Jowar Roti: ಉತ್ತರ ಕರ್ನಾಟಕದ ಪ್ರಸಿದ್ಧ ಜೋಳದ ರೊಟ್ಟಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಕಟಂ ಕಟಂ ಅಂತ ಕಡಿತಾಯಿದ್ರೆ ಅದೆಷ್ಟು ರುಚಿ ಈ ಜೋಳದ ರೊಟ್ಟಿ. ಮನೆಯಲ್ಲಿ ಅಮ್ಮ ಈ ಜೋಳದ ರೊಟ್ಟಿಯನ್ನು ಮಾಡ್ತಾ ಇದ್ದರೆ ಹೊಟ್ಟೆ ಹಸಿವಾಗಲು ಶುರುವಾಗುತ್ತದೆ. ಜೋಳದ ರೊಟ್ಟಿ, ಪುಡಿ ಚಟ್ನಿ ಜೊತೆಗೆ ಮೊಸರೋ ಅಥವಾ ಅಡುಗೆ ಎಣ್ಣೆನೋ ಇದ್ದು ಬಿಟ್ರೆ ಸಾಕು ಅಂದಿನ ಊಟ ಸಂತೃಪ್ತಿ.
ಈ ಜೋಳದ ರೊಟ್ಟಿ ಉತ್ತರ ಕರ್ನಾಟಕದಲ್ಲಿ ತುಂಬಾನೇ ಫೇಮಸ್. ಇಲ್ಲಿ ಜೋಳದ ರೊಟ್ಟಿ ಇಲ್ದೆ ಇದ್ದರೆ ಆ ದಿನದ ಊಟ ಪೂರ್ಣ ಆಗೋದೇ ಇಲ್ಲ. ಹೀಗಾಗಿ ಬಹುತೇಕ ಮನೆಯಲ್ಲಿ ಜೋಳದ ರೊಟ್ಟಿ ಮಾಡಲಾಗುತ್ತದೆ. ಆದರೆ ಕರ್ನಾಟಕದ ಅನೇಕ ಭಾಗಗಲ್ಲಿ ಜೋಳದ ರೊಟ್ಟಿ ಬಗ್ಗೆ ತಿಳಿದಿದ್ದರೂ ಅದರ ಸವಿಯನ್ನು ಸವಿದಿರುವವರ ಸಂಖ್ಯೆ ತೀರಾ ಕಡಿಮೆ.

ಜೋಳದ ರೊಟ್ಟಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿದ್ದರೂ ರಾಜ್ಯದ ಹಲವೆಡೆ ಹೋಟೆಲ್ ಹಾಗೂ ಖಾನಾವಳಿಗಳಲ್ಲಿ ಸಿಗುತ್ತದೆ. ಆದರೆ ದಾವಣಗೆರೆ ಬೆಣ್ಣೆ ದೋಸೆಯನ್ನು ದಾವಣಗೆರೆಯಲ್ಲಿಯೇ ತಿನ್ಬೇಕು ಅಂತಾರಲ್ಲ ಹಾಗೇ ಜೋಳದ ರೊಟ್ಟಿಯನ್ನು ಉತ್ತರ ಕರ್ನಾಟಕದಲ್ಲಿ ತಿಂದರೆನೇ ರುಚಿ ಜಾಸ್ತಿ. ಹೀಗಾಗಿ ಅನೇಕ ಜನ ಉದ್ಯೋಗ ಅರಸಿ ಬೆಂಗಳೂರು ಅಥವಾ ಇನ್ನಿತರ ರಾಜ್ಯಗಳು ಹಾಗೂ ಹೊರದೇಶಗಳಿಗೆ ಹೋದರೂ ಜೋಳದ ರೊಟ್ಟಿಯನ್ನು ತಮ್ಮ ಮನೆಗಳಲ್ಲಿಯೇ ಮಾಡಿಸಿಕೊಂಡು ತಿನ್ನಲು ಬಯಸುತ್ತಾರೆ.
ಈ ಜೋಳದ ರೊಟ್ಟಿ ತಿಂದವರು ತುಂಬಾ ಗಟ್ಟಿ ಎನ್ನುವ ಮಾತು ಇದೆ. ಹೀಗಾಗಿ ಇದಕ್ಕೆ ಬೇಡಿಕೆ ಕೂಡ ಹೆಚ್ಚು. ಇದನ್ನು ಮಾಡಲು ನೀರು ಒಂದಿದ್ದರೆ ಸಾಕು. ಉಪ್ಪು, ಎಣ್ಣೆ, ಮಸಾಲೆ ಇದ್ಯಾವುದು ಕೂಡ ಬೇಕಾಗೇ ಇಲ್ಲ. ಈ ಎಲ್ಲಾ ಪಾದರ್ಥಗಳಿಂದ ದೂರವಿರುವುದರಿಂದಲೇ ರೊಟ್ಟಿ ಆರೋಗ್ಯ ಸ್ನೇಹಿ ಆಹಾರವಾಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ರೊಟ್ಟಿಯನ್ನು ಇಷ್ಟಪಟ್ಟು ತಿನ್ನುತ್ತಾರೆ.
ಬೆಳಿಗ್ಗೆ ಇಡ್ಲಿ, ದೋಸೆ, ಒಡಾ, ಬಜ್ಜಿ ತಿನ್ನೋ ಬದಲು ರೊಟ್ಟಿ ತಿನ್ನುವ ಮೂಲಕವೇ ಈ ಭಾಗದ ರೈತರು ತಮ್ಮ ದೈನಂದಿನ ಕೆಲಸ ಆರಂಭಿಸುವುದು ರೂಢಿ. ಹೀಗಾಗಿ ಬೆಳ್ಳಂಬೆಳಿಗ್ಗೆ ಹಲವಾರು ಹಳ್ಳಿ ಮನೆಗಳಲ್ಲಿ ರೊಟ್ಟಿ ತಟ್ಟುವ ಶಬ್ದ ಕೇಳಿ ಬರುತ್ತದೆ. ಆದರೆ ಇತ್ತೀಚೆಗೆ ಈ ರೊಟ್ಟಿ ತಯಾರಿಸುವ ವಿಧಾನ ಬದಲಾಗಿದೆ. ರೊಟ್ಟಿಯನ್ನು ತಟ್ಟಿ ಮಾಡುವುದಕ್ಕಿಂತ ಚಪಾತಿಯಂತೆ ಲಟ್ಟಿಸಿ ಮಾಡುವುದು ಆರಂಭವಾಗಿದೆ. ಹಾಗಾದರೆ ಈ ಜೋಳದ ರೊಟ್ಟಿಯನ್ನು ಹೇಗೆ ತಯಾರಿಸಲಾಗುತ್ತದೆ?

ಜೋಳದ ರೊಟ್ಟಿ ತಯಾರಿಸುವ ಮುನ್ನ ಗಮನಿಸಬೇಕಾದ ವಿಷಯಗಳು:-
ಸಾಮಾನ್ಯವಾಗಿ ಜೋಳದ ರೊಟ್ಟಿ ಮಾಡುವ ಮುನ್ನ ನೀವು ಕೊಂಡು ತರುವ ಜೋಳದ ಮೇಲೆ ಇದರ ರುಚಿ ಅವಲಂಬಿತವಾಗಿರುತ್ತದೆ. ಬಿಳಿ ಜೋಳದ ಹಿಟ್ಟಿನ ರೊಟ್ಟಿ ತುಂಬಾನೇ ಟೇಸ್ಟಿ. ಮಾತ್ರವಲ್ಲದೆ ಇದನ್ನು ಹಿಟ್ಟಾಗಿ ಮಾಡುವುದು ಕೂಡ ಇದರ ರುಚಿಯನ್ನು ಹೆಚ್ಚಿಸುತ್ತದೆ.
ಜೋಳವನ್ನು ಮಿಕ್ಸಿಗೆ ಹಾಕುವುದರಿಂದ ರೊಟ್ಟಿ ರುಚಿ ಕಳೆದುಕೊಳ್ಳಬಹುದು. ಹೀಗಾಗಿ ಜೋಳವನ್ನು ಗಿರಿಣಿ ಅಥವಾ ಒರಳು ಕಲ್ಲಿನಿಂದ ಕುಟ್ಟಿ ಪುಡಿ ಮಾಡಿದ ಹಿಟ್ಟು ತುಂಬಾ ಒಳ್ಳೆಯದು. ಹಿಟ್ಟನ್ನು ತುಂಬಾ ಸಣ್ಣಕೆ ಪುಡಿ ಮಾಡಬೇಕು. ಇಲ್ಲದಿದ್ದರೆ ರೊಟ್ಟಿ ಮಾಡುವಾಗ ಸೀಳಿ ಹೋಗುವ ಸಾಧ್ಯತೆ ಇರುತ್ತದೆ.
ಇಷ್ಟು ಮಾತ್ರವಲ್ಲ ರೊಟ್ಟಿ ರುಚಿ ಹೆಚ್ಚಾಗಬೇಕಾದರೆ ಇದನ್ನು ನೀರಿನಿಂದ ಕಲಿಸುವಾಗಲೂ ಜಾಗರೂಕರಾಗಿರಬೇಕು. ಕೆಲ ಬಾರಿ ಹಿಟ್ಟಿಗೆ ಬಿಸಿ ನೀರಿನ ಅವಶ್ಯತೆ ಇರುತ್ತದೆ. ಕೆಲ ಬಾರಿ ಸಾಮಾನ್ಯ ನೀರಿನಿಂದಲೂ ಹಿಟ್ಟು ಮಾಡಿಕೊಳ್ಳಬಹುದು. ಆದರೆ ಆರಂಭದಲ್ಲಿ ಇದನ್ನು ತಿಳಿಯಲು ಸ್ವಲ್ಪ ಹಿಟ್ಟಿನಿಂದ ಮಾತ್ರ ರೊಟ್ಟಿ ತಯಾರಿಸುವುದು ಒಳ್ಳೆಯದು..

ಜೋಳದ ರೊಟ್ಟಿ ತಯಾರಿಸುವ ವಿಧಾನ:-
* ಮೂರು ಕಪ್ ಜೋಳದ ಹಿಟ್ಟಿಗೆ ಒಂದು ಕಪ್ ನೀರು ಹಾಕಿ ಕಲಸಿಕೊಳ್ಳಿ. ಇದು ಚಪಾತಿ ಹದದಲ್ಲಿರಬೇಕು ಎನ್ನುವುದನ್ನು ನೆನಪಿನಲ್ಲಿಡಿ.
* ಈ ಹಿಟ್ಟನ್ನು ಚೆನ್ನಾಗಿ ಗಂಟು ಇರದಂತೆ ನಾದಿಕೊಳ್ಳಬೇಕು. ಸ್ವಲ್ಪ ಸ್ವಲ್ಪ ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿಕೊಂಡರೆ ಸಾಕು
* ಇತ್ತ ಒಲೆಯ ಮೇಲೆ ತವಾ ಕಾಯಲು ಇಡಿ.
* ಬಳಿಕ ಚಪಾತಿ ಮಾಡುವಾಗ ಮಾಡುವಷ್ಟು ಸಣ್ಣ ಉಂಡೆಯನ್ನು ಮಾಡಿಕೊಂಡು ಅದಕ್ಕೆ ಒಣ ಹಿಟ್ಟು ಹಚ್ಚಿ ತಟ್ಟಬೇಕು.
* ರೊಟ್ಟಿ ತಟ್ಟುವಾಗ ಅದನ್ನು ಅಂಟಿಕೊಳ್ಳದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ.
* ಅದನ್ನು ತಟ್ಟುತ್ತಲೇ ತಿರುಗಿಸಬೇಕು. ಹೀಗೆ ಮಾಡುವುದರಿಂದ ರೊಟ್ಟಿ ಅಗಲವಾಗುತ್ತದೆ. ಜೊತೆಗೆ ಅಂಟಿಕೊಳ್ಳುವುದಿಲ್ಲ.
* ಬಳಿಕ ಅದನ್ನು ತವಾ ಮೇಲೆ ಹಾಕಿ, ಉರಿಯನ್ನು ಹೆಚ್ಚಿಸಬೇಕು.
* ನಂತರ ಒಂದು ಸಣ್ಣ ಬಟ್ಟೆಯನ್ನು ನೀರಿನಲ್ಲಿ ಅದ್ದಿ ರೊಟ್ಟಿಗೆ ಆ ನೀರನ್ನು ಸವರಬೇಕು.
* ಬಳಿಕ ಉರಿಯನ್ನು ಕಡಿಮೆ ಮಾಡಿ ರೊಟ್ಟಿಯ ಇನ್ನೊಂದು ಬದಿ ಬೇಯಿಸಬೇಕು
* ರೊಟ್ಟಿ ಬೇಯಿಸುವಾಗ ರೊಟ್ಟಿ ಉಬ್ಬಿದರೆ ನೀವು ಮಾಡಿದ ರೊಟ್ಟಿ ಪರಿಪೂರ್ಣವಾಗಿದೆ ಎಂದರ್ಥ.
ಇನ್ನೂ ಇದನ್ನು ತಟ್ಟಲು ಆಗುವುದಿಲ್ಲ ಎನ್ನುವವರು ಲಟ್ಟಣಿಕೆಯಿಂದಲೂ ಚಪಾತಿಯಂತೆ ಮಾಡಬಹುದು. ಆದರೆ ಈ ಹಿಟ್ಟನ್ನು ಬಿಸಿ ನೀರಿನಲ್ಲೇ ಕಲಿಸಿಕೊಳ್ಳಬೇಕು. ಈ ಹಿಟ್ಟನ್ನು ಉಂಡೆ ಮಾಡಿ ಚಪಾತಿಯಂತೆ ಲಟ್ಟಿಸಿ ನೀರನ್ನು ಸವರಿ ಸುಟ್ಟರೆ ಬಿಸಿ ಬಿಸಿ ಜೋಳದ ರೊಟ್ಟಿ ಸವಿಯಲು ಸಿದ್ದ. ನೀವು ಕೂಡ ರೊಟ್ಟಿ ಬಗ್ಗೆ ತಿಳಿದಿಲ್ಲ ಅಂತಾದರೆ ಮನೆಯಲ್ಲಿ ರೊಟ್ಟಿ ತಯಾರಿಸಿ ಆನಂದಿಸಬಹುದು. ಇದರೊಂದಿಗೆ ಯಾವುದೇ ಸೊಪ್ಪಿನ ಪಲ್ಯ, ಯಾವುದೇ ತರಕಾರಿಯಿಂದ ಮಾಡಿದ ಪಲ್ಯ, ಎಣ್ಣೆ ಬದನೆಕಾಯಿ ತಿನ್ನಲು ಅದ್ಬುತವಾಗಿರುತ್ತದೆ.












Click it and Unblock the Notifications