Imagination: ಬೇರೆಯವರ ಮೇಲೆ ಕಲ್ಪನೆಯ ಬಾಣ ಬಿಡುವ ಮುನ್ನ ಎಚ್ಚರ!
ನಮ್ಮಲ್ಲೊಂದು ಕೆಟ್ಟ ಅಭ್ಯಾಸವಿದೆ. ಅದು ಏನೆಂದರೆ ನಮ್ಮ ಕಲ್ಪನೆಗೆ ಬಂದಿದ್ದನ್ನು ನಿಜವೆಂಬಂತೆ ಬಿಂಬಿಸುವುದು. ಇದರಿಂದ ಒಳ್ಳೆದಕ್ಕಿಂತ ಕೆಟ್ಟದ್ದೇ ಜಾಸ್ತಿ ಎಂಬುದು ಆ ತಕ್ಷಣಕ್ಕೆ ಅರಿವಿಗೆ ಬರುವುದೇ ಇಲ್ಲ. ದಾರಿಯಲ್ಲಿ ಹೋಗುವವನು ದಾರಿ ಹೋಕನಷ್ಟೆ. ಆದರೆ ನಾವು ಕಲ್ಪನೆಗಳ ಮೂಲಕ ಆತನ ಬಗ್ಗೆ ಏನೇನೋ ಕಲ್ಪನೆ ಮಾಡಿಕೊಳ್ಳುತ್ತೇವೆ. ಅವನ ಚಲನ ವಲನ ನೋಡಿ ಕೆಲವೊಮ್ಮೆ ಕಳ್ಳನ ಪಟ್ಟವನ್ನು ಕೂಡ ಕಟ್ಟಿ ಬಿಡುತ್ತೇವೆ. ಕೆಲವರಿಗೆ ಇದೊಂದು ರೋಗದಂತೆ ಅಂಟಿಕೊಂಡು ಬಿಟ್ಟಿರುತ್ತದೆ. ಇಂತಹವರಿಂದಲೇ ವಿವಾದಾತ್ಮಕ ವಿಚಾರಗಳು ಸದ್ದಿಲ್ಲದೆ ಹುಟ್ಟಿ ಬಿಡುತ್ತವೆ.
ಇಲ್ಲಿ ಪ್ರತಿಯೊಬ್ಬ ಮನುಷ್ಯನೂ ತಮ್ಮ ಬದುಕಿನ ಬಗೆಗೆ ವಿವಿಧ ಕಲ್ಪನೆಗಳನ್ನು ಸೃಷ್ಟಿಸಿಕೊಳ್ಳುತ್ತಾ ದಿನಕಳೆಯುತ್ತಿರುತ್ತಾನೆ. ಇದು ಮನುಷ್ಯ ಸಹಜ ಗುಣವೂ ಹೌದು. ಒಂದು ಒಳ್ಳೆಯ ಕಲ್ಪನೆ ನಮ್ಮ ಬದುಕನ್ನು ಗಟ್ಟಿಗೊಳಿಸಬಹುದು ಅಥವಾ ಸನ್ನಡತೆಯತ್ತ ಮುನ್ನಡೆಯುವಂತೆಯೂ ಮಾಡಬಹುದು. ಇಲ್ಲಿ ನಮ್ಮ ಬದುಕಿನ ಬಗ್ಗೆ ನಮ್ಮ ಕಲ್ಪನೆಗಳು ಹೇಗೆಯೇ ಇರಲಿ ಅದರ ಒಳಿತು ಕೆಡುಕು ನಮಗೆ ಮಾತ್ರ ಅನ್ವಯಿಸುತ್ತದೆ. ಆದರೆ ಬೇರೆಯವರ ಬದುಕಿನ ಬಗೆಗೆ ಆಗಿರದಂತೆ ನೋಡಿಕೊಳ್ಳಬೇಕು.

ನಮ್ಮಲ್ಲಿ ಮೂಡುವ ಕಲ್ಪನೆಯ ನಿಜಾಂಶವನ್ನರಿಯದೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಬೇರೆಯವರನ್ನು ಜೀವಂತ ಸುಡಬಹುದು. ಬೇರೆಯವರನ್ನು ಕಂಡಾಗ ಅವರನ್ನು ಹತ್ತಿರದಿಂದ ಅರಿಯದೆ ಮೇಲ್ಮೋಟದಲ್ಲಿಯೇ ಅವರ ಬಗ್ಗೆ ನಮ್ಮದೇ ಆದ ವಿವಿಧ ಕಲ್ಪನೆಗಳ ಬಾಣ ಎಸೆಯುತ್ತೇವೆ. ಅದು ಕೇವಲ ನಮ್ಮ ಕಲ್ಪನೆ. ಆ ವ್ಯಕ್ತಿಗೂ ನಮ್ಮ ಕಲ್ಪನೆಗೂ ಸಂಬಂಧವೇ ಇಲ್ಲ. ಆದರೂ ನಮ್ಮ ಕಲ್ಪನೆಗಳು ನಮ್ಮಲ್ಲಿ ಉಳಿಯದೆ ಬಾಯಿಂದ ಬಾಯಿಗೆ ಹೋಗಿ ಇಡೀ ಜನರೇ ಆ ಬಗ್ಗೆ ಮಾತಾಡಿಕೊಳ್ಳುವಂತಾಗಿ ಬಿಡುತ್ತದೆ.
ಕಲ್ಪನಾ ಶಕ್ತಿ ಮನುಷ್ಯನಿಗೆ ದೈವದತ್ತ ವರ
ಏನೂ ತಪ್ಪು ಮಾಡದೆ ಯಾರದೋ ಕಲ್ಪನೆಗೆ ಒಳಗಾಗಿ ವ್ಯಕ್ತಿಯೊಬ್ಬ ಸಮಾಜದಲ್ಲಿ ತೇಜೋವಧೆಗೆ ಗುರಿಯಾಗಿ ಬಿಡುತ್ತಾನೆ. ಇಂತಹ ಪರಿಸ್ಥಿತಿಗಳನ್ನು ಸಾಮಾನ್ಯವಾಗಿ ಹೆಣ್ಣು ಮಕ್ಕಳೇ ಹೆಚ್ಚಾಗಿ ಅನುಭವಿಸುತ್ತಾರೆ. ಕಲ್ಪನೆಗಳಲ್ಲೇ ಸಂಬಂಧಗಳನ್ನು ಕಲ್ಪಿಸಿ ಮಾತಾಡುವ ಜನರಿಂದ ಈಗಾಗಲೇ ಹಲವು ಮಂದಿಯ ಬದುಕೇ ಮೂರಾಬಟ್ಟೆಯಾಗಿದೆ. ವಾಸ್ತವಾಂಶವನ್ನು ಅರಿಯದೆ ನಾವು ನಮ್ಮ ಕಲ್ಪನೆಯಲ್ಲಿ ಸೃಷ್ಟಿಸಿಕೊಳ್ಳುವ ಕೆಲವು ವಿಷಯಗಳು ನಮ್ಮ ಮೇಲೆ ಪರಿಣಾಮ ಬೀರುವ ಬದಲು ಬೇರೆಯವರ ಬದುಕಿನ ಮೇಲೆ ಬೀರುತ್ತದೆ.
ಇದರಿಂದ ತನ್ನದಲ್ಲದ ತಪ್ಪಿಗೆ ಮತ್ಯಾರದೋ ಬದುಕು ಹಾಳಾಗುತ್ತದೆ. ತುಂಬಾ ಜನಕ್ಕೆ ನಮ್ಮಲ್ಲೇಳುವ ಕಲ್ಪನೆಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿಲ್ಲ ಹೀಗಾಗಿ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತೇವೆ. ನಮ್ಮ ಕಲ್ಪನೆ ಆ ವ್ಯಕ್ತಿಗೆ ವಾಸ್ತವದಂತೆ ಗೋಚರಿಸಿ ಆತ ಮತ್ಯಾರಿಗೂ ಹೇಳುತ್ತಾನೆ. ಅದು ಹಾಗೆ ಮುಂದೆ ಸಾಗುತ್ತದೆ ಪರಿಣಾಮ ಅಮಾಯಕನೊಬ್ಬನ ಮಾನ ಸದ್ದಿಲ್ಲದೆ ಹರಾಜಾಗಿ ಬಿಡುತ್ತದೆ.

ಕಲ್ಪನೆಗಳು ಕಾಲ್ಪನಿಕ.. ಪರಿಣಾಮಗಳು ವಾಸ್ತವ
ನಮ್ಮ ಮನಸ್ಸು ಅಥವಾ ಆತ್ಮ ಸುದ್ದಿಯಾಗಿದ್ದಾಗ ನಮ್ಮಲ್ಲಿ ಮೂಡುವ ಕಲ್ಪನೆಗಳು ಸಹ ಪರಿಶುದ್ಧವಾಗಿರುತ್ತದೆ. ಈ ಕಲ್ಪನಾ ಶಕ್ತಿ ಎಂಬುದೊಂದಿದೆಯಲ್ವಾ ಅದು ಮನುಷ್ಯನಿಗೆ ದೈವದತ್ತ ವರ. ಆದರೆ ದೈವದತ್ತವಾದ ಕಲ್ಪನಾಶಕ್ತಿಯನ್ನು ನಾವು ಒಂದು ಒಳ್ಳೆಯ ರೀತಿಯಲ್ಲಿ ಬಳಸದೇ ಇರುವುದಿಂದಾಗಿ ನಾವು ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಎದುರಿಸುವಂತಾಗಿದೆ.
ಬಹಳಷ್ಟು ಮಂದಿಗೆ ಗಾಳಿಗೋಪುರಗಳನ್ನು ನಿರ್ಮಿಸುವುದರಲ್ಲಿ, ಹಗಲುಗನಸುಗಳನ್ನು ಕಾಣುವುದರಲ್ಲಿ, ಬೇರೆಯವರ ಬಗ್ಗೆ ಕೆಟ್ಟ ರೀತಿಯ, ಹುಚ್ಚು ಹುಚ್ಚಾದ, ಅರ್ಥವೇ ಇಲ್ಲದ ಊಹಾಪೋಹಗಳನ್ನು ಮಾಡುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಇಂತಹ ಮಂದಿ ಒಂದಷ್ಟು ಜ್ಞಾಪಕದಲ್ಲಿಟ್ಟುಕೊಳ್ಳಬೇಕಾದ ವಿಚಾರಗಳೆಂದರೆ, ನಾವು ಇನ್ನೊಬ್ಬರ ಬಗ್ಗೆ ತಳೆಯುವ ಕಲ್ಪನೆಗಳು ಕಾಲ್ಪನಿಕವಾಗಿರುತ್ತವೆ. ಅಷ್ಟೇ ಅಲ್ಲ ನಿರಾಧಾರವೂ ಆಗಿರುತ್ತದೆ. ಆದರೆ ಅದರಿಂದ ಉಂಟಾಗುವ ತೊಂದರೆಗಳು ಮಾತ್ರ ವಾಸ್ತವವಾಗಿರುತ್ತವೆ.
ಸ್ವಾಮಿ ವಿವೇಕಾನಂದರು ಹೇಳುವುದೇನು?
ನಮ್ಮಲ್ಲಿ ಉಂಟಾಗುವ ಭಯಗಳು ನಿರಾಧಾರವಾಗಿರಬಹುದು ಆದರೆ ಅವುಗಳು ನಮ್ಮ ಹೃದಯದಲ್ಲಿ ಉಂಟು ಮಾಡುವ ತಲ್ಲಣಗಳು ನಿಜವಾದವುಗಳಾಗಿರುತ್ತವೆ. ಹಾಗೆಯೇ ಕಲ್ಪನೆಗಳು ಕೂಡ. ಕೆಲವೊಮ್ಮೆ ನಾವು ನಮ್ಮ ಕಲ್ಪನೆಯ ಮೂಲಕ ನಿಜವಲ್ಲದ ಸಂಗತಿಗಳನ್ನು ನಮ್ಮ ಪಾಲಿಗೆ ನಿಜವನ್ನಾಗಿ ಮಾಡಿಕೊಳ್ಳುತ್ತಾ ಚಿಂತೆಗೊಳಗಾಗುವವರೂ ಇದ್ದಾರೆ. ಈ ಅಭ್ಯಾಸ ನಮ್ಮ ಬದುಕಿನಲ್ಲಿ ಬೆಳೆದು ನಿಂತು ಬಿಟ್ಟರೆ ಮನಸ್ಸನ್ನು ಹತೋಟಿಗೆ ತಂದುಕೊಳ್ಳುವುದು ಅಸಾಧ್ಯವಾಗಿ ಪರಿಣಮಿಸಿ ದುರಾಲೋಚನೆಗಳು ನಮ್ಮನ್ನು ಬಾಧಿಸಿ ನಮ್ಮ ಬದುಕಿನ ಅಮೂಲ್ಯವಾದ ಭಾಗ ಕೂಡ ದುರಂತದಲ್ಲಿ ಕಳೆದು ಹೋಗುವುದರಲ್ಲಿ ಸಂಶಯವಿಲ್ಲ.
ಸ್ವಾಮಿ ವಿವೇಕಾನಂದರು ಕಲ್ಪನೆ ಬಗೆಗೆ ಹೀಗೆಯೇ ಹೇಳುತ್ತಾರೆ. 'ಸರಿಯಾಗಿ ಬಳಸುವುದಾದರೆ ನಮಗೆ ನಮ್ಮ ಕಲ್ಪನೆಗಿಂತ ಆಪ್ತವಾದದ್ದು ಬೇರೆ ಯಾವುದೂ ಇಲ್ಲ. ಅದು ಬುದ್ಧಿಯಾಚೆಗೆ ಹಾಗೂ ಎಲ್ಲೆಲ್ಲೊ ಕರೆದೊಯ್ಯುವ ಒಂದೇ ಒಂದು ಬೆಳಕು' ಭಗವಂತನ ಕುರಿತ ಚಿಂತನೆಯೇ ಅತ್ಯಂತ ಪರಿಶುದ್ಧವಾದ ಕಲ್ಪನೆ. ಭಗವದ್ ವಿಷಯಗಳಲ್ಲಿ ನಾವು ಮಗ್ನರಾದಷ್ಟು ನಮ್ಮ ಮನಸ್ಸಿನ ತಲ್ಲಣಗಳು ಕಡಿಮೆಯಾಗುತ್ತವೆ. ನಾವು ದಿನನಿತ್ಯದ ಬದುಕಿನಲ್ಲಿ ಒಂದಲ್ಲಾ ಒಂದು ಕಲ್ಪನೆಯನ್ನು ಹುಟ್ಟುಹಾಕಿಕೊಳ್ಳುತ್ತೇವೆ. ಅಷ್ಟೇ ಅಲ್ಲ ಅದನ್ನು ನಿಷ್ಪಲಗೊಳಿಸಲು ಮತ್ತೊಂದು ಕಲ್ಪನೆಯನ್ನು ಎಳೆದುಕೊಳ್ಳುತ್ತೇವೆ. ನಮ್ಮಲ್ಲಿ ಮೂಡುವ ತಪ್ಪಾದ ಕಲ್ಪನೆಯನ್ನು ನಿರ್ನಾಮಗೊಳಿಸ ಬೇಕಾದರೆ ಸರಿಯಾದ ಕಲ್ಪನೆಯ ಅಗತ್ಯವಿದೆ ಎಂಬುದನ್ನು ನಾವು ಮರೆಯಬಾರದಷ್ಟೆ.












Click it and Unblock the Notifications