Mavinakayi Neer Gojju: ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ನೀರು ಗೊಜ್ಜು ಮಾಡಿ ಸವಿಯಿರಿ!
ಬೇಸಿಗೆ ಆರಂಭವಾಯ್ತು ಇನ್ನೇನು ಮಾವಿನ ಕಾಯಿಯ ಸೀಜನ್ ಕೂಡ ಶುರವಾಗಿದೆ. ವಿವಿಧ ಬಗೆಯ ಮಾವಿನ ಕಾಯಿಗಳು ಮಾರುಕಟ್ಟೆಗೆ ಬಂದಿದ್ದು, ಅಲ್ಲಲ್ಲಿ ಮಾವಿನ ಹಣ್ಣುಗಳ ಮಾರಾಟ ಕೂಡ ಆರಂಭವಾಗಿದೆ.
ಸಾಮಾನ್ಯವಾಗಿ ಎಲ್ಲರೂ ಮಾವಿನ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಮಾವಿನ ಕಾಯಿ ಸೇವನೆ ಕೂಡ ಒಳ್ಳೆಯದು. ಜೀವಸತ್ವಗಳು, ಖನಿಜಗಳು, ಫೈಬರ್ ಮಾವಿನ ಕಾಯಿಯಲ್ಲಿ ಹೆಚ್ಚಾಗಿ ಇರುತ್ತದೆ. ಮಾವಿನ ಕಾಯಿಯಲ್ಲಿ ವಿಟಮಿನ್ ಎ,ಸಿ ಮತ್ತುಇ ಹೆಚ್ಚಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ.

ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಮಾವಿನ ಕಾಯಿ ಸೇವನೆ ಒಳ್ಳೆಯದು. ಇನ್ನು ಅಸಿಡಿಟಿ, ಅಜೀರ್ಣ, ಮಲಬದ್ಧತೆ ನಿವಾರಣೆಗೂ ಮಾವಿನ ಕಾಯಿ ತಿನ್ನಬೇಕು. ಮಾವಿನ ಕಾಯಿ ಹುಳಿ, ರುಚಿ ಇಲ್ಲ ಎನ್ನುವವರು, ಮಾವಿನ ಕಾಯಿಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸಿ. ಮಾವಿನ ಕಾಯಿ ಗೊಜ್ಜು, ಮಾವಿನ ಕಾಯಿ ಚಿತ್ರಾನ್ನ, ಮಾವಿನ ಕಾಯಿ ಚಟ್ನಿ ಸಾಮಾನ್ಯವಾಗಿ ತಿಂದಿರುತ್ತೀರಿ, ಈ ಬಾರಿ ಮಾವಿನ ಕಾಯಿ ಸೀಜನ್‌ನಲ್ಲಿ ವಿಶೇಷವಾಗಿ ಮಾವಿನ ಕಾಯಿ ನೀರು ಗೊಜ್ಜು ತಯಾರಿಸಿ ತಿನ್ನಿರಿ.
ಮಾವಿನ ಕಾಯಿ ನೀರು ಗೊಜ್ಜು ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಹಸಿ ಮಾವಿನ ಕಾಯಿ- 1
ಹಸಿರು ಮೆಣಸಿನಕಾಯಿ- 2ರಿಂದ 4
ಉಪ್ಪು- ರುಚಿಗೆ ತಕ್ಕಷ್ಟು
ಸಾಸಿವೆ-1/2 ಚಮಚ
ಜೀರಿಗೆ-1/2 ಚಮಚ
ಕೆಂಪು ಮೆಣಸಿನಕಾಯಿ-1
ಅಡುಗೆ ಎಣ್ಣೆ-1 ಚಮಚ
ಬೆಳ್ಳುಳ್ಳಿ-7 ಎಸಳು
ಇಂಗು- ಒಂದು ಚಿಟಿಕೆ
ಕರಿಬೇವು
ಕೊತ್ತಂಬರಿ ಸೊಪ್ಪು

ಮಾವಿನ ಕಾಯಿ ನೀರು ಗೊಜ್ಜು ತಯಾರಿಸುವ ವಿಧಾನ
ಮಾವಿನ ಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ಕತ್ತರಿಸಿದ ಮಾವಿನ ಕಾಯಿಗೆ, ಹಸಿರು ಮೆಣಸಿನಕಾಯಿಗೆ ಸೇರಿಸಿ ಒಂದು ಕಪ್ ನೀರು ಸೇರಿಸಿ. ಬಳಿಕ ಮಾವಿನಕಾಯಿ ಮೆತ್ತಗಾಗುವವರೆಗೂ ಬೇಯಿಸಿಕೊಳ್ಳಿ. ಸುಮಾರು 5 ನಿಮಿಷಗಳು ಬೆಂದ ಬಳಿಕ ಮ್ಯಾಶ್ ಮಾಡಿಕೊಳ್ಳಿ ಅಥವಾ ರುಬ್ಬಿ ಕೊಳ್ಳಿ.ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಜೀರಿಗೆ ಮತ್ತು ಕೆಂಪು ಮೆಣಸಿನಕಾಯಿ ಹುರಿದುಕೊಳ್ಳಿ ಕರಿಬೇವಿನ ಎಲೆಗಳು ಹಾಗೂ ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ ಮತ್ತೆ ಹುರಿಯಿರಿ ಬಳಿಕ ಇಂಗು ಸೇರಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಸ್ಟವ್ ಆಫ್ ಮಾಡಿ
ಈ ಒಗ್ಗರಣೆಗೆ ಈ ಹಿಂದೆಯೇ ಮಾಡಿಕೊಂಡ ಮಾವಿನ ಕಾಯಿ ಮಿಶ್ರಣವನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಮಾವಿನ ಕಾಯಿ ನೀರು ಗೊಜ್ಜು ತಯಾರಾಗುತ್ತದೆ. ಇದನ್ನು ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ.












Click it and Unblock the Notifications