ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

69 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣ, ಪುಟ-4

By Staff
|
Google Oneindia Kannada News

ಪುರಾಣ, ಜಾನಪದ, ಚರಿತ್ರೆಗಳನ್ನು ಸಮಕಾಲೀನ ಅನುಭವಗಳಿಗೆ ರೂಪಕ ಮಾಡುವ ಪ್ರತಿಭೆಯ ನಾಟಕಕಾರ ಗಿರೀಶ್‌ ಕಾರ್ನಾಡ್‌, ಕವಿತೆಯ ಸ್ವರೂಪವನ್ನೇ ಬದಲಿಸಿದ ರಾಮಾನುಜನ್‌, ಮತ್ತು ತಿರುಮಲೇಶ್‌, ಧ್ಯಾನಶೀಲ ಪ್ರತಿಭೆಯ ಗಂಗಾಧರ ಚಿತ್ತಾಲ, ನಗರ ಪ್ರಜ್ಞೆಯ ಪ್ರಯೋಗಶೀಲ ಆಧುನಿಕ ಶಾಂತಿನಾಥ ದೇಸಾಯಿ, ಪಶ್ಚಿಮ ಮುಖಿಯಾದ ‘ಆಧುನಿಕ’ ನವ್ಯದ ಸೃಜನ ಶೀಲ ವೈರಿ ಮೊಕಾಶಿ ಪುಣೇಕರ್‌, ದಟ್ಟವಾದ ಅನುಭವದ ದೊಡ್ಡ ಬೀಸಿನ ಕಥೆಗಾರ ಯಶವಂತ ಚಿತ್ತಾಲ, ಕಾಡುವಂತೆ ಕನ್ನಡದಲ್ಲಿ ಗೀತೆಗಳನ್ನು ರಚಿಸಿದ, ಚಿಂತನಶೀಲ ಪದ್ಯಗಳನ್ನೂ ಬರೆದ ನಿಸಾರ್‌ ಅಹ್ಮದ್‌, ಪಕ್ವವಾದ ವಿಮರ್ಶಾ ಪ್ರಜ್ಞೆಯಿಂದ ಹಳೆಯದನ್ನೂ ಹೊಸದನ್ನೂ ತೂಗಿ ಬರೆಯ ಬಲ್ಲ ಗಿರಡ್ಡಿ ಗೋವಿಂದರಾಜ್‌, ಭಾವಗೀತೆಯ ಮೃದುವನ್ನೂ ಕಟುವಾದ ವ್ಯಂಗ್ಯವನ್ನೂ ಬೆಸೆಯುವ ನಾಟಕಕಾರ ಮತ್ತು ಕವಿ ಚಂದ್ರಶೇರ ಪಾಟೀಲ್‌, ಕನ್ನಡಕಾವ್ಯದ ಲಯದಲ್ಲಿ ವಿಶೇಷವಾದ ಆಸಕ್ತಿಯಿದ್ದ ಜಿ.ಎಸ್‌. ಸಿದ್ಧಲಿಂಗಯ್ಯ, ವಿಮರ್ಶೆಯಲ್ಲಿ ಹೊಸ ಅಲೆಯೆಬ್ಬಿಸಿದ ಕೀರ್ತಿನಾಥ ಕುರ್ತಕೋಟಿ, ಒಂದು ಕೃತಿಯ ಶಿಲ್ಪವನ್ನೂ ಅದರ ವಿವರಗಳನ್ನೂ ಒಟ್ಟಾಗಿ ಗ್ರಹಿಸಬಲ್ಲವರಾಗಿದ್ದ ಸರೋದ್‌ ವಾದಕ ರಾಜೀವ ತಾರಾನಾಥ, ಲೀವಿಸ್‌ ನಿಷ್ಠೆ ನಿಷ್ಠುರಗಳನ್ನು ಮೈಗೂಡಿಸಿಕೊಂಡ ಎಂ.ಜಿ. ಕೃಷ್ಣಮೂರ್ತಿ, ನಿರಂತರ ಆತ್ಮಶೋಧದ ಕಥೆಗಳನ್ನು ರಚಿಸಿದ ಎಚ್‌. ಜಿ. ರಾಘವ, ‘ಗ್ರಾಮಾಯಣದ’ರಾವ್‌ ಬಹದ್ದೂರರ ಬರವಣಿಗೆಗೂ, ಕುವೆಂಪುಗೂ ಎಕ್ಕುಂಡಿಯವರ ಭಾವ ತೀವ್ರತೆಗೂ ಒಲಿದ ಆಲನ ಹಳ್ಳಿಕೃಷ್ಣ - ಈ ಎಲ್ಲರೂ ಬರೆಯುತ್ತಿದ್ದ ಕಾಲದ ವೈಶಿಷ್ಟ್ಯವೆಂದರೆ : ಒಬ್ಬನ ಮಾತು ಒಬ್ಬನ ಮಾತಾಗಿ ಮಾತ್ರ ಉಳಿಯದಿದ್ದ ಕಾಲವಾಗಿ , ಒಬ್ಬರಿಗೊಬ್ಬರು ಒದಗುವ ಕಾಲವಾಗಿ ನಮಗದು ತೋರಿತ್ತು ಎಂಬುದು. ಇವರಲ್ಲಿ ನನ್ನ ಆತ್ಮೀಯರಾದವರು - ನನಗೆ ತಿಳಿದಂತೆ - ವ್ಯವಸ್ಥೆಯ ಕಡೆ ಅದರ ಒಪ್ಪಿಗೆಗಾಗಿಯಾಗಲೀ, ಮೆಚ್ಚುಗೆಗಾಗಲೀ ಮುಖತಿರುಗಿಸಿದವರಲ್ಲ - ಆ ನಮ್ಮ ಬೆಳವಣಿಗೆಯ ಕಾಲದಲ್ಲಿ. ಅಥವಾ, ಬೇಕಾದರೆ ಇದನ್ನು ಬಡಿದಾಟದ ಕಾಲದಲ್ಲಿ ಎನ್ನಿ. ಯಾಕೆಂದರೆ ಮೇಲಿನ ಹಲವರು ಒಂದು ಪಂಥಕ್ಕೆ ಗಂಟುಬಿದ್ದವರಾಗಿರಲ್ಲಿಲ್ಲ. ನಾನಂತೂ ‘ನವ್ಯ ಕಥೆಗಾರ’ನೆಂದು ಯಾರಾದರೂ ನನ್ನನ್ನು ಕರೆದರೆ ಗೊಂದಲಕ್ಕೊಳಗಾಗುತ್ತಿದ್ದೆ.

ನನ್ನನ್ನು ಮುಂದೆ ಎಂಬತ್ತರ ದಶಕದಲ್ಲಿ ಬೆಳೆಸಿದ್ದು ‘ರುಜುವಾತು’ಪತ್ರಿಕೆ ಹುಟ್ಟಿಸಿದ ಅಗತ್ಯಗಳು ; ಪತ್ರಿಕೆಯಿಂದಾಗಿ ನಾನು ಪಡೆದ ಜೊತೆಗಾರರು. ಒಬ್ಬರನ್ನೊಬ್ಬರು ಬೆಳೆಯಿಸುವಂತೆ ಕೆಲಕಾಲ ಈ ಪತ್ರಿಕೆ ನಡೆಯಿತು. ತಮ್ಮ ನೆನಪಿನಲ್ಲಿ ಇಡೀ ಕನ್ನಡ ಕಾವ್ಯದ ಪರಂಪರೆಯನ್ನು ಹೊತ್ತು ತಿರುಗುವ ಕಿರಂ ನಾಗರಾಜರು ಆ ದಿನಗಳಲ್ಲಿ ನನ್ನ ಕನ್ನಡ ಕಾವ್ಯದ ಅರಿವನ್ನು ಹಿಗ್ಗಿಸಿದರು. ಕೆ. ಸತ್ಯನಾರಾಯಣರು ಮುಂದೆ ನನ್ನ ಗೆಳೆಯರಾಗಿ ಬಿಟ್ಟ ಅಶೀಶನ ನಂದಿಯನ್ನು ನನಗೆ ಪರಿಚಯಿಸಿ ಓದಿಸಿದರು. ನನ್ನ ಬರವಣಿಗೆಯ ಪರಿಧಿಯನ್ನು ತಮ್ಮ ವೆಚಾರಿಕತೆಯಿಂದಲೂ, ಅನುಮಾನಗಳಿಂದಲೂ ಹಿಗ್ಗಿಸಿದರು. ಸರ್ವಮಂಗಳ, ಮೀನಾ ಮೈಸೂರು, ಪಟ್ಟಾಭಿರಾಮ ಸೋಮಯಾಜಿ ಸಾಹಿತ್ಯ ಚರ್ಚೆಯ ಜೀವಂತ ವಲಯವನ್ನು ಮೈಸೂರಲ್ಲಿ ಸೃಷ್ಟಿಸಿದರು.

ಈಗಲೂ ಹಿಂದಿನ ನನ್ನ ವಿದ್ಯಾರ್ಥಿಗಳ ಜೊತೆಗೆ ಗಂಟೆಗಟ್ಟಲೆ ಹರಟುತ್ತ ಅನೇಕ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದೇನೆ. ಬ್ಲೇಕ್‌ ತನ್ನ ಬರವಣಿಗೆಯ ಬಗ್ಗೆ ಹೇಳಿದ ಮಾತೊಂದಿದೆ. ‘ ಇದು ನನ್ನದು, ಆದರೆ ನನ್ನದು ಮಾತ್ರವಲ್ಲ.’ ನನ್ನಲ್ಲಿ ಹರಳುಗೊಳ್ಳುವ ಕೃತಿ ಅಪರೂಪವಾಗಿ ಹುಟ್ಟಿ ಸಾರ್ಥಕ ಭಾವನೆ ತಂದಾಗ ಬ್ಲೇಕ್‌ ಮಾತು ನೆನಪಾಗುತ್ತದೆ. ಅದೆಷ್ಟು ಓದಿ, ಓಡಾಡಿ, ನೋಡಿ, ಮಾತಾಡಿ, ಮರೆತು, ನೆನೆದು, ಸುಮ್ಮನಿದ್ದು, ಒಣಗಿ, ಚಿಗುರಿ ಕೃತಿಯಾಂದು ಹುಟ್ಟುತ್ತದೆ. ಇದು ವಿಚಿತ್ರವಾದ್ದು. ವಿನಯದಲ್ಲಿ ಕಾದು, ಬಂದಾಗ ಬೆರಗಿನಲ್ಲಿ ಸ್ವೀಕಾರಮಾಡಬಲ್ಲಂತೆ ನಮ್ಮ ಇಂದ್ರಿಯಗಳನ್ನು ತೆರೆದಿಟ್ಟುಕೊಂಡಿರುವುದೇ ಸೃಜನಶೀಲತೆಯ ಹಿಂದಿರುವ ನೈತಿಕತೆ.

ಕನ್ನಡದ ಜೀರ್ಣಾಗ್ನಿ ಹಿಂದೆ ಸಂಸ್ಕೃತವನ್ನೂ, ನಮ್ಮ ಕಾಲದಲ್ಲಿ ಯೂರೋಪನ್ನೂ ಮೈಗೂಡಿಸಿಕೊಂಡ ಪರಿಯನ್ನು ಕಥಿಸಲು ವಿಷಯಗಳನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಎಷ್ಟೋ ಮುಖ್ಯಹೆಸರುಗಳು ಇಲ್ಲಿ ಕೈಬಿಟ್ಟು ಹೋಗಿರಬಹುದು. ಮೈಸೂರಿನ ಕಾಫಿಹೌಸಿನಲ್ಲಿ, ಬೆಂಗಳೂರಿನ ವೈಎನ್‌ಕೆ ಜೊತೆಗಿನ ಚುರುಕಾದ ಅರ್ಧರ್ಧ ಮಾತುಗಳೇ ಸಾಕಾಗುತ್ತಿದ್ದ ಸಂವಾದಗಳಲ್ಲಿ, ಧಾರವಾಡದ ಮನೋಹರ ಗ್ರಂಥಮಾಲೆಯ ಮಹಡಿ ಮೇಲೆ ಬೇಂದ್ರೆಯವರು ತಮ್ಮ ವಿಲಕ್ಷಣ ವೈಚಾರಿಕತೆಯ ಅಕ್ಷಯ ಬತ್ತಳಿಕೆಯನ್ನು ಬಿಚ್ಚುತ್ತಿರುವಾಗ, ಜಿಬಿ ಜೋಷಿಯವರು ಕಣ್ಣ ಮುಚ್ಚಿ ಆಲಿಸುತ್ತಿರುವಾಗ, ಡಾ. ಅಮೂರ್‌ ಬೇಂದ್ರೆಯವರನ್ನು ನಮ್ಮ ಹೊಸ ವೈಚಾರಿಕತೆಯ ಯುಗಕ್ಕೆ ಚುರುಕಗೊಳಿಸುವಂತೆ ಪ್ರಶ್ನಿಸಿದಾಗ, ಶಾಂತಿನಾಥ ದೇಸಾಯರ ‘ಮುಕ್ತಿ’ಯ ನವ್ಯತೆಗೆ ಅತ್ಯುತ್ಸಾಹದಿಂದ ನಾವು ಎದುರಾದಾಗ ಪಡೆದುಕೊಂಡ ಹೊಸ ಚಿಂತನೆಯ ಆಯಾಮಗಳನ್ನು ಇಲ್ಲಿ ಕೃತಜ್ಞ ಭಾವನೆಯಲ್ಲಿ ಸ್ಮರಿಸುತ್ತಿದ್ದೇನೆ...

ಒಂದು ಕಾಲವನ್ನು ಅದರ ಎಲ್ಲ ವಿವರಗಳಲ್ಲೂ ದಾಖಲಿಸುವ ಉದ್ದೇಶದ ಕಥನವೆಂದು ಇದನ್ನು ತಿಳಿಯಬಾರದು. ಒಬ್ಬ ಲೇಖಕನ ಅನುಭವದ ಕಥನ ಮಾತ್ರ ಇದು. ಕನ್ನಡವನ್ನು ವಿಸ್ತರಿಸಬೇಕೆಂಬ ಭರದಲ್ಲಿ ಅದನ್ನು ಆಧುನಿಕಗೊಳಿಸುವ ನನ್ನಂತಹ ಕೆಲವರ ಪ್ರಯತ್ನದ ಸಂದರ್ಭದಲ್ಲೇ ಐರೋಪ್ಯವಾದ ಆಧುನಿಕಕ್ಕೆ ಹೊರತಾದ್ದದ್ದು, ಮೀರಿದ್ದು, ಕನ್ನಡದ ದೇಸಿಯಿಂದ ಮಾತ್ರ ಹುಟ್ಟಬಹುದಾದಂತದ್ದು ಹೇಗೆ ಸೃಷ್ಟಿಯಾಯಿತೆಂದು ತೋರಿಸಲು ವಿಭಿನ್ನ ಪ್ರತಿಭೆಯ ಲೇಖಕರನ್ನು ಇಲ್ಲಿ ಹೆಸರಿಸಿದ್ದೇನೆ. ಈ ಕಾಲದಲ್ಲೇ ಕುವೆಂಪು ಕಾರಂತ, ಮಾಸ್ತಿ, ಶ್ರೀರಂಗರಂಥವರೂ ಸೃಜನ ಶೀಲರಾಗಿಯೇ ಉಳಿದಿದ್ದರು. ನಾವು ಅವರಿಂದ ಪ್ರಭಾವಿತರಾದಂತೆ ಅವರೂ ನವ್ಯವನ್ನೂ ಟೀಕಿಸುತ್ತಲೇ ನವ್ಯದಿಂದ ಪ್ರಭಾವಿತರಾದರೇ ? ನವ್ಯ ಕಾವ್ಯದ ಗುಣವನ್ನು ಗದ್ಯದಲ್ಲಿ ತಂದು ಕಥೆ ಕಾದಂಬರಿಗಳನ್ನು ಧ್ವನಿಪೂರ್ಣ ಮಾಡಬೇಕೆಂಬ ಪ್ರಯತ್ನ ಮುಂದೆ ಬಂಡಾಯ, ದಲಿತ, ಮಹಿಳಾ ಚಳವಳಿಗೂ ಹರಡಿ ನವೋದಯ ಕಾಲದಿಂದ ಈವರೆಗೆ ಬಿರುಕಿಲ್ಲದ ಕನ್ನಡ ಸಾಹಿತ್ಯ ರಚನೆಗೆ ಕಾರಣವಾದ್ದನ್ನು ನಾವೀಗ ಕಾಣಬಹುದೇ ? ಇವು ಮುಖ್ಯ ಪ್ರಶ್ನೆಗಳೆಂದು ನನಗನ್ನಿಸಿದೆ.

ಇಂಗ್ಲಿಷ್‌ ಭಾಷೆ ತಂದ ಆಧುನಿಕತೆ ಇಲ್ಲದ ಕಾಲದಲ್ಲಿ ನಾವೇನೂ ಬರ್ಬರರಾಗಿರಲ್ಲಿಲ್ಲ ಎಂದು ಇವತ್ತು ಗಟ್ಟಿಯಾಗಿ ಹೇಳಬೇಕೆನ್ನುವಷ್ಟು ಆ ನವೋದಯ, ಅಥವಾ ನವ್ಯದ ದಿನಗಳಲ್ಲಿ ಅನ್ನಿಸದೇ ಇದ್ದರೂ ಕುವೆಂಪು, ಬೇಂದ್ರೆ, ಕಾರಂತ ಅಡಿಗ - ಈ ಎಲ್ಲರಲ್ಲೂ ಕನ್ನಡ ಸಾಹಿತ್ಯದ ಇಡೀ ಇತಿಹಾಸ ಜೀವಂತವಾಗಿ ಕೆಲಸ ಮಾಡುತ್ತಿತ್ತು ಎಂಬುದರ ಅರಿವು ನಮಗೆಲ್ಲರಿಗೂ ಇತ್ತೆಂದು ಹೇಳಬೇಕಾದ್ದು ಅಗತ್ಯ. ಬೇಂದ್ರೆಯ ಸಂವೇದನೆಯಂತೂ ಎಲ್ಲದಕ್ಕೂ, ಶೆಲ್ಲಿಯಿಂದ ಹಿಡಿದು ಶರೀಫನ ವರೆಗೂ, ಸಂಸ್ಕೃತಕ್ಕೂ, ಜಾನಪದಕ್ಕೂ, ವೇದಕ್ಕೂ ವಚನಕ್ಕೂ, ಸ್ಪಂದಿಸಬಲ್ಲುದಾಗಿತ್ತು ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ಬೇಂದ್ರೆ ಬಗ್ಗೆ ಮಾತನಾಡುವಾಗ ಮಧುರಚೆನ್ನರನ್ನು ಮರೆಯುವುದು ಸಾಧ್ಯವೇ ? ಮತೀಯವಾಗದ ಆಧ್ಯಾತ್ಮದ, ಕನ್ನಡದಲ್ಲಿ ಮಾತ್ರ ಕಾಣಿಸಿಕೊಳ್ಳಬಹುದಾದ ವಿಲಕ್ಷಣ ರೂಪಕ ಪ್ರತಿಭೆಯ ಮಾಂತ್ರಿಕ ಶಕ್ತಿಯ ಕವಿಗಳು ಇವರು.

ಹಾಗೆ ನೋಡಿದರೆ ಇದರಲ್ಲಿ ಅಚ್ಚರಿ ಏನಿದೆ ? ಕರ್ನಾಟಕದ ಎಲ್ಲೆಲ್ಲೂ ಯಾರೋ ಕವಿ ಇದ್ದ, ಯಾರೋ ಲಿಂಗಾಯತ ಸಂತರೋ ದಾಸರೋ ಇದ್ದರು. ಈಗಲೂ ಬೆಂಗಳೂರಲ್ಲೋ ಮೈಸೂರಲ್ಲೋ ಪ್ರಸಿದ್ಧರಾದವರು ಯಾವುದೋ ಸಣ್ಣ ಊರಲ್ಲೋ, ಹಳ್ಳಿಯಲ್ಲೋ ಹುಟ್ಟಿ ಕನ್ನಡ ಮಾಧ್ಯಮದ ಶಾಲೆಯಲ್ಲಿ ಕಲಿತು ಓದಿ ಬೆಳೆದವರು ಅಲ್ಲವೇ ? ಈ ಸರಳ ಸತ್ಯಗಳನ್ನು ನಾವು ವಿಮರ್ಶೆಯಲ್ಲಿ ಮರೆಯಬಾರದು. ಸಾಹಿತ್ಯ ಜೀವಂತವಾಗಿ ವರ್ತಮಾನ ಕಾಲಕ್ಕೆ ಸ್ಪಂದಿಸುವಾಗ ಒಬ್ಬ ಲೇಖಕ ಇನ್ನೊಬ್ಬನಿಗೆ ಪೂರಕವಾಗಿ ಒಟ್ಟೂ ಜೀವನದ ಸತ್ಯವನ್ನು ಕಟ್ಟಿಕೊಡುತ್ತಿರುತ್ತಾರೆ. ಈ ಸೋಜಿಗ ಎಲ್ಲ ಜೀವಂತ ಸಾಹಿತ್ಯ ಪರಂಪರೆಗೆ ಅನ್ವಯಿಸುವಂತಹುದು.

ಸಂಸ್ಕೃತಿಯ ಇನ್ನೂ ಒಂದು ಕೇಂದ್ರವಾದ ತುಮಕೂರು

ಭಾರತ ಬಹು ಕೇಂದ್ರಿತ ರಾಷ್ಟ್ರ ; ದೆಹಲಿ ಮಾತ್ರ ಅದರ ಕೇಂದ್ರವಲ್ಲ. ಕರ್ನಾಟಕವೂ ಭಾರತ ಸಂಸ್ಕೃತಿಯ ಇನ್ನೊಂದು ಕೇಂದ್ರ. ಹಾಗೆಯೇ ಜಗತ್ತಿನ ವಾಣಿಜ್ಯೋದ್ಯಮಿಗಳ ಗಮನ ಸೆಳೆಯುತ್ತಿರುವ ಬೆಂಗಳೂರು ಮಾತ್ರ ಖಂಡಿತ ಕರ್ನಾಟಕದ ಏಕ ಕೇಂದ್ರವಲ್ಲ. ಕರ್ನಾಟಕದ ಊರೂರು ಸಂಸ್ಕೃತಿಯ ಕೇಂದ್ರಗಳೇ. ಭಾರತಕ್ಕೆ ಗುಬ್ಬಿ ವೀರಣ್ಣನನ್ನು ಕೊಟ್ಟ ಗುಬ್ಬಿಯೂ ಭಾರತ ಸಂಸ್ಕೃತಿಯ ಕೇಂದ್ರವೇ.

ಬೆಳ್ಳಾವೆ ನರಹರಿ ಶಾಸ್ತ್ರಿಗಳು, ನನ್ನ ಎಳೆಯ ವಯಸ್ಸಿನಲ್ಲಿ ಕಂಸನನ್ನು ಕಣ್ಣಿಗೆ ಕಟ್ಟಿಸುತ್ತಿದ್ದ ನಟಭಯಂಕರ ಗಂಗಾಧರ ರಾಯರು ತುಮಕೂರಿನವರಾಗಿದ್ದು ಇಡೀ ಕರ್ನಾಟಕದವರಾದರು. ಶ್ರೀನಿವಾಸರಾಯರ ನಿಟ್ಟೂರೂ ಭಾರತದ ಕೇಂದ್ರವೆ. ಹಲವಾರು ವೀರಶೈವ ಚಿಂತಕರನ್ನೂ, ಸಾಹಿತಿಗಳನ್ನೂ ಹಿಂದಿನ ಕಾಲದಲ್ಲಿ ಪಡೆದಿದ್ದ ಈ ತುಮಕೂರು ಜಿಲ್ಲೆಯ ಗೂಳೂರಿನಲ್ಲಿ ಸಿದ್ಧವೀರಣ್ಣ ಒಡೆಯರು ಸೃಷ್ಟಿಸಿದ ಘಟ್ಟಿವಾಳಯ್ಯ ಪ್ರಸಂಗ ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಬಂಡಾಯ ಮತ್ತು ವ್ಯವಸ್ಥೆಯನ್ನು ಕುರಿತ ಗಂಭೀರವಾದ ವಾಗ್ವಾದವಾಗಿದೆ. ವಚನಕಾರರನ್ನು ನೆನಪುಮಾಡುವ, ಎಲ್ಲ ಜಾತಿಯ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾನವನ್ನೂ ವಿದ್ಯಾದಾನವನ್ನೂ ಮಾಡುತ್ತಿರುವ ಸಿದ್ಧಗಂಗೆಯ ಸ್ವಾಮಿಗಳು ತುಮಕೂರಿನವರು. ಕರ್ನಾಟಕದ ಎಲ್ಲ ಮಠಾಧೀಶರಿಗೂ ಇವರು ಆದರ್ಶಪ್ರಾಯರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಈ ಜಿಲ್ಲೆಯವರು. ಡಾ.ಚಿದಾನಂದ ಮೂರ್ತಿ, ಡಾ.ಶಿವರುದ್ರಪ್ಪ ಅಂತಹ ಅಧ್ಯಾಪಕರನ್ನೂ ಲೇಖಕರನ್ನೂ ಶಿಷ್ಯರಾಗಿ ಪಡೆದಿದ್ದ ತಿನಂಶ್ರೀಯವರನ್ನು ತಮ್ಮವರೆಂದು ತುಮಕೂರು ಗೌರವಿಸುತ್ತದೆ.

ದಲಿತ ಜನಾಂಗದ ಸ್ವಾಭಿಮಾನದ ಹುಡುಕಾಟದಲ್ಲಿ ಹುಟ್ಟಿದ ಸಂಸ್ಥೆ ಇಲ್ಲಿನ ಸಿದ್ಧಾರ್ಥ ಸಂಸ್ಥೆ. ಈ ಸಭೆಯಲ್ಲೇ ತುಮಕೂರಿನಲ್ಲಿ ಅಧ್ಯಾಪಕರಾಗಿರುವ, ವಿದ್ಯಾರ್ಥಿಗಳಾಗಿರುವ, ಹಲವು ಉದ್ಯೋಗಗಳಲ್ಲಿ ನಿರತರಾದ ಎಷ್ಟೋ ಸಾಹಿತಿಗಳು, ಸಾಹಿತ್ಯದ ಗಂಭೀರ ಓದುಗರು ಇದ್ದಾರೆ. ನನಗೆ ವೈಯಕ್ತಿಕವಾಗಿ ಪ್ರಿಯರಾದವರು, ಸಾ.ಶಿ.ಮರುಳಯ್ಯ, ಸಣ್ಣಗುಡ್ಡಯ್ಯ, ವೀಚಿ, ಕೆ.ಬಿ.ಸಿದ್ಧಯ್ಯ ಮುಂತಾದವರು, ತುಮಕೂರಿನಲ್ಲಿದ್ದಾರೆ. ಈ ಎಲ್ಲರೂ ಪ್ರಾಯಶಃ ಕನ್ನಡಮಾಧ್ಯಮದಲ್ಲಿ ಓದಿದವರಿರಬೇಕೆಂಬ, ಕನ್ನಡದ ದೇಸಿಗೆಷ್ಟೋ ಈಗ ಮಾರ್ಗವಾಗಿಹೋದ ಪಾಶ್ಚಾತ್ಯ ಸಾಹಿತ್ಯಕ್ಕೂ ತೆರೆದುಕೊಂಡವರು ಎಂಬ ನನ್ನ ಊಹೆ ತಪ್ಪಿರಲಾರದು.

ಆದರೂ ಯಾಕೆ ಆತಂಕ?

ಮುಂದೊಂದು ದಿನ ಎಲ್ಲ ಭಾರತೀಯ ಭಾಷೆಗಳೂ, ಕನ್ನಡವಂತೂ ಖಂಡಿತವಾಗಿ, ಬಹುಪಾಲು ವಿದ್ಯಾವಂತರಿಗೆ ಅಡುಗೆಮನೆಯ ಭಾಷೆಯಾಗಿ ಮಾತ್ರ ಬಳಕೆಯಾಗಿ ಉಳಿಯಬಹುದೆಂಬ ಆತಂಕ ನನ್ನಂಥವರಿಗೆ ಇದೆ. ವಿಪರ್ಯಾಸವೆಂದರೆ, ಭವಿಷ್ಯದಲ್ಲಿ ಹಾಗಾಗದಂತೆ ತಡೆಯಬಲ್ಲವರು ವಿದ್ಯಾವಂತರೂ ಭಾಗ್ಯವಂತರೂ ಆದ ನಮ್ಮಂಥ ಜನರಲ್ಲ; ಇಂಗ್ಲಿಷ್‌ ಮಾಧ್ಯಮದಲ್ಲಿ ಓದಬೇಕೆಂಬ ಆಸೆಯಿದ್ದರೂ ಓದಲಾರದ ಹಳ್ಳಿಯ ಹಿಂದುಳಿದವರು ಮತ್ತು ಬಡವರು ಕನ್ನಡವನ್ನು ಉಳಿಸಿಯಾರು. ಕನ್ನಡಮಾತಿನ ಕಸುವನ್ನು ಚರಿತ್ರೆಯುದ್ದಕ್ಕೂ ಉಳಿಸಿಕೊಂಡು ಬಂದವರು ಇವರೇ. ಬಡಜನರ ಬಗ್ಗೆ ಕನಿಕರಪಡುವುದು ಮಾತ್ರ ಸಲ್ಲದು, ಗೌರವದಿಂದಲೂ, ಭರವಸೆಯಿಂದಲೂ ಅವರನ್ನು ನೋಡುವುದು ಅವಶ್ಯವೆನ್ನಲು ಈ ಮಾತುಗಳನ್ನು ಹೇಳಿ, ಮುಂದಿನ ಮಾತುಗಳನ್ನು ಸೇರಿಸುತ್ತೇನೆ.

ಮೌಖಿಕ ಪರಂಪರೆಯಲ್ಲಿ ತಮ್ಮ ಸಂಸ್ಕೃತಿಯ ಬೇರುಗಳನ್ನು ಪಡೆದ ಈ ಜನ ಈಗ ಅನಕ್ಷರಸ್ಥರಾಗಿ ಮಾತ್ರ ನಮಗೆ ಕಾಣುತ್ತಾರೆ. ಹಿಂದೊಂದು ಕಾಲದಲ್ಲಿ ವೇದಗಳನ್ನು ಬಾಯಿಪಾಠಮಾಡಿ ಉಳಿಸಿಕೊಂಡು ಬಂದ ಅನೇಕ ಬ್ರಾಹ್ಮಣರು ಅನಕ್ಷರಸ್ಥರಾಗಿದ್ದರೆಂದೂ, ಬೌದ್ಧರು ಮಾತ್ರ ಅಕ್ಷರಸ್ಥರಾಗಿರುವುದು ಅವಶ್ಯಕವಾಗಿತ್ತೆಂದೂ ಕುರ್ತಕೋಟಿ ಹೇಳುತ್ತಾರೆ. (ನೋಡಿ: ಮಾತುಕತೆ, 60) ಹಿಂದಿನ ಕಾಲದಲ್ಲಿ ಅನಕ್ಷರಸ್ಥನಾಗಿರುವುದರಲ್ಲಿ ಅಪಾಯವಿಲ್ಲದಿದ್ದಿರಬಹುದು. ಆದರೆ ಈ ಕಾಲದಲ್ಲಿ ಅನಕ್ಷರಸ್ಥ ನಿರ್ಗತಿಕ; ಎಲ್ಲರ ಶೋಷಣೆಗೆ ಒಳಗಾಗುವ ಬಡಪಾಯಿ.

ಚುನಾವಣೆಯಲ್ಲಿ ರಾಜಕಾರಣಿಗಳು ಓಲೈಸಿ ಮತ್ತೆ ಮರೆತು ಬಿಡುವ, ಅವರು ಕುಡಿಸಿದ್ದನ್ನು ಯಥೇಚ್ಛ ಕುಡಿದು, ಆದರೆ ಎಲ್ಲರ ನಿರೀಕ್ಷೆ ಮೀರಿ ಕೆಲವೊಮ್ಮೆ ತಮ್ಮ ಇಚ್ಚೆಯಂತೆ ಓಟುಮಾಡಿ ಅಚ್ಚರಿಹುಟ್ಟಿಸುವ, ಭಾರತದ ಈ ಬಡಜನತೆ ಬಗ್ಗೆ ಇಷ್ಟು ಹೇಳಿಯೂ ಇನ್ನೊಂದು ಮಾತನ್ನೂ ಹೇಳದಿದ್ದರೆ ತಪ್ಪಾಗುತ್ತದೆ. ಅಮೇರಿಕಾದಲ್ಲಾಗಲೀ, ಮುಂದುವರೆದ ಯೂರೋಪಿನಲ್ಲಾಗಲೀ ಈ ದಿನಗಳಲ್ಲಿ ಅಲ್ಲಿನ ಬಡವರು ಇಲ್ಲಿನವರಂತೆ ತೀರಾ ಹೊಟ್ಟೆಗೇನೂ ಸಿಗದಂತೆ ಹಸಿದಿರಬೇಕಾದ್ದಿಲ್ಲ, ನಿಜ. ಆದರೆ ಆ ಶ್ರೀಮಂತ ದೇಶಗಳ ಬಡವರು ಬದುಕಿನಲ್ಲಿ ಯಾವ ಉಮೇದೂ ಇರದವರಂತೆ ಕಂಗೆಟ್ಟು ನಿರ್ವಿಣ್ಣರಾಗಿರುತ್ತಾರೆ. ಭಾರತದ ಬಡಜನತೆಯಾದರೋ ಸಿಟ್ಟಿಗೇಳುವ, ದಂಗೆಯೇಳುವ ಶಕ್ತಿಯನ್ನು ಕಳೆದುಕೊಂಡವರಂತೆ ತೋರುವುದಿಲ್ಲ. ಭಾರತದ ನಿತ್ಯೋತ್ಸವದಲ್ಲಿ ಇವರು ಹುಟ್ಟಿಸಬಲ್ಲ ಭರವಸೆಯಲ್ಲೇ, ಇವರು ತೋರಬಲ್ಲ ಪ್ರೀತಿಯ ಧಾರಾಳದಲ್ಲೇ ಗಾಂಧಿಯ ಶಕ್ತಿಯಿದ್ದದ್ದು; ಅಂಬೇಡ್ಕರರ ದಲಿತ ಸಂಘಟನೆ ಸಾಧ್ಯವಾದದ್ದು. ನಮ್ಮ ಅನೇಕ ಸಂತ ಕವಿಗಳು ಇವರ ನಡುವೆಯೇ ಹುಟ್ಟಿ ಬೆಳೆದದ್ದು; ಜನಪದ ಮಹಾಕಾವ್ಯಗಳು, ಗಾದೆಗಳು, ಉಲ್ಲಾಸದ ಮಾತಿನ ವಿವಿಧ ಬಗೆಗಳು ಇವರ ನೆನಪಿನಲ್ಲೇ ಉಳಿದು ಬಂದದ್ದು.

ನಮ್ಮ ನಾಗರಿಕತೆಯ ತೋರುವ ಜಗಲಿಯಲ್ಲಿ ಅಳಿದ ಪರಕೀಯರ ಗುರುತುಗಳಿದ್ದರೆ, ಚರಿತ್ರೆಯಲ್ಲಿ ಇನ್ನೂ ದಾಖಲಾಗದ ಸಮೃದ್ಧ ಹಿತ್ತಲಿನಲ್ಲಿ ಹಿಂದುಳಿದ ಜಾತಿಗಳ, ದಲಿತರ, ಮಹಿಳೆಯರ ಅನುಭವದ ದ್ರವ್ಯ ನಾಗರಿಕತೆಯ ಜಗಲಿಯನ್ನೇರಲು ಕಾದಿದೆ. ನಮ್ಮ ಸಮುದಾಯದಿಂದ ಹುಟ್ಟಿ ಬರುವ ನವ ಶಿಕ್ಷಕರು ಈಗಾಗಲೇ ಸವಕಲಾದ ಕನ್ನಡಕ್ಕೆ ಜೀವಂತ ಮಾತಿನ ಕಾವು ತಂದಿದ್ದಾರೆ; ದಣಿದ ಸಾಹಿತ್ಯ ಪ್ರಕಾರಗಳಿಗೆ ಹೊಸ ಚೇತನ ತುಂಬಿದ್ದಾರೆ. ವಚನ ಚಳವಳಿಯ ನಂತರ ನಮ್ಮ ಕಾಲದಲ್ಲಿ ಎಲ್ಲ ಜಾತಿಯಿಂದಲೂ, ವರ್ಗಗಳಿಂದಲೂ ಬಹುದೊಡ್ಡ ಸಂಖ್ಯೆಯಲ್ಲಿ ಲೇಖಕರು ಕಾಣಿಸಿಕೊಂಡಿದ್ದಾರೆ. ಬಂಡಾಯ ಮತ್ತು ದಲಿತ ಚಳವಳಿಗಳು, ಈಚಿನ ದಿನಗಳಲ್ಲಿ ಸ್ತ್ರೀವಾದಿ ಚಳವಳಿ ಅತಿರೇಕದ ನಿಲುವುಗಳನ್ನು ತೆಗೆದುಕೊಂಡಂತೆ ಕೆಲವೊಮ್ಮೆ ಕಂಡಾಗಲೂ ಇಡೀ ಒಂದು ಜನಾಂಗದ ಅರಿವಿನ ಸ್ಫೋಟಕ್ಕೆ ಕಾರಣವಾಗಿವೆ. ಹೇಳಲೇಬೇಕಾದ್ದನ್ನು ಅತಿಮಾಡಿ ಹೇಳಿದರೂ ಸರಿಯೆ; ಯಾಕೆಂದರೆ ಅತಿಗಳು ಸತ್ಯದ ಬಾಗಿಲನ್ನು ತೆರೆಯುತ್ತವೆ ಎಂಬ ಅರ್ಥಬರುವ ಮಾತನ್ನು ಬ್ಲೇಕ್‌ ಕವಿ ಹೇಳಿದ್ದನ್ನು ಇಲ್ಲಿ ನೆನೆಯಬೇಕು. ಈ ಲೇಖಕ ಲೇಖಕಿಯರು ರೂಪಕ ಪ್ರತಿಭೆ ಪಡೆಯದವರಾಗಿದ್ದಾಗ, ಕಿರುಚುವ ಅಗತ್ಯವಿಲ್ಲದೆ, ವಸಾಹತುಶಾಹಿಯ ನೆರಳಿನಿಂದ ನಮ್ಮ ಸಾಹಿತ್ಯವನ್ನು ಹೊರ ತರಬಲ್ಲವರಾಗುತ್ತಾರೆ.

ಮೇಲಿನ ಮಾತುಗಳನ್ನು ನಮ್ಮನ್ನು ನಾವೇ ರಂಜಿಸಿಕೊಳ್ಳಲಾಗಲೀ, ಸಮಾಧಾನ ತಂದುಕೊಳ್ಳಲಾಗಲೀ ಹೇಳಕೂಡದು. ಬದಲಾಗಿ, ನಮ್ಮ ವರ್ಗಗಳ ಹಿತಸಾಧನೆ ಮಾಡಿಕೊಳ್ಳಲೆಂದು ನಮ್ಮ ಜನರಿಂದ ಆದಷ್ಟು ದೂರವಾಗುವ ಸನ್ನಾಹದಲ್ಲಿ ನಮ್ಮ ಭಾಷೆಯಿಂದಲೇ ದೂರವಾಗಲು ಹೊಂಚುವ ಜನ ಎಷ್ಟು ಭಾಗ್ಯಶಾಲಿಗಳೆಂದು ಸದ್ಯ ಕಾಣಲು ತೋರಿದರೂ ಅವರಿಗಿಂತ ಶಾಶ್ವತವಾದದ್ದು ನಮ್ಮ ನಡುವೆ ಇದೆಯಲ್ಲವೇ ಎಂಬ ಆತಂಕ ಪೂರ್ಣ ಹುಡುಕಾಟದಲ್ಲಿ ನಾವು ಕಾಣಬೇಕಾದ ಸತ್ಯವಿದು.


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X