Loneliness: ಏಕಾಂಗಿತನದಿಂದ ಹೊರ ಬರಲು ನಾವೇನು ಮಾಡಬೇಕು?
ನಮಗೆ ಅರಿವಿಲ್ಲದಂತೆ ನಾವು ಎಲ್ಲೋ ಒಂದು ಕಡೆ ಏಕಾಂಗಿ ಆಗುತ್ತಿದ್ದೇವೆ ಅನಿಸೋಕೆ ಶುರು ಆಗಿ ಬಿಡುತ್ತದೆ. ಅದು ಮನೆ, ಕಚೇರಿ ಎಲ್ಲಿಯೇ ಆಗಿರಲಿ. ಅಂತಹದೊಂದು ಆಲೋಚನೆಗಳು ಬಂದು ಬಿಟ್ಟರೆ ಅದರಿಂದ ಹೊರಗೆ ಬರುವುದು ಕೆಲವೊಮ್ಮೆ ಕಷ್ಟವಾಗಿ ಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ನಾವೇ ಅಂತಹ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನ ಪಡಬೇಕಾಗುತ್ತದೆ. ಏಕೆಂದರೆ ಬಹಳಷ್ಟು ಸಂದರ್ಭಗಳಲ್ಲಿ ನಮ್ಮನ್ನು ಕಾಡಿದ ಕಷ್ಟಗಳು, ಅನುಭವಿಸಿದ ನೋವುಗಳು ಎಲ್ಲವೂ ನಮಗೆ ಯಾರು ಇಲ್ಲ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿಬಿಡುತ್ತದೆ.
ಹೆಚ್ಚಿನವರು ಜನರ ನಡುವೆ ಇರಬೇಕೆಂದು ಬಯಸುತ್ತಾರೆ. ಅವರು ಗೆಳೆಯರು, ಗೆಳತಿಯರು, ಮನೆ ಸಂಸಾರ ಹೀಗೆ ಸದಾ ಎಲ್ಲರೊಳಗೆ ಇರಬೇಕೆಂದು ಇಷ್ಟಪಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಕಷ್ಟ ಬಂದಾಗ ಸಹಾಯಕ್ಕೆ ಬಾರದೆ ಇದ್ದಾಗ ಅಥವಾ ಒಂದು ಸಾಂತ್ವನದ ಮಾತನ್ನು ಆಡದೇ ಹೋದಾಗ ಬೇಸರವಾಗಿ ಬಿಡುತ್ತದೆ. ಆಗ ನನಗೆ ಯಾರಿಲ್ಲ ಏಕಾಂಗಿತನ ಕಾಡಲು ಆರಂಭಿಸುತ್ತದೆ. ಇದೆಲ್ಲದರ ನಡುವೆ ಯಾವುದೋ ಕಾರಣಗಳಿಗೆ ಸಂಸಾರದೊಳಗಿನ ಜಗಳಗಳು ಕೂಡ ತಮಗೆ ಯಾರೂ ಇಲ್ಲ ಎಂಬ ಭಾವವನ್ನು ತಂದು ಬಿಡುತ್ತದೆ.

ಇನ್ನೊಂದೆಡೆ ಸದಾ ಒತ್ತಡದ ಕೆಲಸದಲ್ಲಿ ಸಿಲುಕಿ ಎಲ್ಲರಿಂದಲೂ ದೂರವಾಗಿ ಉಳಿದು ಬಿಡುವ ವ್ಯಕ್ತಿಗಳು ಕೆಲವೊಮ್ಮೆ ತಾವು ಕಷ್ಟಕ್ಕೆ ಸಿಲುಕಿದಾಗಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಕೆಲವು ಸಂದರ್ಭ ಯಾವುದೋ ಪರಿಸ್ಥಿತಿಗೆ ಸಿಲುಕಿ ಅಥವಾ ಆರೋಗ್ಯ ಕೆಟ್ಟು ಮನೆ ಸೇರಿ ಏಕಾಂಗಿ ಇರಬೇಕಾದಾಗ ಮಾನಸಿಕವಾಗಿ ಕುಗ್ಗುವ ಬದಲು ತಮ್ಮ ದಿನನಿತ್ಯದ ಒತ್ತಡ ಮತ್ತು ಸುಸ್ತಿನ ಮನಸ್ಥಿತಿಯಿಂದ ಹೊರಬರಲು ಇದೊಂದು ಮಾರ್ಗ ಎಂಬ ಮನಸ್ಥಿತಿಗೆ ಬರುವುದು ಬಹು ಅಗತ್ಯವಾಗಿದೆ.
ಧನಾತ್ಮಕ ಚಿಂತನೆಗೆ ಒತ್ತು ನೀಡಿ
ಕೆಲವೊಂದು ವಿಚಾರಗಳ ಬಗ್ಗೆ ಆಲೋಚಿಸುವಾಗ ಋಣಾತ್ಮಕ ವಿಚಾರವನ್ನು ಧನಾತ್ಮಕವಾಗಿ ಯೋಚಿಸುವುದನ್ನು ಕಲಿಯಬೇಕು. ನಾವೆಲ್ಲರೂ ಸಂಘ ಜೀವಿಗಳು ತಮ್ಮದೇ ಆದ ಕುಟುಂಬದ ಹಿನ್ನಲೆಯಿದೆ. ಹೀಗಾಗಿ ನಾವು ಸಮಯ ಸಿಕ್ಕಾಗ ಎಲ್ಲೋ ಅಪರಿಚಿತ ಊರಿಗೆ ಹೋಗಿ ಇದ್ದು ಬರುವುದಕ್ಕಿಂತಲೂ ಕುಟುಂಬದ ನಡುವೆ ಇದ್ದು ನೋವು ನಲಿವು ಹಂಚಿಕೊಳ್ಳುವ ಪ್ರಯತ್ನ ಮಾಡಬೇಕು. ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಎಲ್ಲರ ಒಡನಾಟದಲ್ಲಿರುವ ಪ್ರಯತ್ನ ಮಾಡಬೇಕು.
ನಾವು ಯಾವುದೇ ಪರಿಸ್ಥಿತಿ ಆದರೂ ಅದನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡುವುದನ್ನು ಕಲಿಯಬೇಕು. ನಮ್ಮಲ್ಲಿ ಹಲವರಿಗೆ ಪ್ರತಿದಿನ ನಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಸಮಯವಿಲ್ಲ. ನಾವು ಕೆಲವೊಮ್ಮೆ ಎಲ್ಲದಕ್ಕೂ ಸಮಯ ಮಾಡಿಕೊಂಡು ಕುಟುಂಬ ಸದಸ್ಯರನ್ನು ಸಂಪರ್ಕಿಸಿ. ಮಕ್ಕಳೊಂದಿಗೆ ಆಟವಾಡಿ, ಮನೆಯನ್ನು ಸ್ವಚ್ಛಗೊಳಿಸಿ ಅಥವಾ ಮತ್ತೊಮ್ಮೆ ಸಿಂಗರಿಸಿ, ಹೆತ್ತವರೊಂದಿಗೆ ಜತೆಯಲ್ಲಿ ಊಟಮಾಡಿ ಒಂದೊಳ್ಳೆಯ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡ ಮತ್ತು ಆತಂಕದ ಮಟ್ಟವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮಾನಸಿಕ ಆರೋಗ್ಯ ಗಟ್ಟಿ ಮಾಡಿಕೊಳ್ಳಿ
ನಮ್ಮನ್ನು ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಪುಸ್ತಕ ಓದುವುದು, ಕಳೆದುಹೋದ ಹವ್ಯಾಸಗಳಾದ ಡ್ರಾಯಿಂಗ್, ಪೈಂಟಿಂಗ್, ನಿಮ್ಮ ಹೂದೋಟವನ್ನು ಮತ್ತೊಮ್ಮೆ ಜೋಡಿಸುವುದು, ನೀರುಣಿಸುವುದು, ಅಡುಗೆ ಅಥವಾ ಹೊಸ ರುಚಿಯ ಪ್ರಯೋಗ, ಹೊಸದೊಂದು ಹವ್ಯಾಸವನ್ನು ರೂಢಿಸಿಕೊಳ್ಳುವುದು, ನಿಯಮಿತ ವ್ಯಾಯಾಮ, ವಾಕಿಂಗ್ ಮಾಡುವ ಮೂಲಕ ಮಾನಸಿಕ ಆರೋಗ್ಯವನ್ನು ಗಟ್ಟಿ ಮಾಡಿಕೊಳ್ಳಬೇಕು.
ಏನೇ ಆದರೂ ನಮ್ಮಲ್ಲಿನ ಕ್ರಿಯಾಶೀಲತೆ ಸಾಯದಂತೆ ನೋಡಿಕೊಂಡಿದ್ದೇ ಆದರೆ ನಾವು ಬದುಕಿನ ಶೇ. 50ರಷ್ಟು ಗೆದ್ದಂತೆಯೇ ಕ್ರಿಯಾಶೀಲತೆ ಇದ್ದರೆ ಕೆಲಸಗಳನ್ನು ಮಾಡಲು, ಖುಷಿಯಾಗಿ ಕಾಲ ಕಳೆಯಲು ಸಾಧ್ಯವಾಗುತ್ತದೆ. ಬಹಳಷ್ಟು ಸಲ ನಮ್ಮ ಖುಷಿಯೇ ನಮ್ಮೊಳಗಿನ ನೋವನ್ನು ತೊಡೆದು ಹಾಕುತ್ತದೆ. ಆಗ ನಾವು ಏಕಾಂಗಿ ಅಂಥ ಅನ್ನಿಸುವುದೇ ಇಲ್ಲ.












Click it and Unblock the Notifications