ತ್ವಚೆ, ಕೂದಲು ಸೇರಿ ದೇಹದ 5 ಸಮಸ್ಯೆಗಳಿಗೆ ಪರಿಹಾರ ಈ ಎಣ್ಣೆ: ಬಳಸುವ ವಿಧಾನ ಹೀಗಿರಲಿ
ತುಳಸಿ ಪ್ರತಿ ಮನೆಯಲ್ಲಿಯೂ ಕಂಡುಬರುವ ಸಸಿ. ಧಾರ್ಮಿಕವಾಗಿಯೂ ಈ ಗಿಡಕ್ಕೆ ವಿಶೇಷ ಪ್ರಾಧಾನ್ಯತೆ ಇದೆ.ತುಳಸಿಯಲ್ಲಿ ಔಷಧೀಯ ಗುಣವೂ ಹೇರಳವಾಗಿರುತ್ತದೆ. ಹಾಗೆಯೇ ತುಳಸಿ ಎಣ್ಣೆ ಕೂಡಾ ತ್ವಚೆ, ಕೂದಲು ಸೇರಿದಂತೆ ನಮ್ಮ ದೇಹದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಭಾರತದಲ್ಲಿ 8,000 ಕ್ಕೂ ಹೆಚ್ಚು ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳಿವೆ. ಇವುಗಳನ್ನು ಔಷಧಿ ತಯಾರಿಸಲು, ಅಡುಗೆಗೆ ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಲು ಬಳಸಲಾಗುತ್ತದೆ. ಈ 8,000 ಗಿಡಮೂಲಿಕೆಗಳಲ್ಲಿ ತುಳಸಿಯೂ ಒಂದು. ತುಳಸಿ ಪ್ರತಿ ಮನೆಯಲ್ಲಿಯೂ ಕಂಡುಬರುವ ಸಸಿ. ಧಾರ್ಮಿಕವಾಗಿಯೂ ಈ ಗಿಡಕ್ಕೆ ವಿಶೇಷ ಪ್ರಾಧಾನ್ಯತೆ ಇದೆ.ತುಳಸಿಯಲ್ಲಿ ಔಷಧೀಯ ಗುಣವೂ ಹೇರಳವಾಗಿರುತ್ತದೆ. ಹಾಗೆಯೇ ತುಳಸಿ ಎಣ್ಣೆ ಕೂಡಾ ತ್ವಚೆ, ಕೂದಲು ಸೇರಿದಂತೆ ನಮ್ಮ ದೇಹದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ತುಳಸಿ ಎಣ್ಣೆಯು ಯುಜೆನಾಲ್ ಮತ್ತು ಲಿನೂಲ್ ನಂತಹ ಸಂಯುಕ್ತಗಳನ್ನು ಹೊಂದಿದೆ.ಇದು ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣವನ್ನು ಹೊಂದಿದೆ.ಆದರೆ ನೆನಪಿರಲಿ ಈ ಎಣ್ಣೆಯನ್ನು ನೇರವಾಗಿ ಚರ್ಮಕ್ಕೆ ಹಚ್ಚುವಂತಿಲ್ಲ. ಏಕೆಂದರೆ ಯಾವುದೇ ಸಾರಭೂತ ತೈಲವನ್ನು ನೇರವಾಗಿ ಚರ್ಮಕ್ಕೆ ಹಚ್ಚುವುದು ಹಾನಿಕಾರಕ.ಇದನ್ನು ಹಚ್ಚುವುದಕ್ಕೂ ಸರಿಯಾದ ಮಾರ್ಗವಿದೆ.
ತುಳಸಿ ಎಣ್ಣೆ ಹಚ್ಚುವುದರಿಂದ ಚರ್ಮಕ್ಕೆ ಆಗುವ ಪ್ರಯೋಜನಗಳು:
ಬೇವಿನ ಎಣ್ಣೆಯಂತೆಯೇ, ತುಳಸಿ ಎಣ್ಣೆಯೂ ನಮ್ಮ ಚರ್ಮಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.ಇದು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಚರ್ಮದ ಸೋಂಕುಗಳನ್ನು ತಡೆಗಟ್ಟಲು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಆದರೆ, ಈ ಎಣ್ಣೆಯನ್ನು ಮುಖಕ್ಕೆ ಹಚ್ಚಲು ಒಂದು ವಿಧಾನವಿದೆ. ಇದನ್ನು ನೇರವಾಗಿ ಮುಖಕ್ಕೆ ಹಚ್ಚುವಂತಿಲ್ಲ. ತೆಂಗಿನ ಎಣ್ಣೆ ಅಥವಾ ಜೊಜೊಬಾ ಎಣ್ಣೆಯೊಂದಿಗೆ 3 ಹನಿ ತುಳಸಿ ಎಣ್ಣೆಯನ್ನು ಬೆರೆಸಿ ಹಚ್ಚಬೇಕು.
ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ನಿವಾರಣೆಗೆ ತುಳಸಿ ಎಣ್ಣೆ:
ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡಾ ನಮಗೆ ಬಹಳಷ್ಟು ತೊಂದರೆ ಉಂಟುಮಾಡುತ್ತವೆ. ಸ್ಕ್ಯಾಲ್ಪ್‌ನಲ್ಲಿ ಕಾಣಿಸಿಕೊಳ್ಳುವ ಫಂಗಸ್ ಇನ್ಫೆಕ್ಷನ್ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ತುಳಸಿ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನಮ್ಮ ಕೂದಲಿಗೆ ಹಚ್ಚಿದರೆ, ನೆತ್ತಿಯಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಅದರ ಶಿಲೀಂಧ್ರನಾಶಕ ಗುಣ ತಲೆಹೊಟ್ಟು ಉಂಟುಮಾಡುವ ಮಲಾಸೆಜಿಯಾ ಶಿಲೀಂಧ್ರವನ್ನು ನಿವಾರಿಸುತ್ತದೆ.
ಒತ್ತಡ ಕಡಿಮೆ ಮಾಡಲು ತುಳಸಿ ಎಣ್ಣೆಯ ಪ್ರಯೋಜನಗಳು:
ತುಳಸಿಯನ್ನು ಅಡಾಪ್ಟೋಜೆನ್ ಎಂದು ಪರಿಗಣಿಸಲಾಗುತ್ತದೆ.ಇದು ನಮ್ಮ ದೇಹವು ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ತುಳಸಿ ಎಣ್ಣೆಯ ವಾಸನೆಯು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.ತುಳಸಿ ಎಣ್ಣೆಯನ್ನು ಹಾಗೆಯೇ ಸುಮ್ಮನೆ ಮೂಸಿ ನೋಡುವುದರಿಂದ ಅಂದರೆ ಅದರ ವಾಸನೆ ತೆಗೆದುಕೊಳ್ಳುವುದರಿಂದ ಗಮನ ಶಕ್ತಿ ಹೆಚ್ಚಾಗುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸುತ್ತವೆ.
ಕೀಲು ನೋವು ಮತ್ತು ಊತ ನಿವಾರಣೆಗೆ ತುಳಸಿ ಎಣ್ಣೆ:
ಕೀಲು ನೋವಿನಿಂದ ಬಳಲುತ್ತಿರುವವರಿಗೆ ತುಳಸಿ ಎಣ್ಣೆಯಿಂದ ಮಸಾಜ್ ಮಾಡಬಹುದು.ವಯಸ್ಸಾದ ಕಾರಣದಿಂದ ಅಥವಾ ಗಾಯದ ಪರಿಣಾಮವಾಗಿ ಉಂಟಾಗುವ ಸ್ನಾಯು ಮತ್ತು ಕೀಲು ನೋವಿಗೆ ತುಳಸಿ ಎಣ್ಣೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಯುಜೆನಾಲ್ ಅನ್ನು ನೈಸರ್ಗಿಕ ನೋವು ನಿವಾರಕವೆಂದೇ ಪರಿಗಣಿಸಲಾಗುತ್ತದೆ. ಈ ಎಣ್ಣೆಯ ಪ್ರಯೋಜನಗಳನ್ನು ಪಡೆಯಲು, ತುಳಸಿ ಎಣ್ಣೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಮಸಾಜ್ ಮಾಡಬೇಕು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications