Mirchi Mandakki Recipe: ಗೋಬಿ, ಪಾನಿಪೂರಿ ಬಿಡಿ ಉತ್ತರ ಕರ್ನಾಟಕ ಮಿರ್ಚಿ ಮಂಡಕ್ಕಿ ಮಾಡಿ ನೋಡಿ..... ಮಸ್ತ್ ಟೇಸ್ಟ್ ಇರುತ್ತಾ..
ಗೋಬಿ, ಪಾನಿಪೂರಿ, ವಡಾ ಪಾವ್, ಫ್ರೆಂಚ್ ಫ್ರೈಸ್, ನೂಡಲ್ಸ್, ಪೀಜಾ ಹೀಗೆ ಹೇಳ್ತಾ ಹೋದರೆ ಸಂಜೆ ತಿಂಡಿಗೆ ತಿನ್ನಲು ಮನಸ್ಸಾಗುವ ಖಾದ್ಯಗಳು ಒಂದೆರೆಡಲ್ಲ.... ಆದರೆ ಇದೆಲ್ಲವನ್ನು ಬಿಟ್ಟು ಉತ್ತರ ಕರ್ನಾಟಕದ ಸ್ಪೆಷಲ್ ತಿಂಡಿ ಬಗ್ಗೆ ಗಮನ ಹರಿಸೋಣ. ಸಂಜೆ ಆದರೆ ಬಿಸಿಲು ನಾಡಿನ ಮಂದಿ ತಿನ್ನಲು ಬಯಸುವುದು ಮಂಡಕ್ಕಿ ಮಿರ್ಚಿಯನ್ನ.
ಹೌದು... ಈ ಭಾಗದಲ್ಲಿ ಮಂಡಕ್ಕಿ ಮಿರ್ಚಿ ಅಂದರೆ ಭಾರೀ ಫೇಮಸ್. ಇದೊಂದು ಇದ್ದಬಿಟ್ಟರೆ ಇದರ ಮುಂದೆ ಯಾವ ರುಚಿ ಕೂಡ ನಿಲ್ಲಲ್ಲ. ಖಾರ ಖಾರವಾಗಿರುವ ಮೆಣಸಿನಕಾಯಿ ಬಜ್ಜಿ... ಟೇಸ್ಟಿ ಟೇಸ್ಟ್ ಮಂಡಕ್ಕಿ ಇದ್ದುಬಿಟ್ಟರೆ ಹಾ... ನೋಡೋದಕ್ಕೆ ಬಾಯಲ್ಲಿ ನೀರುರಿಯುತ್ತೆ.

ಅಷ್ಟಕ್ಕೂ ಈ ಮಂಡಕ್ಕಿ ಮಿರ್ಚಿಗೆ ಯಾಕಿಸ್ಟಿ ಡಿಮ್ಯಾಂಡು.... ಇಲ್ಲಿ ಜನ ಸಂಜೆ ಚಾಹ, ಟೀ ಜೊತೆ ಮಂಡಕ್ಕಿ ಮಿರ್ಚಿಯನ್ನು ಯಾಕೆ ತಿನ್ನಲು ಇಷ್ಟಪಡ್ತಾರೆ ಅನ್ನೋದನ್ನು ನೂ ತಿಳಿಯಲೇಬೇಕು. ಇದನ್ನು ತಿಳಿಯಬೇಕು ಅಂದರೆ ನೀವು ಮೊದಲು ಮಂಡಕ್ಕಿ ಮಿರ್ಚಿ ತಯಾರಿಸುವ ವಿಧಾನವನ್ನು ತಿಳಿಯಬೇಕು. ಹಾಗಾದರೆ ಮತ್ಯಾಕ್ ತಡ ಮಂಡಕ್ಕಿ ಮಿರ್ಚಿ ಮಾಡುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಪದರ್ಥಗಳು:
* ಮಂಡಕ್ಕಿ 3 ಲೋಟ (ತೂತು ಮಂಡಕ್ಕಿ)
* ಈರುಳ್ಳಿ 1(ಸಣ್ಣಕ್ಕೆ ಕತ್ತರಿಸಿದ)
* ಟೊಮೆಟೊ 1(ಸಣ್ಣಕ್ಕೆ ಕತ್ತರಿಸಿದ)
* ಹಸಿ ಮೆಣಸಿನಕಾಯಿ 1(ಸಣ್ಣಕ್ಕೆ ಕತ್ತರಿಸಿದ)
* ಖಾರದ ಪುಡಿ ಅರ್ಧ ಟೇಬಲ್‌ಸ್ಪೂನ್
* ಉಪ್ಪು
* ಎಣ್ಣೆ
* ಜೀರಿಗೆ ಪುಡಿ
* ಪುಟಾಣಿ (ಹುರಿಗಡಲೆ) 1 ಸ್ಪೂನ್
* ಕರಿಬೇವು
* ಅಂಗಡಿಯಲ್ಲಿ ಸಿಗುವ ಮಿಕ್ಸ್ಚರ್
* ಜೀರಿಗೆ ಸಾಸಿವೆ (ಒಗ್ಗರಣೆಗಾಗಿ)
* ಅರಿಶಿನ
* ಕೊತ್ತಂಬರಿ ಸೊಪ್ಪು (ಸಣ್ಣಕ್ಕೆ ಕತ್ತರಿಸಿದ)

ತಯಾರಿಸುವ ವಿಧಾನ:
* ಮೊದಲು ಪುಟಾಣಿಯನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಕೊಂಪಾಗುವವರೆಗೂ ಹುರಿಯಿರಿ. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.
* ಒಲೆಯ ಮೇಲೆ ಒಂದು ಬಾಣಲೆ ಇಡಿ. ಇದಕ್ಕೆ ಎಣ್ಣೆ ಹಾಕಿ ಜೀರಿಗೆ ಸಾಸಿವೆ ಹಾಕಿ ಚಟಪಟ ಅನ್ನೋವರೆಗು ಬಿಡಿ. (ಉರಿ ತುಂಬಾ ಕಡಿಮೆ ಇಡಿ)
* ಬಳಿಕ ಇದರಲ್ಲಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಮೆಣಸಿನಕಾಯಿ ಹುರಿದ ಮೇಲೆ ಕುರುಕಲಾಗಿರಬೇಕು. ನಂತರ ಇದಕ್ಕೆ ಕರಿಬೇವು ಹಾಕಿ ಇದನ್ನು ಸ್ವಲ್ಪ ಹೊತ್ತು ಬಿಡಿ.
* ನಂತರ ಇದಕ್ಕೆ ಈರುಳ್ಳಿ ಹಾಕಿ ಹುರಿದು, ಟೊಮೆಟೋ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಇದರಲ್ಲಿ ನೀರಿನ ಅಂಶ ಹೋಗುವವರೆಗೂ ಬಿಡಿ.
* ಬಳಿಕ ಇದಕ್ಕೆ ಅರ್ಧ ಸ್ಪೂನ್ ಅರಿಶಿನ, ರುಚಿಗರ ತಕ್ಕಷ್ಟು ಉಪ್ಪು, ಖಾರದ ಪುಡಿ ಹಾಕಿ ಕಲಸಿ.
* ನಂತರ ಗ್ಯಾಸ್ ಆಫ್ ಮಾಡಿ ಆರಲು ಬಿಡಿ.
* ಇದು ಆರಿದ ಬಳಿಕ ಮಂಡಕ್ಕಿ ಹಾಕಿ ಚೆನ್ನಾಗಿ ಕಲಸಿ, ಮಂಡಕ್ಕಿ ಮೆದುವಾಗದಂತೆ ಕುರುಕುಲಾಗಿಯೇ ಇರುವಂತೆ ನೋಡಿಕೊಳ್ಳಿ. ನಂತರ ಇದಕ್ಕೆ ಪುಟಾಣಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಇದನ್ನು ಒಂದು ಪ್ಲೇಟ್‌ಗೆ ಹಾಕಿ ಇದರ ಮೇಲೆ ಸ್ವಲ್ಪ ಈರುಳ್ಳಿ, ಟೊಮೆಟೊ, ಮಿಕ್ಸ್ಚರ್, ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿದರೆ ಮಸಾಲಾ ಮಂಡಕ್ಕಿ ಸವಿಯಲು ಸಿದ್ದ.
ಆದರೆ ಇದು ಮಿರ್ಚಿ(ಬಜ್ಜಿ) ಇಲ್ಲದೆ ತಿನ್ನಲು ರುಚಿಯಾಗಿರುವುದಿಲ್ಲ. ಉತ್ತರ ಕರ್ನಾಟಕ ಶೈಲಿಯಲ್ಲಿ ಹಸಿ ಮೆಣಸಿನಕಾಯಿ ಬಜ್ಜಿ ಮಾಡುವುದನ್ನು ನಾವು ಈಗಾಗಲೇ ಹಂಚಿಕೊಂಡಿದ್ದೇವೆ. ಅದನ್ನು ಓದಿ ಮಂಡಕ್ಕಿಯೊಂದಿಗೆ ಬಿಸಿ ಬಿಸಿ ಬಜ್ಜಿ ಮಾಡಿಕೊಂಡು ಸವಿಯಿರಿ.












Click it and Unblock the Notifications