ನಿಮ್ಮಂಥವರು ಹೆಚ್ಚಲಿ, ಹಬ್ಬಲಿ ಕನ್ನಡದ ರಸಬಳ್ಳಿ
ಬೆಂಗಳೂರು : ಕನ್ನಡತಿಯದು ರತ್ನಗರ್ಭ. ಅವಳು ಅದ್ಭುತ ಪ್ರತಿಭೆಗಳ ತವರು. ಅಲ್ಲಿನ ಪ್ರತಿಭೆಗಳನ್ನು ಗುರ್ತಿಸಬೇಕು, ಪ್ರೋತ್ಸಾಹಿಸಬೇಕು. ಹಿರಿಯ ಪ್ರತಿಭೆಗಳಿಂದ ಯುವಜನತೆ ಸ್ಫೂರ್ತಿಹೊಂದಿ ಯಶಸ್ಸನ್ನು ಪಡೆಯಬೇಕು.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಜೋಶ್‌ನಲ್ಲಿದ್ದರು. ಮೊನ್ನೆಯ ಬಜೆಟ್‌ನಲ್ಲಿ ಪುಸ್ತಕಗಳ ಮೇಲೆ ಶೇ.4 ರಷ್ಟು ಸುಂಕ ಹೇರುವ ಮೂಲಕ ಸಾಹಿತಿ, ಬುದ್ಧಿಜೀವಿಗಳ ಆಕ್ರೋಶಕ್ಕೆ ತುತ್ತಾಗಿದ್ದ , ಕೆಟ್ಟ ಸಂಸ್ಕೃತಿಯ ಹರಿಕಾರನೆಂದು ಕರೆಸಿಕೊಂಡಿದ್ದ ಅವರು, ಗುರುವಾರ ಕನ್ನಡಾಂಬೆ, ರತ್ನಗರ್ಭ ಮುಂತಾಗಿ ಮಾತನಾಡುತ್ತಿದ್ದರು. ಸಂದರ್ಭ - ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ 2000 ಸಾಲಿನ ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.
ಭದ್ರಗಿರಿ ಅಚ್ಯುತದಾಸರಿಗೆ ಕನಕ- ಪುರಂದರ, ಎಂ.ಎಸ್. ಚಂದ್ರಶೇಖರ್ ಅವರಿಗೆ ವರ್ಣಶಿಲ್ಪಿ ವೆಂಕಟಪ್ಪ , ಟಕ್ಕಳಿಕೆ ವಿಠ್ಠಲರಾವ್‌ರಿಗೆ ಜಾನಪದ ಶ್ರೀ, ಎಂ. ಪರಮೇಶ್ವರಾಚಾರ್ಯ ಅವರಿಗೆ ಜಕಣಾಚಾರಿ ಹಾಗೂ ಎಚ್.ಕೆ. ನಾರಾಯಣ ಅವರಿಗೆ ಶಿಶುನಾಳ ಷರೀಫ್ ಪ್ರಶಸ್ತಿಯನ್ನು ಮುಖ್ಯಮಂತ್ರಿ ಕೃಷ್ಣ ಪ್ರದಾನ ಮಾಡಿದರು. ಈ ಹಿರಿಯ ಚೇತನಗಳ ಪ್ರತಿಭೆ ಯುವಜನತೆಗೆ ಸ್ಫೂರ್ತಿಯಾಗಲಿ. ಅಂಥಾ ಪ್ರತಿಭೆಗಳು ಹೆಚ್ಚಲಿ ಎಂದು ಹಾರೈಸಿದರು.
ನಮ್ಮ ಸೇವೆ ಮುಂದುವರಿಯುತ್ತದೆ ಎನ್ನುವುದು ಸನ್ಮಾನಿತರ ಪರವಾಗಿ ಮಾತನಾಡಿದ ಭದ್ರಗಿರಿ ಅಚ್ಯುತದಾಸರು ಸಭಿಕರಿಗೆ ನೀಡಿದ ವಾಗ್ದಾನ. ನಿವೃತ್ತರು ಸಮಾಜಸೇವೆ ಸಲ್ಲಿಸಬೇಕು ಎಂಬುದವರ ಹಂಬಲ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications