ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯು.ಆರ್‌. ಅನಂತಮೂರ್ತಿ ವಿರುದ್ಧ ತಿರುಗಿಬಿದ್ದ ಐವತ್ತು ಸಾಹಿತಿಗಳು

By Staff
|
Google Oneindia Kannada News

ಬೆಂಗಳೂರು : ಹಲವು ವಿಘ್ನಗಳನ್ನು ದಾಟಿ ಸಮ್ಮೇಳನದ ಅಂಚಿಗೆ ಬಂದಿರುವ ತುಮಕೂರು ಕನ್ನಡ ಸಾಹಿತ್ಯ ಸಮ್ಮೇಳನ ಈಗ ಹೊಸ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಸಮ್ಮೇಳನದ ಸುತ್ತ ವಿವಾದದ ಹುತ್ತ ಬೆಳೆಯುತ್ತಿರುವ ಎಲ್ಲ ಲಕ್ಷಣಗಳೂ ಈ ಹೊತ್ತು ಕಾಣುತ್ತಿವೆ.

ಇತ್ತೀಚೆಗೆ ಆಂಗ್ಲ ದೈನಿಕ ಒಂದಕ್ಕೆ ಯು.ಆರ್‌. ಅನಂತಮೂರ್ತಿ ಅವರು ನೀಡಿದ ಸಂದರ್ಶನದಲ್ಲಿ ತಾವು 1989ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ಮಾತ್ರ ವಿರೋಧಿಸಿದ್ದಾಗಿ ತಿಳಿಸಿರುವುದನ್ನು ಕನ್ನಡದ ಹಲವು ಸಾಹಿತಿಗಳು ಉಗ್ರವಾಗಿ ಖಂಡಿಸಿದ್ದಾರೆ.

ಅನಂತಮೂರ್ತಿ ಅವರ ನಿಲುವನ್ನು ಖಂಡಿಸಿ ಚನ್ನವೀರ ಕಣವಿ, ಪಾಟೀಲ ಪುಟ್ಟಪ್ಪ, ಎಂ.ಎಂ. ಕಲಬುರ್ಗಿ, ಎನ್ಕೆ, ಹಂಪ ನಾಗರಾಜಯ್ಯ, ಶಾಂತಾದೇವಿ ಮಾಳವಾಡ, ಕಮಲಾ ಹಂಪನಾ, ಗೊ.ರು. ಚೆನ್ನಬಸಪ್ಪ ಸೇರಿದಂತೆ 50ಕ್ಕೂ ಹೆಚ್ಚು ಸಾಹಿತಿಗಳು ಲಿಖಿತ ಹೇಳಿಕೆ ನೀಡಿದ್ದಾರೆ.

ಅನಂತ ಮೂರ್ತಿ ಅವರಿಗೆ ಕನ್ನಡ ಸಾಹಿತ್ಯ ಮತ್ತು ಭಾಷೆಯ ಸಮಗ್ರ ಪರಿಕಲ್ಪನೆಯೇ ಇಲ್ಲ ಎಂಬುದನ್ನು ಈ ಹೇಳಿಕೆ ಸಾಬೀತು ಪಡಿಸುತ್ತದೆ ಎಂದು ಸಾಹಿತಿಗಳು ಬಣ್ಣಿಸಿದ್ದಾರೆ. ಆರ್‌.ಸಿ. ಹಿರೇಮಠರ ಆಯ್ಕೆಯನ್ನು ಮಾತ್ರ ವಿರೋಧಿಸಿದ್ದೆ ಎಂದು ಹೇಳಿರುವುದು ಅನಂತಮೂರ್ತಿಯವರ ದೋಷಪೂರಿತ ಮನಸ್ಥಿತಿಯನ್ನು ಬಿಂಬಿಸುತ್ತದೆ. ಅವರ ಈ ಅಜ್ಞಾನಕ್ಕೆ ನಾವು ಅನುಕಂಪ ಸೂಚಿಸುತ್ತೇವೆ ಎಂದು ಸಾಹಿತಿಗಳು - ಬರಹಗಾರರು ತಿಳಿಸಿದ್ದಾರೆ.

ಇದು ಒಂದು ವಿವಾದವಾದರೆ, ಮತ್ತೊಂದು ವಿವಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ವೈಖರಿಗೆ ಸಂಬಂಧಿಸಿದ್ದು. ಸಾಹಿತ್ಯ ಸಮ್ಮೇಳನಕ್ಕೆ ಕೇವಲ 15 ದಿನಗಳಷ್ಟೇ ಉಳಿದಿರುವಾಗ ಕೆಲವು ತಮಾಷೆಗಳನ್ನು ಓದಿ :

  • ಕನ್ನಡ ಸಾಹಿತ್ಯ ಪರಿಷತ್ತು ಮುದ್ರಿಸಿರುವ ಲಕ್ಷಾಂತರ ರುಪಾಯಿಗಳ ಸಾವಿರಾರು ಆಹ್ವಾನಪತ್ರಿಕೆಗಳು ಹಲವು ಪ್ರಮಾದಗಳಿಂದ ಕೂಡಿದ್ದು ಈ ಹೊತ್ತು ಕಸದ ತೊಟ್ಟಿ ಸೇರಿವೆ.
  • ಆಹ್ವಾನ ಪತ್ರಿಕೆಯಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಕೆ.ಎನ್‌. ರಾಜಣ್ಣ, ಎಸ್‌. ಚನ್ನಬಸವಯ್ಯ, ಡಿ.ಎಲ್‌. ಜಗದೀಶ್‌ ಹಾಗೂ ಡಾ. ಶಿವಯೋಗಿ ಸ್ವಾಮಿಗಳನ್ನು ಗ್ರಾಮ ಪಂಚಾಯಿತಿ ಸದಸ್ಯರು ಎಂದು ಮುದ್ರಿಸಲಾಗಿದೆ. ಈಗಾಗಲೇ 35 ಸಾವಿರ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗಿದೆಯಾದರೂ, ಅದನ್ನು ಹಂಚುವಂತಿಲ್ಲ.
  • ಈಗ ಹೊಸ ಆಹ್ವಾನ ಪತ್ರಿಕೆಗಳ ಮುದ್ರಣ ನಡೆದಿದೆ. ಹಳೆಯ ಆಹ್ವಾನ ಪತ್ರಿಕೆಗಳು ಕಸದ ತೊಟ್ಟಿ ಸೇರಿವೆ. ಈ ಆಹ್ವಾನ ಪತ್ರಿಕೆಗಳ ಮುದ್ರಣಕ್ಕೆ ಕ.ಸಾ.ಪ ಖರ್ಚು ಮಾಡಿದ್ದು ಕೇವಲ ಒಂದು ಲಕ್ಷ ಮಾತ್ರ ಎನ್ನುತ್ತಾರೆ ಅಧಿಕಾರಿಗಳು. ಆದರೆ, ಅಷ್ಟೊಂದು ಆಹ್ವಾನ ಪತ್ರಿಕೆ ಮುದ್ರಿಸಿರಲಿಲ್ಲ ಎಂಬುದು ಪುನರೂರರ ಹೇಳಿಕೆ.
  • ಕಡಿಮೆ ವೆಚ್ಚದಲ್ಲಿ ಸಮ್ಮೇಳನ ನಡೆಸಬೇಕು ಎನ್ನುವುದು ತುಮಕೂರು ಸಾಹಿತ್ಯ ಸಮ್ಮೇಳನದ ಧ್ಯೇಯವಾಕ್ಯ !
(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X