ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪುಗೆ ಕಸಾಪದ ಗೌರವ ಸದಸ್ಯತ್ವ

By Staff
|
Google Oneindia Kannada News
  • ರಾಜ್ಯದ ಮುಖ್ಯಮಂತ್ರಿ ಹಾಸನಕ್ಕೋ, ಮದ್ದೂರಿಗೋ, ಕನಕಪುರಕ್ಕೋ ಸೀಮಿತವಾಗಿರಬಾರದು. ಆತ ಸಮಗ್ರ ಕರ್ನಾಟಕಕ್ಕೆ ಸೇರಿದವರಾಗಿರಬೇಕು.
  • ಕನ್ನಡ ವಿರೋಧ ರೋಗವಿರುವುದೇ ವಿಧಾನಸೌಧದಲ್ಲಿ. ಅದಕ್ಕೆ ಚಿಕಿತ್ಸೆ ನೀಡದೆ ಏನೂ ಸಾಧ್ಯವಾಗದು.
  • ಬಿಎಡ್‌ ಪರೀಕ್ಷೆಯಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ ನೀಡಲು ಅಧಿಕಾರಿಯಾಬ್ಬರಿಗೆ ಇಷ್ಟವಿಲ್ಲವಂತೆ. ಸರ್ಕಾರ ಸುಮ್ಮನಿದೆ. ಮಂತ್ರಿಗಳು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದು ನಾಯಿ ಬಾಲವನ್ನು ಅಲ್ಲಾಡಿಸುವುದೋ, ಬಾಲ ನಾಯಿಯನ್ನು ಅಲ್ಲಾಡಿಸುವುದೋ..
- ಪಾಟೀಲಪುಟ್ಟಪ್ಪನರ ಬೀಸು ನಾಲಗೆ ವಿಧಾನಸೌಧದದಿಂದ ಉತ್ತರ ಕರ್ನಾಟಕ, ಮಹಾರಾಷ್ಟ್ರದ ಗಡಿ ಭಾಗಗಳವರೆಗೆ ಹರಿದಾಡಿತು. ಆ ನಾಲಗೆಯಲ್ಲಿ ತುಂಬಿದ್ದುದು ನಂಜಲ್ಲ -ನೋವು, ಕಟಕಿಯಲ್ಲ- ಕಂಬನಿ.

ಭಾನುವಾರ (ಸೆ.23) ಜರುಗಿದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವವನ್ನು ಸ್ವೀಕರಿಸಿ ಪಾಪು ಮಾತನಾಡುತ್ತಿದ್ದರು. ಕರ್ನಾಟಕ ಏಕೀಕರಣ ಚಳವಳಿಯನ್ನು , ಅದರಲ್ಲಿ ತಮ್ಮ ಪಾತ್ರವನ್ನು ಸ್ಮರಿಸಿಕೊಂಡ ಅವರು, ಕರ್ನಾಟಕದೊಳಗೆ ಕಂಡುಬರುತ್ತಿರುವ ದ್ವೀಪಗಳ ಬಗೆಗೆ ಆತಂಕ ವ್ಯಕ್ತಪಡಿಸಿದರು. ಮಲೆಯಾಳಿ, ತಮಿಳರು ಹೆಚ್ಚುತ್ತಿದ್ದು , ಕನ್ನಡಿಗರು ಅಲ್ಪ ಸಂಖ್ಯಾತರಾಗುತ್ತಿರುವ ಸಮಸ್ಯೆಯ ಕುರಿತು ಮೊದಲು ಪರಿಹಾರ ಕಂಡುಕೊಳ್ಳಬೇಕು ಎಂದರು.

ಪ್ರತ್ಯೇಕತೆ ಮಾತು ಬೇಡವೇ ಬೇಡ

ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ ಮುಂತಾಗಿ ಪ್ರತ್ಯೇಕತೆ ಮಾತುಗಳು ಸರಿಯಲ್ಲ ಎನ್ನುವುದನ್ನು ಪಾಪು ಒತ್ತಿಹೇಳಿದರು. ಉತ್ತರ ಕರ್ನಾಟಕದವನು ಎನ್ನುವ ಕಾರಣಕ್ಕಾಗಿ ಕಸಾಪದ ಗೌರವ ಸದಸ್ಯತ್ವ ನೀಡುತ್ತಿದ್ದಲ್ಲಿ ತಾವು ಅದನ್ನು ತಿರಸ್ಕರಿಸುವುದಾಗಿ ಅವರು ಹೇಳಿದರು. ಈ ಮುನ್ನ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಸಿ.ವೀರಣ್ಣ ಅವರು, ಪ್ರಾದೇಶಿಕ ಅಸಮತೋಲನ ಸರಿಪಡಿಸಲು ಈ ಗೌರವ ನೀಡುತ್ತಿರುವುದಾಗಿ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದ್ದರು.

ಕನ್ನಡದ ಉಳಿವಿಗಾಗಿ ಬಹುಮುಖಿ ಚಿಂತನಕ್ರಮ

ಭಾಷೆಯನ್ನು ಉಳಿಸುವ ಸಾಧ್ಯತೆಗಳ ಕುರಿತು ಚರ್ಚಿಸಿದ್ದು , ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬರಗೂರು ರಾಮಚಂದ್ರಪ್ಪ . ಭಾಷೆಯನ್ನು ಸಾಂಸ್ಕೃತಿಕವಾಗಿ ಬೆಳೆಸದಿದ್ದರೆ ಉಳಿಯುವುದು ಕಷ್ಟ. ಕನ್ನಡವನ್ನು ಶೈಕ್ಷಣವಾಗಿ ಗಟ್ಟಿಗೊಳಿಸದಿದ್ದರೆ ಮುಂದಿನ ಪೀಳಿಗೆಗೆ ಕನ್ನಡ ಉಳಿಯದಿರುವ ಸಾಧ್ಯತೆಯೇ ಹೆಚ್ಚು ಎಂದರು ಬರಗೂರು.

ಕನ್ನಡ ಸಾಧನೆ ನಿರೀಕ್ಷಿಸಿದ ಮಟ್ಟದಲ್ಲಿ ಆಗುತ್ತಿಲ್ಲ ಎಂದು ಕನ್ನಡ ಚಳವಳಿಗಾರರು ನಿರಾಶೆ ಪಡಬೇಕಿಲ್ಲ . ಸಿನಿಕತನವೂ ಸಲ್ಲದು. ಸಮಗ್ರ ಕರ್ನಾಟಕ ನಿರ್ಮಾಣದ ಸವಾಲನ್ನು ಎಲ್ಲರೂ ಸ್ವೀಕರಿಸಬೇಕು ಎಂದು ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.

ಕಸಾಪದ ಅಧ್ಯಕ್ಷ ಹರಿಕೃಷ್ಣ ಪುನರೂರು, ಪಾಪು ಅವರಿಗೆ ಶಾಲು ಹೊದೆಸಿ ಗೌರವ ಸದಸ್ಯತ್ವ ನೀಡಿ ಗೌರವಿಸಿದರು. ಡಾ. ವೃಷಭೇಂದ್ರ ಸ್ವಾಮಿ ಅಭಿನಂದನಾ ಭಾಷಣಾ ಮಾಡಿದರು. ಕನ್ನಡ ಕೆಲಸ ಹಾಗೂ ಬರವಣಿಗೆಗಾಗಿ ಪಾಪು ಅವರನ್ನು ಕಸಾಪದ ಮಾಜಿ ಅಧ್ಯಕ್ಷ ಜಿ.ನಾರಾಯಣ ಅಭಿನಂದಿಸಿದರು.

ಗೌರವ ಸದಸ್ಯತ್ವ ಕಾರ್ಯಕ್ರಮದಲ್ಲಿ ಹಾಜರಿದ್ದವರು-
ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್‌, ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌, ಡಾ.ಜಿ.ಎಸ್‌.ಶಿವರುದ್ರಪ್ಪ, ಗೊ.ರು.ಚನ್ನಬಸಪ್ಪ. ಡಾ.ಎಂ.ಸಿ.ಮೋದಿ, ಪರಿಷತ್ತಿನ ಗೌರವ ಕಾರ್ಯದರ್ಶಿ ಪುಂಡಲೀಕ ಹಾಲಂಬಿ, ಪರಿಷತ್ತಿನ ಕೋಶಾಧ್ಯಕ್ಷ ಡಾ.ನಲ್ಲೂರು ಪ್ರಸಾದ್‌.

(ಇನ್ಫೋ ಇನ್‌ಸೈಟ್‌)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X