ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಒಳ ಮೀಸಲು : ಮುಖ್ಯಮಂತ್ರಿ ಭರವಸೆ

Chiefminister S.M. Krishnaತೀನಂಶ್ರೀ ಮಂಟಪ, ತುಮಕೂರು : ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರಕಾರಿ ಉದ್ಯೋಗದಲ್ಲಿ ಒಳ ಮೀಸಲಾತಿ ನೀಡುವ ಭರವಸೆಯನ್ನು ರಾಜ್ಯದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ನೀಡಿದ್ದಾರೆ. ಈ ಸಂಬಂಧ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದೂ ಅವರು ಹೇಳಿದರು.

ಇಲ್ಲಿನ ಸರಕಾರಿ ಕಿರಿಯ ಕಾಲೇಜು ಮೈದಾನದಲ್ಲಿ 69ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕರ್ನಾಟಕ ಹಾಗೂ ಕನ್ನಡದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಾಗಿದೆ. ಇದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬರಗೂರು ರಾಮಚಂದ್ರಪ್ಪ ಅವರ ವರದಿಯನ್ನು ಕೂಡ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.

ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ನಡೆಯಬೇಕು ಎಂಬುದು ಸರಕಾರದ ಆಶಯ ಆದರೆ ಇದು ಈ ಹೊತ್ತು ನ್ಯಾಯಾಲಯದಲ್ಲಿದೆ. ಈ ಅರ್ಜಿ ತೆರವಾದ ಕೂಡಲೇ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ ನೀಡುವಂತೆಯೇ ಟಿಸಿಎಚ್‌ ಹಾಗೂ ಬಿಎಡ್‌ನಲ್ಲೂ ಮೀಸಲು ಸೌಲಭ್ಯ ಒದಗಿಸುವ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದರು.

ಸಾಹಿತ್ಯ ಸಮ್ಮೇಳನ ಒಂದು ನುಡಿ ಹಬ್ಬ. ಇಂತಹ ಒಂದು ಸಂಭ್ರಮದ ಸಂತಸದ ಉತ್ಸವ, ವಿವಾದ - ಕದನದ ಕುರುಕ್ಷೇತ್ರ ಆಗಬಾರದು. ಇದು ಒಂದು ಆತಂಕಕಾರಿ ಬೆಳವಣಿಗೆ ಎಂದು ಕೃಷ್ಣ ಕಳವಳ ವ್ಯಕ್ತಪಡಿಸಿದರು. ವ್ಯಕ್ತಿಗಿಂತಲೂ ನಾಡು, ನುಡಿ ದೊಡ್ಡದು, ನಾವೆಲ್ಲರೂ ನಮ್ಮ ರಾಜ್ಯದ ಹಿತಕ್ಕಾಗಿ ನಮ್ಮ ಭಾಷೆಯ ಉಳಿವಿಗಾಗಿ ಸಮಷ್ಟಿ ದೃಷ್ಟಿಯನ್ನು ಬೆಳಸಿಕೊಳ್ಳಬೇಕೆಂದು ಕರೆ ನೀಡಿದರು.

ಇದಕ್ಕೂ ಮುನ್ನ ‘ಹತ್ತಿತೋ ಹತ್ತಿತೋ ಕನ್ನಡದ ದೀಪ’ ಎಂಬ ವೃಂದಗಾನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೃಷ್ಣ ಅವರು, ಜ್ಯೋತಿ ಬೆಳಗಿಸಿ 69ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿದ್ಧಗಂಗಾ ಮಹಾ ಸಂಸ್ಥಾನದ ಶ್ರೀಶಿವಕುಮಾರ ಸ್ವಾಮಿಜೀ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ಬಾಗಲಕೋಟೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಶಾಂತಾದೇವಿ ಮಾಳವಾಡ, ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರಾಧ್ಯಕ್ಷ ಹರಿಕೃಷ್ಣ ಪುನರೂರು, ಸಮ್ಮೇಳನಾಧ್ಯಕ್ಷ ಯು.ಆರ್‌. ಅನಂತಮೂರ್ತಿ, ಸಚಿವ ಟಿ.ಬಿ. ಜಯಚಂದ್ರ ಮೊದಲಾದವರು ಹಾಜರಿದ್ದರು.

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+