ಕನ್ನಡ ವಿರೋಧಿ ಸರ್ಕಾರದ ವಿರುದ್ಧ ಸಮ್ಮೇಳನದಲ್ಲಿ ಕಪ್ಪು ಬಾವುಟ: ಚಂಪಾ
ಬೆಂಗಳೂರು: ರಾಜ್ಯ ಸರ್ಕಾರದ ಕನ್ನಡ ವಿರೋಧ ನೀತಿಯನ್ನು ಪ್ರತಿಭಟಿಸಿ ತುಮಕೂರು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ(ಫೆ.15)ದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಸ್ವಾಭಿಮಾನಿ ಕರ್ನಾಟಕ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ನಿರ್ಧರಿಸಿದ್ದಾರೆ.
ಸರ್ಕಾರದ ಕನ್ನಡ ಧೋರಣೆಯ ಬಗೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಕಾರಣದಿಂದಾಗಿ, ಬರಗೂರು ಅವರು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಚಂಪಾ ಆಗ್ರಹ ಪಡಿಸಿದ್ದಾರೆ.
ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡುವುದಕ್ಕೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿರುವ ಚಂಪಾ, 1 ರಿಂದ 7 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬ ಪ್ರಾಧಿಕಾರದ ಶಿಫಾರಸ್ಸನ್ನು ಬರುವ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications