ಮುಳಿಯ ಪ್ರಶಸ್ತಿ ಪುರಸ್ಕೃತ ಪ್ರತಿಭೆ ಪುಣಿಂಚಿತ್ತಾಯ
ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ಮಾರ್ಚ್ 3ನೇ ತಾರೀಕು ‘ನೆನಪಿನ ಹಬ್ಬ’ ಹಾಗೂ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ತಿಮ್ಮಪ್ಪಯ್ಯನವರ ಹೆಸರಲ್ಲಿ ಕೊಡುವ ಮುಳಿಯ ಪ್ರಶಸ್ತಿ ಈ ಬಾರಿ ಬೆಳ್ಳೂರಿನ ವೆಂಕಟರಾಜ ಪುಣಿಚಿತ್ತಾಯರಿಗೆ ಲಭಿಸಿದೆ.
ಬೆಳಗ್ಗೆ 9.30 ಗಂಟೆಗೆ ಧ್ವಜಾರೋಹಣದೊಂದಿಗೆ ನೆನಪಿನ ಹಬ್ಬ ಶುರುವಾಗಲಿದೆ. ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ವಿಕಸನ ಕಾರ್ಯಕ್ರಮದಲ್ಲಿ ಕರಾವಳಿ ಲೇಖಕಿ- ವಾಚಕಿಯರ ಸಂಘದ ಅಧ್ಯಕ್ಷೆ ಸಾವಿತ್ರಿ ಎಂ.ಭಟ್‌ಮತ್ತು ಕನ್ಯಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಕೊಡೆಂಕಿರಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3.30ಕ್ಕೆ ಮುಳಿಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಕಾಸರಗೋಡಿನ ಯು.ಪಿ.ಕುಣಿಕುಳ್ಳಾಯ ಅವರಿಂದ ಅಭಿವಂದನೆ. ಬಿ.ಸಿ.ಪೊನ್ನಪ್ಪನವರಿಂದ ಸಂಸ್ಮರಣೆ. ಸಭಾಧ್ಯಕ್ಷತೆಯನ್ನು ಮೈಸೂರಿನ ಪ್ರೊ.ಜಿ.ಟಿ.ನಾರಾಯಣ ರಾವ್ ವಹಿಸಲಿದ್ದಾರೆ.
ಸಂಜೆ 6.30ರಿಂದ ಯಕ್ಷಗಾನ ನೃತ್ಯ ನಾಟಕ ಜಟಾಯು ಮೋಕ್ಷ. ಪ್ರಸ್ತುತ ಪಡಿಸುವವರು- ಯಕ್ಷಗಾನ ಕೇಂದ್ರ, ಎಂ.ಜಿ.ಎಂ.ಕಾಲೇಜು ಉಡುಪಿ. ಬನ್ನಂಜೆ ಸಂಜೀವ ಸುವರ್ಣ ಹಾಗೂ ಕೇಂದ್ರದ ಗುರುಗಳು ಈ ಯಕ್ಷಗಾನ ನೃತ್ಯ ನಾಟಕವನ್ನು ನಿರ್ದೇಶಿಸಿದ್ದಾರೆ.
ಇದು ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಮಿತಿ, ಮಂಗಳೂರು ನಡೆಸುತ್ತಿರುವ ಕಾರ್ಯಕ್ರಮ.
ಪುಣಿಂಚಿತ್ತಾಯರ ಪರಿಚಯ
ಕಾಸರಗೋಡಿನ ಕೈಯಾರರು- ಪುಣಿಂಚಿತ್ತಾಯರನ್ನು ಅಭಿನಂದಿಸುತ್ತ , ‘ಸಾಹಿತ್ಯ ಸರಸ್ವತಿ ಸರ್ವಭಾಷಾಮಯೀದೇವಿ ! ಅದುವೇ ಓರ್ವನು ಭಾಷಾ ವಿದ್ವಾಂಸನಾಗಬೇಕಾದರೆ, ಆ ವಾಗ್ದೇವಿಯ ನಿಜ ಸ್ವರೂಪವಾದ ಸರ್ವ ಭಾಷೆಗಳ ಅಭ್ಯಾಸದ ಅರ್ಹತೆ ಇರಬೇಕು. ಅದಕ್ಕೆ ತಕ್ಕಂತೆ ವ್ಯಕ್ತಿತ್ವ, ಕಾಮ ಸಾಧನೆಗಳು ಶ್ರೀ ವೆಂಕಟರಾಜ ಪುಣಂಚಿತ್ತಾಯರದು’ (ಅಭಿನಂದನಾ ಗ್ರಂಥದಿಂದ) ಎಂದು ಹೇಳಿದ್ದಾರೆ.
ತುಳು ಪ್ರಾಚೀನ ಗ್ರಂಥಗಳ ಕುರಿತು ಆಳವಾದ ಸಂಶೋಧನೆಗಳಲ್ಲಿ ನಿರತರಾದ ಪುಣಂಚಿತ್ತಾಯರ ಕೀರ್ತಿ ಕರ್ನಾಟಕದಾದ್ಯಂತ ಹಬ್ಬಿದೆ. ಶ್ರೀ ಭಾಗವತೋ, ಕಾವೇರಿ ಮಹಾತ್ಮೆ, ಶ್ರೀ ದೇವಿ ಮಹಾತ್ಮೆ- ಇವುಗಳ ಸಂಪಾದನೆಯ ಕಾರ್ಯದಲ್ಲಿ ಅವರನ್ನು ವಿದ್ವತ್ ಲೋಕವು ಈಗಾಗಲೇ ಗೌರವಿಸಿದೆ. ತುಳು ಲಿಪಿಯ ಬಗೆಗಿನ ಅವರ ಸಂಶೋಧನೆ ದ್ರಾವಿಡ ಭಾಷಾ ವಿಜ್ಞಾನಿಗಳ ಕಣ್ಣು ತೆರೆಸಿದೆ.
ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಶ್ರೀ ಪಣಿಂಚಿತ್ತಾಯರನ್ನು ಗೌರವಿಸಿವೆ-
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ (1991)
ಸಂದೇಶ ಪ್ರತಿಷ್ಠಾನ ಪ್ರಶಸ್ತಿ (1997)
ಕವಿ ಕೈಯಾರ ಕಾವ್ಯ ಪ್ರಶಸ್ತಿ (1998)
1994ರಲ್ಲಿ ಹೊರದೇಶ (ಬಹರೈನ್) ದ ಕರ್ನಾಟಕ ಸಂಘದ ವತಿಯಿಂದ ಗೌರವ ಇತ್ಯಾದಿ.
ಹಲವಾರು ಸಾರ್ವಜನಿಕ ವಿದ್ವತ್ ಕ್ಷೇತ್ರಗಳಲ್ಲೂ ಇವರು ಕೆಲಸ ಮಾಡಿರುತ್ತಾರೆ-
ತುಳು ನಿಘಂಟು ಯೋಜನೆಯ ಸಂಪಾದಕೀಯ ಸಲಹಾ ಮಂಡಳಿ
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿಯ ಸದಸ್ಯತ್ವ
ಕಾಸರಗೋಡು ಹಿಸ್ಟರಿ ಸೊಸೈಟಿಯಲ್ಲಿ ಉಪಾಧ್ಯಕ್ಷರು
ಎಡನೀರಿನ ಸುರಭಾರತೀ ಸಭಾದ ಅಧ್ಯಕ್ಷರು
ಕೇರಳ ಕನ್ನಡ ಪಠ್ಯ ಪುಸ್ತಕ ಸಮಿತಿ ಸದಸ್ಯತ್ವ ಇತ್ಯಾದಿ
ಪುಣಿಂಚಿತ್ತಾಯರ ಕೃತಿಗಳು-
ಕಾವ್ಯ : ಶೈಲೂಷಿ, ಜೋಕಾಲಿ, ಆಲಡೆ, ಅಕ್ಷರ ಯಾತ್ರೆ, ಅವನು ಎಲ್ಲರ ಕಾಲಲ್ಲೂ ನಡೆಯುತ್ತಾನೆ.
ಸಂಶೋಧನೆ : ಚೆಂದುಳ್ಳಿ ಕೇದಗೆ, ನಜೆ- ನುಡಿ (ತುಳು).
ನಾಟಕ: ನಚಿಕೇತ, ಬೇಡನ ಮಗಳು, ಯಮಲೋಕ ಯಾತ್ರೆ.
ಅನುವಾದ : ನನ್ನಜ್ಜನಿಗೊಂದಾನೆಯಿತ್ತು (ಕಾದಂಬರಿ)
ಪ್ರಸಂಗ : ಶಂಕರ ವಿಜಯ.
ಜೊತೆಗೆ ವೈದ್ಯಗ್ರಂಥಗಳ ತಾಡೆವಾಲೆಗಳ ಸಂಗ್ರಹ, ಜನಪದ ಔಷಧಿಗಳ ಸಂಗ್ರಹ- ಇದು ಇವರ ಹವ್ಯಾಸಗಳಲ್ಲಿ ಕೆಲವು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications