ನಮ್ಮ ಕೆಲಸಗಳು ಸಮಾಜಕ್ಕೆ ಮಾಡುವ ಸೇವೆಗಳಂತಿರಲಿ! ಯಾಕೆ ಗೊತ್ತಾ..?
ಜೀವನ ನಿರ್ವಹಣೆಗಾಗಿ ನಾವು ಹಲವು ವೃತ್ತಿಯನ್ನು ಮಾಡಲೇ ಬೇಕಾಗಿದೆ. ಕೆಲವರು ಯಾವದೋ ಒಂದು ಕೆಲಸಕ್ಕೆ ಸೀಮಿತರಾಗಿ ಅದನ್ನೇ ಮಾಡಿಕೊಂಡು ಹೋಗುತ್ತಿರುತ್ತಾರೆ. ಇನ್ನು ಕೆಲವರು ತಮ್ಮ ವೃತ್ತಿ ಕ್ಷೇತ್ರವನ್ನು ಬದಲಿಸುತ್ತಲೇ ಇರುತ್ತಾರೆ. ಯಾವುದರಲ್ಲೂ ಯಶಸ್ಸು ನೆಮ್ಮದಿ ಕಾಣದೆ ಪರದಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಲೈಫ್ ನಲ್ಲಿ ಸೆಟ್ಲ್ ಆಗಲೇ ಇಲ್ಲ ಎಂದು ಕೊರಗುತ್ತಲೇ ಇರುತ್ತಾರೆ.
ಇವತ್ತು ಕೆಲವರು ತಮ್ಮ ವೃತ್ತಿಯಲ್ಲಿ ನಿವೃತ್ತರಾದರೆ ಮತ್ತೆ ಕೆಲವರು ಉದ್ಯೋಗವನ್ನು ಬದಲಿಸುತ್ತಾ ಸಂಸ್ಥೆಯಿಂದ ಸಂಸ್ಥೆಗೆ ಹಾರುತ್ತಾ ಕೆಲಸವನ್ನು ಮಾಡುತ್ತಿರುತ್ತಾರೆ. ನಮ್ಮ ನಡುವೆ ಕೆಲಸ ಮಾಡುವ ಬಹುತೇಕ ಜನರಿಗೆ ತಾವು ಮಾಡುವ ಕೆಲಸದಲ್ಲಿ ನೆಮ್ಮದಿಯೇ ಇಲ್ಲದಾಗಿದೆ. ಈ ಕ್ಷೇತ್ರಕ್ಕೆ ಬರಬಾರದಿತ್ತು. ಬೇರೆ ಕ್ಷೇತ್ರಕ್ಕೆ ಹೋಗಬೇಕಾಗಿತ್ತು ಎಂದು ಗೊಣಗುತ್ತಿರುತ್ತಾರೆ.

ಯಾರು ತಮ್ಮ ವೃತ್ತಿಯನ್ನು ಗೌರವಿಸುತ್ತಾ ಇರುವುದರಲ್ಲಿ ತೃಪ್ತಿ ಪಡುತ್ತಾರೋ ಅವರು ಸುಖಿಗಳಾಗಿರುತ್ತಾರೆ. ಅವರು ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯೋಚಿಸುವುದಿಲ್ಲ. ಮನೆ, ಕಾರು, ಅಂಥ ಚಿಂತಿಸುವುದಿಲ್ಲ. ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ನಂಬುತ್ತಾರೆ.. ಹೀಗಾಗಿ ಅಂತವರು ನೆಮ್ಮದಿಯಾಗಿಯೇ ಇರುತ್ತಾರೆ. ಅಧ್ಯಾತ್ಮದಲ್ಲಿ ನಾವು ಏನನ್ನು ಮಾಡುತ್ತೇವೆಯೋ ಅದನ್ನು "ಕರ್ತವ್ಯ" ಎಂಬಂತೆ ಭಾವಿಸಿ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇ ಆದರೆ ಅದರಿಂದ ಒಳ್ಳೆಯ ಪ್ರತಿಫಲ ಸಿಗುತ್ತದೆ ಎಂದು ಹೇಳಲಾಗಿದೆ.
ಸ್ವಾಮಿ ವಿವೇಕಾನಂದರು ಹೇಳುವುದೇನು?
ಅಧ್ಯಾತ್ಮದ ವಿಚಾರವಾಗಿ ಹೇಳುವುದಾದರೆ ಕರ್ತವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸ್ವಾಮಿ ವಿವೇಕಾನಂದರು ಕರ್ಮಯೋಗದಲ್ಲಿ ಕರ್ತವ್ಯದ ಬಗ್ಗೆ ಒಂದಷ್ಟು ಹೇಳಿದ್ದಾರೆ. ಕರ್ತವ್ಯ ಎಂದರೆ ಏನು? ಎಂಬುದನ್ನು ನೋಡುತ್ತಾ ಹೋದರೆ ನಾವು ಮಾಡುವ ಕೆಲಸವೇ ಕರ್ತವ್ಯವಾಗಿದೆ ಅದು ಸದಾ ವಸ್ತುನಿಷ್ಠವಾದದ್ದು, ಅದರ ಲಕ್ಷಣ ಹೇಳುವುದು ಅಸಾಧ್ಯ.
ಕರ್ತವ್ಯವನ್ನು ವ್ಯಕ್ತಿ ನಿಷ್ಠ ದೃಷ್ಟಿಯಿಂದ ನೋಡಿದ್ದೇ ಆದರೆ ಅದು ದೈವೋನ್ಮುಖವಾಗಿ ನಮ್ಮನ್ನು ಮುಂದುವರೆಸುವ ಕಾರ್ಯವಾಗಿದೆ. ನಾವು ಮಾಡುವ ಕೆಲಸಕ್ಕೆ ಇಂತಿಷ್ಟು ಎಂದು ಕೂಲಿಯನ್ನು ಮಾಲೀಕರು ನೀಡಬಹುದು. ಆದರೆ ಅದರಾಚೆಗೂ ಅದರಲ್ಲಿ ಸತ್ಕರ್ಮ ಸತ್ ಕ್ರಿಯೆ. ಇದ್ದೇ ಇದೆ. ಹೀಗಾಗಿಯೇ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದು ನಮ್ಮ ಕರ್ತವ್ಯವಾಗುತ್ತದೆ.
ನಮ್ಮ ಕೆಲಸದ ಪ್ರತಿಫಲಗಳು ಭಿನ್ನವಾಗಿವೆ
ಒಬ್ಬನ ಜನ್ಮವನ್ನೂ ಹಾಗೂ ಅವನ ಸ್ಥಾನವನ್ನು ಅವಲಂಭಿಸಿದ ಕರ್ತವ್ಯಗಳನ್ನು ಕುರಿತು ಭಗವದ್ಗೀತೆಯಲ್ಲಿ ನಾವು ಯಾವ ಸಮಾಜದ ಮಧ್ಯೆ ಹುಟ್ಟಿದೇವೆಯೋ ಅದರ ಚಟುವಟಿಕೆಗಳಿಗೆ ಮತ್ತು ಆದರ್ಶಗಳಿಗೆ ಅನುಗುಣವಾಗಿ ಒಳ್ಳೆಯದಾಗುವಂತಹ ಕಾರ್ಯಗಳನ್ನು ಯಾವಾಗಲೂ ಮಾಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಲಾಗಿದೆ. ಇಲ್ಲಿ ಮುಖ್ಯವಾಗಿ ನಾವು ಮಾಡುವ ಕೆಲಸಕ್ಕೆ ಪ್ರತಿಫಲಗಳು ಭಿನ್ನವಾಗಿರಬಹುದು ಆದರೆ ಪ್ರಾಮಾಣಿಕತೆಯಿಂದ ಮಾಡಿದರೆ ಅದು ಸೇವೆಯಾಗಿ ಪರಿಗಣಿತವಾಗುವುದರಲ್ಲಿ ಎರಡು ಮಾತಿಲ್ಲ.
ಸ್ವಾಮಿ ವಿವೇಕಾನಂದರು ಹೇಳುವ ಪ್ರಕಾರ ಸಮಾಜಕ್ಕೆ ಹೊಂದಿಕೊಂಡು ನಾವು ಹೋಗಬೇಕು. ಯಾವುದೇ ಕಾಲದಲ್ಲಾಗಲಿ ನಮ್ಮ ಕರ್ತವ್ಯವೆಂದು ಅರಿತು ಮುನ್ನಡೆಯಬೇಕು. ನಾವು ಮೊದಲು ಜನ್ಮಸಿದ್ಧವಾದ ಕರ್ತವ್ಯವನ್ನು ಮಾಡಬೇಕು. ಅದು ನೆರವೇರಿದ ನಂತರ ಸಮಾಜದಲ್ಲಿ ನಮ್ಮ ಸ್ಥಾನಕ್ಕೆ ತಕ್ಕುದಾದ ಕರ್ತವ್ಯವನ್ನು ಮಾಡಬೇಕು. ಏಕೆಂದರೆ ಪ್ರತಿಯೊಬ್ಬನಿಗೂ ಒಂದೊಂದು ಸ್ಥಾನ ಕಲ್ಪಿತವಾಗಿರುವುದರಿಂದ ಆ ಸ್ಥಾನಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ನೆರವೇರಿಸಲೇ ಬೇಕಾಗುತ್ತದೆ.

ನಿಜವಾಗಿಯೂ ಕೆಲಸದಲ್ಲಿ ಮೇಲು ಕೀಳಿಲ್ಲ
ಇದೆಲ್ಲದರ ನಡುವೆಯೂ ನಮ್ಮಲ್ಲೊಂದು ಅಂದರೆ ನಮ್ಮ ಸ್ವಭಾವದಲ್ಲೊಂದು ಅಪಾಯವಿದೆ. ಅದೇನೆಂದರೆ ತನ್ನನ್ನು ತಾನು ಪರೀಕ್ಷಿಸಿಕೊಳ್ಳದಿರುವುದು. ಮೊದಲು ನಾವು ಮಾಡಿದ ಕಾರ್ಯದ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ಕರ್ತವ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದೇನೆಯೇ ಎಂಬುವುದನ್ನು ಅರಿತುಕೊಳ್ಳಬೇಕು. ಹೀಗಾದಾಗ ತಕ್ಷಣಕ್ಕೆ ಸಾಧಕ-ಬಾಧಕಗಳ ಅರಿವಾಗುತ್ತದೆ.
ಕೆಳಮಟ್ಟದ ಕೆಲಸ ಮಾಡುವುದರಿಂದ ವ್ಯಕ್ತಿ ಕೀಳಾಗುವುದಿಲ್ಲ. ವ್ಯಕ್ತಿಯು ಮಾಡುವ ಕರ್ತವ್ಯದ ಸ್ವಭಾವದ ದೃಷ್ಟಿಯಿಂದ ಅವನ ಯೋಗ್ಯತೆಯನ್ನು ನಿರ್ಣಯಿಸದೆ ಅದನ್ನು ಆತನು ಮಾಡುವ ರೀತಿಯಿಂದಲೂ, ಯಾವ ಮನೋಭಾವದಿಂದ ಮಾಡುತ್ತಾನೆ ಎಂಬುವುದರಿಂದಲೂ ನಿರ್ಣಯಿಸಬೇಕು. ಜತೆಗೆ ಕರ್ತವ್ಯ ಜ್ಞಾನದ ಮೂಲಕ ಮಾಡಿದ ಕಾರ್ಯ ಉಪಾಸನೆಯಂತೆ, ಪೂಜೆಯಂತೆ ಎಂಬುದನ್ನು ಮರೆಯಬಾರದು.
ಕರ್ತವ್ಯ ಪಾಲನೆಯಲ್ಲಿ ಏನೇನಿರಬೇಕು?
ಕರ್ತವ್ಯ ತತ್ವವು ಅದು ನೈತಿಕ ರೂಪದಲ್ಲಿರಲಿ ಅಥವಾ ಪ್ರೀತಿಯ ರೂಪದಲ್ಲಿರಲಿ ಎಲ್ಲ ಯೋಗಗಳಿಗೆ ಸಮಾನಾಗಿರುತ್ತದೆ. ಇದರ ಉದ್ದೇಶ ಅಲ್ಪಾತ್ಮವನ್ನು ನಿಗ್ರಹಿಸಿ, ಉನ್ನತ ಆತ್ಮವು ಬೆಳಗುವಂತೆ ಮಾಡುವುದಾಗಿದೆ. ಅಷ್ಟೇ ಅಲ್ಲ ಕೆಳಮಟ್ಟದಲ್ಲಿ ನಮ್ಮ ಶಕ್ತಿ ಪೋಲಾಗದಂತೆ ನೋಡಿಕೊಂಡು ಅದು ಉನ್ನತ ಸ್ತರದಲ್ಲಿ ವ್ಯಕ್ತವಾಗುವಂತೆ ಮಾಡಬೇಕು. ಇದು ಸಿದ್ದಿಸಬೇಕಾದರೆ ನಮ್ಮಲ್ಲಿ ತುಚ್ಛಾಭಿಲಾಷೆಗಳು ಮೇಲೇಳದಂತೆ ತಡೆಯಬೇಕು. ಇದು ಕರ್ತವ್ಯ ಪಾಲನೆಗೆ ಅತ್ಯವಶ್ಯಕ
ನಾವು ಅಭಿವೃದ್ಧಿ ಹೊಂದಲು ನಮಗೆ ಎಟುಕುವ ಕರ್ತವ್ಯವನ್ನು ಮಾಡುವುದೊಂದೇ ಮಾರ್ಗ. ಇದು ನಮ್ಮ ಜೀವನದಲ್ಲಿಯೂ, ಸಮಾಜದಲ್ಲಿಯೂ ಉಚ್ಚತರ ಪದವಿಗಳ ಸಂಬಂಧವಾದ ಕರ್ತವ್ಯಗಳನ್ನು ನೆರವೇರಿಸಲು ಶಕ್ತಿ ನೀಡುತ್ತದೆ. ಕರ್ತವ್ಯ ಯಾವುದೇ ರೀತಿಯದ್ದಾಗಲಿ ಅದನ್ನು ನಾವು ಅಸಡ್ಡೆ ಮಾಡಬಾರದು. ಕರ್ತವ್ಯವನ್ನು ಚೆನ್ನಾಗಿ ಮಾಡುವುದರಿಂದ ನಮ್ಮ ಶಕ್ತಿ ಹೆಚ್ಚುತ್ತದೆ.
ನಮ್ಮ ಕೆಲಸಗಳು ಸಾಧನೆಗಳಾಗಬೇಕು
ನೆನಪಿರಲಿ, ಅನಾರೋಗ್ಯಕರ ಪೈಪೋಟಿ, ಹೊಟ್ಟೆಕಿಚ್ಚನ್ನು ಸೃಷ್ಟಿಸಿ ನಮ್ಮ ಹೃದಯದಲ್ಲಿರುವ ದಯೆಗಳನ್ನೇ ಧ್ವಂಸ ಮಾಡುತ್ತವೆ. ಆದುದರಿಂದ ಕಾರ್ಯವನ್ನು ಒಳ್ಳೆಯ ಮನಸ್ಸಿನಿಂದ ಮಾಡುತ್ತಾ ಕರ್ತವ್ಯವನ್ನು ಪೂರೈಸಬೇಕು. ಹಾಗಾದಾಗ ಮಾತ್ರ ಮಾಡುವ ಕರ್ತವ್ಯಕ್ಕೆ ಫಲ ಮತ್ತು ನೆಮ್ಮದಿ ಸಿಗುತ್ತದೆ. ಕೆಲವು ಕೆಲಸಗಳು ಕೇವಲ ಕೆಲಸವಾಗಿಯೇ ಉಳಿಯುತ್ತದೆ. ಆದರೆ ಅದು ಕೂಡ ಸೇವೆಯಾಗಿ ಗುರುತಿಸುವಂತೆ ನಾವು ಮಾಡಬೇಕು ಅದೇ ನಿಜವಾದ ಸಾಧನೆಯಾಗುತ್ತದೆ.












Click it and Unblock the Notifications