ಭಾವಗೀತೆಗಳ ಕವಿಗೆ ಇದೋ ಭಾವನಮನ

ಕೆಎಸ್‌ನ ಅವರ ಕಾವ್ಯಶೈಲಿ ಎಷ್ಟು ಸರಳ ಹಾಗೂ ನೇರವೋ, ಅವರ ನಿಜ ಜೀವನ ಶೈಲಿಯೂ ಅಷ್ಟೇ ಸರಳ, ನೇರ. ಬೆಂಗಳೂರಿನ ಹೌಸಿಂಗ್‌ ಬೋರ್ಡಿನಲ್ಲಿ ಕೆಲಸದಲ್ಲಿದ್ದರೂ ಸಹ, ಶುದ್ಧಹಸ್ತರಾದ ಇವರು ಸ್ವಂತಕ್ಕಾಗಿ ಒಂದು ಮನೆಯನ್ನೂ ಮಾಡಿಕೊಳ್ಳದೆಯೇ ನಿವೃತ್ತರಾದರು. ಈ ಬಗ್ಗೆ ನಾನೊಂದು ಲೇಖನದಲ್ಲಿ ಆಗ ಪ್ರಸ್ತಾಪಿಸಿದ್ದೆ. ನಂತರ ಸರಕಾರ ಕಣ್ತೆರೆಯಿತು. ಇವರಿಗೆ ಸ್ವಂತ ಮನೆಯೆಂಬುದೊಂದು ಸಾಧ್ಯವಾಯಿತು. ಜೀವನದಲ್ಲಿ ಹೇಗೋ ತಮ್ಮ ಕಾವ್ಯದಲ್ಲೂ ಹಾಗೆಯೇ ಈ ಕವಿ ಯಾವುದೇ ಪದವಿ ಪ್ರಶಸ್ತಿಗಳಿಗೆ ಹಾತೊರೆಯದೆ, ಗುಂಪುಗಾರಿಕೆ ಹಾಗೂ ರಾಜಕೀಯದಿಂದ ದೂರ ಉಳಿದು ತಮ್ಮ ಪಾಡಿಗೆ ತಾವು ಒಂಟಿ ಕೋಗಿಲೆಯಂತೆ, ‘ಆನು ಒಲಿದಂತೆ’ ಹಾಡಿದರು. ಸಕಲ ಗೌರವಗಳೂ ತಾವಾಗಿ ಅವರನ್ನು ಅರಸಿ ಬಂದು ಅಲಂಕರಿಸಿದವು.

ಕೆಎಸ್‌ನ ತಮ್ಮ ಸುದೀರ್ಘ ಬಾಳ ಪಯಣದಲ್ಲಿ ಬಡತನದ ಬವಣೆ, ರೋಗ ರುಜಿನಗಳ ಕ್ರೂರ ಪ್ರಹಾರ, ವೃದ್ಧಾಪ್ಯದ ಪರಾವಲಂಬನೆ, ಒಬ್ಬಂಟಿತನ ಮುಂತಾದವನ್ನು ಧಾರಾಳವಾಗಿ ಕಂಡುಂಡವರು. ಆದರೆ ಈ ಯಾವುವೂ ಅವರ ವ್ಯಕ್ತಿತ್ವವನ್ನು ಕಿಂಚಿತ್ತೂ ಅಲುಗಾಡಿಸಲು ಸಾಧ್ಯವಾಗಲಿಲ್ಲ . ಅವರ ಪ್ರಶಾಂತ, ಸೌಮ್ಯ ಮುಖಭಾವಕ್ಕೆ, ವ್ಯಂಗ್ಯದ ಕೊಂಕಿಲ್ಲದ ನಿರಾಸೆಯ ಕಹಿಯಿಲ್ಲದ ಅವರ ಮೇಲುದನಿಯ ಮಾತಿಗೆ, ಆಶಾವಾದದ ಸಮತಾವಾದದ ಅವರ ಧೀರ ಸಾತ್ವಿಕ ನಿಲುವಿಗೆ ಕೊನೆತನಕ ಭಂಗ ಬರಲಿಲ್ಲ . ಅವರ ಜೀವನಪ್ರೀತಿ ಅದಮ್ಯ, ತಾಳ್ಮೆ ಅಪಾರ. ಇದಕ್ಕೆ ಅವರ ಜೀವನಾದರ್ಶವೂ ಕಾರಣ.

ತಮ್ಮ ಕಾವ್ಯೋದ್ದೇಶ ಮತ್ತು ಜೀವನತತ್ವದ ಬಗ್ಗೆ ಕೆಎಸ್‌ನ ಹೀಗೆ ಹೇಳಿದ್ದಾರೆ- ‘ನನ್ನ ಕಾವ್ಯದಲ್ಲಿ ನಾನು ಎಂದೂ ನೇರವಾಗಿ ದೇವರನ್ನು ಸಂಬೋಧಿಸಿದವನಲ್ಲ . ನನ್ನ ದೇವರ ಕಲ್ಪನೆಯೇ ವಿಚಿತ್ರವಾಗಿದೆ. ಬಾಳಿನ ಸುಖ ದುಃಖಗಳ ಅಧಿಪತಿಯಾಗಿ ದೇವರಿದ್ದಾನೆ ಎಂಬುದು ನನ್ನ ನಂಬಿಕೆಯಲ್ಲ . ಸೃಷ್ಟಿಗೆ ಕಾರಣನಾಗಿ ಇದ್ದ ದೇವರು ಸೃಷ್ಟಿಯಾದಂದಿನಿಂದ ಈ ಲೋಕವನ್ನು ಮನುಷ್ಯರಿಗೆ ಒಪ್ಪಿಸಿ, ತಾನು ದೂರ ನಿಂತಿದ್ದಾನೆ. ಆದ್ದರಿಂದ ಭೂಮಿಯ ನಾಳೆಯ ಕಥೆ ಮನುಷ್ಯನಿಗೆ ಸೇರಿದ್ದು . ದೇವರ ಎತ್ತರಕ್ಕೆ ಬೆಳೆದು ನಿಲ್ಲುವ ಆಸೆ ನಮ್ಮದಾಗಬೇಕು. ಇಂಥ ಕೆಚ್ಚಿಗೂ ನೈರಾಶ್ಯಕ್ಕೂ ಅಜಗಜಾಂತರ. ನಾಳೆಯ ನೆಮ್ಮದಿಯ ಬಗ್ಗೆ ನಂಬಿಕೆ ಇರುವವನಿಗೆ ಇವತ್ತು ನೈರಾಶ್ಯವಿಲ್ಲ. ಇರುವ ತನಕ ನೈಜವಾದುದ್ದೊಂದೇ ಈ ಭೂಮಿ. ಈ ಭೂಮಿಯಲ್ಲಿ ಭರವಸೆ ತಾನಿಟ್ಟುಕೊಂಡಿದ್ದು , ಉಳಿದವರಿಗೆ ಭರವಸೆಯನ್ನೂ ಕೊಡುತ್ತಾ ಇರಬೇಕಾದದ್ದು ಕವಿಯ ಕೆಲಸ.’

ಬಂದ ಬಾಗಿಲು ಮಣ್ಣು , ಬಿಡುವ ಬಾಗಿಲು ಮಣ್ಣು
ನಡುವೆ ಕಾಪಾಡುವುದು ತಾಯ ಕಣ್ಣು

- ಎಂದು ನಂಬಿ ಬಾಳಿದ, ಕೊನೆಯ ತನಕ ಕಾವ್ಯವನ್ನು ಉಸಿರಾಡಿದ, ನಮ್ಮ ‘ಒಲವಿನ ಕವಿ’ಗೆ ನುಡಿ ನಮನ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಪೂರಕ ದಳಗಳು

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+