ವೈದೇಹಿ ಅವರ ‘ಅಮ್ಮಚ್ಚಿಯ ನೆನಪು’ಗೆ ಸತ್ಯಕಾಮ ಪ್ರಶಸ್ತಿ
ಬೆಂಗಳೂರು: ವೈದೇಹಿ ಅವರ ‘ಅಮ್ಮಚ್ಚಿಯ ನೆನಪು’ ಕೃತಿಗೆ ಈ ಸಾಲಿನ ಸತ್ಯಕಾಮ ಪ್ರಶಸ್ತಿ ದೊರೆತಿದೆ. ಸತ್ಯಕಾಮ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿ 10 ಸಾವಿರ ರುಪಾಯಿ ನಗದು, ಸ್ಮರಣ ಫಲಕವನ್ನು ಒಳಗೊಂಡಿದೆ. ಅಕ್ಟೋಬರ್ 20ರಂದು ಸತ್ಯಕಾಮರ 3ನೇ ವರ್ಷದ ಆರಾಧನೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರತಿವರ್ಷ ಸಾಹಿತ್ಯದ ಒಂದು ಪ್ರಕಾರವನ್ನು ಆಯ್ದು, ಆ ಪ್ರಕಾರದಲ್ಲಿ ಪ್ರಕಟವಾದ ಅತ್ಯುತ್ತಮ ಕೃತಿಗೆ ಪ್ರತಿಷ್ಠಾನವು ಕಳೆದ ಎರಡು ವರ್ಷಗಳಿಂದ ಸತ್ಯಕಾಮ ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರೊ. ಸಿ.ಎಸ್. ರಾಮಚಂದ್ರನ್, ಪ್ರೊ. ಎಚ್.ಎಸ್. ರಾಘವೇಂದ್ರರಾವ್, ಪ್ರೊ. ರಾಜೇಂದ್ರ ಅವರನ್ನೊಳಗೊಂಡ ತೀರ್ಪುಗಾರರ ಮಂಡಳಿ ಈ ಸಾಲಿನ ಪ್ರಶಸ್ತಿಗೆ ಅಮ್ಮಚ್ಚಿಯ ನೆನಪು ಕೃತಿಯನ್ನು ಆಯ್ಕೆ ಮಾಡಿದೆ.
ಅ.20ರಂದು ಸತ್ಯಕಾಮರ ‘ಸುಮ್ಮನೆ’ ತೋಟದ ಮನೆಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯ ಅಕಾಡಮಿಯ ಗುರುಲಿಂಗ ಕಾಪಸೆ ವಹಿಸುವರು. ಮಾಲತಿ ಪಟ್ಟಣಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಈ ಸಂದರ್ಭದಲ್ಲಿ ನಡೆಯುವ ಅಲ್ಲಮನ ವಚನ ವ್ಯಾಖ್ಯಾನ ವಿಚಾರಗೋಷ್ಠಿಯಲ್ಲಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಪ್ರೊ. ಜಿ.ಎಲ್. ನಾಗಭೂಷಣ ಸ್ವಾಮಿ, ಪ್ರೊ. ಸಿ. ಸೋಮಶೇಖರ್, ಗಿರಡ್ಡಿ ಗೋವಿಂದರಾಜ್ ಪಾಲ್ಗೊಳ್ಳುವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
(ಇನ್‌ಫೋ ವಾರ್ತೆ)












Click it and Unblock the Notifications