ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿಗೋಷ್ಠಿಯು ರಾಮಾಯಣ, ಹನಿಗವನಗೋಷ್ಠಿ ಮಹಾಭಾರತ

By ಭರತ್‌ಕುಮಾರ್‌, ಮೂಡಬಿದಿರೆಯಿಂದ
|
Google Oneindia Kannada News

'ಕಾವ್ಯ ಕಾಲ ವಶಂ' ಎಂದು ನೊಬೆಲ್‌ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಅಮರ್ತ್ಯಸೇನ್‌ ಯಾವಾಗಲೊ ಹೇಳಿದ್ದ ನೆನಪು. ಅಮರ್ತ್ಯಸೇನ್‌ರ ಮಾತನ್ನು ಒಪ್ಪುವುದು ಬಿಡುವುದು ಬೇರೆಯ ವಿಷಯ ; ಶುಕ್ರವಾರ (ಡಿ.19) ಮೂಡಬಿದಿರೆ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಹಾಗೂ ಹನಿಗವನ ಗೋಷ್ಠಿಯಲ್ಲಿ ವಾಚನಗೊಂಡ ಬಹುತೇಕ ಕವಿತೆಗಳು ಮಾತ್ರ ಕಾವ್ಯ ಕಾಲವಶವಾದ ಕುರಿತ ಸೂಚನೆಯಂತಿದ್ದುದು ಸುಳ್ಳಲ್ಲ .

ಡಾ.ನಾ.ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅರ್ಥಕ್ಕಿಂತ ಅಪದ್ಧಗಳೇ ಹೆಚ್ಚಾಗಿದ್ದುದೊಂದು ವಿಶೇಷ. ಅನೇಕ ಕವಿಗಳಲ್ಲಿ ಕವಿತೆ ಓದುವ ಉತ್ಸಾಹವೇ ಇದ್ದಂತೆ ಕಾಣಲಿಲ್ಲ . ಇದ್ದುದರಲ್ಲಿ ಖುಷಿ ಕೊಟ್ಟವರೆಂದರೆ- ಸವಿತಾ ನಾಗಭೂಷಣ, ಪ್ರತಿಭಾ ನಂದಕುಮಾರ್‌, ಬಷೀರ್‌, ಶಂಕರ ಕಟಗಿ, ಸುಬ್ಬು, ಎಂ.ಆರ್‌.ಕಮಲ ಹಾಗೂ ಪ್ರಹ್ಲಾದ ಅಗಸನಕಟ್ಟೆ .

ಕವಿಗೋಷ್ಠಿಯದು ರಾಮಾಯಣವಾದರೆ, ಹನಿಗವನ ಗೋಷ್ಠಿಯದು ಮಹಾಭಾರತ. ಚುಟುಕುಬ್ರಹ್ಮ ದುಂಡಿರಾಜರ ಅಧ್ಯಕ್ಷತೆಯಲ್ಲಿ ನಡೆದ ಹನಿಗವನ ಗೋಷ್ಠಿಯ ಬಹುತೇಕ ಕವಿತೆಗಳಲ್ಲಿ ಪಂಚೂ ಇರಲಿಲ್ಲ ಪನ್ನೂ ಇರಲಿಲ್ಲ . ದುಂಡಿರಾಜರು- 'ಪಂ ಚೆ ಇಲ್ಲದಿದ್ದರ ಖಂಡಿತಾ ಅವಮಾನ!' ಎನ್ನುವ ತಮ್ಮ ಕವಿತೆಯನ್ನು ಯಾಕೋ ಓದಲೇ ಇಲ್ಲ .

ಚುಟುಕುಗಳ ಗುಣಮಟ್ಟವನ್ನು ಪಕ್ಕಕ್ಕಿಟ್ಟು ಒಂದಿಷ್ಟು ನಗೋಣ ಅಂದರೆ, ಗೋಷ್ಠಿಯುದ್ದಕ್ಕೂ ಕಿರಿಕಿರಿ. ಮುಖ್ಯವೇದಿಕೆಯಿಂದ ಬೇರೆಡೆ ಹನಿಗವನ ಗೋಷ್ಠಿ ನಡೆಸುತ್ತಿರುವುದಕ್ಕೆ ಕವಿಗಳಿಗೆ ಸಿಟ್ಟು . ಚುಟುಕು ಕವಿಗಳಿಗೆ ಚುಟುಕು ಸಭಾಂಗಣ ಎಂದು ಸಂಘಟಕರು ತೀರ್ಮಾನಿಸಿದ್ದರೋ ಏನೋ? ಶಂಕರ ಬೈಚನಾಳ ಎನ್ನುವ ಕವಿಯಂತೂ ಕವಿತೆ ಓದುವುದಿಲ್ಲ ಎಂದು ಪಟ್ಟುಹಿಡಿದು ಕೂತರು. ಚುಟುಕು ಗೋಷ್ಠಿ ಮುಗಿದ ಮೇಲೂ ಸಂಘಟಕರನ್ನು ಬೈಚನಾಳ ಬಯ್ಯುತ್ತಲೇ ಇದ್ದರು.

***

ಕವಿಗೋಷ್ಠಿ ಹಾಗೂ ಹನಿಗವನ ಗೋಷ್ಠಿಯ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಗುಡ್ಡೆ ಹಾಕಲಾಗಿದೆ. ಆಯ್ಕೆಯ ಪ್ರಶ್ನೆಯೇ ಇಲ್ಲ ; ಕಿವಿಗೆ ಬಿದ್ದ ಕವಿತೆಗಳಿಗೆ ಮಾತ್ರ ಇಲ್ಲಿ ಜಾಗ ಸಿಕ್ಕಿದೆ. ಓದಿ, ಇಷ್ಟವಾದರೆ ಸಂತೋಷ. ಕಷ್ಟವಾದರೆ... ಸಾರಿ !

ಹಿಂದು ಹುಡುಗ
ಮುಸ್ಲಿಂ ಹುಡುಗಿಯನ್ನು
ಮದುವೆಯಾದರೆ ಏನಾಗುತ್ತೆ ?
ಎರಡು ಮುದ್ದಾದ ಮಗು ಹುಟ್ಟುತ್ತೆ !

ಹಿಂದೂಸ್ತಾನ್‌ ಪಾಕಿಸ್ತಾನ್‌ ಒಂದಾದರೆ ಏನಾಗುತ್ತೆ ?
ಎರಡೂ ದೇಶಗಳಲ್ಲಿ ಆತಂಕ
ಆಶಾಂತಿ ಕಡಿಮೆಯಾಗುತ್ತೆ
ಒಂದು ಹಳೆಯ ಗಾಯ ವಾಸಿಯಾಗುತ್ತೆ .

ರಾಮನನ್ನು ಅಲ್ಲಾಹುವಿನ
ಪಕ್ಕದಲ್ಲಿ ಇಟ್ಟರೆ ಏನಾಗುತ್ತೆ ?
ಶಕ್ತಿ ಭಕ್ತಿ ಎರಡೂ ಹೆಚ್ಚಾಗುತ್ತೆ !
(ಸವಿತಾ ನಾಗಭೂಷಣ).

*

ಕವಿತೆಗೇನು ಬೆಲೆಯಿದೆ
ಈ ಲೋಕದಲ್ಲಿ
ಒಂದು ಒಳ್ಳೆಯ ಕವಿತೆಗೆ
ಒಂದು ಕಪ್‌ ಚಹಾ ಕೂಡ
ಸಿಗುವುದಿಲ್ಲ ಇಲ್ಲಿ .
(ಪ್ರಹ್ಲಾದ ಅಗಸನಕಟ್ಟೆ )

*

ಹೋದಲ್ಲೆಲ್ಲಾ ತೊಗಾಡಿಯಾ
ಚೆಲ್ಲುತ್ತಾನೆ ಕೋಮುವಾದದ ರಾಡಿಯ
ಬಡಿದಾಟ ಹಚ್ಚಿ
ಬಿಡುತ್ತಾನೆ ಗಾಡಿಯ
(ಗೋರಂಟ್ಲಿ)

*

ಮಲೆಯ ನೆಲದಲ್ಲಿ ನೆಲೆಯಿಲ್ಲದವ
ಕಣ್ಣ ಕೆಂಡವಾಗಿದ್ದ
ನಮ್ಮ ಹೂ ಪಾರ್ವತಿ
(ಲಿಂಗರಾಜ ಕಮ್ಮಾರ)

*

ಹಾಸ್ಯ ಕವನ ಓದುವಾಗ
ನಗಿಸಿದ್ದಕ್ಕಾಗಿ ಚಪ್ಪಾಳೆ
ಗಂಭೀರ ಕವನ ಓದುವಾಗ
ಮುಗಿಸಿದ್ದಕ್ಕಾಗಿ ಚಪ್ಪಾಳೆ.
(ಡುಂಡಿರಾಜ್‌)

*

ನಾನು ಮಣ್ಣಿನ ಗೆಜ್ಜೆ ಹಾಕಿಕೊಂಡ
ಮೌಖಿಕ ಮಹಾದೇವ
ನಾನು ಗೊತ್ತಲ್ಲಾ ,
ಮೀಸಲಾತಿ ಕೂಸು ಹುಟ್ಟಿದ್ದು ಹೊಲಗೇರಿಯಲ್ಲಿ ,
ಅಸ್ಪೃಶ್ಯತೆಯ ಅಮೇಧ್ಯವಿದೆ ನನ್ನಲ್ಲಿ
ಬೆಳಗಾಗುವುದೆಂದು ಕಾಯುವವನಿಗೆ
ಕಸಗುಡಿಸುವುದಕ್ಕಿಂತ ಮಹಾಪುಣ್ಯ ಏನಿದೆ ?
(ಸುಬ್ಬು ಹೊಲೆಯಾರ್‌)

*

ನಾನು ಸರ್ವಾಧಿಕಾರಿಯಾದರೆ
ಶಾಸಕಾಂಗ ಭವನವನ್ನು
ಸುಂದರಿಯರ ಸಜ್ಜೆಮನೆ ಮಾಡುತ್ತೇನೆ.
ಖೋ ಜಾಗಳ ಕೈಗೆ ಬಂದೂಕು ಕೊಟ್ಟು ಕೂರಿಸುತ್ತೇನೆ.
ಇಲ್ಲಿ ಹೇಲು ಉಚ್ಚೆ ಬಳಿಯುವವರು ಕನಿಷ್ಠ ಐಎಎಸ್‌ ಪಾಸಾಗಿರಬೇಕು!
(ಎಲ್‌.ಎನ್‌.ಮುಕುಂದರಾಜ್‌)

*

ಬೇಕಾದಷ್ಟು ಟೀವಿಗಳನ್ನು
ಜಪಾನ್‌ ಸೃಷ್ಟಿಸುತ್ತದೆ
ಅದಕ್ಕೆ ಬೇಕಾದ ಪ್ರೇಕ್ಷಕರನ್ನು
ಭಾರತ ಸೃಷ್ಟಿಸುತ್ತದೆ.
(ಎನ್‌.ಜಿ.ಪಟವರ್ಧನ)

*

ಆ ಹಕ್ಕಿ ಬಾಯಲ್ಲಿ ಕಚ್ಚಿಕೊಂಡ ಕಡ್ಡಿ ನನ್ನ ಗಿಡದ್ದೇ,
ಅದು ಗೂಡು ಕಟ್ಟಿದ ಮರ ಕೂಡ ನನ್ನದೇ,
ಗೂಡಿನಲ್ಲಿ ತುಂಬಿದ್ದ ಖುಷಿ ಮಾತ್ರ ನನ್ನದಲ್ಲ .
(ಮೀನಾ ಸದಾಶಿವ)

English summary
71st All India Kannada Literary Conference 2003, Moodabidire
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X