ತಾಳ್ತಜೆ ಕೇಶವಭಟ್ಟರಿಗೆ ಸೇಡಿಯಾಪು ಪ್ರಶಸ್ತಿ
ಉಡುಪಿ : ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರತಿಷ್ಠಿತ ಸೇಡಿಯಾಪು ಪ್ರಶಸ್ತಿಗೆ ಖ್ಯಾತ ವಿದ್ವಾಂಸ ಪ್ರೊ. ತಾಳ್ತಜೆ ಕೇಶವಭಟ್ಟ ಆಯ್ಕೆಯಾಗಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕೇಶವಭಟ್ಟರು- ವ್ಯಾಕರಣ, ಶಬ್ದಕೋಶ, ಕಾವ್ಯ, ಜನಪದ, ಸಂಶೋಧನೆ, ಗ್ರಂಥ ಸಂಪಾದನೆ, ವಿಮರ್ಶೆ, ಅನುವಾದ, ಪ್ರಬಂಧ, ಯಕ್ಷಗಾನ, ನಾಟಕ ಮುಂತಾದ ಕ್ಷೇತ್ರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಪ್ರಭುತ್ವ ಪಡೆದಿರುವ ಕೇಶವಭಟ್ಟರು ಬೆಂಗಳೂರಿನ ಎಂಇಎಸ್ ಮತ್ತು ಆಚಾರ್ಯ ಪಾಠಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೈಸೂರು ವಿವಿ ಚಿನ್ನದ ಹಬ್ಬದ ಬಹುಮಾನ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಗೊರೂರು ಪ್ರಶಸ್ತಿ, ಬಿಎಂಶ್ರೀ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಕೇಶವಭಟ್ಟರು ಈಗ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಸೇಡಿಯಾಪು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸದ್ಯದಲ್ಲೇ ನಡೆಯುವ ಸಮಾರಂಭದಲ್ಲಿ ಕೇಶವಭಟ್ಟರಿಗೆ ಸೇಡಿಯಾಪು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications