ ಈ ವಿವಾದ ಉದ್ಭವಿಸಿದೆ. ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಉಡುಪಿ ಪೀಠದ ಭಕ್ತ ಹರಿಕೃಷ್ಣ ಪುನರೂರು ಅವರಿಂದ ಈ ವಿವಾದದ ಉದ್ಘಾಟನೆಯಾಗಿದೆ.

ಮೂಲ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹೆಸರಿತ್ತು . ಪ್ರಸ್ತುತ ಮಧ್ವಾಚಾರ್ಯರ ಹೆಸರು ಗೀತೆಯಿಂದ ಬಿಟ್ಟುಹೋಗಿದೆ. ಇಡೀ ವಿಶ್ವವೇ ಆಧ್ಯಾತ್ಮದತ್ತ ಹೊರಳುತ್ತಿರುವ ಸಂದರ್ಭದಲ್ಲಿ , ರಾಜ್ಯದಲ್ಲಿ ಮಧ್ವಾಚಾರ್ಯರಿಗೆ ಅಗೌರವ ತೋರುವ ಘಟನೆ ನಡೆದಿರುವುದು ಸರಿಯಲ್ಲ . ಈ ತಪ್ಪನ್ನು ಕೂಡಲೇ ಸರಿಪಡಿಸಿ, ಗೀತೆಯಲ್ಲಿ ಮಧ್ವಾಚಾರ್ಯರ ಹೆಸರನ್ನು ಸೇರಿಸಬೇಕು ಎಂದು ಸುಗಣೇಂದ್ರ ತೀರ್ಥರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹರಿಕೃಷ್ಣ ಪುನರೂರು ಕೂಡ ಪ್ರತಿಭಟನೆಯಲ್ಲಿ ಹಿಂದೆ ಬಿದ್ದಿಲ್ಲ . ಮಧ್ವಾಚಾರ್ಯರ ಹೆಸರನ್ನು ತಕ್ಷಣ ಸೇರ್ಪಡೆ ಮಾಡುವಂತೆ ತಮ್ಮದೇ ಆದ ಶೈಲಿಯಲ್ಲಿ ಪುನರೂರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸದ್ಯದ ಪ್ರಶ್ನೆ ಇಷ್ಟು ?

ಕುವೆಂಪು ಅವರು ನಾಡಗೀತೆಯಲ್ಲಿ ಮಧ್ವಾಚಾರ್ಯರ ಹೆಸರು ಬರೆದಿದ್ದರಾ ? ಇಲ್ಲವಾ ? ಕನ್ನಡ ಸಾಹಿತ್ಯದ ಆಳಅಗಲ ಬಲ್ಲವರು ಈ ಕುರಿತು ಹೇಳುವುದು ಹೀಗೆ :

ಮೂಲಗೀತೆಯಲ್ಲಿ ಮಧ್ವಾಚಾರ್ಯರ ಪ್ರಸ್ತಾಪವೇ ಇಲ್ಲ . ಭಾರತ ಜನನಿಯ ತನುಜಾತೆ ಗೀತೆ ರಚಿತವಾದದ್ದು 1928ರ ಡಿಸೆಂಬರ್‌ 7ರಂದು. ಈ ಗೀತೆ ‘ಕೊಳಲು' ಸಂಕಲನದಲ್ಲಿದೆ. ಕೊಳಲು ಸಂಕಲನ 1930 ರಲ್ಲಿ ಪ್ರಕಟವಾಗಿತ್ತು . ಮೂಲಗೀತೆಯ ಸಾಲುಗಳು ಕೆಳಗಿನಂತಿವೆ-

ಶಂಕರ ರಾಮಾನುಜ ವಿದ್ಯಾರಣ್ಯ

ಬಸವೇಶ್ವರ ರಿಹ ದಿವ್ಯಾರಣ್ಯ.

ರನ್ನ ಷಡಕ್ಷರಿ ಪೊನ್ನ

ಪಂಪ ಲಕುಮಿಪತಿ ಜನ್ನ.........

ಬಸವೇಶ್ವರ ರಿಹ ದಿವ್ಯಾರಣ್ಯ ಎನ್ನುವ ಸಾಲನ್ನು ‘ಬಸವೇಶ್ವರ ಮಧ್ವರ ದಿವ್ಯಾರಣ್ಯ' ಎಂದು ಯಾರೋ ಮಧ್ವ ಅಭಿಮಾನಿಗಳು ಬದಲಿಸಿದ್ದಾರೆ. ಅಂದರೆ, ಕುವೆಂಪು ಅವರ ಮೂಲಗೀತೆ ತಿರುಚುವಿಕೆಗೆ ಒಳಗಾಗಿದೆ ಎಂದಾಯಿತು. ವಿಪರ್ಯಾಸದ ಸಂಗತಿಯೆಂದರೆ, ಈ ತಿರುಚಿದ ಗೀತೆಯೇ ಶಾಲಾ ಪಠ್ಯಪುಸ್ತಕಗಳ ರಕ್ಷಾಪುಟಗಳಲ್ಲಿ ಅಚ್ಚಾಗಿದೆ.

ರಾಜ್ಯ ಸರ್ಕಾರ ಅಂಗೀಕರಿಸಿರುವ ‘ನಾಡಗೀತೆ'ಯಲ್ಲಿ ಮೂಲವನ್ನೇ ಬಳಸಿಕೊಳ್ಳಲಾಗಿದೆ ಹಾಗೂ ಅದು ಸರಿಯಾದುದಾಗಿದೆ. ಒಂದುವೇಳೆ, ಪುತ್ತಿಗೆ ಶ್ರೀಗಳ ಒತ್ತಡಕ್ಕೆ ಮಣಿದು ಮಧ್ವರ ಹೆಸರನ್ನು ಸೇರಿಸಿದರೆ ಅದು ಕುವೆಂಪು ಅವರಿಗೆ ಮಾಡುವ ಅವಮಾನ ಎನ್ನುವ ವಾದವೂ ಕೇಳಿಬರುತ್ತಿದೆ.

ಈ ನಡುವೆ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು ನಾಡಗೀತೆಯ ಸಾಹಿತ್ಯದ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸಿದ್ದು , ಮಧ್ವಾಚಾರ್ಯರ ಹೆಸರು ಸೇರ್ಪಡೆಗೆ ತೀವ್ರ ವಿರೋಧ ಸೂಚಿಸಿದ್ದಾರೆ. ಈ ಕುರಿತು ತೇಜಸ್ವಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯ ಯಥಾರೂಪ ಇಂತಿದೆ :

‘‘ಕರ್ನಾಟಕದ ನಾಡಗೀತೆಯಾದ ಕುವೆಂಪು ವಿರಚಿತ ‘ಜಯಹೇ ಕರ್ನಾಟಕ ಮಾತೆ' ಗೀತೆಯಲ್ಲಿ ಶ್ರೀ ಮಧ್ವಾಚಾರ್ಯರ ಹೆಸರನ್ನು ಇತರ ಆಚಾರ್ಯ ಪುರುಷರೊಂದಿಗೆ ಸೇರಿಸಿಲ್ಲವೆಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪ್ರತಿಭಟಿಸಿದ್ದಾರೆಂದೂ, ಅದನ್ನು ಹಿಂತೆಗೆದುಕೊಂಡು ಮಧ್ವಾಚಾರ್ಯರ ಹೆಸರನ್ನು ಸೇರಿಸಿ ಹೊಸದನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆಂದೂ ಪತ್ರಿಕಾ ವರದಿಯಲ್ಲಿ ನೋಡಿದೆ.

ಇದು ಆಕ್ಷೇಪಣೀಯ ಮತ್ತು ಎರಡು ಮುಖ್ಯ ಕಾರಣಗಳಿಗಾಗಿ ನಾನು ಇದನ್ನು ಪ್ರತಿಭಟಿಸುತ್ತೇನೆ.

ಮೊದಲನೆಯದು, ಕರ್ನಾಟಕದಲ್ಲಿ ಮಧ್ವರಷ್ಟೇ ತತ್ವವೇತ್ತರಾದ ಆಚಾರ್ಯರು, ಅನುಭಾವಿಗಳು ಇರುವ ಬಹಳಷ್ಟು ಮತ ಪಂಥಗಳು ಇವೆ. ಎಲ್ಲ ಜಾತಿ ಪಂಥಗಳೂ ತಮ್ಮ ತಮ್ಮ ಮತಾಚಾರ್ಯರಿಗೆ ನಾಡಗೀತೆಯಲ್ಲಿ ಜಾಗ ದೊರಕಬೇಕೆಂದು ಆಗ್ರಹಪಡಿಸಿದರೆ ನಾಡಗೀತೆ, ಜಾತಿ ಮತ್ತು ಮತಾಚಾರ್ಯರ ದೊಡ್ಡ ಪಟ್ಟಿಯಾಗುತ್ತದೆಯೇ ವಿನಃ ನಾಡಗೀತೆಯಾಗುವುದಿಲ್ಲ . ಕವಿ ತನ್ನ ಔಚಿತ್ಯಪ್ರಜ್ಞೆ ಬಳಸಿ ಗೀತೆಯ ಛಂದಸ್ಸಂಗೀತಕ್ಕೂ ಲಯಕ್ಕೂ ಅನುಗುಣವಾದಂಥ ಹಲವು ಹೆಸರುಗಳನ್ನು ಸೇರಿಸಿರಬಹುದು. ಹಲವನ್ನು ಸೇರಿಸಿಲ್ಲದಿರಬಹುದು. ಮೀಸಲಾತಿ ಪಟ್ಟಿಯಲ್ಲಿ ತಮ್ಮ ಜಾತಿ ಸೇರಿಸಿ ಎಂದು ಎಲ್ಲ ಜಾತಿಯವರೂ ಆಗ್ರಹಪಡಿಸುವಂತೆ ನಾಡಗೀತೆಯಲ್ಲೂ ಸೇರಿಸಬೇಕೆಂದು ಹೇಳುವುದು ಸರಿಯಲ್ಲ .

ಎರಡನೆಯ ಮತ್ತು ನನ್ನ ಪ್ರತಿಭಟನೆಯ ಬಹು ಮುಖ್ಯ ಕಾರಣ ಮಧ್ವಾಚಾರ್ಯರ ಸಾಮಾಜಿಕ ಧೋರಣೆ ಕುರಿತದ್ದು . ನಮ್ಮ ನಾಡಿನ ಬಹುಸಂಖ್ಯಾತ ಶೂದ್ರರನ್ನೂ , ದಲಿತರನ್ನೂ ನಿತ್ಯ ನಾರಕಿಗಳೆಂದೂ, ತಮೋಯೋಗ್ಯರೆಂದೂ ವರ್ಗೀಕರಿಸಿ ಇವರು ಎಂದೂ ಮುಕ್ತಿಭಾಜನರಲ್ಲವೆಂದು ತಿರಸ್ಕಾರದಿಂದ ನೋಡಿದ ಆಚಾರ್ಯರೊಬ್ಬರ ಹೆಸರನ್ನು ನಮ್ಮ ನಾಡಗೀತೆಯಲ್ಲಿ ಸೇರಿಸಿ ಪ್ರತಿದಿನ ಇವರ ನಾಮಸ್ಮರಣೆ ಮಾಡುವ ಅಗತ್ಯವಾದರೂ ನಮಗೆ ಏನಿದೆ ? ನಮಗೆ ಅಷ್ಟೂ ಆತ್ಮಗೌರವ ಇಲ್ಲವೆ ?

ಜಾತ್ಯತೀತ ರಾಷ್ಟ್ರದಲ್ಲಿ ರಾಷ್ಟ್ರಗೀತೆಯಲ್ಲಾಗಲಿ, ನಾಡಗೀತೆಯಲ್ಲಾಗಲೀ ಹೆಸರು ಸೇರಿಸಬೇಕೆಂದಾದರೆ ಅದಕ್ಕೆ ಬೇಕಾದ ಕನಿಷ್ಠ ಅರ್ಹತೆ ಆತ ಮಾನವೀಯ ಸಮಾನತೆಯ ಪ್ರತಿಪಾದಕನೋ ಅಲ್ಲವೋ ಎಂಬುದು. ಶಂಕರ, ರಾಮಾನುಜರು ಕೊನೆಯ ಪಕ್ಷ ಮನುಷ್ಯರ ಅಧ್ಯಾತ್ಮಿಕ ಅಥವಾ ಪಾರಮಾರ್ಥಿಕ ಸಮಾನತೆಯನ್ನಾದರೂ ಪ್ರತಿಪಾದಿಸಿದರು. ಮಧ್ವರು ಅದನ್ನೂ ಒಪ್ಪದೆ ನಿತ್ಯ ನಾರಕಿಗಳನ್ನೂ , ಶಾಶ್ವತ ತಮೋಯೋಗ್ಯರನ್ನೂ ಸೃಷ್ಟಿಸಿದರು.

ಸ್ವತಃ ಕುವೆಂಪುರವರೇ ಒಪ್ಪಿದರೂ ಮೇಲಿನ ಕಾರಣಗಳಿಗಾಗಿ ನಾನು ಪ್ರತಿಭಟಿಸುವವನೇ.''

- ಕೆ.ಪಿ. ಪೂರ್ಣಚಂದ್ರ ತೇಜಸ್ವಿ , ಮೂಡಿಗೆರೆ.

*

ಇದೊಂದು ಅನಗತ್ಯ ಪ್ರತಿಭಟನೆಯನ್ನು ಪುತ್ತಿಗೆ ಶ್ರೀಗಳು ಕೈಬಿಡುವುದೇ ಒಳ್ಳೆಯದು. ಇಲ್ಲದ ಮಧ್ವರ ಹೆಸರನ್ನು ಸೇರಿಸುವುದಾದರೂ ಹೇಗೆ ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State Anthem kicks off a controversy. followers of Madhwacharya protest against Government for not including MADHWA in the anthem. The anthem is a poem written by Jnana Pheeta award winner Kuvempu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more