Vegetable Sambar Recipe: ಉತ್ತರ ಕರ್ನಾಟಕ ತರಕಾರಿ ಸಾಂಬರ್ ತಯಾರಿಸಿ ಬಾಯಿಚಪ್ಪರಿಸಿ ತಿನ್ನಿ...
ದಿನಾಲೂ ಒಂದೇ ರೀತಿ ಸಾಂಬಾರ್ ತಿಂದು ಬೇಸರ ಆಗಿದಿಯಾ? ಹಾಗಾದರೆ ಉತ್ತರ ಕರ್ನಾಟಕ ಶೈಲಿಯಲ್ಲಿ ತರಕಾರಿ ಸಾಂಬಾರ್ ಮಾಡಿ. ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ಅನ್ನ, ರೊಟ್ಟಿ, ಪೂರಿ, ಹಾಗೂ ಚಪಾತಿ ಜೊತೆಗೂ ತಿನ್ನಬಹುದು. ವಿಶೇಷವಾಗಿ ಇದು ಮುದ್ದೆ ಜೊತೆಗೆ ಇನ್ನಷ್ಟು ರುಚಿಯಾಗಿರುತ್ತದೆ.
ಇದಕ್ಕೆ ಯಾವುದೇ ಮಸಾಲೆ ಪದಾರ್ಥಗಳು ಬೇಕಾಗಿಲ್ಲ. ತರಕಾರಿ ತಾಜಾವಾಗಿರಬೇಕು ಅಷ್ಟೇ. ತರಕಾರಿ ಸಾಂಬರ್ ತಯಾರಿಸುವಾಗ ನೀವೊಂದು ಮಾತು ನೆನಪಿಡಬೇಕು. ಸಾಂಬರ್ ತಯಾರಿಸುವಾಗ ಯಾವೆಲ್ಲಾ ತರಕಾರಿ ಹಾಕಿದರೆ ಅದರ ರುಚಿ ಹೆಚ್ಚಾಗುತ್ತದೆ. ಜೊತೆಗೆ ಯಾವ ತರಕಾರಿ ಜೊತೆ ಯಾವ ತರಕಾರಿ ಹಾಕಬಾರದು ಎನ್ನುವುದನ್ನು ತಿಳಿದಿರಬೇಕು.

ಮತ್ಯಾಕ್ ತಡ ಉತ್ತರ ಕರ್ನಾಟಕ ಶೈಲಿಯಲ್ಲಿ ತರಕಾರಿ ಸಾಂಬರ್ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ಈ ರೆಸಿಪಿಯನ್ನು ಅನುಸರಿ ಸಾಂಬರ್ ತಯಾರಿಸಿ ರುಚಿ ನೋಡಿ ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಬೇಕಾಗುವ ಪದಾರ್ಥಗಳು:-
* ತೊಗರಿಬೇಳೆ ಒಂದು ಕಪ್
* ಮೂಲಂಗಿ 1 ಗಡ್ಡೆ
* ಕ್ಯಾರೆಟ್ 1 ಗಡ್ಡೆ
* ನುಗ್ಗೆಕಾಯಿ 2
* ಪಾಲಕ್ ಸೊಪ್ಪು ಒಂದು ಕಪ್
* ಬೀನ್ಸ್ 2
* ಕರಿಬೇವು ಸ್ವಲ್ಪ
* ಎಣ್ಣೆ
* ಉಪ್ಪು ರುಚಿಗೆ
* ಅರಿಶಿಣ
* ಒಣ ಬ್ಯಾಡಗಿ ಮೆಣಸಿನಕಾಯಿ ಪುಡಿ 2 ಚಮಚ
* ಜೀರಿಗೆ
*ಸಾಸಿವೆ
* ಬೆಳ್ಳುಳ್ಳಿ
* ಟೊಮೆಟೊ 3 (ಒಂದರಲ್ಲಿ ಮೂರು ಹೋಳು ಮಾಡಬೇಕು)
* ಹುಣಸೆಹಣ್ಣು ಸ್ವಲ್ಪ
*ಕೊತ್ತಂಬರಿ ಸ್ವಲ್ಪ

ತಯಾರಿಸುವ ವಿಧಾನ:-
* ಒಂದು ಕುಕ್ಕರ್‌ನಲ್ಲಿ ತೊಳೆದ ತೊಗರಿ ಬೇಳೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಅರಿಶಿಣ ಹಾಕಿ ಮೂರು ವಿಸಿಲ್ ಕೂಗಿಸಿ.
* ನಂತರ ಕುಕ್ಕರ್ ಮುಚ್ಚಳ ತೆಗೆದು ಅದಕ್ಕೆ ರೌಂಡ್ ಹೆಚ್ಚಿದ ಕ್ಯಾರೆಟ್ ಹಾಗೂ ಮೂಲಂಗಿ, ನುಗ್ಗೆಕಾಯಿ, ಪಾಲಕ್ ಸೊಪ್ಪು, ಬೀನ್ಸ್, ಟೊಮೆಟೊ, ಹುಣಸೆಹಣ್ಣಿನ ರಸ, ಒಣ ಬ್ಯಾಡಗಿ ಮೆಣಸಿನಕಾಯಿ ಪುಡಿ ಸ್ವಲ್ಪ ಎಣ್ಣೆ ಹಾಕಿ ಮತ್ತೆ ಮುಚ್ಚಳ ಮುಚ್ಚಿ ಒಂದು ವಿಸಿಲ್ ಕೂಗಿಸಿ. (ಇದಕ್ಕೆ ಬೇಕಾದಲ್ಲಿ ಆಲುಗಡ್ಡೆ, ಬೆಂಡೆಕಾಯಿ, ಎಲೆಕೋಸು, ನವಿಲುಕೋಸು, ಬದನೆಕಾಯಿ ಕೂಡ ಸೇರಿಸಿಕೊಳ್ಳಬಹುದು)
* ಪ್ರತ್ಯೇಕವಾಗಿ ಪಾತ್ರೆ ಒಲೆಯ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಆದ ಬಳಿಕ ಅದಕ್ಕೆ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು ಜೀರಿಗೆ, ಸಾಸಿವೆ ಹಾಕಿ ಚಟಪಟ ಅನ್ನುವವರೆಗೆ ಬಿಟ್ಟು ಕರಿಬೇವು ಹಾಕಿ ಗ್ಯಾಸ್ ಆಫ್ ಮಾಡಿ ಮುಚ್ಚಳ ಮುಚ್ಚಿ (ಒಗ್ಗರಣೆಗೆ ಒಣ ಮೆಣಸಿನಕಾಯಿ ಕೂಡ ಹಾಕಬಹುದು)
* ಈ ಒಗ್ಗರಣೆಯನ್ನು ತರಕಾರಿ ಬೇಳೆಯೊಂದಿಗೆ ಬೆರೆಸಿ ಚೆನ್ನಾಗಿ ಕಲಸಿ, ಕೊತ್ತಂಬರಿ ಸೊಪ್ಪು ಉದುರಿಸಿದರೆ ಬಿಸಿ ಬಿಸಿ ತರಕಾರಿ ಸಾಂಬಾರ್ ಅನ್ನು ಮುದ್ದೆ ಅಥವಾ ಅನ್ನದೊಂದಿಗೆ ಸೇವಿಸಬಹುದು.











Click it and Unblock the Notifications