ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ ಷೇಕ್ಸ್‌ಪಿಯರ್‌; ಮತ್ತದೇ ಮೂಡಬಿದಿರೆ !

By Super
|
Google Oneindia Kannada News

ಮೂಡಬಿದಿರೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಾಹಿತಿಗಳೆಲ್ಲ ಮೂಡಬಿದಿರೆಗೆ ದೌಡಾಯಿಸಿದ್ದಾರೆ ಅನ್ನುವುದು ಸುಳ್ಳು. ತಾನು ತುಂಬ ಇಷ್ಟಪಡುವ ಸಾಹಿತಿಯನ್ನು ಎಷ್ಟೋ ಸಲ ಓದುಗ ಸಾಹಿತ್ಯಜಾತ್ರೆಯಲ್ಲಿ ಕೂಡ ಭೇಟಿಯಾಗಲಿಕ್ಕೆ ಸಾಧ್ಯವಾಗುವುದಿಲ್ಲ. ಈ ವರುಷವಂತೂ ಕಮಲಾ ಹಂಪನಾ ಅಧ್ಯಕ್ಷರಾಗಿರುವ ಸಮ್ಮೇಳನಕ್ಕೆ ಹೋಗುವುದೇ ಅವಮಾನ ಎಂದು ಹಲವರು ಭಾವಿಸಿದಂತಿದೆ.

ಸಮ್ಮೇಳನಕ್ಕೆ ಯಾರು ಅಧ್ಯಕ್ಷರಾಗುತ್ತಾರೆ ಅನ್ನುವುದು ಒಬ್ಬ ಓದುಗನಿಗೋ ಲೇಖಕನಿಗೋ ಅಷ್ಟು ಮುಖ್ಯವಲ್ಲ. ಸಮ್ಮೇಳನ ಸಾರ್ಥಕವಾಗುವುದು ಅಲ್ಲಿ ನಡೆಯುವ ವಿನಿಮಯದಲ್ಲಿ, ವಾಗ್ವಾದದಲ್ಲಿ, ಗೋಷ್ಠಿಗಳಲ್ಲಿ ಹೊರಡುವ ಹೊಸ ವಿಚಾರಧಾರೆಗಳಲ್ಲಿ. ಯಾರೇ ಅಧ್ಯಕ್ಷರಾದರೂ ಗೋಷ್ಠಿಗಳ ಗುಣಮಟ್ಟದಲ್ಲಿ ಅಂಥ ವ್ಯತ್ಯಾಸ ಕಾಣಿಸದು. ಹಿಂದೆ ಭೈರಪ್ಪ, ಅನಂತಮೂರ್ತಿ ಮುಂತಾದವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನಗಳಲ್ಲೂ ಅಂಥದ್ದೇನೂ ಸಂಭವಿಸಲಿಲ್ಲ. ಅಷ್ಟಕ್ಕೂ ಅಧ್ಯಕ್ಷರಿಗೆ ಸಾಹಿತ್ಯ ಸಮ್ಮೇಳನದ ಮೇಲೆ ಯಾವ ಹತೋಟಿಯೂ ಇರುವುದಿಲ್ಲ. ಅವರನ್ನು ಕೇಳಿ ಗೋಷ್ಠಿಗಳನ್ನು ನಿಗದಿಪಡಿಸುವುದಿಲ್ಲ. ಅಧ್ಯಕ್ಷರು ಅವರ ಭಾಷಣ ಬಿಟ್ಟರೆ ಬೇರೆ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ. ಇಡೀ ಸಮ್ಮೇಳನದ ಉದ್ದೇಶ, ಸ್ವರೂಪ ಮತ್ತು ವಿನ್ಯಾಸ ಹೇಗಿರಬೇಕು ಎಂದು ನಿರ್ಧರಿಸುವ ಹಕ್ಕೂ ಅಧ್ಯಕ್ಷರಾದವರಿಗಿಲ್ಲ. ಅದನ್ನು ಸಾಹಿತ್ಯ ಪರಿಷತ್ತಿನಲ್ಲಿ ಕುಳಿತ ಗುಮಾಸ್ತರು ಮಾಡುತ್ತಾರೆ. ಅವರಿಗೂ ಸಾಹಿತ್ಯ ಸಮ್ಮೇಳನದ ಸಮಗ್ರತೆಯ ಬಗ್ಗೆ ಯಾವ ಕಲ್ಪನೆಯೂ ಇರುವುದಿಲ್ಲ. ಯಾರಾದರೊಬ್ಬರು ಆವತ್ತು ಮಾತಾಡುವುದಕ್ಕೆ ಒಪ್ಪಿಕೊಂಡರೆ ಸಾಕು, ಎಲ್ಲಾ ಜಿಲ್ಲೆಗಳಿಗೂ ಜಾತಿಗಳಿಗೂ ಪ್ರಾತಿನಿಧ್ಯ ಸಿಕ್ಕರೆ ಸಾಕು. ಆಯ್ಕೆಯ ವಿಚಾರದಲ್ಲಿ ರಗಳೆಯಾಗದಿದ್ದರೆ ಸಾಕು ಎನ್ನುವುದನ್ನು ಬಿಟ್ಟರೆ ಅವರಿಗೆ ಬೇರೆ ಕಾಳಜಿಯೇನೂ ಇರುವುದಿಲ್ಲ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರೆಂದು ಗೊತ್ತಾದ ತಕ್ಷಣ ಅವರ ಜೊತೆ ಕುಳಿತು, ಈ ಸಮ್ಮೇಳನದ ಒತ್ತು ಯಾವುದಕ್ಕಿರಬೇಕು ಎಂದು ನಿರ್ಧರಿಸುವುದನ್ನು ಸಾಹಿತ್ಯ ಪರಿಷತ್ತು ಯಾಕೆ ಮಾಡುತ್ತಿಲ್ಲ ?

ಅಲ್ಲಿ ಸಾಹಿತ್ಯ ಸಮ್ಮೇಳನ ಶುರುವಾಗುವುದಕ್ಕೆ ನಾಲ್ಕು ದಿನಗಳ ಮೊದಲು ಇಲ್ಲಿ ಬೆಂಗಳೂರು ಹಬ್ಬ ಮುಗಿದಿದೆ. ಬೆಂಗಳೂರಿನ ಮೇಲು ಮಧ್ಯಮವರ್ಗದವರಿಗೆಂದೇ ರೂಪಿಸಲಾದ ಕಾರ್ಯಕ್ರಮಗಳು ಬೆಂಗಳೂರು ಹಬ್ಬದಲ್ಲಿದ್ದವು. ಅಲ್ಲಿ ಪ್ರದರ್ಶನ ಕಂಡ ನಾಟಕಗಳಲ್ಲಿ, ನೃತ್ಯ, ಸಂಗೀತ ಕಾರ್ಯಕ್ರಮಗಳಲ್ಲಿ ಬರೀ ಇಂಗ್ಲಿಷ್‌ ಮಾತನಾಡುವ ನಿಯೋಬೆಂಗಳೂರಿಗಳ ಹಾವಳಿ. ಹೀಗಾಗಿ ಕನ್ನಡದ ನಾಟಕಗಳನ್ನು ಹುಡುಕಿ ಹೊರಟವರಿಗೆ ಅಲ್ಲೇನೂ ಸಿಗಲಿಲ್ಲ. ಪದ್ಮಿನಿ ರವಿ ಎಂಬಾಕೆ ಉದ್ಘಾಟನೆಯ ದಿನವೇ 'ಸಾಮಾನ್ಯ' ರಾಜ್ಯಪಾಲರೇ ಎಂದು ಅಪದ್ಧ ಮಾತಾಡಿದ್ದರಿಂದ ಹಿಡಿದು ಪ್ರತಿದಿನ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದವರು ಇಂಗ್ಲಿಷ್‌ ಧಾಟಿಯಲ್ಲಿ ಕನ್ನಡ ನುಡಿಯಾಡಿದ್ದನ್ನು ತಮಾಷೆಯಾಗಿ ಪರಿಗಣಿಸುವಂತಿಲ್ಲ.

ಹಾಗಿದ್ದೂ ಪ್ರಸನ್ನ ನಿರ್ದೇಶಿಸಿದ ನಾಟಕ 'ಹ್ಯಾಮ್ಲೆಟ್‌' ನಮ್ಮ ಮಣ್ಣಿನದೇ ಅನ್ನಿಸುವಂತಿತ್ತು. ನಮ್ಮ ಜನಪದ, ಯಕ್ಷಗಾನದ ಮಟ್ಟುಗಳನ್ನು ಬಳಸಿಕೊಂಡ ಪ್ರಯೋಗ ಅದು. ಷೇಕ್ಸ್‌ಪಿಯರ್‌ನ ಚೆಂದದ ಸಾಲುಗಳೆಲ್ಲ ಈ ನಾಟಕದಲ್ಲೇ ತುಂಬಿಕೊಂಡಂತಿವೆ. ಟು ಬಿ ಆರ್‌ ನಾಟ್‌ ಟು ಬಿ ಎನ್ನುವ ಪ್ರಸಿದ್ಧ ಸ್ಥಿತಿಯಿಂದ ಹಿಡಿದು ಚಂಚಲತೆಯ ಇನ್ನೊಂದು ಹೆಸರು ಹೆಣ್ಣು ಎನ್ನುವ ಸಾಲಿನ ತನಕ ಎಲ್ಲವೂ ಎಲ್ಲೋ ಕೇಳಿದ ವಾಕ್ಯಗಳೇ. ಷೇಕ್ಸ್‌ಪಿಯರ್‌ನ ನಾಟಕದ ಸಾಲುಗಳು ಎಷ್ಟು ಪ್ರಸಿದ್ಧ ಎಂದರೆ ಆತನ ನಾಟಕ ನೋಡಿದ ಮಹಿಳೆಯಾಬ್ಬಳು This drama is full of quotaions ಎಂದು ಉದ್ಗರಿಸಿದ್ದಳಂತೆ. ಅದನ್ನು ಹ್ಯಾಮ್ಲೆಟ್‌ ನೆನಪಿಸುವಂತಿತ್ತು.

ಒಂದು ಕೃತಿ ಅಭಿಜಾತವಾಗುವುದು ಮತ್ತೆ ಮತ್ತೆ ಓದಿಸಿಕೊಳ್ಳುವುದರಿಂದ; ಕುವೆಂಪು ಕಾದಂಬರಿಯ ಹಾಗೆ. 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡಿತಿ'ಯನ್ನು ಎಷ್ಟು ಬಾರಿ ಬೇಕಿದ್ದರೂ ಓದಬಹುದು. ಆದರೆ ನವ್ಯದ ಅನೇಕ ಕಾದಂಬರಿಗಳನ್ನು ಈಗ ಓದಲು ಕೈಗೆತ್ತಿಕೊಂಡರೆ ಬೋರು ಹೊಡೆಸುತ್ತವೆ. ನೀವು ಮತ್ತೆ ಮತ್ತೆ ಓದಬಯಸುವ ಹತ್ತು ಕಾದಂಬರಿಗಳನ್ನು ಪಟ್ಟಿಮಾಡುತ್ತಾ ಹೋದರೆ ಅದರಲ್ಲಿ ಶಿವರಾಮ ಕಾರಂತರೂ ರಾವ್‌ಬಹಾದ್ದೂರ್‌ ಕುವೆಂಪು ತೇಜಸ್ವಿ ಇರುತ್ತಾರೆ. ಭೈರಪ್ಪನವರ ಬಗ್ಗೆ ಈ ಮಾತು ಹೇಳುವಂತಿಲ್ಲ. ಚಿತ್ತಾಲ, ದೇಸಾಯಿ ಕಷ್ಟ.

ಷೇಕ್ಸ್‌ಪಿಯರ್‌ ನಾಟಕದೊಂದು ಸಾಲು ಹೀಗಿದೆ;

Though this be madness, yet there is method in it.

ಹುಚ್ಚಿನಲ್ಲೂ ಒಂದು ರೀತಿನೀತಿಯಿದೆ ಅನ್ನುವುದರ ಅರ್ಥ ಹ್ಯಾಮ್ಲೆಟ್‌ನನ್ನು ಪೂರ್ತಿ ಓದುವ ತನಕ ಆಗುವುದಿಲ್ಲ. ಆದರೆ ಒಂದು ಪ್ರತ್ಯೇಕ ಸಾಲಾಗಿಯೂ ಅದು ಇಷ್ಟವಾಗುತ್ತದೆ.
ಅದು ಷೇಕ್ಸ್‌ಪಿಯರ್‌.

English summary
Shakespeares Hamlet in Bangalore and Moodabidire Sahitya Sammelana...writes Janaki
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X