ಸುಡುಬಿಸಿಲಲ್ಲಿ ಕಣ್ಮನ ತಣಿಸುವ ಹಳದಿ ಚಲುವೆ ‘ಸ್ವರ್ಣಪುಷ್ಪ’ : ನೀವು ಈ ಬಗ್ಗೆ ತಿಳಿಯಲೇಬೇಕು
ಹಸಿರಿನಿಂದ ಕಂಗೊಳಿಸುತ್ತಿದ್ದ ಪ್ರಕೃತಿ ಇದೀಗ ಬಿಸಿಲ ಧಗೆಗೆ ಕೆಂಪಾಗಿದೆ. ಇದರ ನಡುವೆಯೂ ಅಲ್ಲೊಂದು, ಇಲ್ಲೊಂದು ಎನ್ನುವಂತೆ ಪುಟ್ಟ ಗಿಡ, ಹೆಮ್ಮರಗಳಲ್ಲಿ ಹೊನ್ನಿನ ಬಣ್ಣದ ಹೂ ಗೊಂಚಲುಗಳನ್ನು ತೂಗಿ ಬಿಟ್ಟು ನಮ್ಮ ಕಣ್ಣಿಗೆ ಆನಂದ ನೀಡುವ ಸ್ವರ್ಣಪುಷ್ಪ ನಿಸರ್ಗದ ಸೋಜಿಗವಾಗಿ ನಮ್ಮೆಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ.
ಮಲೆನಾಡಿನ ಕಾಡುಗಳಲ್ಲಿ, ಬಯಲು ಸೀಮೆಯ ಹೊಲಗಳ ಬದಿಯಲ್ಲಿ ಗಿಡ, ಮರಗಳ ನಡುವೆ ಚಿನ್ನದ ಬಣ್ಣದ ಹೂಗೊಂಚಲನ್ನು ನೇತು ಹಾಕಿದಂತೆ ಕಂಗೊಳಿಸುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿದ್ದು, ಪುಷ್ಪಪ್ರೇಮಿಗಳ ಮನಕ್ಕೆ ಮುದ ನೀಡುತ್ತಿದೆ. ಮಾರ್ಚ್ ನಿಂದ ಮೇ ವರೆಗೆ ಈ ಸುಂದರ ಹೂವಿನ ನೋಟ ಎಲ್ಲರಿಗೂ ಲಭ್ಯವಾಗುತ್ತದೆ. ಹಾಗಾದರೆ ನೀವೆಲ್ಲರೂ ನೋಡಿರುವ ಈ ಹೂವು ಯಾವುದು ಎಂಬ ಕುತೂಹಲ ನಿಮ್ಮನ್ನು ಕಾಡದಿರದು. ಇವತ್ತು ಕಾಡಿನಲ್ಲಿ, ಬಯಲಿನಲ್ಲಿ ಅದರ ಪಾಡಿಗೆ ಹುಟ್ಟಿ ಹೂ ಬಿಟ್ಟು ಕಂಗೊಳಿಸುವ ಈ ಸ್ವರ್ಣ ಪುಷ್ಪ ಶಿವನಿಗೂ ಪ್ರಿಯವಾಗಿದೆ.

ಈ ಹೂವನ್ನು ನಾವು ನಮ್ಮದೇ ಆದ ಹೆಸರಿನಲ್ಲಿ ಕರೆಯುತ್ತಿದ್ದು, ಕೆಲವರು ಕೊಂದೆ, ಕಕ್ಕೆ ಹೀಗೆ ಕರೆದರೆ ಆಂಗ್ಲ ಭಾಷೆಯಲ್ಲಿ ಗೋಲ್ಡನ್ ಶೋವರ್ ಟ್ರೀ, ಸಂಸ್ಕೃತದಲ್ಲಿ ಸುವರ್ಣಕ, ಅಲ್ಲದೆ, ಇಂಡಿಯನ್ ಲಬರ್ನಮ್ ಎಂಬ ಹೆಸರು ಕೂಡ ಇದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಾ ಹೋದರೆ ತಮಿಳಿನ ಪ್ರಾಚೀನ ಗ್ರಂಥ ಸಂಗಂ ಸಾಹಿತ್ಯದಲ್ಲಿ ಪ್ರಸ್ತಾಪಿಸಿದ್ದು, ತಮಿಳಿನಲ್ಲಿ ಕೊಂಡ್ರೈ ಎಂಬ ಹೆಸರಿದೆ.
ಕಕ್ಕೆ ಹೂವೆಂದೇ ಜನರಿಗೆ ಪರಿಚಿತ
ಫಬಸಿಯೆ ಕುಟುಂಬದ ಏಸಲ್ಪಿನಿಯೇ ಉಪ ಕುಟುಂಬಕ್ಕೆ ಇದು ಸೇರಿದ್ದು, ಇದರ ಸಸ್ಯಶಾಸ್ತ್ರೀಯ ಹೆಸರು ಕಾಸಿಯ ಫಿಸ್ಟುಲವಾಗಿದೆ. ನಾವೇನು ಇದರ ಬಗ್ಗೆ ಅಷ್ಟೊಂದಾಗಿ ಗಮನಹರಿಸಿದಂತೆ ಕಾಣುತ್ತಿಲ್ಲ. ಬೇಲಿ ಅಂಚಿನಲ್ಲಿ, ಕಾಡಿನಲ್ಲಿ ಬೇಸಿಗೆ ಸಮಯದಲ್ಲಿ ಹೂ ಅರಳಿ ಬಳಿಕ ಉದುರಿ ಹೋಗುತ್ತದೆ. ಆದರೆ ಇಂತಹ ಹೂವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಥೈಲ್ಯಾಂಡ್ ದೇಶವು ಇದನ್ನು ರಾಷ್ಟ್ರೀಯ ಪುಷ್ಪವನ್ನಾಗಿ ಮಾಡಿಕೊಂಡಿದ್ದರೆ, ಕೇರಳವು ರಾಜ್ಯ ಪುಷ್ಪವನ್ನಾಗಿ ಒಪ್ಪಿಕೊಂಡಿದ್ದು, ಇಲ್ಲಿ ಕೊನ್ನೆ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ.
ರಾಜ್ಯದಲ್ಲಿ ಬಹುತೇಕರು ಕಕ್ಕೆ ಎಂದೇ ಕರೆಯುವುದನ್ನು ಕಾಣಬಹುದಾಗಿದೆ. ಇದನ್ನು ನೋಡದವರು ವಿರಳವೇ. ಹೀಗಾಗಿ ಹೆಚ್ಚೇನು ಹೇಳಬೇಕಾಗಿಲ್ಲ. ವಸಂತ ಋತುವಿಗೆ ಚಿಗುರಿ ಹಸಿರ ಎಲೆಗಳೊಂದಿಗೆ ಹೂ ಕೂಡ ಚಿನ್ನದ ಬಣ್ಣದಿಂದ ಗೊಂಚಲು, ಗೊಂಚಲಾಗಿ ತೂಗಾಡುತ್ತದೆ. ಮರವು ಸುಮಾರು ಹದಿನೈದರಿಂದ ಇಪ್ಪತ್ತು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆ. ಗಿಡದಿಂದ ಆರಂಭವಾಗಿ ಮರದ ತನಕವೂ ಹೂ ಬಿಡುತ್ತಲೇ ಇರುತ್ತದೆ.

ಆಯುರ್ವೇದದಲ್ಲಿ ಮಹತ್ತರ ಸ್ಥಾನ
ಹೂವಿನ ಬಳಿಕ ನುಗ್ಗೆ ರೀತಿಯ ಕಪ್ಪಗಿನ ಕಾಯಿ ಬಿಡುತ್ತವೆ. ಇದು ಸುಮಾರು ಎರಡು ಮೀಟರ್ ನಷ್ಟು ಇರುತ್ತವೆ. ಇವು ಒಣಗಿ ಇದರಲ್ಲಿರುವ ಬೀಜಗಳು ಬಿದ್ದು ಗಿಡಗಳ ಹುಟ್ಟಿಗೆ ಕಾರಣವಾಗುತ್ತವೆ. ಇದು ಹೇಗೆಂದರೆ ಇದನ್ನು ಕೆಲವು ಕಾಡು ಪ್ರಾಣಿಗಳು ತಿನ್ನುವುದರಿಂದ ಅದರ ಮಲದ ಮೂಲ ಒಂದೆಡೆಯಿಂದ ಮತ್ತೊಂದೆಡೆಗೆ ಬೀಜ ಪ್ರಸಾರವಾಗುತ್ತದೆ. ಮರವೂ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಇದರ ಮತ್ತೊಂದು ವಿಶೇಷತೆ ಮರವನ್ನು ಕತ್ತರಿಸಿದರೆ ಅದರಿಂದ ಚಿಗುರುಗಳೊಡೆದು ಬೆಳೆಯುತ್ತವೆ.
ಕಕ್ಕೆ ಕಾಡಿನಲ್ಲಿ ಅಥವಾ ಬಯಲಿನಲ್ಲಿ ಹುಟ್ಟಿ ಅದರ ಪಾಡಿಗೆ ಬೆಳೆದರೂ ಅದು ಬಿಡುವ ಸುಂದರ ಹೂವಿಗಾಗಿ ಉದ್ಯಾನದಲ್ಲಿ, ಮನೆಯಂಗಳದಲ್ಲೂ ಸ್ಥಾನ ಪಡೆದುಕೊಂಡಿದೆ. ಇನ್ನು ಇದರ ಮರ ಹಲವು ರೀತಿಯಲ್ಲಿ ಉಪಯೋಗಕ್ಕೆ ಬಂದರೆ ಕಾಯಿ ಮತ್ತು ಹೂ ಔಷಧೀಯ ಗುಣವನ್ನು ಹೊಂದಿದ್ದು, ಆಯುರ್ವೇದದಲ್ಲಿ ಇದರ ಬಳಕೆ ಕುರಿತಂತೆ ವಿವರಿಸಲಾಗಿದೆ. ಮುಖ್ಯವಾಗಿ ಹೇಳಬೇಕೆಂದರೆ ಹೂ ಮತ್ತು ಕಾಯಿಯನ್ನು ವಾತ ಸಂಬಂಧಿತ ಔಷಧಗಳಲ್ಲಿ ಉಪಯೋಗಿಸುತ್ತಾರೆ.
ಹಲವು ರೋಗಗಳಿಗೆ ಇದು ಔಷಧಿ
ಕಕ್ಕೆ ಗಿಡದ ಎಲೆ, ತಿರುಳು ಕಾಯಿ, ಹೂವು, ಬೇರನ್ನು ತಂದು ನೆರಳಿನಲ್ಲಿ ಒಣಗಿಸಿ ಸಮತೂಕದಲ್ಲಿ ನಯವಾಗಿ ಚೂರ್ಣಿಸಿ ಅದರ ಎರಡು ಗ್ರಾಂ ಚೂರ್ಣಕ್ಕೆ ಎರಡು ಗ್ರಾಂ ನೆಲ್ಲಿಚೆಟ್ಟಿನ ಚೂರ್ಣ ಮತ್ತು ಎರಡೂವರೆ ಗ್ರಾಂ ಅರಿಶಿಣದ ಚೂರ್ಣ ಸೇರಿಸಿ ಚೂರ್ಣವನ್ನು ತಯಾರಿಸಿಕೊಂಡು ಅದರಲ್ಲಿ ಎರಡು ಗ್ರಾಂ ಚೂರ್ಣವನ್ನು ಒಂದು ಲೋಟ ಮಜ್ಜಿಗೆಗೆ ಹಾಕಿ ಕದಡಿ ಪ್ರತಿದಿನಕ್ಕೊಮ್ಮೆ ಐದರಿಂದ ಏಳು ದಿನಗಳ ಕಾಲ ಸೇವಿಸುವುದರಿಂದ ಬಹುಮೂತ್ರ ಮತ್ತು ಬಾಯಾರಿಕೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಇನ್ನು ಸದಾ ಕಾಡುವ ಕೆಮ್ಮಿಗೆ ಸುಮಾರು ಐದು ಗ್ರಾಂ ಕಕ್ಕೆ ಗಿಡದ ಅಂಟನ್ನು ತಂದು ಎರಡು ಲೋಟ ನೀರಿನಲ್ಲಿ ರಾತ್ರಿ ನೆನೆ ಹಾಕಿ ಬೆಳಿಗ್ಗೆ ಈ ಅಂಟನ್ನು ಚೆನ್ನಾಗಿ ಕಿವುಚಿ ಬಟ್ಟೆಯಲ್ಲಿ ಶೋಧಿಸಿ ಐದು ಗ್ರಾಂ ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸಿದರೆ ಒಂದೆರಡು ಸಲ ಬೇಧಿಯಾಗುವುದರೊಂದಿಗೆ ಅಜೀರ್ಣ ಹೊಟ್ಟೆಯುಬ್ಬರ ಮಲಬದ್ದತೆ ಪರಿಹಾರ ಸಿಗುತ್ತದೆ. ಗಂಟಲು ಬೇನೆ, ಗಂಟಲು ಊದಿಕೊಂಡರೆ ಹತ್ತು ಗ್ರಾಂ ಕಕ್ಕೆ ಅಂಟನ್ನು ಒಂದು ಲೋಟ ನೀರಿಗೆ ಹಾಕಿ ಕಷಾಯ ಮಾಡಿ ತಣ್ಣಗಾದ ಮೇಲೆ ಪ್ರತಿ ದಿನ ಮೂರರಿಂದ ನಾಲ್ಕು ಸಲ ಮುಕ್ಕಳಿಸಿದರೆ ಪರಿಹಾರ ಸಿಗುತ್ತದೆ.
ಮಲಬದ್ಧತೆ ಶಮನಕ್ಕೆ ಸಹಕಾರಿ
ಅರ್ಧ ಲೀಟರ್ ಹಸುವಿನ ಹಾಲಿನಲ್ಲಿ ಹತ್ತು ಗ್ರಾಂ ಕಕ್ಕೆ ಅಂಟನ್ನು ಹಾಕಿ ಚೆನ್ನಾಗಿ ಮರಳಿಸಿ, ಬಿಸಿಯಾದಾಗ ಬರುವ ಆವಿಯನ್ನು ಬಾಯಲ್ಲಿ ಸ್ವಲ್ಪ ಸೇದಿ ಗಂಟಲಿಗೆ ತಾಗಿಸುವುದು, ಅಥವಾ ಕಂಟಕಾರಿಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಜಜ್ಜಿ ರಸವನ್ನು ಗಂಟಲಿನ ಮೇಲೆ ಮಂದವಾಗಿ ಲೇಪಿಸುವ ಮೂಲಕವೂ ಗಂಟಲು ಬೇನೆ ಶಮನ ಮಾಡಬಹುದಾಗಿದೆ. ಕಕ್ಕೆ ಕಾಯಿಯನ್ನು ಚೆನ್ನಾಗಿ ಒಣಗಿಸಿ ಸುಟ್ಟು ಬೂದಿ ಮಾಡಿ ಕಾಲು ಟೀ ಚಮಚ ಈ ಬೂದಿಯೊಂದಿಗೆ ಒಂದು ಚಿಟಿಕೆ ಉಪ್ಪಿನ ಪುಡಿ ಮತ್ತು ಒಂದು ಟೀ ಚಮಚ ಜೇನು ಕಲಸಿ ನೆಕ್ಕುವುದು. ದಿವಸಕ್ಕೆ ಎರಡರಿಂದ ರಿಂದ ಮೂರು ಬಾರಿ ಮಾಡುವುದರಿಂದಲೂ ಕೆಮ್ಮಿಗೆ ಶಮನ ಸಿಗುತ್ತದೆ.
ಮಲಬದ್ಧತೆ ದೂರ ಮಾಡಲು ಐದು ಗ್ರಾಂ ಕಕ್ಕೆ ಕಾಯಿಯ ಒಳಗಡೆಯ ತಿರುಳನ್ನು ರಾತ್ರಿ ಶುದ್ಧವಾದ ಒಂದು ಬಟ್ಟಲು ನೀರಿನಲ್ಲಿ ನೆನೆಹಾಕುವುದು. ಬೆಳಗ್ಗೆ ಶೋಧಿಸಿದ ಈ ನೀರಿಗೆ ಸ್ವಲ್ಪ ಕೆಂಪು ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸುವುದರಿಂದ ಒಂದೆರಡು ಸಲ ಬೇಧಿಯಾದರೂ ಉಪಯೋಗಕ್ಕೆ ಬರುತ್ತದೆ.
ಕಕ್ಕೆ ಹೂವು ನಿಸರ್ಗದ ವರದಾನ
ಕಕ್ಕೆ ಅಂಟು ಮತ್ತು ನೆಲಿ ಚೆಟ್ಟು ಚೂರ್ಣವನ್ನು ಸಮಭಾಗ ಚೂರ್ಣಿಸಿ ಹತ್ತು ಗ್ರಾಂ ಚೂರ್ಣವನ್ನು ಕಾಲು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಅಷ್ಟಾಂಶ ಕಷಾಯ ಮಾಡಿ. ಒಂದು ಟೀ ಚಮಚ ಕಷಾಯಕ್ಕೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಪುಡಿ ಮತ್ತು ಜೇನು ಸೇರಿಸಿ ಏಳು ದಿನಗಳ ಕಾಲ ಸೇವಿಸುತ್ತಾ ಬಂದರೆ ರಕ್ತಪಿತ್ತ ನಿವಾರಣೆಯಾಗುತ್ತದೆ. ಕುಷ್ಟರೋಗಕ್ಕೆ ಕಕ್ಕೆಯ ಅಂಟು, ಆಡುಸೋಗೆ, ಅಮೃತಬಳ್ಳಿ ಸಮತೂಕ ಸೇರಿಸಿ, ಚೆನ್ನಾಗಿ ಜಜ್ಜಿ ಚತುಷ್ಟಾಂಶ ಕಷಾಯ ಮಾಡಿ, ಕಾಲು ಬಟ್ಟಲು ಕಷಾಯಕ್ಕೆ ಸ್ವಲ್ಪ ಹರಳೆಣ್ಣೆ ಸೇರಿಸಿ ಸೇವಿಸುವುದರಿಂದಲೂ ಶಮನ ಕಾಣಬಹುದಾಗಿದೆ.
ಇಷ್ಟೇ ಅಲ್ಲದೆ, ಅಕ್ಕಿ ಅಕ್ಕಚ್ಚಿನಲ್ಲಿ ಬಲಿತ ಕಕ್ಕೆ ಗಿಡದ ಬೇರನ್ನು ತೇದು ಕೊರಳಬಾವಿಗೆ ಮಂದವಾಗಿ ಲೇಪಿಸುವುದರಿಂದ ಕೊರಳು ಬಾವು ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿದೆ. ಆಯುರ್ವೇದಲ್ಲಿ ಕಕ್ಕೆಯ ಎಲೆ, ತೊಗಟೆ, ಅಂಟುವಿನಿಂದ ಹಲವಾರು ಉಪಯೋಗಗಳು ಇರುವುದರಿಂದಲೇ ಅದಕ್ಕೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಆದರೆ ಇದರಿಂದ ಔಷಧಿ ತಯಾರಿಸುವ ಮುನ್ನ ಆಯುರ್ವೇದ ತಜ್ಞರ ಸಲಹೆ ಪಡೆಯುವುದು ಮುಖ್ಯವಾಗುತ್ತದೆ. ಅದು ಏನೇ ಇರಲಿ ತನ್ನದೇ ಆದ ಚೆಲುವಿನಿಂದ ಬೇಸಿಗೆಯ ದಿನಗಳಲ್ಲಿ ಸುಮಾರು ಎರಡ್ಮೂರು ತಿಂಗಳ ಕಾಲ ನಮ್ಮೆಲ್ಲರ ಕಣ್ಮನ ಸೆಳೆಯುವ ಕಕ್ಕೆ ಹೂವು ನಿಸರ್ಗದ ವರದಾನ ಎಂದರೆ ತಪ್ಪಾಗಲಾರದು.












Click it and Unblock the Notifications