HMPV Virus: ಹೆಚ್‌ಎಂಪಿವಿ ಸೋಂಕಿನಿಂದ ಮಕ್ಕಳನ್ನು ಹೇಗೆ ರಕ್ಷಿಸುವುದು?
ಹ್ಯೂಮನ್ ಮೆಟಾ ನ್ಯೂಮೋ ವಿರಿಡಿಯಾ ವೈರಸ್ ಅಥವಾ HMPV ವೈರಸ್ ಪ್ರಪಂಚದಾದ್ಯಂತ ಜನರಲ್ಲಿ ಭಯವನ್ನು ಹುಟ್ಟುಹಾಕಿದೆ. ಈಗ ಈ ವೈರಸ್ ಕರ್ನಾಟಕಕ್ಕೂ ಪ್ರವೇಶಿಸಿದೆ. ಇಲ್ಲಿಯವರೆಗೆ ಭಾರತದಲ್ಲಿ 6 HMPV ಪ್ರಕರಣಗಳು ವರದಿಯಾಗಿವೆ. ಚೀನಾದಲ್ಲಿ ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ ವಿಡಿಯೋಗಳು ವೈರಲ್ ಆದ ನಂತರ ಈ ವೈರಸ್ ಜಾಗತಿಕವಾಗಿ ಚರ್ಚೆಯ ವಿಷಯವಾಗಿದೆ.
ಈ ವೈರಸ್ 2001 ರಿಂದಲೂ ಇದೆ. ಮಕ್ಕಳು HMPV ಸೋಂಕಿಗೆ ಒಳಗಾಗುವ ಹೆಚ್ಚು ಅಪಾಯವಿದೆ. ಹೀಗಾಗಿ ನಾವು ಈಗ ಅದನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ವೈರಸ್ ಹರಡುವುದನ್ನು ತಡೆಗಟ್ಟಲು ಅದರ ಸ್ವರೂಪ ಮತ್ತು ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ.

ಭಾರತದಲ್ಲಿ HMPV ಪ್ರಕರಣಗಳು
ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಐದು ಮಕ್ಕಳಲ್ಲಿ HMPV ವೈರಸ್ ಸೋಂಕು ದೃಢಪಟ್ಟಿದೆ. ಇವು ಭಾರತದಲ್ಲಿ ಮೊದಲ ಪ್ರಕರಣಗಳು ಎಂದು ವರದಿಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕರ್ನಾಟಕದಲ್ಲಿ ಎರಡು ಪ್ರಕರಣಗಳನ್ನು ಪತ್ತೆಹಚ್ಚಿದೆ.
ಶ್ವಾಸನಾಳದ ನ್ಯುಮೋನಿಯಾದ ಇತಿಹಾಸ ಹೊಂದಿರುವ ಮೂರು ತಿಂಗಳ ಹೆಣ್ಣು ಮಗು ಮತ್ತು ಎಂಟು ತಿಂಗಳ ಗಂಡು ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ HMPV ಇರುವುದು ಪತ್ತೆಯಾಗಿದೆ. ತಮಿಳುನಾಡು ರಾಜ್ಯದಲ್ಲಿ ಇನ್ನೂ ಇಬ್ಬರು ಮಕ್ಕಳಿಗೆ ಈ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಎರಡು ತಿಂಗಳ ಗಂಡು ಮಗುವಿನಲ್ಲಿ ಸೋಂಕು ಇರುವುದು ವರದಿಯಾಗಿದೆ. ಆಯಾ ರಾಜ್ಯಗಳ ವರದಿಗಳ ಪ್ರಕಾರ, ಎಲ್ಲಾ ಮಕ್ಕಳು ಪ್ರಸ್ತುತ ಚೆನ್ನಾಗಿದ್ದಾರೆ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

HMPV ವೈರಸ್‌ನಿಂದ ಮಕ್ಕಳನ್ನು ಹೇಗೆ ರಕ್ಷಿಸುವುದು?
HMPV ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಗಳು ಅಥವಾ ಲಸಿಕೆಗಳು ಇಲ್ಲದಿರುವುದರಿಂದ ಸದ್ಯಕ್ಕೆ ತಡೆಗಟ್ಟುವಿಕೆ ಒಂದೇ ಆಯ್ಕೆಯಾಗಿದೆ. ಹಾಗಾದರೆ ಅದನ್ನು ತಡೆಗಟ್ಟು ಕ್ರಮಗಳೇನು ಎಂದು ಈಗ ತಿಳಿಯೋಣ.
ಉತ್ತಮ ನೈರ್ಮಲ್ಯ: ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಉತ್ತಮ ನೈರ್ಮಲ್ಯವನ್ನು ಕಾಪಾಡುವುದು ಅತ್ಯಗತ್ಯ. ಮಕ್ಕಳು ಸೀನಿದಾಗ, ಕೆಮ್ಮಿದ ನಂತರ ಅಥವಾ ವಸ್ತುಗಳನ್ನು ಮುಟ್ಟಿದ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ಸೋಪಿನಿಂದ ಕೈ ತೊಳೆಯಬೇಕು. ಯಾವಾಗಲೂ ಕೈಯಲ್ಲಿ ಸ್ಯಾನಿಟೈಸರ್ ಇರುವುದು ಮುಖ್ಯ.
ಮುಖವನ್ನು ಮುಟ್ಟಬಾರದು: ಸೂಕ್ಷ್ಮಜೀವಿಗಳು ಹರಡುವುದನ್ನು ತಡೆಗಟ್ಟಲು ನಿಮ್ಮ ಕಣ್ಣುಗಳು, ಮುಖ, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಮುಟ್ಟುವುದನ್ನು ತಪ್ಪಿಸಬೇಕು.
ಪರಿಸರವನ್ನು ಸ್ವಚ್ಛವಾಗಿಡಿ: ವೈರಸ್ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಲು ಪರಿಸರವನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಕೊಳಕು ಸ್ಥಳಗಳು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ರೋಗಕಾರಕಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿದೆ.
ಆರೋಗ್ಯಕರ ಆಹಾರ: ಯಾವುದೇ ರೀತಿಯ ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಆರೋಗ್ಯಕರ ಆಹಾರ ಪದ್ಧತಿ ಅತ್ಯಗತ್ಯ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ದೇಹಕ್ಕೆ ಬೇಕಾಗಿರುತ್ತದೆ. ಆದ್ದರಿಂದ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುವ ಆಹಾರವನ್ನು ಸೇವಿಸಿ.
ಮಾಸ್ಕ್ ಧರಿಸಿ: ಜನದಟ್ಟಣೆ ಇರುವ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ಯುವಾಗ ನಿಮ್ಮ ಮುಖ ಮತ್ತು ಅವರ ಮುಖಗಳನ್ನು ಮುಚ್ಚಿಕೊಳ್ಳುವುದು ಒಳ್ಳೆಯದು.
ನೀರಿನಂಶ ಕಾಪಾಡಿಕೊಳ್ಳುವುದು ಮುಖ್ಯ: ಸಾಕಷ್ಟು ನೀರು ಮತ್ತು ದ್ರವಗಳನ್ನು ಕುಡಿಯುವ ಮೂಲಕ ನಿಮ್ಮ ದೇಹವನ್ನು ಆರೋಗ್ಯವಾಗಿ ಮತ್ತು ಚೈತನ್ಯದಿಂದ ಇರಿಸಿಕೊಳ್ಳಿ. ಚಳಿಗಾಲದಲ್ಲಿ ನೀರಿನ ಮಟ್ಟ ಕಡಿಮೆಯಾಗಬಹುದು. ಹೆಚ್ಚು ನೀರು ಸೇವನೆ ವಿಷವನ್ನು ಉತ್ತಮವಾಗಿ ಹೊರಹಾಕಲು ಸಹಾಯ ಮಾಡುತ್ತದೆ.
ಸಾಮಾಜಿಕ ಅಂತರ: ವೈರಸ್ ಹರಡುವುದನ್ನು ತಡೆಗಟ್ಟಲು ಸೋಂಕಿತ ವ್ಯಕ್ತಿಯಿಂದ ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು. ದುರ್ಬಲ ಜನರಿಗೆ ಸೋಂಕು ಹರಡುವುದನ್ನು ತಡೆಗಟ್ಟಲು, ಸೋಂಕಿತ ವ್ಯಕ್ತಿಯು ಸ್ವಯಂ-ಪ್ರತ್ಯೇಕವಾಗಿರಬೇಕು ಮತ್ತು ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಬೇಕು.
HMPVಯ ಲಕ್ಷಣಗಳು:-
- ಕೆಮ್ಮು
- ಜ್ವರ
- ಮೂಗು ಕಟ್ಟುವಿಕೆ
- ಗಂಟಲು ನೋವು
- ಉಸಿರಾಟದ ತೊಂದರೆ
ಹೆಚ್ಚಿನ ಸಂದರ್ಭಗಳಲ್ಲಿ ಈ ಲಕ್ಷಣಗಳು ಸೌಮ್ಯವಾಗಿರುತ್ತವೆ. ಒಂದು ಅಥವಾ ಎರಡು ವಾರಗಳಲ್ಲಿ ಈ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಹೆಚ್ಚು ತೀವ್ರವಾದ ಪ್ರಕರಣಗಳಲ್ಲಿ HMPV ಬ್ರಾಂಕೈಟಿಸ್, ನ್ಯುಮೋನಿಯಾ, ಆಸ್ತಮಾ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ರೋಗಲಕ್ಷಣಗಳ ತೀವ್ರತೆ ಮತ್ತು ಅವಧಿಯು ವ್ಯಕ್ತಿಯ ವಯಸ್ಸು, ಒಟ್ಟಾರೆ ಆರೋಗ್ಯ ಮತ್ತು ರೋಗನಿರೋಧಕ ಸ್ಥಿತಿಯನ್ನು ಅವಲಂಬಿಸಿರುತ್ತದೆ.












Click it and Unblock the Notifications