ತುಮಕೂರು ಸಮ್ಮೇಳನ : ವೇದಿಕೆಗೆ ಭೂಮಿಪೂಜೆ, ವೆಬ್‌ಸೈಟ್‌ಗೆ ಚಾಲನೆ
ತುಮಕೂರು : ಫೆಬ್ರವರಿ 14 ರಿಂದ ಪ್ರಾರಂಭವಾಗುವ 69 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಸಮರೋಪಾದಿ ಜರುಗುತ್ತಿದ್ದು , ಸಿದ್ಧಗಂಗೆ ಮಠಾಧೀಶ ಡಾ। ಶಿವಕುಮಾರ ಸ್ವಾಮೀಜಿ ಸಂಕ್ರಾಂತಿ ಸೋಮವಾರ ಸಮ್ಮೇಳನದ ವೇದಿಕೆಗೆ ಭೂಮಿಪೂಜೆ ನೆರವೇರಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಬಸವರಾಜು, ಶಾಸಕರಾದ ಶಿವಣ್ಣ ಮತ್ತು ನಾರಾಯಣ್ ಹಾಗೂ ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಚಿ.ನಾ.ಏಕೇಶ್ವರ್ ಹಾಜರಿದ್ದರು.
ವೆಬ್‌ಸೈಟ್‌ಗೆ ಚಾಲನೆ : 69 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಾಭಿಮಾನಿಗಳಿಗೆ ತಲುಪಿಸುವ ಉದ್ದೇಶದಿಂದ ರೂಪಿಸಲಾಗಿರುವ ಸಮ್ಮೇಳನದ www.kasapatumkur.com ವೆಬ್‌ಸೈಟ್‌ಗೆ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಸಮಾರಂಭದಲ್ಲಿ ಸಚಿವ ಜಯಚಂದ್ರ ಚಾಲನೆ ನೀಡಿದರು.
ತುಮಕೂರು ಸಾಹಿತ್ಯ ಸಮ್ಮೇಳನ ಮಾತ್ರವಲ್ಲದೆ, ಜಿಲ್ಲಾ ಕಸಾಪದ ಚಟುವಟಿಕೆಗಳನ್ನು ಈ ವೆಬ್‌ಸೈಟ್ ಒಳಗೊಳ್ಳಲಿದೆ. ಇದೊಂದು ಶ್ಲಾಘನೀಯ ಪ್ರಯತ್ನ ಎಂದು ಜಯಚಂದ್ರ ಸಂತೋಷ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ಕಲೆ, ಸಾಹಿತ್ಯ, ಸಂಸ್ಕೃತಿಗಳ ಕುರಿತು ವೆಬ್‌ಸೈಟ್ ಮಾಹಿತಿ ಒದಗಿಸುವುದು. ಸಮ್ಮೇಳನದ ಆಯಾ ದಿನಗಳ ವಿವರಗಳನ್ನೂ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗುವುದು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಕ ಕವಿತಾಕೃಷ್ಣ ಹೇಳಿದರು. ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications