Shunti Chutney Recipe: ಮನೆಯಲ್ಲೇ ಖಡಕ್ ಶುಂಠಿ ಚಟ್ನಿ ತಯಾರಿಸುವುದು ಹೇಗೆ..?
ಇನ್ನೇನು ಮಳೆ ಆರಂಭವಾಯ್ತು..ಮಳೆಯ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಆರಂಭವಾಗುತ್ತದೆ. ಒಮ್ಮೆ ಬಿಸಿಲು ಒಮ್ಮೆ ಮಳೆ ಈ ವಾತಾವರಣ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಶೀತ, ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳು ಆರಂಭವಾಗುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಆರೋಗ್ಯವನ್ನು ಕಾಪಾಡುವ ಆಹಾರವನ್ನು ಸೇವಿಸಬೇಕಾಗುತ್ತದೆ. ಈ ಸಮಯದಲ್ಲಿ ಶುಂಠಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
ಶುಂಠಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಶುಂಠಿ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದ ಉಷ್ಣತೆಯನ್ನು ಸಹ ಕಡಿಮೆ ಮಾಡುತ್ತದೆ. ಹೀಗಾಗಿ ಆಹಾರದಲ್ಲಿ ಶುಂಠಿ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಿ. ಆರೋಗ್ಯಕ್ಕೆ ಉಪಯುಕ್ತವಾಗಿರುವ ಶುಂಠಿಯಿಂದ ಸರಳವಾಗಿ ತಯಾರಿಸುವ ಚಟ್ನಿಯ ವಿವರ ಇಲ್ಲಿದೆ.

ಶುಂಠಿ ಚಟ್ನಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಕತ್ತರಿಸಿದ ಶುಂಠಿ-1/4 ಕಪ್
ಕೆಂಪು ಮೆಣಸಿನಕಾಯಿ-5-8
ದಾಲ್-1 ಚಮಚ
ಉದ್ದಿನ ಬೇಳೆ-1 ಚಮಚ
ಹುಣಸೆಹಣ್ಣು
ಕರಿಬೇವಿನ ಎಲೆಗಳು
ಅರಿಶಿನ- ಒಂದು ದೊಡ್ಡ ಚಿಟಿಕೆ
ಇಂಗು
ಬೆಲ್ಲ-1/2 ಕಪ್
ಅಡುಗೆ ಎಣ್ಣೆ-2 ಚಮಚ
ಉಪ್ಪು- ನಿಮ್ಮ ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
ಅಡುಗೆ ಎಣ್ಣೆ-1 ಚಮಚ
ಸಾಸಿವೆ- 1/2 ಚಮಚ
ಜೀರಿಗೆ-1/2 ಚಮಚ
ಎಳ್ಳು-1/2 ಚಮಚ
ಕರಿಬೇವಿನ ಎಲೆಗಳು

ಶುಂಠಿ ಚಟ್ನಿ ತಯಾರಿಸುವ ಕ್ರಮ
ಮೊದಲು ಶುಂಠಿಯನ್ನು ತೆಗೆದುಕೊಂಡು ಸಿಪ್ಪೆ ತೆಗೆದು ತೊಳೆದು ಕತ್ತರಿಸಿಕೊಳ್ಳಿ. ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಕೆಂಪು ಮೆಣಸಿನಕಾಯಿಯನ್ನು ಸೇರಿಸಿ ಸ್ವಲ್ಪ ಸಮಯದವರೆಗೆ ಹುರಿಯಿರಿ. ಕಡಲೆಬೇಳೆ ಮತ್ತು ಉದ್ದಿನಬೇಳೆ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಶುಂಠಿಯನ್ನು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ. ಬಳಿಕ ಹುಣಸೆಹಣ್ಣು ಸೇರಿಸಿ. ನಂತರ ಕರಿಬೇವಿನ ಎಲೆಗಳು, ಅರಿಶಿನ ಮತ್ತು ಇಂಗು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ. ಬಳಿಕ ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹುರಿದುಕೊಂಡು. ಸ್ವಲ್ಪ ಸಮಯದ ನಂತರ ಸ್ಟೌವ್ ಆಫ್ ಮಾಡಿ. ಬಳಿಕ ಈ ಮಿಶ್ರಣ ತಣ್ಣಗಾಗುವರೆಗೂ ಕಾದು ರುಬ್ಬಿಕೊಳ್ಳಿ. ಕೊನೆಯಲ್ಲಿ ಬೇರೆ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ ಒಗ್ಗರಣೆ ಹಾಕಿದರೆ ರುಚಿ-ರುಚಿಯಾದ ಶುಂಠಿ ಚಟ್ನಿ ಸವಿಯಲು ಸಿದ್ಧವಾಗುತ್ತದೆ.












Click it and Unblock the Notifications