ನಿರಂಜನನನ್ನು ಕೊಂದವರು ಯಾರೆಂದರೆ...
ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯ ಮೇಲೆ ಆ ಇಳಿಸಂಜೆಯಲ್ಲಿ ಅಳಿದುಳಿದ ಬಿಸಿಲಿಗೆ ಮೈಯಾಡ್ಡಿಕೊಂಡು ನಡೆದುಕೊಂಡು ಬರುತ್ತಿರುವ ವೀಣಾ ಮತ್ತು ನಾಗೇಶ ಮಯ್ಯರನ್ನು ಕಂಡಾಗ ರಘುವಿಗೆ ಖುಷಿಯಾಯಿತು. ಊರಿನ ಯಾವ ಉಸಾಬರಿಯನ್ನೂ ಮೆತ್ತಿಸಿಕೊಳ್ಳದವರಂತೆ, ತಮ್ಮಿಬ್ಬರ ಜಗತ್ತೇ ಬೇರೆ ಎಂಬಂತೆ ಅವರು ಹೆಜ್ಜೆ ಹಾಕುತ್ತಿದ್ದರು. ಡ್ರೆೃವರನ ಮುಖಕ್ಕೆ ಕಾದ ನೀರು ಸಿಡಿದಿದ್ದರ ಬಗ್ಗೆಯೂ ಅವರಿಗೆ ಯಾವ ಕಾಳಜಿಯೂ ಇದ್ದಂತಿರಲಿಲ್ಲ.
ನಾಗೇಶ ಮಯ್ಯ ಎತ್ತರಕ್ಕಿದ್ದ. ನೋಡುವುದಕ್ಕೆ ತೀರಾ ಸೊರಗಿದಂತೆಯೂ ಇರಲಿಲ್ಲ, ಮೈತುಂಬಿಕೊಂಡೂ ಇರಲಿಲ್ಲ. ಅವನೊಳಗೆ ಮೋಹನ ಹೇಳಿದಂಥ ಆವೇಶವೊಂದು ಇರುವುದಂತೂ ಸಾಧ್ಯ ಎನ್ನಿಸಿತು ರಘುವಿಗೆ. ಇಬ್ಬರೂ ರಘು ಮತ್ತು ಮೋಹನ ನಿಂತಿರುವುದರ ಅರಿವೇ ತಮಗಾಗಿಲ್ಲ ಎಂಬಂತೆ ಅವರನ್ನು ದಾಟಿಕೊಂಡು ಮುಂದೆ ಹೋದರು. ಅವರು ದಾಟಿಹೋದ ನಂತರ ಅದು ಅರಿವಿಗೆ ಬಂತೆಂಬ ವಿಸ್ಮೃತಿಯಲ್ಲಿ ನಿಂತಿದ್ದ ರಘುನಂದನ ಅಚಾನಕ ಎಂಬಂತೆ 'ನಾಗೇಶ್" ಎಂದು ಕರೆದ.
ನಾಗೇಶ ಮತ್ತು ವೀಣಾ ಇಬ್ಬರೂ ತಿರುಗಿ ನೋಡಿದರು. ಅತ್ತಕಡೆಯಿಂದ ನಡೆದುಕೊಂಡು ಬಂದಾಗ ಸ್ಪಷ್ಟವಾಗಿ ಕಾಣದ ವೀಣಾಳ ಮುಖದ ಕಲೆ ತಿರುಗಿ ನೋಡಿದಾಗ ಕಾಣಿಸಿತು. ಮೋಹನ ಹೇಳಿದ ಹಾಗೆ ಅದೇನೂ ಅವಳ ಚೆಲುವನ್ನು ಆಹುತಿ ತೆಗೆದುಕೊಂಡಿರಲಿಲ್ಲ. ಅವಳನ್ನು ನೋಡುತ್ತಿದ್ದ ಹಾಗೆ ಅನಗತ್ಯವಾಗಿ ರಘುವಿನ ಮೈ ಜುಮ್ಮೆಂದಿತು.
'ನನ್ನನ್ನಾ ಕರೆದಿದ್ದು?" ಎನ್ನುತ್ತಾ ನಾಗೇಶ ಒಂದು ಹೆಜ್ಜೆ ಮುಂದಿಟ್ಟ. 'ಹೌದು" ಎನ್ನುತ್ತಾ ರಘು ಹತ್ತಿರ ಹೋಗಿ ತನ್ನನ್ನು ಪರಿಚಯಿಸಿಕೊಂಡ.
'ನಾನು ರಘು, ರಘುನಂದನ. ಇದೇ ಊರಿನವನು. ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಹೋದೆ"
ನಾಗೇಶ ನಕ್ಕ. ನಗುತ್ತಲೇ ಕೇಳಿದ 'ನಿರಂಜನನ ಕೊಲೆಯ ತನಿಖೆ ನಡೆಸಿ ಅಂತ ಪೊಲೀಸರಿಗೆ ಬೆನ್ನುಹತ್ತಿದ ರಘು ತಾನೆ?" ಹೌದೆಂಬಂತೆ ರಘುವೂ ನಕ್ಕ.
'ಕೊಲೆಗಾರ ಯಾರೂಂತ ಆಯ್ತು?" ನಾಗೇಶ ಯಾವುದೇ ಅನಗತ್ಯ ಕುತೂಹಲವಾಗಲೀ ವ್ಯಂಗ್ಯವಾಗಲೀ ಇಲ್ಲದ ದನಿಯಲ್ಲಿ ಕೇಳುತ್ತಾ 'ಇವಳು ವೀಣಾ. ನಿನ್ನ ಮಿತ್ರರ ಪ್ರಕಾರ ಮೊದಲ ಆರೋಪಿ. ನಿರಂಜನನ ಕೊಲೆಗೆ ನೇರವಾಗಿ ಕಾರಣವಾದವಳು" ಎಂದು ರಘುವನ್ನು ಮತ್ತಷ್ಟು ಮುಜುಗರಕ್ಕೆ ಸಿಕ್ಕಿಸುವಂತೆ ಪರಿಚಯವನ್ನೂ ಮಾಡಿಸಿಕೊಟ್ಟ. ವೀಣಾ 'ನಮಸ್ಕಾರ" ಎಂದಳು.
ರಘುವಿಗೆ ಹೇಗೆ ಮಾತು ಮುಂದುವರಿಸಬೇಕು ಅನ್ನೋದು ಗೊತ್ತಾಗಲಿಲ್ಲ. ಏನ್ಮಾಡ್ತಿದ್ದೀರಿ ಅನ್ನುವ ಅರ್ಥಹೀನ ಪ್ರಶ್ನೆ ಹಾಕಿದ. ಅಂಥದ್ದನ್ನೆಲ್ಲ ತಾನು ಸ್ವೀಕರಿಸುವ ಪೈಕಿಯಲ್ಲ ಎಂಬಂತೆ ರಘುವನ್ನೇ ನೋಡುತ್ತಾ ನಾಗೇಶ ಮಯ್ಯ 'ಬಿಡುವಾಗಿದ್ದಾಗ ಮನೆಗೆ ಬನ್ನಿ. ನೀವು ನಮ್ಮ ಮನೆಗೆ ಬರ್ತೀರಿ ಅಂತ ನಿರೀಕ್ಷಿಸಿದ್ದೆ. ಕನಿಷ್ಠ ವೀಣಾಳನ್ನಾದರೂ ನೋಡುವುದಕ್ಕೆ ಬರಬೇಕಾಗಿತ್ತು. ನಿರಂಜನನನ್ನು ವೀಣಾ ತುಂಬ ಪ್ರೀತಿಸಿದ್ದಳಂತೆ, ನಿಮಗೆ ಗೊತ್ತಿರಬೇಕಲ್ಲ" ಎಂದು ರಘುವನ್ನೇ ಪ್ರಶ್ನಿಸಿದ. ತಾನು ಪೆದ್ದುಪೆದ್ದಾಗಿ ನಕ್ಕು ಪಾಡುಪಡುತ್ತಿರುವುದನ್ನು ನೋಡಿ ಮೋಹನ ಒಳಗೊಳಗೇ ಖುಷಿಪಡುತ್ತಿದ್ದಾನೆ ಅಂತನ್ನಿಸಿ ಮೋಹನನ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು ರಘುವಿಗೆ.
'ಹೋಗಲಿ. ನಿರಂಜನನ ಕೊಲೆಗಾರ ಯಾರೂಂತ ಗೊತ್ತಾ?" ನಾಗೇಶ ಮಯ್ಯ ತನಗೆಲ್ಲಾ ಗೊತ್ತಿದೆ ಎಂಬಂತೆ ಕೇಳಿದ. ರಘು ಕಣ್ಣು ಕಿರಿದುಮಾಡಿ ಅತೀವ ಕುತೂಹಲದಿಂದ 'ಯಾರು" ಎಂದ.
ನಿರಂಜನ ತೋರುಬೆರಳೆತ್ತಿ ಆಕಾಶ ತೋರಿಸುತ್ತಾ 'ಅವನು..... ದಿ ಗ್ರೇಟ್ ಕಿಲ್ಲರ್" ಎಂದು ನಕ್ಕ. ವೀಣಾಳೂ ನಕ್ಕಳು.
ಅವರನ್ನು ಮಾತಾಡಿಸಿ ರಘು ಪಾಡುಪಟ್ಟದ್ದನ್ನು ಮೋಹನ ಗಾಂಪಾ ಗೆಳೆಯರಿಗೆಲ್ಲ ಹೇಳಿ ಮನರಂಜನೆ ಒದಗಿಸಿದ. ನಾಗೇಶ ಮಯ್ಯನ ಕೈಯಲ್ಲಿ ರಘು ತಿಥಿ ಮಾಡಿಸಿಕೊಂಡ ಸುದ್ದಿ ಗಾಂಧೀ ಪಾರ್ಕಿನ ತುಂಬ ಹಬ್ಬಿತು. ವೀಣಾಳ ಜೊತೆ ಮಾತಾಡಿದ್ದೂ ಸುದ್ದಿಯಾಯಿತು. ನಿರಂಜನ ಸತ್ತ ನಂತರ ವೀಣಾ ಅದೇ ಮೊದಲು ಉಪ್ಪಿನಂಗಡಿಯಲ್ಲಿ ಕಾಣಿಸಿಕೊಂಡಿದ್ದಳು.
ರಘುವನ್ನು ಬೇರೆಯೇ ಪ್ರಶ್ನೆ ಕಾಡುತ್ತಿತ್ತು. ನಿರಂಜನನ ಕೊಲೆಯ ಬಗ್ಗೆ ಇಡೀ ಊರು ಯಾಕೆ ಮೌನವಾಗಿದೆ? ಮೋಹನ ಮುಂತಾದ ಏಳೆಂಟು ಮಂದಿ ಹುಡುಗರನ್ನು ಬಿಟ್ಟರೆ ಬೇರೆಯವರನ್ನು ಆ ಕೊಲೆ ಯಾಕೆ ಕಂಗೆಡಿಸಲಿಲ್ಲ? ಹೊಳ್ಳ ಹೇಳಿದ ಹಾಗೆ ನಿರಂಜನನ ಮನೆಯವರೂ ಸೈತ ಯಾಕೆ ದೂರು ಕೊಡಲಿಕ್ಕೆ ಮುಂದಾಗಲಿಲ್ಲ. ಅಂದರೆ ನಿರಂಜನನ ಸಾವನ್ನು ಅವರೆಲ್ಲ ಎದುರು ನೋಡುತ್ತಿದ್ದರೇ? ಅವನು ಕೊಲೆಯಾಗುವುದು ಎಲ್ಲರಿಗೂ ಬೇಕಾಗಿತ್ತೇ? ಅಷ್ಟರ ಮಟ್ಟಿಗೆ ಅವನು ಕುಖ್ಯಾತನಾಗಿದ್ದನೇ?
ಈ ಯೋಚನೆಯ ನಡುವೆಯೇ ರಘು ತನ್ನ ಹೊಸ ಚಿತ್ರದ ಸ್ಕಿೃಪ್ಟು ಮುಗಿಸಿದ. ಅದನ್ನು ಸಿನಿಮಾ ಮಾಡುತ್ತೇನೆ ಎಂದಿದ್ದ ನಿರ್ಮಾಪಕರು ಮಹಡಿಯಿಂದ ಬಿದ್ದು ತೀರಿಕೊಂಡ ಸುದ್ದಿ ಪತ್ರಿಕೆಯಲ್ಲಿ ಬಂದು ರಘುವಿಗೂ ಗೊತ್ತಾಯಿತು. ಹೀಗಾಗಿ ಹೊಸ ಕತೆಗೆ ಹೊಸ ನಿರ್ಮಾಪಕರನ್ನು ಹುಡುಕಬೇಕು ಅನ್ನುವ ಯೋಚನೆಯಲ್ಲಿರುವಾಗಲೇ ಅವನ ಮೊದಲ ಚಿತ್ರ ಸಾಕಷ್ಟು ಯಶಸ್ವಿಯಾಗಿ ಮಾರಾಟವಾದ ವರದಿಗಳು ಬಂದವು. ನಿರ್ಮಾಪಕರ ಹುಡುಕಾಟ ತುಂಬ ಸುಲಭವಾಗಿಬಿಟ್ಟಿತು.
ಬೆಂಗಳೂರಿಗೆ ಹೋದರೆ ಮತ್ತೆ ನಾಲ್ಕೈದು ತಿಂಗಳಾದರೂ ವಾಪಸ್ಸು ಬರಲಾಗುವುದಿಲ್ಲ ಅನ್ನುವುದು ರಘುವಿಗೆ ಖಚಿತವಿತ್ತು. ಅದಕ್ಕೂ ಮೊದಲು ಆನಂದನನ್ನು ಕಂಡು ಅವನ ಜೊತೆ ನಿರಂಜನನ ಸಾವನ್ನು ಊರು ನಿರ್ವಿಕಾರವಾಗಿ ಸ್ವೀಕರಿಸಿದ ಬಗ್ಗೆ ಮಾತನಾಡಬೇಕು ಅಂದುಕೊಂಡ.
ನಿರಂಜನನ ಕೊಲೆಯನ್ನು ಡೀಲ್ ಮಾಡಿದ ಪರಿಯಿಂದಾಗಿ ಆನಂದ ಸಾಕಷ್ಟು ಪ್ರಸಿದ್ಧನಾಗಿದ್ದ. ಅವನ ಹತ್ತಿರ ವಾರಕ್ಕೊಂದು ಕೇಸುಗಳು ಬರುತ್ತಿದ್ದವು. ಅಘಟಿತ ಪ್ರೇಮದಿಂದ ಹಿಡಿದು ಆಸ್ತಿ ಜಗಳದ ತನಕ ನೂರೆಂಟು ವ್ಯಾಜ್ಯಗಳಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದವರೆಲ್ಲ ಆನಂದನನ್ನು ಗುರಾಣಿಯಾಗಿಟ್ಟುಕೊಳ್ಳುತ್ತಿದ್ದರು. ಹೀಗಾಗಿ ಆನಂದನನ್ನು ನೋಡುವುದಕ್ಕೆಂದು ಗುರುವಾಯನಕೆರೆಗೆ ಹೋದ ರಘುನಂದನ ಅವನಿಗೋಸ್ಕರ ಜ್ಯೋತಿ ಕ್ಯಾಂಟೀನಿನಲ್ಲಿ ಮೂರು ಗಂಟೆ ಕಾಯಬೇಕಾಯಿತು.
ರಘುವಿಗೆ ಆನಂದ ಬರುವ ಹೊತ್ತಿಗೆ ಹೆಚ್ಚಿಗೆ ಮಾತಾಡುವ ಮೂಡಿರಲಿಲ್ಲ. ಬೆಂಗಳೂರಿಗೆ ಹೋಗುತ್ತಿದ್ದೇನೆ, ಹೇಳಿ ಹೋಗೋಣ ಅಂತ ಬಂದೆ ಎಂದಷ್ಟೇ ಹೇಳಿದ. ಅದಕ್ಕಿಂತ ಜಾಸ್ತಿ ಕೇಳುವ ವ್ಯವಧಾನ ಆನಂದನಿಗೂ ಇರಲಿಲ್ಲ. ರಘುವಿನ ವಿಸಿಟಿಂಗು ಕಾರ್ಡನ್ನೂ ಮೊಬೈಲ್ ನಂಬರನ್ನೂ ತೆಗೆದುಕೊಂಡು ಬೆಂಗಳೂರಿಗೆ ಬಂದು ಸಂಪರ್ಕಿಸುವುದಾಗಿ ಹೇಳಿ ಆನಂದ ತನ್ನ ಆಫೀಸಿನೊಳಗೆ ಸೇರಿಕೊಂಡ. ಆಫೀಸಿನ ಹೊರಗೆ Anand, Press Reporter, Environmentalist ಎಂಬ ಬೋರ್ಡು ರಾರಾಜಿಸುತ್ತಿತ್ತು. ಒಂದು ಕೊಲೆ ಆನಂದನನ್ನು ಈ ಮಟ್ಟಕ್ಕೆ ತಂದ ಪವಾಡವನ್ನು ನೆನೆಯುತ್ತಾ ರಘು ಗುರುವಾಯನಕೆರೆ ಬಸ್‌ಸ್ಟಾಂಡಿನಲ್ಲಿ ನಿಂತುಕೊಂಡ. ಆಕಾಶದಲ್ಲಿ ಮೋಡಗಳು ದಟ್ಟವಾಗುತ್ತಿದ್ದವು.












Click it and Unblock the Notifications