ಇಂದ್ರಿಯಗಳನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳಿ ಏಕೆ ಗೊತ್ತಾ?
ಮನುಷ್ಯನಾದವನು ಒಂದಲ್ಲಾ ಒಂದು ರೀತಿಯಲ್ಲಿ ಇಂದ್ರಿಯಗಳ ಸೆಳೆತಕ್ಕೆ ಒಳಗಾಗುತ್ತಾನೆ. ಅಷ್ಟೇ ಅಲ್ಲ, ಇಂದ್ರಿಯ ಸುಖ, ಸಂತೋಷ ಹೊಂದಲು ಕಾತರಪಡುತ್ತಾನೆ. ಇದು ಮನುಷ್ಯನ ಗುಣ. ಇಂದ್ರಿಯ ಸುಖಗಳನ್ನು ತ್ಯಜಿಸಿ ಬದುಕುವುದು ಅಷ್ಟು ಸುಲಭವಲ್ಲ. ಬಹಳಷ್ಟು ಮಂದಿಗೆ ಇಂದ್ರಿಯಗಳ ಸುಖ, ಸಂತೋಷಗಳ ಮೂಲ ಯಾವುದೆಂಬುವುದೇ ಗೊತ್ತಿಲ್ಲವಾಗಿದೆ. ಹೀಗಾಗಿ ಅವುಗಳ ಆಕರ್ಷಣೆಗೊಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾನೆ.
ಅಧ್ಯಾತ್ಮದಲ್ಲಿ ಇಂದ್ರಿಯಗಳ ಒಳಿತು ಕೆಡಕುಗಳ ಬಗ್ಗೆ ಸವಿವರವಾಗಿ ವಿವರಿಸಲಾಗಿದೆ. ಆ ಪ್ರಕಾರ ಇಂದ್ರಿಯಗಳನ್ನು ಮಾತ್ರೆಗಳೆಂದು ಕರೆಯಲಾಗುತ್ತಿದೆ. ಇವುಗಳಿಂದಲೇ ಇಂದ್ರಿಯಗಳ ಮೌಲ್ಯಮಾಪನವಾಗುತ್ತದೆ. ನಾಲಿಗೆಯಿಂದ ರುಚಿ ತಿಳಿಯುತ್ತದೆ. ಮೂಗಿನಿಂದ ವಾಸನೆ ಗ್ರಹಿಸಬಹುದು. ಅದೇ ರೀತಿ ಇಂದ್ರಿಯಗಳು ರೂಪ, ರಸ, ಗಂಧ, ಶಬ್ದ, ಸ್ಪರ್ಶಗಳ ದ್ವಾರವೂ ಹೌದು. ಇಂದ್ರಿಯಗಳನ್ನು ನಯವಾಗಿ ಅವಶ್ಯಕತೆಗೆ ತಕ್ಕಂತೆ ಬಳಸಬೇಕು.

ಯಾರು ಇಂದ್ರಿಯಗಳನ್ನು ದುರ್ವಿನಿಯೋಗಪಡಿಸಿಕೊಳ್ಳುವರೋ, ದೈವ ನಿಯಮ ಮೀರಿ ನಡೆಯುವರೋ ಅಂತಹವರು ತಕ್ಷಣಕ್ಕೆ ಕ್ಷಣಿಕ ಸುಖ ಹೊಂದುವರಾದರೂ ನಂತರ ದುಃಖ ದುಮ್ಮಾನಗಳನ್ನು ಅನುಭವಿಸುವುದರಲ್ಲಿ ಎರಡು ಮಾತಿಲ್ಲ. ನಾಲಗೆಯನ್ನು ಸದ್ವಿಚಾರ ಮಾತನಾಡಲು ಬಳಸಬೇಕು. ಬದಲಿಗೆ ಅಶ್ಲೀಲ ಮಾತನಾಡಿದರೆ ಅದರಿಂದ ತೊಂದರೆ ತಪ್ಪಿದಲ್ಲ. ಇಂದ್ರಿಯಗಳ ಸೆಳೆತಕ್ಕೆ ಜನರು ಪರವಶರಾಗುತ್ತಾರೆ. ರೂಪ, ರಸ, ಗಂಧ, ಸ್ಪರ್ಶ ಹಾಗೂ ಶಬ್ದಗಳೆಂಬ ಇಂದ್ರಿಯಗಳ ಸೆಳೆತಕ್ಕೆ ಬಲಿಯಾಗುವವರೂ ಇದ್ದಾರೆ.
ಇಂದ್ರಿಯ ಸುಖ ದುಃಖದಿಂದ ಕೂಡಿದೆ
ಶಬ್ದಕ್ಕೆ ಜಿಂಕೆ ನಡುಗಿ ನಿಂತರೆ, ಆಗ ಅದು ಬೇಟೆಗಾರನ ಬೇಟೆಗೆ ಬಲಿಯಾಗುತ್ತದೆ. ಅಂದರೆ ಜಿಂಕೆಯು ಶಬ್ದದ ಮೋಹಕ್ಕೆ ತನ್ನ ಪ್ರಾಣವನ್ನು ಕಳೆದುಕೊಂಡಂತಾಯಿತು. ಪತಂಗ ಬೆಳಕಿನ ಮೋಹಕ್ಕೆ ಬಿದ್ದು ಸುಟ್ಟು ಹೋಗುತ್ತದೆ. ಜಿಂಕೆ, ಪತಂಗ, ಮೀನು, ದುಂಬಿ ಹೀಗೆ ಪ್ರಾಣಿ ಪಕ್ಷಿಗಳು ತಲಾ ಒಂದು ಇಂದ್ರಿಯದ ಸೆಳೆತಕ್ಕೆ ಒಳಗಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತವೆ. ಹೀಗಿರುವಾಗ ಪಂಚೇಂದ್ರಿಯಗಳನ್ನು ಹೊಂದಿರುವ ಮನುಷ್ಯನ ಪಾಡೇನು?
ಪಂಚೇಂದ್ರಿಯಗಳ ಸೆಳೆತಕ್ಕೆ ಸಿಲುಕುವ ಮಾನವ ಲೌಕಿಕ ಸುಖಲೋಲುಪತೆಗೆ ಸಿಲುಕಿ ದುಃಖ, ದುಮ್ಮಾನಗಳನ್ನು ತನ್ನಿಂದ ತಾನೇ ತಂದುಕೊಳ್ಳುತ್ತಾನೆ.

ಇಂದ್ರಿಯ ಸುಖ ದುಃಖದಿಂದ ಪ್ರಾಪ್ತವಾಗಿದ್ದು, ದುಃಖದಿಂದ ದುಃಖವೇ ದೊರೆಯುತ್ತದೆ. ಆದರೆ ಇದನ್ನು ಅರಿಯದ ನಾವುಗಳು ಇಂದ್ರಿಯಗಳ ಸುಖವೇ ಸುಖವೆಂದು ಭ್ರಮಿಸುತ್ತೇವೆ. ಮನೋಚಂಚಲತೆಗೂ ಇಂದ್ರಿಯಗಳೇ ಕಾರಣವಾಗಿಬಿಡುತ್ತವೆ. ಇಂದ್ರಿಯಗಳಿಂದಾಗಿ ಮನಸ್ಸು ಚಂಚಲತೆಗೆ ಒಳಗಾಗಿ ತಾತ್ಕಾಲಿಕ ಸುಖ ಪಡೆದರೂ ಅದರಿಂದ ಸಹಿಸಲಾಗದಂತಹ ನೋವು ಇದ್ದೇ ಇರುತ್ತದೆ.
ಇಂದ್ರಿಯ ಭಗವಂತನ ಅನುಪಮ ಕೊಡುಗೆ
ಮನುಷ್ಯನಿಗೆ ವಿವೇಕವಿದೆ. ಏನು ಮಾಡಿದರೆ ಎಂತಹ ಪರಿಣಾಮ ಬೀರಬಹುದು ಎಂಬ ಅರಿವಿದೆ. ಆದರೂ ಕೆಲವೊಮ್ಮೆ ಇಂದ್ರಿಯಗಳ ಸೆಳೆತಕ್ಕೆ ಒಳಗಾಗಿ ವಿವೇಕ ಕಳೆದುಕೊಂಡು ಬಿಡುತ್ತಾನೆ. ಪ್ರಾಪಂಚಿಕ ಸುಖದ ಕುರಿತಂತೆ ಆದಿ ಶಂಕರರು ಹೀಗೆಯೇ ಹೇಳಿದ್ದಾರೆ. ಧನ ಸಂಪತ್ತು ಲಭಿಸಿದಾಗ ಹಮ್ಮು ಬಿಮ್ಮಿನಿಂದಿರಬೇಡ. ಜನಬಲ ನಂಬಬೇಡ. ಯೌವನ ಮದದಿಂದ ಗರ್ವಿತನಾಗದಿರು. ಇವುಗಳೆಲ್ಲವೂ ಚದುರುವ ಮೋಡವಿದ್ದಂತೆ ನಶ್ವರ ಬಂದು ಹೋಗುವುದಷ್ಟೆ.
ದುರಂತವೆಂದರೆ ಇದ್ಯಾವುದನ್ನೂ ಅರಿಯದ ಮನುಷ್ಯ ಇಂದ್ರಿಯ ಸುಖಗಳ ಬೆನ್ನೇರಿ ತನ್ನ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾನೆ. ನಿಜ ಹೇಳಬೇಕೆಂದರೆ ಇಂದ್ರಿಯಗಳು ಭಗವಂತನ ಅನುಪಮ ಕೊಡುಗೆಗಳು, ಉದಾರ ಉಡುಗೊರೆಗಳು, ದೈವಾನುಗ್ರಹ ಸಾಧನೆಗೆ ಪೂರಕ ಸಾಧನಗಳು. ಮಾನವನಿಗೆ ಭಗವಂತ ಇಂದ್ರಿಯಗಳನ್ನು ಯಾವ ಉದ್ದೇಶಕ್ಕೆ ನೀಡಿರುವನೋ ಅದೇ ಉದ್ದೇಶಕ್ಕೆ ಉಪಯೋಗಿಸಬೇಕು. ಆದರೆ, ಇಂದ್ರಿಯಗಳನ್ನು ದುರ್ಮಾರ್ಗದಲ್ಲಿ ಬಳಸಿಕೊಂಡು ದೈವಾನುಗ್ರಹದಿಂದ ಮಾನವ ವಂಚಿತನಾಗುತ್ತಿದ್ದಾನೆ.

ಇಂದ್ರಿಯ ನಿಗ್ರಹಿಸದಿದ್ದರೆ ಅಪಾಯ ತಪ್ಪಿದಲ್ಲ
ಇಂದ್ರಿಯ ನಿಗ್ರಹಿಸದೆ ಅನುಗ್ರಹ ಅಸಾಧ್ಯ. ನಿಸ್ವಾರ್ಥ ಸೇವೆಗಾಗಿ ಇಂದ್ರಿಯಗಳನ್ನು ಬಳಸಿದರೆ ಅದರಿಂದ ಒಳ್ಳೆಯದಾಗುತ್ತದೆ. ಆದರೆ ಲೌಕಿಕ ಬದುಕಿನಲ್ಲಿ ಹಣದ ಮತ್ತು ಅಧಿಕಾರದ ಮದ ತುಂಬಿದಾಗ ಇಂದ್ರಿಯ ಸುಖದ ಬೆನ್ನತ್ತಿ ಹೋಗುತ್ತೇವೆ. ಕೆಲವೊಮ್ಮೆ ನಾವು ಸಾಗುವ ಹಾದಿ ನ್ಯಾಯದ್ದಲ್ಲ ಎಂಬುದು ಗೊತ್ತಿದ್ದರೂ ಹಣ ಮತ್ತು ಅಧಿಕಾರವಿರುವಾಗ ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಮುಂದುವರೆಯುತ್ತೇವೆ. ಇಂತಹ ಸಮಯದಲ್ಲಿ ಇಂದ್ರಿಯಗಳನ್ನು ನಿಗ್ರಹಿಸದೆ ಹೋದರೆ ಅಪಾಯ ತಪ್ಪಿದಲ್ಲ.
Image Credit- Pexels












Click it and Unblock the Notifications