ಹಿರಿಯೂರು ಬಂಡಾಯ ಸಾಹಿತಿ ಮಗನ ಮದುವೆಗೆ ಸಾಹಿತ್ಯ ಭಾಷ್ಯ
- ಶಾಮಣ್ಣ, ಹಿರಿಯೂರು
ಬಂಡಾಯ ಸಾಹಿತಿ ಯಲನಾಡು ಆಂಜನಪ್ಪನವರು ಹಿರಿಯೂರಿನಲ್ಲಿ ತಮ್ಮ ಮಗ ಎ.ಆರ್. ಅರವಿಂದನ ಮದುವೆ ಮಾಡಿದ್ದು ಹೀಗೆ. ರಾಯದುರ್ಗದ ವಧು ಎ. ಯಶೋದಾಳನ್ನು ಅರವಿಂದ ಡಿ. 14ರ ಭಾನುವಾರ ವರಿಸಿದ ಸಂದರ್ಭದಲ್ಲಿ ಹಾಡು ಹೊನಲು, ಕಾವ್ಯ ಗಂಗೆಯ ಧಾರೆ, ಸಂಕಿರಣದಲ್ಲಿ ಮದುವೆ ವಿಚಾರಧಾರೆ. ಇದೇ ಧಾರೆ ಮುಹೂರ್ತ !
ಸುಖೀ ಕುಟುಂಬದ ಸವಾಲುಗಳು ಎಂಬ ವಿಚಾರ ಸಂಕಿರಣದಲ್ಲಿ ವರದಕ್ಷಿಣೆಯ ಬದಲಾದ ಸ್ವರೂಪದ ಚರ್ಚೆಯಾಯಿತು. ಮದುವೆಯಾಗುವ ವರ ತನ್ನ ತಮ್ಮನಿಗೂ ಅಡ್ವಾನ್ಸಾಗಿ ವರದಕ್ಷಿಣೆ ಪಡೆಯುವ ಉದಾಹರಣೆ ಕೊಟ್ಟಿದ್ದು ಡಾ. ಎಂ.ಜಿ. ಈಶ್ವರಪ್ಪ. ಮದುವೆಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದುದು ಇವರೇ. ಸುಖ- ದುಃಖ ಎಂಬ ಎರಡು ಮುಖಗಳ ಒಂದೇ ನಾಣ್ಯ ಬದುಕು. ಗಂಡ- ಹೆಂಡತಿ ಪ್ರಶ್ನೆ ಕೇಳಲು ಹಾಗೂ ಉತ್ತರ ಕೊಡಲು ಸದಾ ಸಿದ್ಧರಾಗಿರಬೇಕಾಗುತ್ತದೆ. ಆದರೆ ತಾಳಿ ಕಟ್ಟುವ ಮುನ್ನವೇ ನಡೆಯುವ ವರದಕ್ಷಿಣೆ ರೂಪದ ವ್ಯಾಪಾರ ಮದುವೆಯ ಅರ್ಥವನ್ನೇ ಹಾಳುಗೆಡಹುತ್ತಿದೆ. ದಶಕಗಳಿಂದಲೂ ಬೊಂಬಡಾ ಬಜಾಯಿಸುತ್ತಿದ್ದರೂ ಈ ಪಿಡುಗಿನ ಬುಡ ಅಲ್ಲಾಡಿಸಲು ಇನ್ನೂ ಆಗಿಲ್ಲ. ಬಹುಶಃ ಆಗೋದೂ ಇಲ್ಲ ಅಂತ ಈಶ್ವರಪ್ಪ ಖೇದದಿಂದ ಹೇಳಿದರು.
ಹಳೇ ತಲೆಮಾರಿನ ಮಂದಿಯ ಬಾಳ್ವೆ ನಮಗೆ ಬೆಳಕು. ಅವರು ಬದುಕಿದ ರೀತಿಯಲ್ಲಿ ಮಂದಿ ಇವತ್ತು ಬದುಕುತ್ತಿಲ್ಲ. ಬದಲಾವಣೆಯ ಬೀಸುಗಾಳಿಗೂ ಕೂಡ ಅವರು ತರಗೆಲೆಗಳಾಗದೆ, ಕಹಿಯ ನಡುವೆಯೂ ಏಗುತ್ತಿರುವುದು ಇಂದಿನ ಪೀಳಿಗೆಗೆ ದಾರಿ ದೀವಿಗೆಯಾಗಬೇಕು ಎಂಬುದು ಸಾಹಿತಿ ರಾಘವೇಂದ್ರ ಪಾಟೀಲರ ಅಭಿಪ್ರಾಯ.
ಇವತ್ತು ಸಾಂಸಾರಿಕ ಜಂಜಡಗಳಷ್ಟೇ ಅಲ್ಲ, ಜಾಗತೀಕರಣದ ಸವಾಲುಗಳನ್ನೂ ಮದುವೆಯಾದವರು ಎದುರಿಸಬೇಕಿದೆ. ಮನೆಯಾಳಗೆ, ಮನೆ ಹೊರಗೆ ಸುಳಿದಾಡುವ ಮಂದಿಗಳ ಮನಸ್ಸು ಬಲು ಗಟ್ಟಿಯಾಗಿರಬೇಕು. ಇಲ್ಲವಾದರೆ ಸಂಸಾರದ ಕಟ್ಟಡ ಕುಸಿದು ಬೀಳುತ್ತದೆ ಎಂದು ಕವಿ ಚಂದ್ರಶೇಖರ ತಾಳ್ಯ ಕಿವಿಮಾತು ಹೇಳಿದರು. ಮದುವೆಯ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದು ಇವರೇ. ಗೋಷ್ಠಿ , ಸಂಕಿರಣಗಳಷ್ಟೇ ಅಲ್ಲದೆ ಮದುವೆಗೆ ಸಂಬಂಧಿಸಿದ ಜಾನಪದ ಹಾಡುಗಳು ಅನುರಣಿಸಿದಾಗ ವಧು- ವರರ ಕೆನ್ನೆ ಕೆಂಪು.
ಬಿ.ವಿ.ವೀರಭದ್ರಪ್ಪ, ರಾಧಾಕೃಷ್ಣ ಹಾಗೂ ರಾಮಪ್ಪ ತಮ್ಮ ಚಿಂತನೆಗಳನ್ನು ಹಂಚಿಕೊಂಡರೆ, ಚಂದ್ರಶೇಖರ ತಾಳ್ಯ, ಕಣಜನಹಳ್ಳಿ ನಾಗರಾಜ್ ಹಾಗೂ ಜಗನ್ನಾಥ್ ಕವನ ವಾಚನ ಮದುವೆಗೆ ಮಂತ್ರಗಳಾದವು ! ಪ್ರೊ. ಎಂ.ಜಿ. ರಂಗಸ್ವಾಮಿ ಹಾಗೂ ರೇವಣ ಸಿದ್ಧಪ್ಪ ಈ ಸಾಹಿತ್ಯಿಕ ಮದುವೆಗೆ ಸಾಕ್ಷಿಯಾಗಿದ್ದರು.












Click it and Unblock the Notifications