ತುಮಕೂರು ಸಾಹಿತ್ಯ ಸಮ್ಮೇಳನಕ್ಕೆ ನೂರೆಂಟು ವಿಘ್ನ : ಮತ್ತೆ ಮುಂದೂಡಿಕೆ
ತುಮಕೂರು : ತುಮಕೂರಿನಲ್ಲಿ ನಡೆಯಲಿರುವ 69ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲು ನಿರ್ಧರಿಸಲಾಗಿದೆ. ಫೆಬ್ರವರಿ ಮೊದಲ ವಾರದ ಬದಲಾಗಿ ಫೆ.14ರಿಂದ 17ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ತುಮಕೂರಿನಲ್ಲಿ ಕಳೆದ ವರ್ಷ ನಡೆಯಬೇಕಿದ್ದ ಸಮ್ಮೇಳನವನ್ನು ಪ್ರಜಾಪ್ರತಿನಿಧಿಗಳ ನಿರಾಸಕ್ತಿ, ಪೂರ್ವಸಿದ್ಧತೆಯ ಕೊರತೆ, ಬರದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆನಂತರ ಜೂನ್‌ನಲ್ಲಿ ಬೆಂಗಳೂರಿನಲ್ಲೇ ಸಮ್ಮೇಳನ ನಡೆಸುವುದಾಗಿಯೂ ಅಂದಿನ ಕ.ಸ.ಪ. ಅಧ್ಯಕ್ಷರು ಪ್ರಕಟಿಸಿದ್ದರು.
ವಾದ, ವಿವಾದ, ಚರ್ಚೆ ಹಾಗೂ ಗೊಂದಲಗಳ ನಡುವೆ 2002ರ ಫೆಬ್ರವರಿ 1ರಿಂದ 3ರವರೆಗೆ ನಡೆಸಲು ತೀರ್ಮಾನಿಸಲಾಯಿತು. ಹಲವು ಸಮಿತಿಗಳ ರಚನೆಯೂ ಆಯಿತು. ತಲೆಮೇಲೆ ತಲೆ ಬೀಳಲಿ ನಿಗದಿತ ದಿನಾಂಕಗಳಂದೆ ಸಮ್ಮೇಳನ ನಡೆಯುತ್ತದೆ. ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಘೋಷಿಸಿದ್ದರು.
ಮುಂದೂಡಿಕೆ ಏಕೆ: ಆದರೂ ಸಮ್ಮೇಳನ 14 ದಿನ ಮುಂದಕ್ಕೆ ಹೋಯ್ತು. ಈ ಬಾರಿ ಮುಂದೂಡಿಕೆ ಆಗುತ್ತಿರುವುದು ಏಕೆ ಗೊತ್ತೆ? ಮುಖ್ಯಮಂತ್ರಿಗಳ ಬಿಡುವಿನ ಸಮಯದ ಹೊಂದಾಣಿಕೆಗೆ. ಸಮ್ಮೇಳನಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದ್ದು, ಕೃಷ್ಣ ಅವರ ಬಿಡುವಿನ ದಿನಾಂಕಕ್ಕೆ ಅನುಗುಣವಾಗಿ ಸಮ್ಮೇಳನ ದಿನಾಂಕ ಬದಲಾಯಿಸಲಾಗಿದೆ.
ಹೊಸ ಕಾರ್ಯಕ್ರಮಪಟ್ಟಿಯಂತೆ 14ರಂದು ಸಮ್ಮೇಳನಾಧ್ಯಕ್ಷರನ್ನು ತುಮಕೂರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಕರೆತರಲಾಗುತ್ತದೆ. 15ರಂದು ಬೆಳಗ್ಗೆ 10 ಗಂಟೆಗೆ ಎಸ್.ಎಂ.ಕೃಷ್ಣ ಅವರು 50 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆನಂತರ ಮುಖ್ಯಮಂತ್ರಿಗಳು ಸಮ್ಮೇಳನ ಉದ್ಘಾಟಿಸಲಿದ್ದಾರೆ.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಏಕೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ದಿನಾಂಕ ಮುಂದೂಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ ಮೂಲಗಳು ಹೇಳಿವೆ.
(ಇನ್‌ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications