ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ನಾವೇನು ಮಾಡಬೇಕು? ಯಾವೆಲ್ಲಾ ಆಹಾರದಿಂದ ದೂರವಿರಬೇಕು?

ಜೀವನ ಕ್ರಮದಲ್ಲಿ ಬದಲಾವಣೆಗಳಾಗಿದ್ದು ಸದಾ ಒತ್ತಡದಲ್ಲಿ ಬದುಕುವ ಹೆಚ್ಚಿನ ಜನರು ಹಲವು ರೋಗಗಳಿಗೆ ಆಹ್ವಾನ ನೀಡುತ್ತಿದ್ದಾರೆ. ಮೇಲ್ನೋಟಕ್ಕೆ ಬಹಳಷ್ಟು ಮಂದಿ ಆರೋಗ್ಯವಂತನಾಗಿ ಕಂಡರೂ ಒಳಗೊಳಗೆ ಬಾಧಿಸುವ ರೋಗದಿಂದ ಆತ ಜರ್ಝರಿತನಾಗುತ್ತಿದ್ದಾನೆ. ಜತೆಗೆ ಮೊದಲೆಲ್ಲ ಬೆರಳೆಣಿಕೆ ಮಂದಿಯನ್ನು ಕಾಡುತ್ತಿದ್ದ ಕೆಲವು ಕಾಯಿಲೆಗಳು ಇದೀಗ ಎಲ್ಲರನ್ನೂ ಕಾಡತೊಡಗಿದೆ. ಕೆಲವು ಕಾಯಿಲೆಗಳಂತು ಸಾಮಾನ್ಯ ಎನ್ನುಷ್ಟರ ಮಟ್ಟಿಗೆ ಅದು ಮನುಷ್ಯನ ಮೇಲೆ ದಾಳಿ ಮಾಡಿದೆ. ಅದರಲ್ಲಿ ಎಲ್ಲರನ್ನೂ ಅಧಿಕ ರಕ್ತದೊತ್ತಡ (ಹೈಪರ್ ಟೆನ್ಷನ್) ಕೂಡ ಒಂದಾಗಿದೆ.

ಒಂದಷ್ಟು ಕಾಯಿಲೆಗಳು ಸಾಂಕ್ರಾಮಿಕವಾಗಿರಬಹುದು. ಅನುವಂಶೀಯತೆಯಿಂದಲೂ ಬರಬಹುದು. ಇನ್ನು ಕೆಲವು ನಮ್ಮ ನಿರ್ಲಕ್ಷ್ಯತೆಯಿಂದಲೂ ಬಂದಿರಬಹುದು. ಅದು ಏನೇ ಇರಲಿ ಕೆಲವು ಕಾಯಿಲೆಗಳನ್ನು ಸಂಪೂರ್ಣವಾಗಿ ವಾಸಿ ಮಾಡಬಹುದು. ಆದರೆ ಎಲ್ಲ ಕಾಯಿಲೆಗಳು ಹಾಗಿಲ್ಲ. ಅವು ಒಮ್ಮೆ ದೇಹಕ್ಕೆ ತಾಕಿತೆಂದರೆ ಮತ್ತೆ ಅವುಗಳನ್ನು ವಾಸಿ ಮಾಡಲು ಸಾಧ್ಯವಿಲ್ಲ. ಬದಲಾಗಿ ನಿಯಂತ್ರಣದಲ್ಲಿಟ್ಟು ಕೊಳ್ಳಬೇಕಾಗುತ್ತದೆ.

What Can We Do To Control High Blood Pressure?

ನಮ್ಮನ್ನು ಕಾಡುವ ಕಾಯಿಲೆಯಲ್ಲಿ ಅಧಿಕ ರಕ್ತದೊತ್ತಡವೂ ಒಂದು. ಇದನ್ನು ಹೈಪರ್ ಟೆನ್ಷನ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸಿಸ್ಪೊಲಿಕ್ ಬ್ಲಡ್ಪ್ರೆಷರ್ 140mm Hg ಗಿಂತ ಹಾಗೂ ಡಯಾಸ್ಪೊಲಿಕ್ ಬ್ಲಡ್ ಪ್ರೆಷರ್ 90140mm Hg ಗಿಂತ ಜಾಸ್ತಿಯಾಗಿದ್ದರೆ ಅದನ್ನು ಅತೀ ರಕ್ತದೊತ್ತಡ(ಹೈಪರ್ ಟೆನ್ಷನ್) ಎನ್ನಲಾಗುತ್ತದೆ. ಇದಕ್ಕೆ ದೇಹ ತೂಕ, ಅತಿಯಾದ ಉಪ್ಪು ಸೇವನೆ, ಅನುವಂಶೀಯತೆ, ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನ, ದೈಹಿಕ ವ್ಯಾಯಾಮದ ಕೊರತೆಗಳು ಕಾರಣ ಎಂದು ವೈದ್ಯರು ಹೇಳುತ್ತಾರೆ.

ಅತೀ ರಕ್ತದೊತ್ತಡಕ್ಕೆ ಉಪ್ಪು ಸೇವನೆ ಕಾರಣ

ಒಂದು ವೇಳೆ ಅತೀ ರಕ್ತದೊತ್ತಡದ ಸಮಸ್ಯೆಯಿದ್ದು ಅದನ್ನು ಕಡೆಗಣಿಸಿದ್ದೇ ಆದರೆ ಹೃದಯದ ಕಾಯಿಲೆಗೆ ಕಾರಣವಾಗಿ ಬಿಡುತ್ತದೆ. ಇದರಿಂದ ಹೃದಯವು ರಕ್ತವನ್ನು ಪಂಪ್ ಮಾಡುವ ಕ್ರಿಯೆಗೆ ಅಡಚಣೆಯಾಗುತ್ತದೆ. ಇದು ಹೀಗೇ ಮುಂದುವರೆದಲ್ಲಿ ಹೃದಯ, ಮೆದುಳು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಅತಿರಕ್ತದೊತ್ತಡದಿಂದ ಹೃದಯಾಘಾತ, ಹೃದಯದ ಕಾಯಿಲೆ ಮತ್ತು ಮೂತ್ರಜನಕಾಂಗದ ಕಾಯಿಲೆಗಳು ಬರುವ ಸಂಭವ ಹೆಚ್ಚಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಅತೀ ರಕ್ತದೊತ್ತಡಕ್ಕೆ ಅತಿಯಾದ ಉಪ್ಪು ಸೇವನೆ ಮುಖ್ಯ ಕಾರಣವಂತೆ. ಉಪ್ಪಿನಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ೧೦ಗ್ರಾಂ ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಿಂತ ಜಾಸ್ತಿ ಸೇವನೆ ಹಾನಿಕಾರಕವಾಗಿದ್ದು ಅತೀ ರಕ್ತದೊತ್ತಡಕ್ಕೆ ಕಾರಣವಾಗುವ ಸಂಭವ ಹೆಚ್ಚಿರುತ್ತದೆ. ಅತೀ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೆ ಏನು ಮಾಡಬೇಕು? ದಿನನಿತ್ಯ ಯಾವ ರೀತಿಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡುತ್ತಾರೆ.

What Can We Do To Control High Blood Pressure?

ಮದ್ಯಪಾನ, ಧೂಮಪಾನ ನಿಲ್ಲಿಸುವುದು ಅಗತ್ಯ

ಅತಿಯಾದ ದೇಹದ ತೂಕ ಹೊಂದಿರುವವರನ್ನು ಅತೀ ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಆದ್ದರಿಂದ ಮೊದಲನೆಯದಾಗಿ ದೇಹದ ತೂಕವನ್ನು ನಿಯಂತ್ರಿಸಬೇಕು. ಉಪ್ಪು ಸೇವನೆ ಕಡಿಮೆ ಮಾಡಬೇಕು. ದಿನಕ್ಕೆ ಕನಿಷ್ಟ ಉಪ್ಪಿನ ಸೋಡಿಯಂ 6ಗ್ರಾಂ ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಮದ್ಯಪಾನ, ಧೂಮಪಾನ ನಿಲ್ಲಿಸಬೇಕು. ಪೊಟ್ಯಾಷಿಯಂ, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿರುವ ತರಕಾರಿ, ಹಣ್ಣು ಹಾಗೂ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಕೊಬ್ಬಿನ ಅಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸದೆ ಆದಷ್ಟು ಕಡಿಮೆ ಮಾಡಬೇಕು. ಪ್ರತಿ ದಿನ ಮುಂಜಾನೆ ವಾಕಿಂಗ್ ಸೇರಿದಂತೆ ದೈಹಿಕ ವ್ಯಾಯಾಮ ಮಾಡುವುದು ಒಳ್ಳೆಯದು.

ವೈದ್ಯರು ನೀಡುವ ಒಂದಷ್ಟು ಸಲಹೆಗಳನ್ನು ಪಾಲಿಸುವುದರೊಂದಿಗೆ ಶಿಸ್ತುಬದ್ಧ ಜೀವನ ನಡೆಸಿದ್ದೇ ಆದರೆ ಅತೀ ರಕ್ತದೊತ್ತಡವನ್ನು ನಿಯಂತ್ರಿಸುವುದು ಕಷ್ಟವೇನಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಮಾನಸಿಕ ಒತ್ತಡಗಳಿಂದ ಮುಕ್ತರಾಗಬೇಕು. ನಮ್ಮ ಹಲವು ಕಾಯಿಲೆಗಳಿಗೆ ಮಾನಸಿಕ ಒತ್ತಡವೇ ಕಾರಣವಾಗಿರುತ್ತದೆ. ಆದುದರಿಂದ ಸಾಧ್ಯವಾದಷ್ಟು ಮನಸ್ಸನ್ನು ಹಗುರವಾಗಿರುವಂತೆ ನೋಡಿಕೊಳ್ಳುವುದರೊಂದಿಗೆ ಅಯ್ಯೋ ನನಗೆ ಅಧಿಕ ರಕ್ತದೊತ್ತಡವಿದೆ ಏನು ಮಾಡೋದಪ್ಪಾ ಎಂಬ ಚಿಂತೆಯನ್ನು ಬಿಟ್ಟು ಬಿಡಿ. ನನಗೇನು ಆಗಿಲ್ಲ ಚೆನ್ನಾಗಿದ್ದೇನೆ ಎಂಬ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವುದು ಅಗತ್ಯ.

ಆಹಾರ ಕ್ರಮಗಳಿಂದಲೇ ಕಾಯಿಲೆಗಳು ಜಾಸ್ತಿ

ಇನ್ನು ಬಹಳಷ್ಟು ಕಾಯಿಲೆಗಳು ಬರುವುದು ನಮ್ಮ ಆಹಾರ ಕ್ರಮಗಳಿಂದಲೇ.. ಹೀಗಾಗಿ ಯಾವುದಾದರೊಂದು ಕಾಯಿಲೆ ಬಾಧಿಸಿದಾಗ ಅದಕ್ಕೆ ಚಿಕಿತ್ಸೆ ಪಡೆಯುವುದರೊಂದಿಗೆ ವೈದ್ಯರು ನೀಡುವ ಆಹಾರ ಸೇವನೆಯ ಸಲಹೆಗಳನ್ನು ಅಗತ್ಯವಾಗಿ ಪಾಲಿಸಬೇಕಾಗುತ್ತದೆ. ಹಲವು ಕಾಯಿಲೆಗಳನ್ನು ನಮ್ಮ ಆಹಾರ ಕ್ರಮಗಳಿಂದಲೇ ನಿಯಂತ್ರಣಕ್ಕೆ ತರುವುದು ಅನಿವಾರ್ಯವಾಗಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಏನು ಮಾಡಬೇಕು? ದಿನ ನಿತ್ಯ ಸೇವಿಸುವ ಆಹಾರಗಳಲ್ಲಿ ಯಾವುದನ್ನು ಬಳಸಬೇಕು? ಯಾವುದನ್ನು ವರ್ಜಿಸಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದು, ಅದರಂತೆ ಕಟ್ಟು ನಿಟ್ಟಾಗಿ ಪಾಲಿಸಿದ್ದೇ ಆದರೆ ರೋಗವನ್ನು ನಿಯಂತ್ರಿಸಿಕೊಳ್ಳಬಹುದಾಗಿದೆ.

What Can We Do To Control High Blood Pressure?

ವೈದ್ಯರ ಪ್ರಕಾರ ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರವನ್ನೇ ಸೇವಿಸುವುದು ಒಳ್ಳೆಯದು. ಆದರೆ ಸೇವಿಸುವ ಆಹಾರದಲ್ಲಿ ಅಕ್ಕಿ, ರಾಗಿ, ಗೋಧಿ, ಜೋಳದಂತಹ ಧಾನ್ಯಗಳಿಗೆ ಪ್ರಾಧಾನ್ಯತೆಯಿರಲಿ. ಆದರೆ ಮಿತವಾಗಿರಬೇಕು. ದಿನಕ್ಕೆ 180 ಗ್ರಾಂ.ನಿಂದ 240ಗ್ರಾಂ.ನಷ್ಟಿದ್ದರೆ ಸಾಕು. ನಾರಿನಾಂಶ, ಜೀವಸತ್ವ, ಖನಿಜಾಂಶವುಳ್ಳ ಹಣ್ಣು ತರಕಾರಿಗಳನ್ನು ದಿನಕ್ಕೆ ಮುನ್ನೂರರಿಂದ ಐನೂರು ಗ್ರಾಂನಷ್ಟು ಸೇವಿಸಬಹುದು. ಕ್ಯಾಲ್ಸಿಯಂ ಹೊಂದಿದ ಕಡಿಮೆ ಕೊಬ್ಬಿನಂಶವುಳ್ಳ ಹಾಲು, ಮೊಸರು ಚೀಸ್ ಸೇವಿಸಬಹುದು. ಇನ್ನು ಕೆನೆತೆಗೆದ 200 ರಿಂದ 300ಮಿ.ಲೀ ಹಾಲು ಮತ್ತು ಮೊಸರನ್ನು ಸೇವಿಸಬಹುದಾಗಿದೆ.

ಕೊಬ್ಬಿಲ್ಲದ ಮಾಂಸ ಆಹಾರ ಸೇವನೆ ಮಾಡಬೇಕು

ಸುಮಾರು 50ರಿಂದ 100ಗ್ರಾಂನಷ್ಟು ಚರ್ಮ ತೆಗೆದ ಕೋಳಿ ಮಾಂಸ ಮೀನು, ಮೊಟ್ಟೆಯ ಬಿಳಿಭಾಗವನ್ನು ಮಾಂಸಹಾರಿಗಳು ಸೇವಿಸಬಹುದು. ಕೊಬ್ಬಿಲ್ಲದ ಮಾಂಸವನ್ನು ಸೇವಿಸಬಹುದು. ಆದರೆ ಮಾಂಸವನ್ನು ಅಪರೂಪಕ್ಕೆ ಸೇವಿಸುವುದು ಒಳ್ಳೆಯದು. ಮೆಗ್ನೀಷಿಯಂ, ಪೊಟ್ಯಾಷಿಯಂ ಹಾಗೂ ನಾರಿನ ಅಂಶವನ್ನು ಹೊಂದಿರುವ ಕಡ್ಲೆಕಾಯಿ, ಬಾದಾಮಿ ಮೊದಲಾದವುಗಳನ್ನು ವಾರಕ್ಕೆ 45ಗ್ರಾಂ.ನಷ್ಟು ಸೇವಿಸಿದರೆ ಸಾಕು. ಬಾಯಿ ರುಚಿಗೆ ಅಧಿಕ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದಲ್ಲ.

ಹಣ್ಣು, ತರಕಾರಿ, ಬೇಳೆಯ ಸೂಪ್, ಎಳನೀರನ್ನು ಸೇವಿಸುವುದು ಒಳ್ಳೆಯದು. ಉಪ್ಪು ಸೇರಿಸಿದ ಬೆಣ್ಣೆ ತ್ಯಜಿಸಿ, ಉಪ್ಪು ಬೆರೆಸದ ಬೆಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು. ಇನ್ನು ಅಡುಗೆಗೆ ಉಪ್ಪು ಹಾಕುವ ಬದಲಿಗೆ ಊಟ ಮಾಡುವಾಗ ಅಲ್ಪ ಪ್ರಮಾಣದಲ್ಲಿ ಉಪ್ಪನ್ನು ಹಾಕಿಕೊಳ್ಳುವುದು ಒಳ್ಳೆಯ ಅಭ್ಯಾಸ. ಕೆಲವರಿಗೆ ಮೇಲುಪ್ಪು ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಅಂತಹವರು ಅದನ್ನು ಬಿಟ್ಟು ಬಿಡಬೇಕು. ಕೊಬ್ಬಿನ ಅಂಶ ಅಧಿಕ ಪ್ರಮಾಣದಲ್ಲಿರುವ ಎಣ್ಣೆಗಳನ್ನು ವರ್ಜಿಸಬೇಕು.

What Can We Do To Control High Blood Pressure?

ಯಾವುದೆಲ್ಲ ಆಹಾರಗಳಿಂದ ದೂರವಿರಬೇಕು

ಕೊಲೆಸ್ಟ್ರಾಲ್ ಕಡಿಮೆಯಿರುವ ಎಣ್ಣೆಯನ್ನು 2ರಿಂದ 3 ಟೀ ಚಮಚೆಯಷ್ಟು ಬಳಸುವುದು ಒಳ್ಳೆಯದು. ಕರಿದ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಬೇಕು. ಸಾಸ್, ಮಸಾಲ, ಚಾಟ್ ಸೇರಿದಂತೆ ಸಿದ್ಧ ಮಸಾಲೆಗಳನ್ನು ಸೇವಿಸುವುದು ಒಳ್ಳೆಯದಲ್ಲ. ಆಹಾರದಲ್ಲಿ ಹುಳಿ ಅಂಶಕ್ಕಾಗಿ ನಿಂಬೆಹಣ್ಣು, ವಿನಿಗರ್, ಹುಣಸೆ, ಮಾವಿನ ತುರಿಯನ್ನು ಬಳಸಬಹುದು.

ಉಪ್ಪಿನಿಂದ ಸಂಸ್ಕರಿಸಿದ ಚಿಪ್ಸ್, ಹಪ್ಪಳ, ಉಪ್ಪಿನಕಾಯಿ ಮೊದಲಾದ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಅಡುಗೆ ಸೋಡಾ ಸೇರಿದಂತೆ ಸೋಡಾವಾಟರ್, ಪೆಪ್ಸಿ, ಕೋಲಾದಂತಹ ಜ್ಯೂಸ್ ಗಳನ್ನು ಉಪಯೋಗಿಸದೆ ತಾಜಾ ಹಣ್ಣಿನ ಜ್ಯೂಸ್ಗಳಿಗೆ ಆದ್ಯತೆ ನೀಡಬೇಕು. ಹೀಗೆ ಒಂದಷ್ಟು ಆಹಾರಗಳ ಸೇವನೆಯಲ್ಲಿ ಮಾರ್ಪಾಡು ಮತ್ತು ಎಚ್ಚರಿಕೆಯನ್ನು ವಹಿಸಿದ್ದೇ ಆದರೆ ಅಧಿಕ ರಕ್ತದೊತ್ತದ ನಿಯಂತ್ರಣ ಸಾಧ್ಯವಾಗುತ್ತದೆ ಎಂಬುದನ್ನು ಮರೆಯಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+