ನಾವಂದುಕೊಂಡಂತೆ ಮಕ್ಕಳು ಮಾಡಬೇಕೆನ್ನುವುದೆಷ್ಟು ಸರಿ?
ನಾವು ಮಾಡಲಾಗದ್ದನ್ನು ಮಕ್ಕಳು ಮಾಡಲಿ ಎಂದು ಹೆಚ್ಚಿನವರು ಬಯಸುತ್ತಾರೆ. ಅದಕ್ಕಾಗಿ ಹಗಲಿರುಳು ಕಷ್ಟಪಡುತ್ತಾರೆ. ಆದರೆ ಪೋಷಕರ ನುಡಿಯಂತೆ ಮಕ್ಕಳು ನಡೆಯದೆ ಇದ್ದಾಗ ಅವರ ಮೇಲೆ ಇನ್ನಿಲ್ಲದ ಒತ್ತಡ ತರುತ್ತಾರೆ. ಆದರೆ ಪೋಷಕರ ಈ ಬಯಕೆಗಳನ್ನು ಎಲ್ಲ ಮಕ್ಕಳು ನೆರವೇರಿಸುತ್ತಾರೆ ಎನ್ನಲಾಗುವುದಿಲ್ಲ. ಒಂದು ವೇಳೆ ನೆರವೇರಿಸದೆ ಹೋದರೆ ಭ್ರಮನಿರಸರಾಗ ಬೇಕಾಗುತ್ತದೆ.
ಇನ್ನು ನಮ್ಮ ಮಕ್ಕಳು ನಾವು ಹೇಳಿದಂತೆಯೇ ಆಗಬೇಕೆಂದು ಬಯಸುವ ತಂದೆ ತಾಯಂದಿರು ಇರುತ್ತಾರೆ. ಅವರಿಗೆ ತನ್ನ ಮಕ್ಕಳು ಹೇಗಿರಬೇಕೆನ್ನುವುದಕ್ಕಿಂತ ಹೆಚ್ಚಾಗಿ ಪಕ್ಕದವರಿಗಿಂತ ತುಸು ಹೆಚ್ಚಾಗಿಯೇ ಇರಬೇಕೆಂದು ಬಯಸುತ್ತಾರೆ. ಇಲ್ಲಿ ಪೋಷಕರ ಬಯಕೆಗೆ ಮಕ್ಕಳು ಬಲಿಯಾಗುತ್ತಾರೆ. ಅವರ ಸ್ವಾತಂತ್ರ್ಯವನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಪೋಷಕರೇ ಕಿತ್ತುಕೊಂಡು ಬಿಟ್ಟಿರುತ್ತಾರೆ. ಅಪ್ಪ ಅಮ್ಮನ ಒತ್ತಡಕ್ಕೆ ಮಣಿದು ಮಕ್ಕಳು ತಮಗೆ ಇಷ್ಟವಿಲ್ಲದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಇಷ್ಟಕ್ಕೂ ಇವತ್ತು ನಮ್ಮ ಮಕ್ಕಳನ್ನು ಸ್ವತಂತ್ರರಾಗಿ ಬದುಕಲು ಬಿಡುತ್ತಿದ್ದೇವಾ? ಎಂಬ ಪ್ರಶ್ನೆಯನ್ನು ಕೇಳಿದರೆ ಹೆಚ್ಚಿನವರಿಂದ ಇಲ್ಲ ಎಂಬ ಉತ್ತರವೇ ಹೆಚ್ಚಾಗಿ ಕೇಳಿ ಬರುತ್ತದೆ. ಇದಕ್ಕೆ ನಾವೇನು ಆಗಿಲ್ಲವೋ ಅದನ್ನು ಅವರಲ್ಲಿ ಕಾಣಲು ಪ್ರಯತ್ನಿಸುತ್ತೇವೆ. ಹಾಗೆಮಾಡಲು ಶತಾಯಗತಾಯ ಪ್ರಯತ್ನಿಸುತ್ತೇವೆ. ಹೀಗಾಗಿ ಮಕ್ಕಳು ಹಿಂದಿನವರಂತೆ ಮಾನಸಿಕವಾಗಿ ಆರೋಗ್ಯವಾಗಿಲ್ಲ. ಸದಾ ಓದಿನ ಗುಂಗು, ಭಯದಲ್ಲೇ ಕಾಲ ಕಳೆಯುವ ಹಂತಕ್ಕೆ ಬಂದು ನಿಲ್ಲುವಂತಾಗಿದೆ.
ಆಸ್ತಿ ಮಾಡಿಡುವುದೇ ಎಲ್ಲರ ಗುರಿ
ನಮ್ಮಲ್ಲಿ ಹೆಚ್ಚಿನವರನ್ನು ಆಸೆಗಳು ಆಳುತ್ತಿವೆ. ಜತೆಗೆ ಅವರಿಗೆ ನಾವು ಸಂಪಾದಿಸಲಿಲ್ಲ ನಮ್ಮ ಮಕ್ಕಳು ಸಂಪಾದಿಸಬೇಕು. ನಾವೇನು ಮಾಡಲಿಲ್ಲವೋ ಅದನ್ನು ಮಕ್ಕಳು ಮಾಡಬೇಕೆಂದು ಬಯಸುತ್ತಾರೆ. ಇದು ಪ್ರತಿಯೊಬ್ಬ ಮನುಷ್ಯನ ಸಹಜ ಆಸೆಯೇ. ಹಾಗೆಂದು ನ್ಯಾಯ ಮಾರ್ಗ ಬಿಟ್ಟು ಅನ್ಯಾಯದ ಹಾದಿಯಲ್ಲಿ ಸಾಗಿ ಒಂದಷ್ಟು ಸಂಪಾದನೆ ಮಾಡಿ ನಾನು ಸತ್ತ ಮೇಲೂ ಮಕ್ಕಳು ಮೊಮ್ಮಕ್ಕಳು ಸುಖವಾಗಿ ಇರಲಿ ಎಂದು ಬಯಸುವುದು ದಡ್ಡತನವಾಗಿ ಬಿಡುತ್ತದೆ.

ಎಲ್ಲವನ್ನೂ ನಾವೇ ಮಾಡಿಡುವ ಹುಚ್ಚುತನ, ಮತ್ತು ತಾನು ಹೇಳಿದಂತೆ ಅವರು ಇರಬೇಕೆನ್ನುವ ಹಠ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮಲ್ಲೊಂದು ಮನೋಭಾವವಿದೆ. ನಾವು ಕಷ್ಟಪಟ್ಟಿದ್ದೇ ಸಾಕು. ನಮ್ಮ ಮಕ್ಕಳು ಕಷ್ಟಪಡಬಾರದು ಎಂಬುದು. ಇದು ಒಂದು ಲೆಕ್ಕದಲ್ಲಿ ನಿಜ ಎನ್ನುವುದಾದರೂ ನಾವು ನಮ್ಮ ಮಕ್ಕಳಿಗೆ ಕಷ್ಟದ ಅರಿವು ಮಾಡದೆ ಹೋದರೆ ಅವರಿಗೆ ನಿಜವಾದ ಬದುಕು ಅರ್ಥವಾಗುವುದು ಹೇಗೆ? ಇಂತಹ ಮನೋಭಾವದಿಂದಲೇ ಮಕ್ಕಳು ಚಿಕ್ಕಪುಟ್ಟ ವಿಚಾರಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಬಂದು ನಿಂತುಬಿಟ್ಟಿವೆ.
ಮಕ್ಕಳಿಗೆ ನ್ಯಾಯದ ಹಾದಿ ತೋರಿಸಬೇಕಿದೆ
ನಮ್ಮ ಮಕ್ಕಳಿಗೆ ಸಂಪಾದನೆಯ ಹಾದಿಯನ್ನು ಹೇಳಿಕೊಡುತ್ತಿದ್ದೇವೆ. ಸಂಪಾದನೆ ಮಾಡಿ ಒಂದಷ್ಟು ಹಣ ಕೂಡಿಟ್ಟುಕೊಂಡರೆ ನೆಮ್ಮದಿಯಾಗಿ ಬದುಕ ಬಹುದು ಎಂಬುದು ನಮ್ಮ ಕಲ್ಪನೆ. ಹಾಗಾಗಿಯೇ ಏನು ಓದಿದರೆ ಯಾವ ಕೆಲಸ ಸಿಗುತ್ತೆ? ಎಷ್ಟು ಸಂಪಾದಿಸಬಹುದು ಎಂಬ ಲೆಕ್ಕಚಾರದಲ್ಲಿ ಲಕ್ಷಾಂತರ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಕ್ಕಳನ್ನು ಓದಿಸುತ್ತಿದ್ದೇವೆ. ಓದು ಮುಗಿದ ತಕ್ಷಣ ಅವರು ಸಂಪಾದನೆಯ ದಾರಿ ಹಿಡಿದು ಕೈತುಂಬಾ ಹಣವನ್ನು ಸಂಪಾದಿಸುತ್ತಾರೆ.
ಹಣ ಹೆಚ್ಚಾದಂತೆ ಅದನ್ನು ಖರ್ಚು ಮಾಡುವ ಮಾರ್ಗವನ್ನು ಹುಡುಕುತ್ತಾರೆ. ಇವತ್ತು ನಾವು ನಮ್ಮನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದ್ದೇನೆಂದರೆ ನಾವು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಸುಸಂಸ್ಕೃತ ಬದುಕಿಗೆ ಬೇಕಾದ ಗುಣಗಳನ್ನು ಕಲಿಸುತ್ತಿದ್ದೇವೆಯೇ? ಬಹಳಷ್ಟು ಹೆತ್ತವರಿಗೆ ನಮ್ಮ ಮಕ್ಕಳು ಯಾರಿಗಿಂತಲೂ ಕಡಿಮೆ ಇಲ್ಲದಂತೆ ಬದುಕಬೇಕೆಂಬ ಹುಚ್ಚು ಬಯಕೆಯಿದೆ. ಹಾಗಾಗಿ ಅವರು ಮಕ್ಕಳು ಕೇಳಿದ್ದನ್ನೆಲ್ಲಾ ಕೊಡುತ್ತಾ ಹೋಗುತ್ತಾರೆ. ನಾವಂತೂ ಏನೂ ಮಾಡಿಲ್ಲ ಮಕ್ಕಳಾದರೂ ಮಾಡಲಿ ಎಂಬ ಮನೋಭಾವ ಅವರದ್ದಾಗಿರುತ್ತದೆ.
ಮಕ್ಕಳ ಅಭಿಲಾಷೆಗೂ ಮನ್ನಣೆ ನೀಡಿ
ನಮ್ಮ ಕುಟುಂಬಗಳು ಕಿರಿದಾಗುತ್ತಿವೆ. ಅಕ್ಕ ತಂಗಿ ಅಣ್ಣ ತಮ್ಮ ಹೀಗೆ ಎಲ್ಲರೊಂದಿಗೆ ಆಟವಾಡುತ್ತಾ ಕೂಡಿ ಬೆಳೆಯುತ್ತಿದ್ದ ಕುಟುಂಬ ಚಿಕ್ಕದಾಗುತ್ತಿದೆ. ದೊಡ್ಡ ಕುಟುಂಬದಿಂದ ಹೊರಬಂದು ಬದುಕು ಕಟ್ಟಿಕೊಂಡು ಗಂಡ, ಹೆಂಡತಿ, ಮಗುಗೆ ಸೀಮಿತವಾಗುತ್ತಿದೆ. ಒಂಟಿಯಾಗಿ ಬೆಳೆಯುವ ಮಗುವಿಗೆ ಸಂಬಂಧದ ಅರಿವಿಲ್ಲ. ಅಣ್ಣ, ಅಕ್ಕ, ತಮ್ಮ, ತಂಗಿ ಇದರ ಬಗ್ಗೆ ಗೊತ್ತೇ ಇಲ್ಲ. ಇದು ಇವತ್ತು ನಡೆಯುತ್ತಿರುವ ಹಲವು ಅನಾಚಾರಗಳಿಗೆ ಕಾರಣವಾಗುತ್ತಿದೆ. ನಮ್ಮ ಮಕ್ಕಳನ್ನು ಬೇರೆಯವರೊಂದಿಗೆ ಬೆರೆಯಲು ಬಿಡುತ್ತಿಲ್ಲ ಓದು, ಎಂದು ಒತ್ತಡ ತರುತ್ತಾ ಬಂಧನಲ್ಲೇ ಸಿಲುಕಿಸುತ್ತಿದ್ದೇವೆ.
ನಾವು ಹೇಗೆ ಬದುಕಿದ್ದೇವೆ ಹಾಗೆಯೇ ಅವರು ಕೂಡ ಸ್ವತಂತ್ರರಾಗಿ ಬದುಕಲು ಅವರ ಬದುಕನ್ನು ಅವರೇ ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಆದರೆ ನಾವು ಹಾಗೆ ಬದುಕಲು ಅವಕಾಶವೇ ನೀಡುತ್ತಿಲ್ಲ ಅದೇ ದುರಂತವಾಗಿದೆ. ಇದರ ಪರಿಣಾಮಗಳು ಕಣ್ಣಮುಂದೆ ಇದ್ದರೂ ನಾವು ಕಲಿತುಕೊಳ್ಳುತ್ತಿಲ್ಲ. ಇನ್ನಾದರೂ ನಾವು ಮಕ್ಕಳ ಅಭಿಲಾಷೆ ಕೇಳಿ ಅದರಂತೆ ಅವರಿಗೆ ಬದುಕಲು ದಾರಿ ಮಾಡಿಕೊಡಬೇಕಾಗಿದೆ. ಆಗ ಅವರು ನೆಮ್ಮದಿಯ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.












Click it and Unblock the Notifications