950 ಕೋಟಿ ರುಪಾಯಿ ತಿಂದರೂ ಲಾಲೂ, ಕರೆಯಾಲ್ಲ ಹಾಲು
ಪರೀಕ್ಷೆಯಲ್ಲಿ ಫೇಲಾದೆನೆಂಬ ಚಿಂತೆ ಬಿಟ್ಟು
ಗೆಳೆಯಾ ಸಪ್ಲಿಮೆಂಟರಿ ಪರೀಕ್ಷೆ ಕಟ್ಟು
ನಾವು ಭಾರತೀಯರು,
ಹುಟ್ಟು, ಮರುಹುಟ್ಟುಗಳಲ್ಲಿ
ನಂಬಿಕೆಯಿಟ್ಟವರು.
- ಭಾರತೀಯರ ಮನೋಭಾವ- ನಂಬಿಕೆಗಳು ಹಾಗೂ ವಿದ್ಯಾರ್ಥಿಯ ದಡ್ಡತನವನ್ನು ಚುಟುಕು ಕವಿ ಮಹೇಶ್ ಹೊನ್ನುಡಿಕೆ ಏಕಕಾಲದಲ್ಲಿ ಗೇಲಿ ಮಾಡಿದ್ದು ಹೀಗೆ. ಅವರು ತುಮಕೂರಿನವರು ; ಚಪ್ಪಾಳೆ ಜೋರಾಗಿತ್ತು .
ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತೀನಂಶ್ರೀ ಮಂಟಪದಲ್ಲಿ ಶನಿವಾರ ಸಂಜೆ ಜರುಗಿದ ಹನಿಗವನ ಗೋಷ್ಠಿಯಲ್ಲಿ ಇಂಥದ್ದೇ ಗೇಲಿ- ನಗೆಚಾಟಿಕೆ. ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ಹಾಡುವ ಮೂಲಕ ಜನರ ಚಪ್ಪಾಳೆಗೆ ಕೆಲವು ಕವಿಗಳು ಯತ್ನಿಸಿದರೆ, ಕೆಲವರು ಪತ್ನಿಯನ್ನು- ಮನದನ್ನೆಯನ್ನು ಕವಿತೆಯ ಮೂಲಕ ವೇದಿಕೆಗೆ ಎಳೆತಂದು ಕೇಳುಗರ ಅನುಕಂಪಕ್ಕೆ ಪಾತ್ರರಾದರು.
ರಾಜಕೀಯ ಧುರೀಣರು ಕೂಡ ಹನಿಗವನ ಗೋಷ್ಠಿಗೆ ಕವಿಗಳಿಂದ ಬಂಧಿತರಾಗಿ ಬಂದರು. ಹಲೋ ಮಿಸ್ಟರ್ ಲಾಲೂ, 950 ಕೋಟಿ ರೂ. ತಿಂದರೂ, ನನಗೆ ಗೊತ್ತು , ನೀನು ಕರೆಯಾಲ್ಲ ಹಾಲು ಎಂದವರು ಆನೇಕಲ್ ಕೃಷ್ಟಮೂರ್ತಿ ಕಾಟಿ. ಗವಿಸಿದ್ಧಯ್ಯ ಮಂತ್ರಿಗಳ ಸಾಧನೆಯನ್ನು ಒರೆಹಚ್ಚಿದ್ದು - ನೋಡಿರಿ ನಮ್ಮ ಸಾಧನೆ, ನಾವು ಕುಳಿತಿಲ್ಲ ಸುಮ್ಮನೆ, ಊರೂರಿಗೆ ಹಾಕಿಸಿದ್ದೇವೆ ಬೋರು, ಕೊಟ್ಟಿದ್ದೇವೆ ಕೇರಿಕೇರಿಗೆ ಬಾರು. ಜರಗನಹಳ್ಳಿ ಶಿವಶಂಕರ್ ಭ್ರಷ್ಟಾಚಾರದ ಬಗೆಯನ್ನು ಹನಿಯಾಗಿಸಿದ್ದು ಹೀಗೆ- ಲಂಚ ಪಡೆದೆ, ಶಿಕ್ಷೆಗೆ ಗುರಿಪಡಿಸಿದರು. ಈಗ ಕೊಟ್ಟೆ , ಬಿಟ್ಟು ಬಿಟ್ಟರು.
ಪ್ರಾಸದ ಹಂಗ ಬಿಟ್ಟು ಹನಿಗವನದ ಮೂಲಕ ವಿಷಾದ ದನಿಯನ್ನು ಹೊಮ್ಮಿಸಿದ್ದು ಕೂಡ್ಲೂರು ವೆಂಕಟಪ್ಪ : ಹಾದಿ ಪಕ್ಕದಲ್ಲಿ ಕುಳಿತು ಪಾದರಕ್ಷೆಗಳಿಗೆ ಬಣ್ಣ ಬಳಿಯುವವನು, ನನ್ನ ಮನದ ಭಾವನೆಗಳಿಗೆ ಬಣ್ಣ ಬಳಿಯಲಾರದಷ್ಟು ಅಸಹಾಯಕ- ಎಂದು ವೆಂಕಟಪ್ಪ ಕೇಳುಗರ ಮನಕ್ಕೆ ಲಗ್ಗೆ ಹಾಕಿದರು.
ಗೋಷ್ಠಿಯನ್ನು ಆರಂಭಿಸಿದ ಚುಟುಕು ಬ್ರಹ್ಮ ಎಚ್.ದುಂಡಿರಾಜ್ ಯಥಾ ಪ್ರಕಾರ ಚುರುಕು ಪ್ರಾಸದ ಮೂಲಕ ಅಭಿಮಾನಿಗಳನ್ನು ನಗಿಸಿದರು. ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕಗಳನ್ನು ಕೊಂಡು ಓದಿರಿ ಎನ್ನುವುದು ಅವರು ಬಿಡುಗಡೆ ಮಾಡಿದ ಸ್ಲೋಗನ್ನು . ಕವಿ ಪುಂಗವ ಎಂಬ ಗುಂಗಿನಲ್ಲಿ , ಪ್ರೇಮ ಕಾವ್ಯದ ಪುಂಗಿ ಊದಿದೆ, ಪರಿಣಾಮವಾಗಿ ನನ್ನ ಕೆನ್ನೆ ಸ್ವಲ್ಪ ಊದಿದೆ ಎಂದು ದುಂಡಿರಾಜ್ ಊದದ ತಮ್ಮ ಕೆನ್ನೆಯನ್ನು ತಡವಿಕೊಂಡರು.
ಹನಿಗವನ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಿ.ಪಿ.ಕೃಷ್ಣಕುಮಾರ್ ಚುಟುಕು, ಸಾಹಿತ್ಯದ ಒಂದು ಪ್ರಕಾರ, ಅದರ ಕುರಿತು ಮೂಗು ಮುರಿಯಬೇಡಿರಿ ಎಂದು ವಿಮರ್ಶಕರಲ್ಲಿ ಮನವಿ ಮಾಡಿಕೊಂಡರು.
ಮಧ್ಯಾಹ್ನ ಜಾಗತೀಕರಣದ ಭೋರ್ಗರೆತದಲ್ಲಿ ಮಂಕಾಗಿದ್ದ ಸಮ್ಮೇಳನದ ವೀಕ್ಷಕರಿಗೆ ಹನಿಗವನ ಗೋಷ್ಠಿ ತುಸು ಸಮಾಧಾನ- ರಂಜನೆ ತಂದಿದ್ದಂತೂ ನಿಜ. ಗೋಷ್ಠಿ ಮುಗಿದಾಗ ಸಂಜೆಗತ್ತಲು. ಊಟಕ್ಕೆ ಸಾಲು ಆರಂಭವಾಗುತ್ತಿತ್ತು .
(ಇನ್ಫೋ ಇನ್‌ಸೈಟ್) ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications