ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರಿನುದ್ದಕ್ಕೂ ಮೆರವಣಿಗೆ ಬೇಡ, ಸ್ವಲ್ಪ ದೂರ ಸಾಕು- ಅನಂತಮೂರ್ತಿ

By Staff
|
Google Oneindia Kannada News

ತುಮಕೂರು : ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆ ಹೋಗಲು ಒಲ್ಲೆ ಎಂದ ಸಮ್ಮೇಳನಾಧ್ಯಕ್ಷ ಯು.ಆರ್‌.ಅನಂತಮೂರ್ತಿ ಅವರ ಮನವೊಲಿಸುವಲ್ಲಿ ವ್ಯವಸ್ಥಾಪಕರು ಯಶಸ್ವಿಯಾಗಿದ್ದಾರೆ. ಆದರೆ ನಗರಾದ್ಯಂತ ಮೆರವಣಿಗೆ ಬೇಡ, ಕೆಲವೇ ದೂರ ಸಾಕು ಎಂಬ ಷರತ್ತನ್ನು ಅನಂತಮೂರ್ತಿ ಒಡ್ಡಿದ್ದಾರೆ.

ಸಮ್ಮೇಳನ ಎಲ್ಲಿ ನಡೆಯಬೇಕು ಎಂಬ ವಿಷಯದಿಂದ ಹಿಡಿದು ಅಧ್ಯಕ್ಷರ ಆಯ್ಕೆವರೆಗೆ ವಾದ- ವಿವಾದಗಳ ಹಾದಿಯಲ್ಲೇ ಬಂದ ಸಮ್ಮೇಳನದ ಅಂತಿಮ ಸಿದ್ಧತೆಗಳಿಗೆ ಹೊಸ ವೇಗ ದಕ್ಕಿದೆ. ಆದರೆ ನಿಧಿಯನ್ನು ರದ್ದು ಮಾಡಿದ ಪರಿಣಾಮ, 69ನೇ ಸಾಹಿತ್ಯ ಸಮ್ಮೇಳನದ ಸ್ಮರಣೆಗೆ 69 ಕೃತಿಗಳ ಪ್ರಕಟಣೆ ಈ ಬಾರಿ ಆಗುತ್ತಿಲ್ಲ.

ತುಮಕೂರಿನಲ್ಲಿ ಸಮ್ಮೇಳನದ ಸಿದ್ಧತೆಗಳಲ್ಲಿ ಎದ್ದು ಕಾಣುತ್ತಿರುವುದು ಅಡುಗೆ. ಕಳೆದ ಭಾನುವಾರ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಸ್ಟೋವ್‌ ಹೊತ್ತಿಸಿ ಹೋದಾಗಿನಿಂದ ಬಿಡುವೇ ಇಲ್ಲದಂತೆ ಅಡುಗೆ ಕೆಲಸಗಳು ನಡೆಯುತ್ತಿವೆ. ಇನ್ನು ಮುಂದಿನ ಭಾನುವಾರವೇ (ಫೆ. 16) ಸ್ಟೋವ್‌ಗಳನ್ನು ಆರಿಸುವುದು ! 150 ಮುಖ್ಯ ಬಾಣಸಿಗರು ಖಾದ್ಯ ತಯಾರಿಯಲ್ಲಿ ತೊಡಗಿದ್ದಾರೆ. ಸುಮಾರು 500 ಮಂದಿ ಇವರ ಉಸ್ತುವಾರಿಯಲ್ಲಿ ಹಗಲು- ರಾತ್ರಿ ಸ್ಟೋವ್‌ ಮುಂದೆ ಬೇಯುತ್ತಿದ್ದಾರೆ ! ಊಟಕ್ಕಾಗೇ ವಿನಿಯೋಗಿಸಿರುವ ಹಣ 50 ಲಕ್ಷ ರುಪಾಯಿ.

ಅಂದಹಾಗೆ, ಸಮ್ಮೇಳನಕ್ಕಾಗಿ ಸಿದ್ಧವಾಗಿರುವ, ಆಗುತ್ತಿರುವ ಸಿಹಿ ತಿನಿಸುಗಳು ಇವು- 85 ಸಾವಿರ ಬಾದುಶಾಗಳು, 45 ಸಾವಿರ ಮೈಸೂರ್‌ಪಾಕ್‌ಗಳು, 35 ಸಾವಿರ ಲಾಡುಗಳು, 30 ಸಾವಿರ ಹೋಳಿಗೆಗಳು. ಜೊತೆಗೆ ಬೂಂದಿ, ಡ್ರೆೃ ಜಾಮೂನುಗಳೂ ಉಂಟು. 4 ಲಕ್ಷ ಅಡಿಕೆ ಪಟ್ಟೆಗಳು ಊಟ ಬಡಿಸಿಕೊಳ್ಳಲು ಸಿದ್ಧವಾಗಿವೆ.

ಅನ್ನದಾತ ಸುಖೀಭವ : ಸಮ್ಮೇಳನಕ್ಕಾಗಿ ರೈಸ್‌ ಮಿಲ್ಲಿನವರು 200 ಕಿಲೋ ಸೋನಾ ಮಸ್ಸೂರಿ ಅಕ್ಕಿ ಕೊಟ್ಟಿದ್ದಾರೆ. ಕೆಎಂಎಫ್‌ನವರು 28 ಸಾವಿರ ಲೀಟರ್‌ ಹಾಲು ಕೊಟ್ಟಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಚಿವ ಸಗೀರ್‌ ಅಹ್ಮದ್‌ 400 ಕಿಲೋ ಕಾಫಿ ಪುಡಿಯನ್ನು ಕೊಡಿಸಿದ್ದಾರೆ.

ಊಟ ಬಡಿಸಲು 59 ಕಡೆ ವ್ಯವಸ್ಥೆ ಮಾಡಲಾಗಿದೆ. ಖಾದ್ಯ ತಯಾರಿಗೆ 15 ಸಾವಿರ ತೆಂಗಿನಕಾಯಿ, 300 ಕಿಲೋ ತುಪ್ಪ, 90 ಮೂಟೆ ಸಕ್ಕರೆ ಬಳಸಲಾಗಿದೆ. ಸುಮಾರು ಮೂರೂವರೆ ಲಕ್ಷ ರುಪಾಯಿ ತರಕಾರಿಗೇ ಖರ್ಚಾಗಿದೆ.

ನೆನಪಿನ ಸಂಚಿಕೆಗಳು : ಜಯಮಂಗಲಿ (36 ಪುಟಗಳ ಚಿತ್ರಗಳೂ ಸೇರಿ 460 ಪುಟಗಳು) ಮತ್ತು ಕಲ್ಪಸಿರಿ (550 ಪುಟಗಳು) ಎಂಬ ಸ್ಮರಣ ಕೃತಿಗಳು ಸಮ್ಮೇಳನದಲ್ಲಿ ಬಿಡುಗಡೆಯಾಗಲಿವೆ. ಇವುಗಳ ಮುದ್ರಣ ಕಾರ್ಯ ಭರದಿಂದ ಸಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X