Burnt Tomato Chutney: ಟೊಮೆಟೊ ಸುಟ್ಟು ಚಟ್ನಿ ಮಾಡುವುದು ಹೇಗೆ..?
ಟೊಮೆಟೊ ಹಣ್ಣುಗಳಲ್ಲಿ ಪೌಷ್ಟಿಕಾಂಶದ ಪ್ರಮಾಣ ಹೆಚ್ಚಿರುತ್ತದೆ. ಹೀಗಾಗಿ ಬಹುತೇಕ ಎಲ್ಲಾ ಪದಾರ್ಥಗಳಲ್ಲಿಯೂ ಟೊಮೆಟೊ ಬಳಸಲಾಗುತ್ತದೆ. ಟೊಮೆಟೊದಲ್ಲಿ ವಿಟಮಿನ್, ಮಿನರಲ್ಸ್, ಪ್ರೊಟೀನ್, ಪೊಟ್ಯಾಶಿಯಂ ಹಾಗೂ ಫೋಲೇಟ್ ಅಂಶವಿದೆ.
ಟೊಮೆಟೊ ಆಹಾರ ಖಾದ್ಯಗಳ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯವನ್ನು ಸಹ ಕಾಪಾಡುತ್ತದೆ. ಇದು ಚರ್ಮದ ಕಾಂತಿ, ತೂಕ ಕಾಪಾಡಲು ಮೂಳೆಗಳ ಆರೋಗ್ಯಕ್ಕೆ ನೆರವಾಗುತ್ತದೆ. ಹೀಗಾಗಿ ಪ್ರತಿನಿತ್ಯದ ಆಹಾರದಲ್ಲಿ ಟೊಮೆಟೊ ಸೇವನೆಯೂ ಅತಿ ಮುಖ್ಯ. ಇಂತಹ ಟೊಮೆಟೊವನ್ನು ಬಳಸಿಕೊಂಡು ಅತಿ ಸರಳ ಹಾಗೂ ಬೇಗನೆ ಮಾಡುವ ಖಾದ್ಯವೊಂದರ ವಿವರ ಇಲ್ಲಿದೆ.

ಟೊಮೆಟೊ ಚಟ್ನಿಗೆ ಬೇಕಾಗುವ ಸಾಮಾಗ್ರಿಗಳು
ಚೆನ್ನಾಗಿ ಹಣ್ಣಾದ ಟೊಮ್ಯಾಟೊ-2
ಹಸಿರು ಮೆಣಸಿನಕಾಯಿಗಳು-2-3
ಬೆಳ್ಳುಳ್ಳಿ- 3-4 ಎಸಳು
ಉಪ್ಪು- ನಿಮ್ಮ ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು
ಎಣ್ಣೆ-1 ಚಮಚ
ಟೊಮೆಟೊ ಹುಳಿಯಾದರೆ ಸ್ವಲ್ಪ ಬೆಲ್ಲ

ಟೊಮೆಟೊ ಚಟ್ನಿ ಮಾಡುವ ವಿಧಾನ
ಟೊಮೆಟೊ, ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ತೆಗೆದುಕೊಂಡು ಚೆನ್ನಾಗಿ ತೊಳೆದು, ಒಂದು ಶುಭ್ರವಾದ ಬಟ್ಟೆಯಿಂದ ಒರೆಸಿಕೊಳ್ಳಿ. ಟೊಮೆಟೊ ಮೇಲೆ + ಆಕಾರದಲ್ಲಿ ಚಾಕುವಿನಿಂದ ಮಾರ್ಕ್ ಮಾಡಿಕೊಳ್ಳಿ. ಸ್ಟೌವ್ ಮೇಲೆ ಗ್ರಿಲ್ ನೆಟ್ ಇಟ್ಟು, ಟೊಮೆಟೊವನ್ನು ಬೇಯಿಸಿಕೊಳ್ಳಿ. ಒಂದು ವೇಳೆ ಗ್ರಿಲ್ ನೆಟ್ ಬದಲಿಗೆ ಕೋಲಿಗೆ ಟೊಮೆಟೊ ಚುಚ್ಚಿ ಬೆಂಕಿಗೆ ಕಾಯಿಸಬಹುದು. ಟೊಮೆಟೊಗಳು ಬೆಂದ ಬಳಿಕ ಮೆಣಸಿನ ಕಾಯಿಯನ್ನು ಅದೇ ರೀತಿ ಚೆನ್ನಾಗಿ ಬೇಯಿಸಿಕೊಳ್ಳಿ, ಕೊನೆಯಲ್ಲಿ ಬೆಳ್ಳುಳ್ಳಿಯನ್ನು ಸಹ ಇದೇ ರೀತಿ ಮಾಡಿ.
ತರಕಾರಿಗಳು ತಣ್ಣಗಾದ ನಂತರ ಅವುಗಳ ಸುಟ್ಟ ಸಿಪ್ಪೆಯನ್ನು ಬೇರ್ಪಡಿಸಿಕೊಳ್ಳಿ. ಬಳಿಕ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಶ್ರಣವಾಗಬೇಕು ಎಂದರೆ ಮಿಕ್ಸಿಯಲ್ಲಿ ಕಡಿಮೆ ವೇಗದಲ್ಲಿ ಒಂದು ಸುತ್ತು ರುಬ್ಬಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಮೊದಲು ಉಪ್ಪು ಸೇರಿಸಿ, ಬಳಿಕ ಕೊತ್ತಬರಿ ಸೊಪ್ಪು ಹಾಗೂ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ರುಚಿರುಚಿಯಾದ ಸುಟ್ಟ ಟೊಮೆಟೊ ಚಟ್ನಿ ಸವಿಯಲು ಸಿದ್ಧವಾಗುತ್ತದೆ.












Click it and Unblock the Notifications