ಕೇವಲ 35 ದಿನಗಳಲ್ಲಿ ಮನೆಯಲ್ಲೇ ಬೆಳೆಯಿರಿ ತಾಜಾ ಕೊತ್ತಂಬರಿ: ಇಲ್ಲಿದೆ ಕೃಷಿಕ ದೀಪು ಅವರ ಸಿಂಪಲ್ ಟ್ರಿಕ್

ಅಡುಗೆಮನೆಯಲ್ಲಿ ತಯಾರಾಗುವ ಹೆಚ್ಚಿನ ಆಹಾರದ ರುಚಿ ಹಾಗೂ ಸುವಾಸನೆ ಹೆಚ್ಚಿಸುವಲ್ಲಿ ಕೊತ್ತಂಬರಿ ಸೊಪ್ಪಿನ ಪಾತ್ರ ಮಹತ್ತರವಾದದ್ದು. ಆದರೆ, ಮಾರುಕಟ್ಟೆಯಿಂದ ತರುವ ಸೊಪ್ಪು ಕೆಲವೇ ದಿನಗಳಲ್ಲಿ ಬಾಡಿಹೋಗುತ್ತದೆ ಅಲ್ವಾ? ಹೀಗಾಗಿ ಮನೆಯಲ್ಲೇ ತಾಜಾ ಕೊತ್ತಂಬರಿ ಬೆಳೆದರೇ ಹೇಗೆ? ಇದು ಉತ್ತಮ ಆಯ್ಕೆಯಲ್ಲವೇ.. ಕೊತ್ತಂಬರಿ ಸೊಪ್ಪು ಬೆಳೆಯಲು ದೊಡ್ಡ ತೋಟ ಅಥವಾ ದುಬಾರಿ ಉಪಕರಣಗಳ ಅಗತ್ಯವೇ ಇಲ್ಲ.

ಹೌದು, ಕೇವಲ ಒಂದು ಕುಂಡ, ಉತ್ತಮ ಮಣ್ಣು ಮತ್ತು ಸ್ವಲ್ಪ ಬೀಜಗಳಿದ್ದರೆ ಸಾಕು ನೋಡಿ. ಆಂಧ್ರಪ್ರದೇಶದ ಅನಂತಪುರದ ಕೃಷಿ ಆಸಕ್ತ ಹಾಗೂ ಗಾರ್ಡನಿಂಗ್ ಕಂಟೆಂಟ್ ಕ್ರಿಯೇಟರ್ ಆಗಿರುವ ದೀಪು ಅವರು ಕೇವಲ 35 ದಿನಗಳಲ್ಲಿ ಮನೆಯಲ್ಲೇ ಕೊತ್ತಂಬರಿ ಬೆಳೆಯುವ ವಿಧಾನವನ್ನ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕುಂಡದಲ್ಲಿ ಸೊಪ್ಪು ಬೆಳೆಯುವ ಆ ಸಿಂಪಲ್ ಟ್ರಿಕ್ ಇಲ್ಲಿದೆ ಓದಿ.

Fresh Coriander

ಕೊತ್ತಂಬರಿ ಬೀಜಗಳ ತಯಾರಿ ಹೇಗೆ?

ಈ ಕೊತ್ತಂಬರಿ ಗಿಡ ಬೆಳೆಸುವಾಗ ಮೊದಲ ಹೆಜ್ಜೆಯೇ ಬೀಜಗಳ ಆಯ್ಕೆ ಮತ್ತು ಸಂಸ್ಕರಣೆ. ನಮಗೆಲ್ಲರಿಗೂ ಗೊತ್ತಿರುವಂತೆ ಕೊತ್ತಂಬರಿ ಬೀಜಗಳು ಗಟ್ಟಿಯಾದ ಹೊರಕವಚವನ್ನ ಹೊಂದಿರುತ್ತವೆ. ಆದ್ದರಿಂದ, ಬೀಜಗಳನ್ನ ಬಿತ್ತುವ ಮುನ್ನ ಅವುಗಳನ್ನ ನಿಧಾನಕ್ಕೆ ಜಜ್ಜಿ ಎರಡು ಭಾಗಗಳಾಗಿ ವಿಂಗಡಿಸಬೇಕು.ಆದ್ರೆ ಈ ಬೀಜಗಳು ಸಂಪೂರ್ಣವಾಗಿ ಪುಡಿಯಾಗದಂತೆ ಎಚ್ಚರವಹಿಸಿ.

ಕೇವಲ ಎರಡು ಹೋಳುಗಳಾಗುವಂತೆ ಮಾತ್ರ ಜಜ್ಜಬೇಕು ಅಷ್ಟೆ. ಬಳಿಕ ಈ ಬೀಜಗಳನ್ನ ಒಂದು ಪಾತ್ರೆಯಲ್ಲಿ ನೀರು ಹಾಕಿ 24 ಗಂಟೆಗಳ ಕಾಲ ನೆನೆಹಾಕಬೇಕು. ಇದರಿಂದಾಗಿ ಬೀಜಗಳು ಬೇಗ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ.

ಮಣ್ಣಿನ ಮಿಶ್ರಣ ಹೇಗಿರಬೇಕು?

ಯಾವುದೇ ಗಿಡ ಆರೋಗ್ಯಕರವಾಗಿ ಬೆಳೆಯಲು ಮಣ್ಣಿನ ಫಲವತ್ತತೆ ಬಹಳ ಮುಖ್ಯ. ದೀಪು ಅವರು ತಿಳಿಸಿರುವಂತೆ ಕುಂಡದಲ್ಲಿ ಕೊತ್ತಂಬರಿ ಬೆಳೆ ತೆಗೆಯಲು ನಿರ್ದಿಷ್ಟ ಪ್ರಮಾಣದ ಮಣ್ಣಿನ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಬೇಕು. ಇದಕ್ಕಾಗಿ ಶೇ. 40ರಷ್ಟು ತೋಟದ ಮಣ್ಣು, ಶೇ. 30ರಷ್ಟು ಕೊಕೊಪೀಟ್ ಹಾಗೂ ಶೇ. 30ರಷ್ಟು ಕಾಂಪೋಸ್ಟ್ ಅಂದರೆ ಗೊಬ್ಬರ ಬಳಸಬೇಕು.

ಈ ಮಿಶ್ರಣಕ್ಕೆ ಒಂದು ಹಿಡಿ ಬೇವಿನ ಪುಡಿ ಹಾಗೂ ಒಂದು ಚಮಚ ಟ್ರೈಕೋಡರ್ಮಾ (Trichoderma) ಸೇರಿಸಿ ಚೆನ್ನಾಗಿ ಬೆರೆಸಬೇಕು. ಇದು ಗಿಡಕ್ಕೆ ಉತ್ತಮ ಪೋಷಣೆ ನೀಡುವುದರ ಜೊತೆಗೆ ರೋಗಬಾರದಂತೆ ತಡೆಯುತ್ತದೆ.

ಬೀಜ ಬಿತ್ತುವ ಹಾಗೂ ನೀರುಣಿಸುವ ವಿಧಾನ

ಸಿದ್ಧಪಡಿಸಿದ ಮಣ್ಣಿನ ಮಿಶ್ರಣವನ್ನ ತಳಭಾಗದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ರಂಧ್ರಗಳಿರುವ ಕುಂಡಕ್ಕೆ ತುಂಬಿಸಿ. ಈಗ ನೆನೆಸಿಟ್ಟ ಕೊತ್ತಂಬರಿ ಬೀಜಗಳನ್ನು ಮಣ್ಣಿನ ಮೇಲ್ಮೈ ಮೇಲೆ ಸಮಾನವಾಗಿ ಹರಡಿ. ಬೀಜಗಳನ್ನ ಮಣ್ಣಿನ ತೀರಾ ಆಳಕ್ಕೆ ಹಾಕಬಾರದು.

ಹರಡಿದ ಬೀಜಗಳ ಮೇಲೆ ತೆಳುವಾಗಿ ಕೊಕೊಪೀಟ್ ಮುಚ್ಚಿ. ನಂತರ ನಿಧಾನವಾಗಿ ನೀರು ಸಿಂಪಡಿಸಿ. ಇದೊಂದು ಅತ್ಯುತ್ತಮ ಕೈತೋಟದ ಐಡಿಯಾ ಆಗಿದ್ದು, ಇಲ್ಲಿ ಮಣ್ಣು ಸದಾ ತೇವವಾಗಿರಬೇಕು, ಆದರೆ ಅತಿಯಾಗಿ ನೀರು ನಿಲ್ಲಬಾರದು. ಬಳಿಕ ಈ ಕುಂಡವನ್ನಾ ಚನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ಇಡಬೇಕು.

35 ದಿನಗಳಲ್ಲಿ ಕಟಾವಿಗೆ ಸಿದ್ಧವಾಗಲಿದೆ ತಾಜಾ ಕೊತ್ತಂಬರಿ ಸೊಪ್ಪು

ಬೀಜ ಬಿತ್ತಿದ ಸುಮಾರು 10ನೇ ದಿನಕ್ಕೆ ಸಣ್ಣ ಹಸಿರು ಮೊಳಕೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ಹಂತದಲ್ಲಿ ಗಿಡಗಳು ತುಂಬಾ ಸೂಕ್ಷ್ಮವಾಗಿರುವುದರಿಂದ ಗಿಡದ ಸುತ್ತಲಿನ ಮಣ್ಣನ್ನ ಕೆದಕಬಾರದು. 30ನೇ ದಿನದ ಹೊತ್ತಿಗೆ ಗಿಡಗಳು ದಟ್ಟವಾದ ಎಲೆಗಳಿಂದ ತುಂಬಿಕೊಂಡು ನಳನಳಿಸುತ್ತವೆ.

ಸರಿಯಾದ ಸೂರ್ಯನ ಬೆಳಕು ಹಾಗೂ ನೀರಿನ ನಿರ್ವಹಣೆಯಿಂದ 35ನೇ ದಿನಕ್ಕೆ ತಾಜಾ ಕೊತ್ತಂಬರಿ ಸೊಪ್ಪು ಕಟಾವಿಗೆ ಸಿದ್ಧವಾಗುತ್ತದೆ. ಗಿಡವನ್ನು ಬೇರು ಸಮೇತ ಕೀಳುವ ಬದಲು, ಅಡುಗೆಗೆ ಎಷ್ಟು ಬೇಕೋ ಅಷ್ಟು ಎಲೆಗಳು ಹಾಗೂ ಕಾಂಡವನ್ನು ಮಾತ್ರ ಕತ್ತರಿಸಿಕೊಳ್ಳಿ. ಇದರಿಂದ ಅದೇ ಗಿಡದಿಂದ ದೀರ್ಘಕಾಲದವರೆಗೆ ಸೊಪ್ಪು ಪಡೆಯಬಹುದು. ಒಮ್ಮೆ ಈ ಸೊಪ್ಪು ಮುಗಿದ ಮೇಲೆ, ಇದೇ ವಿಧಾನವನ್ನು ಬಳಸಿ ಮತ್ತೊಂದು ಬ್ಯಾಚ್ ಕೊತ್ತಂಬರಿಯನ್ನ ಸುಲಭವಾಗಿ ಬೆಳೆಯಬಹುದು ನೋಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+