ಶಾರ್ಕ್ ಟ್ಯಾಂಕ್‌ನಲ್ಲಿ ರಿಜೆಕ್ಟ್ ಆದ ಜಿಪ್ ಎಲೆಕ್ಟ್ರಿಕ್ ಇಂದು 3,000 ಕೋಟಿ ರೂ. ಮೌಲ್ಯದ ಸಂಸ್ಥೆ : ಇದೇ ಅಲ್ವಾ ಸಾಧನೆ
ಒಂದು ಟೈಂನಲ್ಲಿ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್‌ನಲ್ಲಿ ರಿಜೆಕ್ಟ್ ಆಗಿದ್ದ ಜಿಪ್ ಎಲೆಕ್ಟ್ರಿಕ್ ಸಂಸ್ಥೆ ಇವತ್ತು ಭಾರತದ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ದೊಡ್ಡ ಸಾಧನೆ ಮಾಡಿದೆ. ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿದಿದ್ದ ಆರಂಭದ ಕಾಲದಲ್ಲಿ ಈ ಸ್ಟಾಪ್‌ಅಪ್‌ಗೆ ಹಣದ ಅವಶ್ಯಕತೆ ತುಂಬಾ ಇತ್ತು. ಸಂಸ್ಥೆ ಬೆಳೆಯಬೇಕಾದರೆ ದುಡ್ಡು ಹಾಕುವವರೂ ಬೇಕು. ಹಾಗಾಗಿ ಈ ಸಂಸ್ಥೆಯ ಸ್ಥಾಪಕರು ಶಾರ್ಕ್ ಟ್ಯಾಂಕ್ ಸ್ಟುಡಿಯೋಗೆ ಬಂದಿದ್ದರು.
ಸಂಸ್ಥೆಯ ಸ್ಥಾಪಕರಾದ ಆಕಾಶ್ ಗುಪ್ತಾ ಮತ್ತು ರಾಶಿ ಅಗರ್ವಾಲ್ ಶಾರ್ಕ್ ಟ್ಯಾಂಕ್ ಇಂಡಿಯಾ ಸ್ಟುಡಿಯೋಗೆ ಹೋಗಿದ್ದಾಗ ಅವರ ಬಳಿ ಇದ್ದದ್ದು 2,000 ಕ್ಕಿಂತಲೂ ಕಡಿಮೆ ಎಲೆಕ್ಟ್ರಿಕ್ ಸ್ಕೂಟರ್. ಒಂದು ವೇಳೆ ತಮಗೆ ಹೂಡಿಕೆ ಸಿಕ್ಕರೆ ಎಂಟೇ ತಿಂಗಳಲ್ಲಿ ಈ ನಂಬರ್ ಅನ್ನು 10,000ಕ್ಕೆ ಏರಿಸುವುದಾಗಿ ಹೇಳಿದ್ದರು.

ತನ್ನ ವ್ಯವಹಾರ ಮಾದರಿಯನ್ನು ಸಾಬೀತುಪಡಿಸೋದಕ್ಕೆ ಪ್ರಯತ್ನಿಸುತ್ತಿರುವ ಈ ಕಂಪನಿಗೆ ಇದು ಮಹತ್ವಾಕಾಂಕ್ಷೆಯ ಗುರಿಯಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥಾಪಕರು 1% ಈಕ್ವಿಟಿಗೆ 2.2 ಕೋಟಿ ರೂ.ಗಳನ್ನು ಕೇಳಿದರು. ಈ ಬೇಡಿಕೆಯನ್ನು 220 ಕೋಟಿ ರೂ.ಗಳ ಮೌಲ್ಯಮಾಪನದ ಆಧಾರದ ಮೇಲೆ ಇಟ್ಟಿದ್ದರು. ಇದು ಶಾರ್ಕ್ಸ್‌ಗೆ ಮನವರಿಕೆಯಾಗಲಿಲ್ಲ. ಪರಿಣಾಮವಾಗಿ ಜಿಪ್ ಎಲೆಕ್ಟ್ರಿಕ್ ಯಾವುದೇ ಲಾಭ ಇಲ್ಲದೆ ಶೋನಿಂದ ಹೊರಗೆ ಬರಬೇಕಾಯ್ತು. ಶೋನಲ್ಲಿ ಹೂಡಿಕೆ ಪಡೆಯೋದಕ್ಕೆ ಸಾಧ್ಯವಾಗದ ಸ್ಟಾರ್ಟ್‌ಅಪ್‌ಗಳ ಸಾಲಿಗೆ ಇದೂ ಸೇರಿಕೊಂಡಿತು.
ಈ ಎಪಿಸೋಡ್ ಟಿವಿಯಲ್ಲಿ ಬರುವಾಗ ಒಂದು ನ್ಯಾಷನಲ್ ಟಿವಿಯಲ್ಲಿ ತಾನು ತನ್ನ ಕಂಪನಿಯ ಭವಿಷ್ಯದ ಸಾಧನೆ ಬಗ್ಗೆ ಆಡಿರುವ ಮಾತುಗಳಿಂದ ಅವರೇ ಪ್ರೇರೇಪಿತರಾಗುತ್ತಾರೆ. ಕಂಪನಿಯು ಗುರಿಯನ್ನು ಸಾಧಿಸಬಹುದೇ ಎನ್ನುವುದು ಅವರಿಗೂ ಸ್ಪಷ್ಟವಾಗಿರೋದಿಲ್ಲ. ಆದ್ರೆ ಈ ಸಾಧನೆ ಮಾಡುವುದು ನನಗೆ ಸಾಧ್ಯ ಎನ್ನುವ ಭರವಸೆ ಅವರಿಗಿತ್ತು. ಅಷ್ಟು ದೊಡ್ಡ ವೇದಿಕೆಯಲ್ಲಿ ಇಷ್ಟು ದೊಡ್ಡ ಪ್ರಾಮಿಸ್ ಮಾಡುವುದು ಬೇಕಿತ್ತಾ ಎಂದನಿಸಿತ್ತಂತೆ. ಆದ್ರೆ ಆ ಮಾತುಗಳು ಮನಸಾರೆ ಹೇಳಿರುವಂಥದ್ದು ಎಂದು ಆಕಾಶ್ ಗುಪ್ತಾ ಲಿಂಕ್‌ಡೆನ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಗುಪ್ತಾ ಶೋನಲ್ಲಿ ನೀಡಿದ ಭರವಸೆಯಂತೆ ಎಂಟು ತಿಂಗಳೊಳಗೆ, Zypp ತನ್ನ ಫ್ಲೀಟ್ ಅನ್ನು 10,000 ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ವಿಸ್ತರಿಸಿತು. ಅಂದಿನಿಂದ ಕಂಪನಿಯು ಆ ಸಂಖ್ಯೆಯನ್ನು ಡಬಲ್ ಮಾಡುತ್ತಲೇ ಹೋಯಿತು. ಇಂದು 21,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳ ಫ್ಲೀಟ್ ಅನ್ನು ನಿರ್ವಹಿಸುತ್ತಿದೆ. ಭಾರತದಾದ್ಯಂತ ಇ-ಕಾಮರ್ಸ್, ಆಹಾರ ವಿತರಣೆ, ದಿನಸಿ ಮತ್ತು ಔಷಧಿ ವಿತರಣೆಯಲ್ಲಿ ತೊಡಗಿರುವ ವ್ಯವಹಾರಗಳಿಗೆ ಸೇವೆ ಸಲ್ಲಿಸುತ್ತಿದೆ.
ಇಲ್ಲಿ ವಾಹನವನ್ನು ಮಾರಾಟ ಮಾಡುವ ಬದಲು EV-as-a-Service ಎನ್ನುವ ಹೊಸ ಮಾದರಿಯನ್ನು ಕಂಪನಿ ಪರಿಚಯಿಸಿತು. ಈ ಮೂಲಕ 2017 ರಲ್ಲಿ ಆಕಾಶ್ ಗುಪ್ತಾ ಮತ್ತು ರಾಶಿ ಅಗರ್ವಾಲ್ ಸ್ಥಾಪಿಸಿದ ಗುರುಗ್ರಾಮ್ ಮೂಲದ ಈ ಸ್ಟಾಟ್‌ಅಪ್ ಈಗ ಡೆಲಿವರಿ ಸಂಸ್ಥೆಗಳಿಗೆ ಹಾಗೂ ಸಿಬ್ಬಂದಿಗೆ ಸ್ಕೂಟರ್‌ಗಳನ್ನು ಬಾಡಿಗೆಗೆ ನೀಡುವ ಕೆಲಸ ಶುರು ಮಾಡಿತು. Zypp ನ ವ್ಯವಹಾರ ಬೆಳೆಯುತ್ತಾ ಹೋಯಿತು.
ಕಂಪನಿಯ ಹಣಕಾಸಿನಲ್ಲಾದ ಬೆಳವಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. Zypp ನ ಕಾರ್ಯಾಚರಣಾ ಘಟಕವಾದ ಬೈಸಿಶೇರ್ ಟೆಕ್ನಾಲಜೀಸ್, FY25 ರಲ್ಲಿ 437.9 ಕೋಟಿ ರೂ. ಆಪರೇಟಿಂಗ್ ರೆವೆನ್ಯೂವನ್ನು ವರದಿ ಮಾಡಿದೆ. FY24 ರಲ್ಲಿ ಈ ವ್ಯವಹಾರ 292.7 ಕೋಟಿಯದ್ದಾಗಿತ್ತು. ಅಂದರೆ ಒಂದೇ ವರ್ಷಕ್ಕೆ ಸುಮಾರು 50%ದಷ್ಟು ಗ್ರೋತ್ ತೋರಿಸುತ್ತದೆ. ಇತರ ಮೊಬಿಲಿಟಿ ಸ್ಟಾರ್ಟ್‌ಅಪ್‌ಗಳಂತೆ, ಕಂಪನಿಯು ವಿಸ್ತರಣೆಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುವುದನ್ನು ಮುಂದುವರೆಸಿತು.
ಶಾರ್ಕ್ ಟ್ಯಾಂಕ್ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ನಿರಾಕರಿಸಿದರೂ ಕೂಡಾ ಕಂಪನಿಯ ಬೆಳವಣಿಗೆಯು ಹೂಡಿಕೆದಾರರನ್ನು ಆಕರ್ಷಿಸಿದೆ. ಟ್ರ್ಯಾಕ್ಸನ್ ಪ್ರಕಾರ, ಜಿಪ್ ಗುಡ್‌ಇಯರ್ ವೆಂಚರ್ಸ್, ವೆಂಚರ್ ಕ್ಯಾಟಲಿಸ್ಟ್ಸ್, ಇಂಡಿಯನ್ ಏಂಜೆಲ್ ನೆಟ್‌ವರ್ಕ್ ಫಂಡ್, ವೀ ಫೌಂಡರ್ ಸರ್ಕಲ್, 100 ಯೂನಿಕಾರ್ನ್ಸ್ ಮತ್ತು ಐವಿವೈ ಗ್ರೋತ್ ಅಸೋಸಿಯೇಟ್ಸ್ ಸೇರಿದಂತೆ ಹೂಡಿಕೆದಾರರಿಂದ 76.5 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಮಾರ್ಚ್ 2025 ರ ಹೊತ್ತಿಗೆ ಈ ಸ್ಟಾರ್ಟ್‌ಅಪ್‌ನ ಕೊನೆಯ ಮೌಲ್ಯ ಸುಮಾರು 331 ಮಿಲಿಯನ್ ಡಾಲರ್ ಅಥವಾ 3,000 ಕೋಟಿಯನ್ನೂ ದಾಟಿದೆ.
Zypp ತನ್ನ ವ್ಯವಹಾರ ಮಾದರಿಯನ್ನು ಸಹ ವಿಸ್ತರಿಸಿದೆ. 2025 ರಲ್ಲಿ, ಇದು ಫ್ರಾಂಚೈಸಿ ಮಾದರಿಯನ್ನು ಪರಿಚಯಿಸಿದೆ. ಸಂಸ್ಥೆ ಈಗ ಇದು ಭಾರತದ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಮೊಬಿಲಿಟಿ ಮಾರುಕಟ್ಟೆಯಲ್ಲಿ ಯುಲು, ಆಲ್ಟ್ ಮೊಬಿಲಿಟಿ ಮತ್ತು ಇವೀಜ್‌ನಂತಹ ಕಂಪನಿಗಳೊಂದಿಗೆ ಸ್ಪರ್ಧಿಸುತ್ತದೆ. 2017 ರಲ್ಲಿ ಭಾರತದ EV ವಲಯದ ಹೂಡಿಕೆ 40.6 ಮಿಲಿಯನ್ ಡಾಲರ್‌ನಷ್ಟಿತ್ತು. ಆದರೆ, 2025 ರಲ್ಲಿ ಇದು 1.67 ಬಿಲಿಯನ್ ಡಾರ್‌ಗೆ ಏರಿದೆ. ಇದು ಕೂಡಾ ಜಿಪ್ ಸಂಸ್ಥೆಗೆ ಪ್ಲಸ್ ಪಾಯಿಂಟ್ ಆಗಿದೆ.
ಶಾರ್ಕ್ ಟ್ಯಾಂಕ್‌ನಲ್ಲಿ 220 ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಳ್ಳಲು ವಿಫಲವಾದ ಸ್ಟಾರ್ಟ್‌ಅಪ್ ಜಿಪ್ ಎಲೆಕ್ಟ್ರಿಕ್ ಈಗ 3,000 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಕಂಪನಿಯಾಗಿ ಬೆಳೆದಿದೆ.


Click it and Unblock the Notifications
