ಪಾದದ ಬಿರುಕು ಮುಜುಗರ ತರುತ್ತಿದೆಯಾ? ಹಾಗಾದ್ರೆ ಹೀಗೆ ಮಾಡಿ!
ಪಾದದ ಬಿರುಕು ಮುಜುಗರ ತಂದು ಬಿಡುತ್ತದೆ. ಮೇಕಪ್ ಮಾಡಿಕೊಂಡು ಅಂದವಾಗಿ ಕಂಡರೂ ಪಾದದ ಬಿರುಕುಗಳು ಕೆಲವೊಮ್ಮೆ ಅಸಹ್ಯ ಮೂಡಿಸಿ ಬಿಡುತ್ತವೆ. ಹೀಗಾಗಿ ಅದರ ಬಗ್ಗೆ ಚಿಂತೆ ಮಾಡುವವರು ಇಲ್ಲದಿಲ್ಲ. ಹೀಗಾಗಿ ಒಂದಷ್ಟು ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಿದರೆ ಬಿರುಕು ಮುಕ್ತ ಪಾದಗಳನ್ನು ಹೊಂದುವುದಲ್ಲದೆ, ಪಾದಗಳ ಅಂದವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಸಾಮಾನ್ಯವಾಗಿ ಕೆಲವರು ಮಾತನಾಡುವಾಗ ನಾನು ಎಲ್ಲಾ ರೀತಿಯ ಕ್ರೀಮ್ ಹಾಕಿದೆ ಆದರೂ ಏನು ಪ್ರಯೋಜನವಾಗಿಲ್ಲ. ಪಾದದ ಬಿರುಕು ಮಾತ್ರ ಹೋಗಿಲ್ಲ ಎಂಬ ನಿರಾಸೆಯ ಮಾತುಗಳನ್ನಾಡುವವರನ್ನು ನಾವು ನೋಡುತ್ತಿರುತ್ತೇವೆ. ಸುಂದರವಾಗಿದ್ದು ಪಾದದಲ್ಲಿ ಬಿರುಕಿದ್ದರೆ ಅದು ಸೌಂದರ್ಯಕ್ಕೊಂದು ಕಪ್ಪು ಚುಕ್ಕೆಯಂತೆ ಕಾಣಿಸುವುದರಲ್ಲಿ ಎರಡು ಮಾತಿಲ್ಲ.

ಚರ್ಮ, ಕೈಕಾಲು, ಬೆರಳು, ಮುಖ ಎಲ್ಲಾ ಚೆನ್ನಾಗಿದ್ದು ಪಾದದಲ್ಲಿ ತಾನೆ ಬಿರುಕು? ಪರ್ವಾ ಗಿಲ್ಲ ಹಾಗೆಂದು ಸುಮ್ಮನಿರಲು ಸಾಧ್ಯವೆ? ಖಂಡಿತಾ ಸಾಧ್ಯವಿಲ್ಲ. ಹಾಗಾಗಿ ಹೆಚ್ಚಿನ ಮಂದಿ ಬಿರುಕು ಮುಚ್ಚುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಕಾಲಿನ ಪಾದದ ಬಿರುಕು ತಲೆಕೆಡಿಸಿಕೊಳ್ಳುವ ವಿಚಾರವಲ್ಲದಿದ್ದರೂ ಅದು ಕೆಲವೊಮ್ಮೆ ನಮ್ಮನ್ನು ಅಣಕಿಸುತ್ತದೆ. ಯಾರಾದರೂ ನಮ್ಮ ಕಾಲನ್ನು ನೋಡುತ್ತಾರಾ ಎಂಬ ಕೀಳರಿಮೆ ಕಾಡಿಬಿಡುತ್ತದೆ.
ಪಾದದ ರಕ್ಷಣೆಗೆ ಸಲಹೆ ಪಾಲಿಸಿ
ಪಾದದ ಬಿರುಕು ಗಂಡು ಹೆಣ್ಣು ಇಬ್ಬರ ಸಮಸ್ಯೆ ಆದರೆ ಗಂಡಸರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಮಹಿಳೆಯರು ಹಾಗಿರಲು ಸಾಧ್ಯವಿದಲ್ಲ. ಕಾಲಿಗೆ ಅಂದದ ಚಪ್ಪಲಿ ಧರಿಸುವಾಗ ಕಾಲು, ಉಗುರು, ಪಾದ ಎಲ್ಲವೂ ಚೆನ್ನಾಗಿರಬೇಕೆಂದು ಬಯಸುತ್ತಾರೆ. ಆದರೆ ಹೆಚ್ಚಿನವರು ಹಲವು ಕಾರಣಗಳಿಂದಾಗಿ ಪಾದದ ಬಿರುಕಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಕೆಲವೊಮ್ಮೆ ಈ ಸಮಸ್ಯೆಗೆ ಪರಿಹರಿಸಲು ಮಾಡಿದ ಪ್ರಯತ್ನವೂ ಫಲಕೊಟ್ಟಿರುವುದಿಲ್ಲ. ಹೀಗಾಗಿ ಯಾವುದಾದರು ನನ್ನ ಪಾದ ನೋಡಿ ಬಿಟ್ಟರೆ ಎಂಬ ಕೀಳರಿಮೆಯಿಂದ ಬಳಲುತ್ತಾ ಮುಚ್ಚಿಡುವ ಪ್ರಯತ್ನ ಮಾಡುತ್ತಿರುತ್ತಾರೆ.

ಹಳ್ಳಿಗಳ ಗದ್ದೆ, ಹೊಲ, ದನದ ಕೊಟ್ಟಿಗೆಗಳಲ್ಲಿ, ತೋಟಗಳಲ್ಲಿ ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಅಧಿಕ ಪ್ರಮಾಣದಲ್ಲಿರುತ್ತದೆ. ಆದರೆ ಪಾದಗಳಲ್ಲಿನ ಬಿರುಕು ತಲೆಕೆಡಿಸಿಕೊಳ್ಳುವಷ್ಟು ಸಮಸ್ಯೆ ಅಲ್ಲ. ಬಹಳಷ್ಟು ಮಂದಿ ಪಾದಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಹಾಗಾಗಿ ಈ ಸಮಸ್ಯೆ ಕಾಡುತ್ತದೆ ಅಷ್ಟೆ ಎನ್ನುತ್ತಾರೆ ತಜ್ಞ ವೈದ್ಯರು. ಅಷ್ಟೇ ಅಲ್ಲ ಪಾದದ ರಕ್ಷಣೆಗೋಸ್ಕರ ಒಂದಷ್ಟು ಸಲಹೆಗಳನ್ನೂ ನೀಡುತ್ತಾರೆ. ಅವರು ನೀಡುವ ಸಲಹೆಗಳು ಹೀಗಿವೆ.
ಪಾದದ ಕೊಳೆ ತೆಗೆಯುವುದು ಅಗತ್ಯ
ಪಾದಗಳನ್ನು ಹೆಚ್ಚಾಗಿ ನೀರಿನಲ್ಲಿ ನೆನೆಯಲು ಬಿಡಬಾರದು. ಸಾಧ್ಯವಾದಷ್ಟು ನಿರಿನಿಂದ ದೂರವಿರಬೇಕು. ರಾತ್ರಿ ಮಲಗುವ ಮುನ್ನ ಪಾದಗಳನ್ನು ಚೆನ್ನಾಗಿ ತೊಳೆದು ಯಾವುದಾದರು ತೈಲ ಅಥವಾ ಕ್ರೀಮ್‌ನ್ನು ಬಳಸಬೇಕು. ಸಾಮಾನ್ಯವಾಗಿ ಪಾದದಲ್ಲಿ ಕೊಳೆಯಿದ್ದರೆ ಮೊದಲು ಪಾದಗಳಿಗೆ ನಿಂಬೆಹಣ್ಣು ರಸ ಹಚ್ಚಿ ಸುಮಾರು ಹದಿನೈದು ನಿಮಿಷ ಹಾಗೆಯೇ ಬಿಟ್ಟು ಆ ನಂತರ ತೊಳೆಯಬೇಕು. ಹೀಗೆ ಮಾಡುವುದರಿಂದ ಪಾದಗಳಿಗೆ ಅಂಟಿದ ಕೊಳೆ ಹೋಗುತ್ತದೆ.
ಪಾದಗಳಲ್ಲಿ ಬಿರುಕು ಕಂಡು ಬಂದರೆ ವೆಜಲೈನ್, ಪೆಟ್ರೋಲಿಯಂ ಜೆಲ್ಲಿಯಂತಹ ಮುಲಾಮು ಹಚ್ಚಬೇಕು. ರೋಸ್ ಲಾಟರ್ ಅಲ್ಮಾಂಡ್ ಆಯಿಲ್‌ನ್ನು ಬೆರೆಸಿ ಪಾದಗಳಿಗೆ ಲೇಪಿಸುವುದರಿಂದ ಪಾದಗಳು ಮೃದುವಾಗುತ್ತವೆ. ಪಾದಗಳಲ್ಲಿ ಬಿರುಕಿನಿಂದಾಗಿ ನೋವುಗಳು ಕಾಣಿಸಿಕೊಂಡಾಗ ಬಿಸಿ ನೀರಿಗೆ ಉಪ್ಪು, ನಿಂಬೆರಸವನ್ನು ಬೆರೆಸಿ ಅದರಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಪಾದಗಳನ್ನಿಟ್ಟರೆ ನೋವು ಕಡಿಮೆಯಾಗುತ್ತದೆ. ಪಾದಗಳಿಗೆ ದಿನವೂ ಅರಿಶಿನ ಲೇಪಿಸುವುದರಿಂದ ಫಂಗಸ್ ಕಡಿಮೆಯಾಗಿ ಹೊಳಪು ಬರುತ್ತದೆ.
ಪಾದದ ಸ್ವಚ್ಛತೆಗೆ ಆದ್ಯತೆ ನೀಡಿ
ಒರಟಾದ ಚಪ್ಪಲಿ, ಶೂ ಬಳಸುವುದರಿಂದಲೂ ಪಾದಗಳು ಬಿರುಕು ಬಿಡುವ ಸಾಧ್ಯತೆಯಿದ್ದು, ಯಾವಾಗಲೂ ಮೃದುವಾದ ಚಪ್ಪಲಿಗಳನ್ನೇ ಬಳಸುವುದು ಒಳ್ಳೆಯದು. ಸ್ನಾನಕ್ಕೆ ಮುನ್ನ ಪಾದಗಳಿಗೆ ಕಡಲೆಹಿಟ್ಟು ಹಚ್ಚಿಕೊಂಡು ನಂತರ ಸ್ನಾನ ಮಾಡಿದರೆ ಪಾದಗಳ ಮೃದುತ್ವ ಉಳಿಸಿಕೊಳ್ಳಬಹುದು. ಮೆಂಥಾಲ್‌ನಿಂದ ಕೂಡಿದ ಕ್ರೀಮ್ ಪಾದಗಳಿಗೆ ಹಚ್ಚಿದಲ್ಲಿ ಪಾದಗಳು ಮೃದುವಾಗಿಯೂ ದುರ್ಗಂಧ ರಹಿತವಾಗಿರುತ್ತವೆ.
ಉಗುರು ಬೆಚ್ಚಗಿನ ನೀರಿನಲ್ಲಿ ಶಾಂಪೂ ಬೆರೆಸಿ ಅದರಲ್ಲಿ ಹತ್ತು ನಿಮಿಷಗಳ ಕಾಲ ಕಾಲನ್ನಿರಿಸಿ ನಂತರ ಮೆತ್ತನೆಯ ಬ್ರಷ್‌ನಿಂದ ಉಜ್ಜಿದಲ್ಲಿ ಪಾದಗಳಲ್ಲಿ ಹಿಡಿದುಕೊಂಡಂತಹ ಅಂಟು ಕೊಳೆಗಳು ಹೋಗಿ ಶುಭ್ರವಾಗುತ್ತವೆ. ಪಾದಗಳಿಗೆ ಫಂಗಸ್ ಇನ್‌ಪೆಕ್ಷನ್ ಇದ್ದ ಸಂದರ್ಭ ಸ್ನಾನದ ನಂತರ ಪಾದಗಳನ್ನು ಶುಭ್ರವಾದ ಬಟ್ಟೆಯಿಂದ ಒರೆಸಿ ಆಂಟಿ ಫಂಗಸ್ ಕ್ರೀಮ್ ಹಚ್ಚಬೇಕು. ಹೀಗೆ ಮೇಲಿನ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಪಾದಗಳನ್ನು ಕಾಡುವ ಬಿರುಕಿನ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ. ಮುಖ್ಯವಾಗಿ ಪಾದಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದರಿಂದ ಪಾದದ ರಕ್ಷಣೆ ಸಾಧ್ಯ ಎಂಬುವುದನ್ನು ಮಾತ್ರ ಮರೆಯಬಾರದು.












Click it and Unblock the Notifications