ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯು.ಆರ್‌. ಅನಂತಮೂರ್ತಿ

By Staff
|
Google Oneindia Kannada News

ಅಧ್ಯಕ್ಷ ಪದವಿಯ ಈ ಗೌರವವನ್ನು ನಾನು ಬಯಸಿರಲಿಲ್ಲ ; ನಿರೀಕ್ಷಿಸಿಯೂ ಇರಲಿಲ್ಲ. ಅಲ್ಲದೆ ಕೊಂಚ ಸೋಮಾರಿಯೂ, ಏನನ್ನಾದರೂ ಬರೆದು ಓದಬೇಕೆಂದರೆ ಹಿಂಜರಿಯುವವನೂ, ಜನರೆದುರು ನಿಂತ ನಿಲುವಿನಲ್ಲೇ ಆಲೋಚಿಸುತ್ತಲೇ ಹೊಳೆದಂತೆ ಮಾತಾಡುವುದರಲ್ಲಿ ಹೆಚ್ಚು ಸುಖ ಕಾಣುವವನೂ ಆದ ನಾನು ಈ ಭಾಷಣವನ್ನು ನನ್ನೊಳಗೇ ಅಂದುಕೊಳ್ಳುತ್ತ, ತಿದ್ದಿಕೊಳ್ಳುತ್ತ , ಆಡಬೇಕೆಂದು ಅನ್ನಿಸುವ ಮಾತುಗಳು ಸಹಸ್ರಾರು ಕನ್ನಡಿಗರಿಗೆ ಎಷ್ಟು ಪ್ರಸ್ತುತವಾದೀತು ಎಂದು ಆತಂಕಪಡುತ್ತ , ಅಧ್ಯಕ್ಷನಾಗಿ ಆಯ್ಕೆಯಾದ್ದನ್ನು ತಿಳಿದ ದಿನದಿಂದಲೂ ಈಗ ಇಲ್ಲಿ ನಿಮ್ಮೆದುರು ಮಾತಾಡಲು ನಿಂತಿರುವ ಕ್ಷಣವನ್ನು ದಿಗಿಲಿನಲ್ಲಿ ಊಹಿಸಿಕೊಳ್ಳುತ್ತ ಕಳೆದಿದ್ದೇನೆ. ಹೀಗಾಗಿ ನನಗೆ ಸಿಕ್ಕಿರುವ ಈ ಗೌರವ ಅಷ್ಟೇನೂ ನನಗೆ ಸಂಭ್ರಮ ಪಡುವ ವಿಷಯವಾಗಲಿಲ್ಲ . ಬದಲಾಗಿ, ನನ್ನನ್ನೇ ನಾನು ಶೋಧಿಸಿಕೊಳ್ಳುವ ಧ್ಯಾನವಾಯಿತು. ಈ ವೇದಿಕೆಯಿಂದಲೇ ನಮ್ಮ ಕಾಲದ, ಯಾಕೆ ಎಲ್ಲ ಕಾಲದ, ಮಹಾಪುರುಷರಲ್ಲಿ ಒಬ್ಬರಾದ ಮಹಾತ್ಮ ಗಾಧೀಜಿಯವರು ನಾನು ಹುಟ್ಟುವುದಕ್ಕಿಂತ ಮುಂಚೆ ಮಾತಾಡಿದ್ದರೆಂದು ತಿಳಿದ ಮೇಲಂತೂ ‘ಶಬ್ದ ಸೂತಕ’ವಿಲ್ಲದ ನಿಜದ ಮಾತಿಗಾಗಿ ಪರದಾಡುವಂತಾಯಿತು.

ವೈಯಕ್ತಿಕವಾಗಿ ಇನ್ನೂ ಒಂದು ಮಾತನ್ನು ನಾನು ಹೇಳಲೇಬೇಕು. ಹೃದಯದ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದ , ಮನೆ ಬಿಟ್ಟು ಕದಲಲು ಅಸ್ವಾಭಾವಿಕವಾಗಿ ಅಂಜುತ್ತಿದ್ದ ನನ್ನನ್ನು ಕರ್ನಾಟಕದ ಮುಖ್ಯ ವಾಹಿನಿಯಲ್ಲಿ ಒಬ್ಬನೆನ್ನುವಂತೆ ಕಂಡು ಇಲ್ಲಿ ತಂದು ನಿಲ್ಲಿಸಿದ ಪರಿಷತ್ತಿನ ಸದಸ್ಯರಿಗೂ ತುಮಕೂರಿನ ಮಹಾಜನತೆಗೂ ನಾನು ಋಣಿಯಾಗಿದ್ದೇನೆ. ಆರೋಗ್ಯವಂತನೆಂಬ, ಯಾವ ಔಷಧದಿಂದಲೂ ಸಿಗಲಾರದ, ಭಾವನೆಯನ್ನು ನಿಮ್ಮ ಪ್ರೀತಿ ನನಗೆ ಕೊಟ್ಟಿದೆ.

1915 ರಲ್ಲಿ , ಅಂದರೆ, ಅದೆಷ್ಟೋ ವರ್ಷಗಳ ಹಿಂದೆ ಎಂದು ಈಗ ಭಾವಿಸಿಕೊಳ್ಳಬಹುದಾದ ಕಾಲದಲ್ಲಿ , ಶ್ರೀ ಎಚ್‌.ವಿ.ನಂಜುಂಡಯ್ಯನವರು ಮಾಡಿದ ಮೊದಲನೇ ಭಾಷಣವನ್ನು ಓದುತ್ತಿದ್ದಂತೆ ಅವರು ಸೂಚ್ಯವಾಗಿ ಹೇಳಿರದ ಯಾವ ಹೊಸ ವಿಷಯವೂ ನನಗೆ ಹೇಳಲೇಬೇಕೆನ್ನಿಸುವಂತೆ ಉಳಿದಿಲ್ಲವೆನ್ನಿಸಿತು. ಆಮೇಲಿನ ಎಲ್ಲ ಅಧ್ಯಕ್ಷರ ಭಾಷಣಗಳನ್ನು ಓದುತ್ತ ಹೋದಂತೆ ಕನ್ನಡದ ಬಹು ದೊಡ್ಡದಾದೊಂದು ಪರಂಪರೆಗೆ ವಿನಯದಲ್ಲಿ ತಲೆ ಬಾಗುವಂತೆ ಆಯಿತು. ನಾನು ಈಗಾಡುವ ಕೆಲವು ಮಾತುಗಳು ನನ್ನ ಪೂರ್ವಸೂರಿಗಳು ಸೃಷ್ಟಿಸಿದ ಪರಂಪರೆಗೆ ಸೇರುವಷ್ಟು ಯೋಗ್ಯವಾಗಲಿ ಎಂಬ ಪ್ರಾರ್ಥನಾಭಾವದಲ್ಲಿ ಈಗ ನಿಮ್ಮೆದುರು ನಿಂತಿದ್ದೇನೆ. ನನಗಿಂತ ದೊಡ್ಡ ಶಕ್ತಿಯಾಂದು ನನ್ನ ಮೂಲಕ ಮಾತಾಡಬಹುದು ಎಂಬ ನಿರೀಕ್ಷೆಯಲ್ಲೇ ನಾನು ಬರಹಗಾರನಾಗಿರುವುದು ; ಇವತ್ತು ನಿಮ್ಮೆದುರು ನಿಂತು ಮಾತಾಡುತ್ತಿರುವುದೂ ಕೂಡ ಅದೇ ನಿರೀಕ್ಷೆಯಲ್ಲಿ.

‘ಆ ಕನ್ನಡದೊಳ್‌ ಭಾವಿಸಿದ ಜನಪದಂ’

ಸಾವಿರ ವರ್ಷಗಳಿಗೂ ಹೆಚ್ಚು ಹಿಂದಿನ ಶ್ರೀವಿಜಯನ ‘ಕವಿರಾಜಮಾರ್ಗ’ದ ಕೆಲವು ವಿಚಾರಗಳು ಇವತ್ತಿಗೂ ಹೇಗೆ ಪ್ರಸ್ತುತವಾಗಿವೆ ಉಳಿದಿವೆ ಎಂಬುದನ್ನು ಗೆಳೆಯ ಸುಬ್ಬಣ್ಣನವರ ಬರಹದಿಂದ ತಿಳಿದು ನಾನು ಮುಂದಿನ ಮಾತುಗಳನ್ನಾಡುತ್ತಿದ್ದೇನೆ. (ನೋಡಿ : ‘ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ’ ; ಶೆಲ್ಡನ್‌ ಪೊಲಾಕ್‌ ಬರೆದಿರುವ ಲೇಖನಗಳು)

ನಮ್ಮ ಜನಪದವು ಕರ್ನಾಟಕ ಪ್ರದೇಶದಲ್ಲಿ ಭವಿಸಿದ್ದು, ಮತ್ತು ಕನ್ನಡದಲ್ಲಿ ಭಾವಿಸಿದ್ದು ಎಂಬುದು ಹೆಚ್ಚು ಕಡಿಮೆ ಎಲ್ಲ ಸಮ್ಮೇಳನಾಧ್ಯಕ್ಷರ ಚಿಂತನೆಯ ಹಿಂದಿದೆ ಎನ್ನಬಹುದು. ಮೊದಲೇ ಹೇಳಿಬಿಡಬೇಕೆಂದು ನನಗೆ ಅನ್ನಿಸಿದ ಇನ್ನೊಂದು ವಿಷಯವೆಂದರೆ : ಕವಿರಾಜಮಾರ್ಗಕಾರನ ಕಾಲದಿಂದಲೂ ನಾವು ಈ ಕನ್ನಡತ್ವವನ್ನು ಕಟ್ಟಿಕೊಳ್ಳುತ್ತ ಹೋದದ್ದು ಸಂಘರ್ಷದ ಮಾರ್ಗದಲ್ಲಿ ಅಲ್ಲ : ಅನುಸಂಧಾನದ ಮಾರ್ಗದಲ್ಲಿ ಎಂಬುದು. ಇದು ತುಂಬ ಗಮನಾರ್ಹ ಎಂದುಕೊಂಡಿದ್ದೇನೆ. ಕನ್ನಡಿಗರನ್ನು ಇತರರು ಮೆಚ್ಚುವುದಕ್ಕೂ, ನಮಗೇ ಬೇಸರದಲ್ಲಿ ಕೆಲವೊಮ್ಮೆ ಇದೊಂದು ನಮ್ಮ ದೌರ್ಭಾಗ್ಯವೆಂದು ಅನ್ನಿಸುವುದಕ್ಕೂ ಹಿಂದೆ ಕನ್ನಡದ ತಾಳುವ ಈ ಗುಣವಿದೆ.

ತಮಿಳಿನಂತೆ ಅಲ್ಲದೆ ಕನ್ನಡ ತನ್ನ ಸದ್ಯದ ನುಡಿಗೆ ಅನಗತ್ಯವಾದರೂ ದೇವನಾಗರಿಯ ಎಲ್ಲ ಲಿಪಿಯನ್ನು ಉಳಿಸಿಕೊಂಡು ಅನ್ಯಭಾಷೆಗಳ ಮಾತುಗಳನ್ನು ಬಳಸಿಕೊಳ್ಳಲು ಅವಕಾಶಮಾಡಿಕೊಂಡದ್ದರಲ್ಲೇ ಇದನ್ನು ಕಾಣಬಹುದೆಂದು ಸುಬ್ಬಣ್ಣ ಸೂಚಿಸುತ್ತಾರೆ. ತಮಾಷೆಗೆ ಹೇಳುವುದಾದರೆ ಕನ್ನಡದಲ್ಲಿ ಗಾಂಧಿ, ಅದೇ ಮಹಾತ್ಮನಾದ ಗುಜರಾತಿನ ಗಾಂಧಿಯಾಗಿಯೇ ಇದ್ದಾನು ; ಕ್ಲಿಂಟನ್‌ ಕರ್ಕಶನಾಗದೆ ಬಂದು ಹೋದಾನು. ದೇಜಗೌರಿಂದ ಒಮ್ಮೆ ನಾನು ಕೇಳಿಸಿಕೊಂಡ ಮಾತಿದು : ಕನ್ನಡದ ಉಕಾರ ಕನ್ನಡದ ಕೊಂಬೇ ; ಅದನ್ನು ಲಗತ್ತಿಸಿದರೆ ಯಾವ ಶಬ್ದವಾದರೂ ಕನ್ನಡದ ಶಬ್ದವೇ ಆಗಿಬಿಡುತ್ತದೆ. ಚೇರ್‌ ಚೇರು ಆದಂತೆ ನಾವೀಗ ನಡೆಸುತ್ತಿರುವುದು ಕನ್ನಡದ ಕಾನ್ಫರೆನ್ಸು.

ಸಂಘರ್ಷವಾಗದ ಅನುಸಂಧಾನದಲ್ಲಿ ಕವಿರಾಜಮಾರ್ಗಕಾರ ಸಂಸ್ಕೃತದ ಮಾರ್ಗದ ಜೊತೆ ಕನ್ನಡದ ದೇಸಿ ಶಕ್ತಿ ಕಳೆಗುಂದದಂತೆಯೂ, ಗೊಂದಲ ಹುಟ್ಟಿಸುವಷ್ಟು ಅತಿಯಾಗದಂತೆಯೂ, ಪೂರ್ವಕಾಲದ್ದು ಎಂಬ ಗೀಳಿನಿಂದಾಗಿ ಹಳಗನ್ನಡಕ್ಕೆ ಜೋತುಬೀಳದಂತೆಯೂ, ತನ್ನ ನುಡಿಯನ್ನು ಕಟ್ಟಿಕೊಳ್ಳುತ್ತಾನೆ. ಹೀಗೆ ಕಟ್ಟಿಕೊಳ್ಳುವ ಅನುಸಂಧಾನದ ಹಿಂದಿರುವ ಪ್ರೇರಣೆಯನ್ನು ನಾನು ಸಾತತ್ಯ ಕೆಡದಂತೆ ಆಧುನಿಕವಾಗುವ ಪ್ರೇರಣೆಯೆಂದರೆ ತಪ್ಪಾಗಲಾರದೆಂದು ತಿಳಿದಿದ್ದೇನೆ. ಕನ್ನಡದ ಹಿರಿಯರೆಲ್ಲರೂ,- ಬಿಎಂಶ್ರೀ, ಕುವೆಂಪು, ಕಾರಂತ, ಬೇಂದ್ರೆ, ಅಡಿಗ- ಈ ಎಲ್ಲರೂ ಕವಿರಾಜಮಾರ್ಗಕಾರನ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹಳಗನ್ನಡ ಸಾಹಿತ್ಯದ ಬಗ್ಗೆ ಪ್ರೀತಿ, ಆದರೆ ಅದರ ಶೈಲಿ, ಭಾಷಾ ಪ್ರಯೋಗಗಳು ನಮ್ಮ ಕಾಲಕ್ಕೆ ಸಲ್ಲದೆಂಬ ವಿವೇಕ, ಸಂಸ್ಕೃತದ ಬಗ್ಗೆ ಗೌರವ, ಆದರೆ ಈ ಭಾಷೆ ವರ್ತಮಾನಕಾಲದ ಜ್ಞಾನದಾಹವನ್ನು ತೀರಿಸಲಾರದೆಂಬ ಎಚ್ಚರ, ಇಂಗ್ಲಿಷ್‌ ನಮ್ಮ ಬೆಳವಣಿಗೆಗೆ ಅತ್ಯಗತ್ಯವೆಂಬ ನಂಬಿಕೆ, ಆದರೆ ಇಂಗ್ಲೀಷಿನಿಂದ ನಾವು ಪಡೆಯುವ ಲಾಭವೆಲ್ಲವೂ ನಮ್ಮ ಜನಪದಕ್ಕೆ ಕನ್ನಡದ ಮೂಲಕ ಸಿಗಲೇಬೇಕೆಂಬ ಆತಂಕಪೂರ್ಣವಾದ ಛಲ- ಇವು ನಮ್ಮ ಎಲ್ಲ ಹಿರಿಯ ಸಾಹಿತಿಗಳಲ್ಲೂ ಕೆಲಸ ಮಾಡಿದೆ. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ , ಕನ್ನಡವನ್ನು ಶಿಕ್ಷಣಮಾಧ್ಯಮವನ್ನಾಗಿಯೂ, ಆಡಳಿತ ಭಾಷೆಯನ್ನಾಗಿಯೂ ಮಾಡಬೇಕೆಂಬ ಒತ್ತಾಯದಲ್ಲಿ , ಭಾರತದ ಎಲ್ಲ ಸುಖ ದುಃಖಗಳಲ್ಲೂ ಪಾಲುದಾರರಾಗಿದ್ದು ತಮ್ಮ ವಿಶಿಷ್ಟತೆಯನ್ನು ಉಳಿಸಿಕೊಳ್ಳಬೇಕೆಂಬ ಆತ್ಮಾಭಿಮಾನದಲ್ಲಿ ಕನ್ನಡದ ಚೈತನ್ಯ ಈವರೆಗೂ ತನ್ನ ಕನಸುಗಳನ್ನು ಪ್ರತಿ ಸಮ್ಮೇಳನದಲ್ಲೂ ಪುನರುಚ್ಚರಿಸಿಕೊಂಡು ಬಂದಿದೆ.

ಕನ್ನಡದ ಮೂರು ಹಸಿವುಗಳು

ಅನಗತ್ಯ ಸಂಘರ್ಷದ ಹುಂಬತನಕ್ಕೆ ಎಡೆಗೊಡದಂತೆ, ಅಗತ್ಯವಾದರೆ ಸಂಘರ್ಷಕ್ಕೆ ಹಿಂಜರಿಯದಂತೆ ಕೆಲಸ ಮಾಡುವ ಕನ್ನಡದ ಚೈತನ್ಯದ ಹಿಂದೆ ಇರುವ ಹಸಿವುಗಳಲ್ಲಿ ಮೂರನ್ನು ಮುಖ್ಯವೆಂದು ನಾನು ಭಾವಿಸುತ್ತೇನೆ. ಇದರಲ್ಲಿ ಹೊಸ ಮಾತೇನೂ ಇಲ್ಲ . ಪೂರ್ವಸೂರಿಗಳ ಎಲ್ಲ ಮಾತುಗಳನ್ನೂ ಸಂಗ್ರಹಿಸುವಾಗ ನನಗೆ ಹೊಳದದ್ದು ಇದು.

ಇವೇ ಆ ಮೂರು ಹಸಿವುಗಳು :

  1. ಸಮಾನತೆಯ ಹಸಿವು. ನಮ್ಮ ದೇಶ ಉಳಿದ ದೇಶಗಳಿಗೆ ಸಮಾನವಾಗಿ ತಲೆಯೆತ್ತಿ ಬದುಕಬೇಕೆಂಬ ಹಸಿವು ಮಾತ್ರವಲ್ಲದೆ, ನಮ್ಮ ಜನಪದದಲ್ಲಿ ಹಿಂದುಳಿದವರು ನಾಗರಿಕತೆಯ ಸವಲತ್ತುಗಳನ್ನು ಗಳಿಸಿಕೊಳ್ಳಬೇಕೆಂಬ ಹಸಿವು. ದಲಿತರಲ್ಲೂ, ಸ್ತ್ರೀಯರಲ್ಲೂ ಹುಟ್ಟಿರುವ ಸ್ವಾಭಿಮಾನದ ಹಸಿವು. ಇವೇ ಬಂಡಾಯ, ದಲಿತ ಇತ್ಯಾದಿ ಈಚಿನ ಸಾಹಿತ್ಯ ಚಳವಳಿಗಳಲ್ಲಿ ಕಾಣಿಸುವ ಹಸಿವು ಕೂಡ.
  2. ಆಧ್ಯಾತ್ಮಿಕ ಹಸಿವು. ವಚನಕಾರರಲ್ಲೂ, ಬೇಂದ್ರೆ ಕುವೆಂಪು ಪುತಿನರಂತಹ ಕವಿಗಳಲ್ಲೂ ಎದ್ದು ಕಾಣಿಸುವ ಹಸಿವು ಇದು. ಇದು ಮತೀಯವಲ್ಲ ; ಕೋಮುವಾದಿಗಳಲ್ಲಿ ಖಂಡಿತ ಹುಟ್ಟುವ ಹಸಿವು ಇದಲ್ಲ. ಆಧುನಿಕತೆಯ ಹಸಿವಿನ ಜೊತೆಗೇ ಈ ಹಸಿವು ಹುಟ್ಟಿಕೊಂಡಾಗ, ಸರ್ವೋದಯದ ಬಯಕೆ ಇದರಲ್ಲಿ ಅಡಗಿದಾಗ ಮತೀಯತೆಯ ಮಿತಿಗಳಿಂದ ಆಧ್ಯಾತ್ಮಿಕತೆ ಮೀರಿ ನಿಲ್ಲುತ್ತದೆ. ಶಿಶುನಾಳ ಶರೀಫರಿಂದ ಬೇಂದ್ರೆಯವರೆಗೆ, ಈಚೆಗೆ ಎಡಪಂಥೀಯ ನಿಲುವಿನ ಹಲವು ಯುವ ಕವಿಗಳಲ್ಲಿ ಕನ್ನಡದ ದೇಸಿ ಶಕ್ತಿಯನ್ನು ವಿಶ್ವಾತ್ಮಕ ದರ್ಶನದಲ್ಲಿ ತೊಡಗಿಸುವ ಶೋಧವಾಗಿದೆ ಇದು.
  3. ಆಧುನಿಕವಾಗಬೇಕೆಂಬ ಹಸಿವು. ಬಿಎಂಶ್ರೀಯವರಲ್ಲಿ ಪ್ರತ್ಯಕ್ಷಗೊಂಡು, ನವ್ಯರಲ್ಲಿ ಅಧಿಕವೆನ್ನುವಷ್ಟು ಬೆಳೆದು, ಬೇಂದ್ರೆ ಕಂಬಾರರಂಥವರಲ್ಲಿ ಸಂಕೀರ್ಣರೂಪ ತಾಳಿ ಎಲ್ಲರಲ್ಲೂ - ನಮ್ಮ ರಾಜಕಾರಣಿಗಳಲ್ಲೂ, ಸಾಧಕರಲ್ಲೂ, ‘ ತೇಲಿಬರುವ ಜಾಸ್‌ ಗಾನ / ನಮ್ಮ ಕುಣಿತಕಲ್ಲವೇನ’ ಎಂದುಕೊಳ್ಳುವ, ಹೊಸಕಾಲದ ಯುವಕ ಯುವತಿಯರಲ್ಲೂ - ಪ್ರೇರಕ ಶಕ್ತಿಯಾಗಿ ಕೆಲಸ ಮಾಡುವ ಹಸಿವು ಇದು. ತನ್ನ ಶಿಷ್ಯರು ಇಂಗ್ಲಿಷ್‌ ಭಾಷೆಯಲ್ಲಿ ಚರ್ಚಿಸುವುದನ್ನು ಕೇಳಿಸಿಕೊಳ್ಳುವುದರಲ್ಲಿ ಸಂತೋಷ ಪಡುತ್ತಿದ್ದ ರಾಮಕೃಷ್ಣ ಪರಮಹಂಸರು ತನ್ನ ಕಾಲದ ಹಸಿವನ್ನು ಗುರುತಿಸಿದ್ದರು. ಮಾತ್ರವಲ್ಲ. ಪರಮಹಂಸರು ಆಳುವ ಬಿಳಿಜನರ ಭಾಷೆಯನ್ನು ಕಲಿತುಬಿಟ್ಟ ಮೇಲೆ ‘ ನೌಕರಿ’ಯಲ್ಲಿ ತಮ್ಮ ಸರ್ವಸ್ವವನ್ನು ಕಂಡುಕೊಳ್ಳುವ ಬಂಗಾಳೀ ಬಾಬಾಗಳ ಒಣಗರ್ವವನ್ನೂ ಮೃದುವಾದ ಹಾಸ್ಯದಲ್ಲಿ ಟೀಕಿಸಬಲ್ಲವರಾಗಿದ್ದರು. ಒಬ್ಬ ಯುವಕನನ್ನು ಕುರಿತು ಅವರು ಆಡಿದ ಮಾತು ನೆನಪಿಗೆ ಬರುತ್ತದೆ : ‘ ಓಹೋ, ಅವನು ಇಂಗ್ಲಿಷನ್ನು ಕಲಿತುಬಿಟ್ಟನೋ ? ಹಾಗಾದರೆ ಇನ್ನು ಮುಂದೆ ಅವನು ಸಿಳ್ಳೆ ಹೊಡೆಯುತ್ತ, ಶಬ್ದ ಮಾಡುವ ಬೂಟ್ಸು ತೊಟ್ಟೇ ಓಡಾಡುವುದು’ ಎಂದಿದ್ದರಂತೆ. ಸಿಳ್ಳೆ ಹೊಡೆಯುತ್ತ ನಡೆದಾಡುವುದರ ನಿರ್ಭಿಡೆಯ ಯುವಸಹಜ ಸೊಕ್ಕಿನಲ್ಲಿ ಇಂಗ್ಲಿಷ್‌ ಕಲಿಕೆಯಿಂದ ನಾವು ಬಿಡುಗಡೆ ಹೊಂದಬಹುದೆಂಬ ಭ್ರಮೆ ಕೆಲಸ ಮಾಡುವುದನ್ನು ಪರಮಹಂಸರು ಅದೆಷ್ಟು ಮನೋಜ್ಞವಾಗಿ ಚಿತ್ರಿಸಿದ್ದಾರೆ ನೋಡಿ. ( ಮೊದಲ ಎರಡು ಹಸಿವುಗಳನ್ನು ಒಳಗೊಳ್ಳದಂತೆ ಬೆಳೆಯಬಹುದಾದ ಈ ಹಸಿವು ಕಳೆದ ಶತಮಾನ ಕೊನೆಯಾಗುತ್ತಿದ್ದಂತೆ ವಿಕಾರಗೊಂಡಿದ್ದನ್ನು ಮುಂದೆ ಚರ್ಚಿಸಲಿದ್ದೇನೆ.)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X