ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮರ್ಶಕರಿಗೆ ದಕ್ಕದ, ಓದುಗರಿಗೆ ಮಿಕ್ಕುವ ಅಪ್ಪನಿಗೆ ತಕ್ಕ ಮಗ !

By Staff
|
Google Oneindia Kannada News

*ಸತ್ಯವ್ರತ ಹೊಸಬೆಟ್ಟು
E mail:
[email protected]

ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಇವರಿಬ್ಬರೂ ಬರುತ್ತಾರೆ ; ಆಧುನಿಕತೆ ಮತ್ತು ವಿಜ್ಞಾನ ಎರಡನ್ನೂ ತನ್ನ ಅಬೋಧ ಮುಗ್ಧತೆಯಲ್ಲಿ ಧಿಕ್ಕರಿಸುವವನಂತೆ ಕಾಣುವ ಮಂದಣ್ಣ ಮತ್ತು ವಿಜ್ಞಾನವೇ ಉಸಿರಾಗಿರುವ ಕರ್ವಾಲೋ. ಅವರಿಬ್ಬರೂ ಅದು ಹೇಗೋ ಸ್ನೇಹಿತರು. ಆ ಸ್ನೇಹದ ಹಿಂದಿರುವ ತರ್ಕ ಮೇಲ್ನೋಟಕ್ಕೆ ಅರ್ಥವಾಗುವಂಥದ್ದಲ್ಲ . ಅವರಿಬ್ಬರ ನಡುವೆ ಸಮಾನ ಮಾಧ್ಯಮವೊಂದು ಇರುವುದಕ್ಕೆ ಸಾಧ್ಯವೇ ಎಂದು ಒಮ್ಮೆಗೇ ಗಾಬರಿಯೂ ಆಗುತ್ತದೆ.

ತೇಜಸ್ವಿ ಕಟ್ಟಿಕೊಡುವ ವಿಸ್ಮಯದ ಜಗತ್ತು ಅದು. ಅವರೇ ಇತ್ತೀಚೆಗೆ ಹೇಳಿಕೊಂಡಿರುವ ಹಾಗೆ. ಡಿಫರೆಂಟಾಗಿ ಬದುಕದೆ ಡಿಫರೆಂಟಾಗಿ ಬರೆಯೋದು ಸಾಧ್ಯವಿಲ್ಲ . ಬೆಂಗಳೂರಿನ ಅತ್ಯಾಧುನಿಕ ಬಡಾವಣೆಯಲ್ಲಿ ಕುಳಿತು, ದಿನನಿತ್ಯ ಅದೇ ರಸ್ತೆಯಲ್ಲಿ ನಡೆದಾಡುವ ಮನುಷ್ಯ ಶಬ್ದಗಳ ಪಂಜರ ಮಾತ್ರ ಸೃಷ್ಟಿಸಬಲ್ಲ . ಅವನು ಕಾಡು ಎಂದು ಬರೆದರೆ ಕೃತಕವಾಗಿ ಕಾಣಿಸುತ್ತದೆ.

ಅದಕ್ಕೇ ಅನಂತಮೂರ್ತಿ ಬರೆಯುವುದು ಕೂಡ ಬಾಲ್ಯದ ಅನುಭವದ ಬಾವಿಯಿಂದ ಮೊಗೆಮೊಗೆದು. ಅವರ ದಿವ್ಯ ಕಾದಂಬರಿಯಲ್ಲಿ ಬರುವ ಅನುಭವವೆಲ್ಲ ತೀರ್ಥಹಳ್ಳಿ ಮತ್ತು ಆಸುಪಾಸಿನದ್ದು . ಬೆಂಗಳೂರಿನಂಥ ಮಹಾನಗರದ ಸದ್ದಿನಲ್ಲಿ ಕತೆ ಹುಟ್ಟುವುದಿಲ್ಲ . ಹುಟ್ಟಿದರೂ ಅದು ಪ್ರಸನ್ನರ ಇತ್ತೀಚಿನ ನಾಟಕಗಳಂತೆ ಸುಳ್ಳಾಗಿರುತ್ತದೆ.

ಆ ಮಟ್ಟಿಗೆ ತೇಜಸ್ವಿಯವರದು ವಿಭಿನ್ನ ಲೋಕ. ಸಾಹಿತ್ಯದ ಪರಿಭಾಷೆ ಮತ್ತು ಪರಮಾರ್ಥದಲ್ಲಿ ಅವರಿಗೆ ನಂಬಿಕೆಯಿಲ್ಲ . ಅಕ್ಷರಗಳು ಮೂಡುವ ಹೊತ್ತಿಗೆ ಅವರ ಕಣ್ಣ ಮುಂದಿರುವುದು ಅಸಂಖ್ಯಾತ ಓದುಗರು. ವಿಮರ್ಶಕರು ಅವರಿಗೆ ಕಾಣಿಸುವುದೇ ಇಲ್ಲ . ಆದ್ದರಿಂದಲೇ ಟಿ.ಪಿ.ಅಶೋಕ ಎಂಬ ಟಿಪಿಕಲ್‌ ವಿಮರ್ಶಕರಿಂದ ಹಿಡಿದು ನರಹಳ್ಳಿ ಬಾಲಸುಬ್ರಹ್ಮಣ್ಯ ಎಂಬ ವೃತ್ತಿಪರ ವಿಮರ್ಶಕರ ತನಕ ಯಾರೊಬ್ಬರಿಗೂ ತೇಜಸ್ವಿಯ ಹರವು ಸಿಗಲಿಲ್ಲ . ಆಳ ಅರಿವಾಗಲಿಲ್ಲ . ಬರಗೂರು ರಾಮಚಂದ್ರಪ್ಪನವರ ಸಾಹಿತ್ಯದ ಬಗ್ಗೆ ಪುಟಗಟ್ಟಲೆ ಬರೆಯುವವರು, ಜಿಎಸ್‌ಎಸ್‌ರಂಥ ನಾಡಿನ ಕವಿಗೆ ಐವತ್ತಾದಾಗ, ಅರುವತ್ತಾದಾಗ ಸನ್ಮಾನ, ಸ್ಮರಣ ಸಂಚಿಕೆಗಳನ್ನು ಅರ್ಪಿಸಿ ಧನ್ಯರಾಗುವವರು ತೇಜಸ್ವಿಯರ ತಂಟೆಗೆ ಹೋಗಲಿಲ್ಲ . ಅದು ತೇಜಸ್ವಿಯವರನ್ನು ಕಾಪಾಡಿತು.

ಇಂಥ ಸೇಫ್ಟಿ ರೆkೂೕನ್‌ನೊಳಗೆ ಕುಳಿತದ್ದರಿಂದಲೇ ಅವರಿಗೆ ತಮಗನಿಸಿದ್ದನ್ನು ಬರೆಯಲು ಸಾಧ್ಯವಾಯಿತು. ಅಂಡಮಾನ್‌ಗೆ ಹೋದಾಗ ಅಲೆಮಾರಿಯ ಅಂಡಮಾನ್‌, ಯಾವುದೋ ಪುಸ್ತಕ ಓದಿದಾಗ ಮಹಾನದಿ ನೈಲ್‌, ಇನ್ನೆಲ್ಲೋ ನೋಡಿದ ಓಕ್‌ ದ್ವೀಪದ ದುಡ್ಡಿನ ಭಾವಿ, ಪಿಸುಗುಡುವ ಮರಳುಗಾಡು, ದಿ ರೈಸ್‌ ಅಂಡ್‌ ಫಾಲ್‌ ಆಫ್‌ ಥರ್ಡ್‌ ರೀಕ್‌ ಎಂಬ ಮಹಾಯುದ್ಧದ ಘಟನೆಗಳ ಭಾವಾನುವಾದ, ಜಿಮ್‌ ಕಾರ್ಬೆಟ್ಟನ ಕಾಡಿನ ಕತೆಗಳು, ನರಭಕ್ಷಕನಿಗೆ ಮುಖಾಮುಖಿಯಾದ ಬರಿಗೈಯ ಬೇಟೆಗಾರ, ಸಂಬಳಕ್ಕೆ ನಿಂತ ದೆವ್ವದ ತಮಾಷೆ, ಹಾವು ಹಿಡಿಯುವ ಯಂಕ್ಟನ ಸಾವು ಬದುಕು- ಹೀಗೆ ಅವರು ಯಾರ ದಾಕ್ಷಿಣ್ಯಕ್ಕೂ ಸಿಗದೆ ಬರೆದರು. ಬರೆದುದನ್ನು ಪ್ರಕಟಿಸಿದರು. ಪ್ರಕಟಿಸಿದ್ದನ್ನು ಜನ ಮೆಚ್ಚಿಕೊಂಡರು. ವಿಮರ್ಶಕರು ತಮ್ಮ ಮಿಮರ್ಶಾ ಹತ್ಯಾರಗಳಿಗೆ ದಕ್ಕುವಂತೆ ತೇಜಸ್ವಿ ಬರೆಯುತ್ತಿಲ್ಲವಲ್ಲ ಎಂದು ಸರ್ಟಿಫಿಕೇಟು ಕೊಟ್ಟರು.

ಕಾರಂತರಿಗೂ ತೇಜಸ್ವಿಯವರಿಗೂ ಅಗಾಧವಾದ ವ್ಯತ್ಯಾಸವೇನಿಲ್ಲ . ಆದರೆ ತೇಜಸ್ವಿಯವರಿಗಿರುವ ಸೆನ್ಸ್‌ ಆಫ್‌ ಹ್ಯೂಮರ್‌ ಕಾರಂತರಿಗೆ ಬರಲಿಲ್ಲ . ತೇಜಸ್ವಿ ನಗಿಸುವಂತೆ ಹೇಳಿದ್ದನ್ನು ಕಾರಂತರು ಜಡಭಾಷೆಯಲ್ಲಿ ಹೇಳಿದರು. ಇಬ್ಬರ ದರ್ಶನ ಮತ್ತು ಒಳನೋಟಗಳು ಒಂದೇ ಆಗಿದ್ದರೂ ತೇಜಸ್ವಿಯ ಲವಲವಿಕೆ ಕಾರಂತರಿಗೇಕೋ ದಕ್ಕಲೇ ಇಲ್ಲ .

ತೇಜಸ್ವಿಯವರಿಗೆ ಅಂಥ ಹಾಸ್ಯಪ್ರಜ್ಞೆ ಬಂದಿದ್ದು ತಂದೆ ಕುವೆಂಪು ಅವರಿಂದ. ಕುವೆಂಪು ಅವರ ಎರಡು ಮಹಾ ಕಾದಂಬರಿಗಳನ್ನು ಓದುತ್ತಿದ್ದಂತೆ ತೇಜಸ್ವಿಯವರ ಸ್ಫೂರ್ತಿ ಮತ್ತು ಪ್ರೇರಣೆಯ ಮೂಲ ಸಿಕ್ಕೇಬಿಡುತ್ತದೆ. ಆದರೆ ತೇಜಸ್ವಿಯವರ ಕತೆಗಳಲ್ಲಿ ಆ ತಮಾಷೆ ಸಹಜವೆಂಬಂತೆ ವ್ಯಕ್ತವಾಯಿತು. ಗೇಲಿಗೆ ಅವರು ತಮ್ಮನ್ನೂ ವಸ್ತುವನ್ನಾಗಿ ಮಾಡಿಕೊಂಡರು. ಅವರು ಮೂಡಿಗೆರೆಯ ರಸ್ತೆಗಳಲ್ಲಿ ಹಗಲಲ್ಲೇ ಸ್ಕೂಟರ್‌ ಲೈಟು ಹಾಕಿಕೊಂಡು ಓಡಾಡುತ್ತಿದ್ದಾಗ ಅವರನ್ನು ಹಿಂಬಾಲಿಸಿಕೊಂಡು ಲೈಟ್‌ ಆಫ್‌ ಮಾಡಿ ಎಂದು ಹೇಳಿದವರಿಂದ ಹಿಡಿದು, ಮಕ್ಕಳಿಗೆ ಹೆಸರು ಹೇಳಿ ಎಂದು ಅವರನ್ನು ಕಾಡಿದವರ ತನಕ ಎಲ್ಲರ ಬಗ್ಗೆಯೂ ಅವರು ಬರೆದರು. ಮನೆಗೆ ಬಂದು ಕೊಡಲಿ ತೆಗೆದುಕೊಂಡು ಹೋದ ಲೈನ್‌ಮನ್‌ ದೆಸೆಯಿಂದಾಗಿ ಅವರು ಫಾರೆಸ್ಟು ಡಿಪಾರ್ಟ್‌ಮೆಂಟು ಮತ್ತು ಟೆಲಿಫೋನ್‌ ಇಲಾಖೆಯ ನಡುವಿನ ಜಗಳಕ್ಕೆ ಸಾಕ್ಷಿಯಾಗಬೇಕಾಗಿ ಬಂದ ಕತೆ ನಿಜಕ್ಕೂ ನಡೆಯಿತೇನೋ ಅನ್ನಿಸುವಷ್ಟರ ಮಟ್ಟಿಗೆ ಅಲ್ಲಿನ ವಿವರಗಳು ನಿಜವಿರುತ್ತವೆ. ಅವೆಲ್ಲಕ್ಕಿಂತ ಹೆಚ್ಚಾಗಿ ಜುಗಾರಿ ಕ್ರಾಸ್‌ ಕಾದಂಬರಿಯಲ್ಲಿ ಬರುವ ಎಡಕುಮೇರಿ ಎಂಬ ಅಜ್ಞಾತ ತಾಣದ ವಿವರಣೆ. ಅಲ್ಲಿಗೆ ಹೋಗಲೇಬೇಕು ಎಂದು ಪ್ರೇರೇಪಿಸುವಷ್ಟರ ಮಟ್ಟಿಗೆ ಆ ಕಾಡಿನ ಚಿತ್ರ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ತಬರನ ಕತೆಯನ್ನು ಅತಿರೇಕಕ್ಕೆ ಒಯ್ಯದೆ, ಅವನತಿಯ ಸ್ಥಿತಿಯನ್ನು ನಾಸ್ಟಲ್ಜಿಯ ಆಗಿಸದೇ, ಕೆಸರೂರಿನ ರಾಜಕೀಯವನ್ನು ವೈಭವೀಕರಿಸದೆ, ಕಿರಗೂರಿನ ಗಯ್ಯಾಳಿಗಳ ಬಗ್ಗೆ ಪ್ರೀತಿ ಮೂಡುವಂತೆ ತೇಜಸ್ವಿ ಬರೆಯುತ್ತಾರೆ ಅನ್ನುವುದೇ ಅವರ ಹೆಗ್ಗಳಿಕೆ ಮತ್ತು ನಮ್ಮ ಸಂತೋಷ.

ಒಬ್ಬ ಲೇಖಕ ವ್ಯಕ್ತವಾಗಬೇಕಾಗಿರುವುದೇ ಹೀಗೆ. ವರುಷಕ್ಕೊಂದು ಕತೆ, ಕಾದಂಬರಿ, ಒಂದಷ್ಟು ಸೆಮಿನಾರು, ಒಂದೆರಡು ಅವಾರ್ಡುಗಳಲ್ಲಿ ಸಾಹಿತಿ ಕಳೆದುಹೋಗುತ್ತಾನೆ. ಹೊಗಳಿಕೆಯ ಪಕಳೆಗಳಲ್ಲಿ ಮುಚ್ಚಿಹೋಗುತ್ತಾನೆ. ಭಾಷಣಗಳಲ್ಲಿ ದಿವಂಗತನಾಗುತ್ತಾನೆ. ಸರ್ಕಾರೀ ಕೃಪಾ ಪೋಷಿತ ಹುದ್ದೆಗಳಲ್ಲಿ ಹುದುಗಿ ಹೋಗುತ್ತಾನೆ.

ಅವೆಲ್ಲದರಿಂದ ದೂರ ಇದ್ದವರು ತೇಜಸ್ವಿ. ಅವರಿಗೀಗ ಅರುವತ್ತೆರಡು ಕಳೆದು ಅರುವತ್ತಮೂರು. ಚಾರ್ಮುಡಿ ಘಾಟ್‌ನ ತುದಿಯಲ್ಲಿ ಅವರು ನಿಂತು ‘ಅಗೋ ಅದೇ ಉಜಿರೆ’ ಎಂದು ತೋರಿಸಿದ್ದನ್ನು ನೆನಪಿಸಿಕೊಳ್ಳುತ್ತಾ ಕೊಟ್ಟಿಗೆಹಾರಕ್ಕೆ ಕಾಲಿಟ್ಟರೆ ಅಲ್ಲಿಂದ ಮೂಡಿಗೆರೆಯ ಸಮೀಪದ ಚೆಕ್‌ಪೋಸ್ಟ್‌ ಎಂಬ ತಾಣಕ್ಕೆ ಒಂದೂಮುಕ್ಕಾಲು ಕಿಲೋಮೀಟರ್‌. ಬಣಕಲ್‌, ಚಕಮಕಿ ಎಂಬಿತ್ಯಾದಿ ಊರುಕೇರಿಗಳ ಸೊಬಗು ನೋಡುತ್ತಾ ಅಲ್ಲಿ ದಿನಗಟ್ಟಲೆ ಅಡ್ಡಾಡಿದರೆ ತೇಜಸ್ವಿ ಬರೆದ ಕತೆಗಳ ಪಾತ್ರ ಹಾಗೂ ಪ್ರಾದೇಶಿಕತೆ ಮನಸ್ಸಿಗೆ ತಾಕುತ್ತದೆ.

ಸದ್ಯ ತೇಜಸ್ವಿ ಬಣ್ಣಗಳ ಲೋಕದಲ್ಲಿದ್ದಾರೆ. ಬರೆಯುವುದನ್ನು ನಿಲ್ಲಿಸಿಲ್ಲ , ಆದರೂ ಬರೆಯುತ್ತಿಲ್ಲ . ಕೆರೆತೋಡುಗಳ ತುಂಬ ಕೆಸರು ತುಂಬಿಕೊಂಡು ಮೀನುಗಳ ಸಂಖ್ಯೆ ಇಳಿಮುಖವಾದ ನಂತರ ಮೀನು ಶಿಕಾರಿ ಕಡಿಮೆ ಮಾಡಿದ್ದಾರೆ. ಬದಲಾಗಿ ಹಕ್ಕಿಗಳ ಬಗ್ಗೆ ಆಸಕ್ತರಾಗಿದ್ದಾರೆ. ದಿನಾ ಬೆಳಗ್ಗೆ ತೋಟದ ಆಸುಪಾಸಿನ ಕಾಡಿಗೆ ಹಕ್ಕಿಗಳನ್ನು ಶೂಟ್‌ ಮಾಡಲು ಹೋಗುತ್ತಾರೆ ; ಕ್ಯಾಮರಾದಲ್ಲಿ .

ಅಂಥ, ಅಂಥವರು ಮತ್ತೊಬ್ಬರಿಲ್ಲ ಎನ್ನಬಹುದಾದ ತೇಜಸ್ವಿಗೆ ಪಂಪ ಪ್ರಶಸ್ತಿ ಬಂದಿದೆ. ಪ್ರಶಸ್ತಿಗಳನ್ನು ನಂಬಿಕೊಂಡು ಕೂರಬಾರದು. ಅದೇನು ದೊಡ್ಡದಲ್ಲ ಅನ್ನೋದು ಅವರ ನಿಲುವು.
ಅದು ದೊಡ್ಡದು.
ತೇಜಸ್ವಿಯವರು ನಮಗೆ ಮತ್ತೊಂದು ಹೊಸ ಕಾದಂಬರಿ ಕೊಡಲಿ. ನಮ್ಮೊಳಗೆ ಮತ್ತೆ ಮೂಡಿಗೆರೆಯ ಕಾಡುಮೇಡು. ಮಿಂಚುಳ್ಳಿ ಮೂಡಲಿ.
ರೋಮಾಂಚನವಾಗಲಿ.

ತೇಜಸ್ವಿ ದಶಾವತಾರ..

ಕಾಫಿ ಬೆಳೀರಿ, ಕತೇನೂ ಬರೀರಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X