ʼಥ್ಯಾಂಕ್ಸ್ʼ ಅನ್ನೋಕೆ ಯಾವತ್ತೂ ಕಂಜ್ಯೂಸ್ ಮಾಡಬೇಡಿ! ಧನ್ಯವಾದದ ಶಕ್ತಿ ನಿಮ್ಮ ಬದುಕನ್ನೇ ಬದಲಾಯಿಸಬಹುದು!
ಅವರೊಬ್ರು ಬಿಲಿಯನೇರ್. ಇನ್ನೂ ಏಳು ತಲೆಮಾರು ಕೂತು ಉಂಡರೂ ಕರಗದ ಆಸ್ತಿ. ದೊಡ್ಡ ಮನೆ, ಐಷಾರಾಮಿ ಕಾರು, ಸಮಾಜದಲ್ಲಿ ಗೌರವ, ಆಳುಕಾಳು- ಯಾವುದಕ್ಕೂ ಕೊರತೆಯಿರಲಿಲ್ಲ. ಆದರೆ ಸಂತೋಷ ಇರಲಿಲ್ಲ. ಪ್ರತಿದಿನ ಹೊಸ ಚಿಂತೆ, ಹೊಸ ಅಸಮಾಧಾನ. ಒಂದು ದಿನ ಅವನೊಬ್ಬ ಗುರುವನ್ನು ಭೇಟಿಯಾದ. ತನ್ನ ಕಷ್ಟ ಹೇಳಿಕೊಂಡ.
ಗುರು ಕೇಳಿದ ಪ್ರಶ್ನೆ ವಿಚಿತ್ರವಾಗಿತ್ತು. "ಇಂದು ಬೆಳಗ್ಗೆ ನೀನು ಕಣ್ಣು ತೆರೆದೆಯಾ?"
"ಹೌದು," ಎಂದ ಉದ್ಯಮಿ.
"ಉಸಿರಾಡುತ್ತಿದ್ದೀಯಾ?"
"ಹೌದು."
"ನಿನ್ನನ್ನು ಪ್ರೀತಿಸುವ ಕುಟುಂಬ ಇದೆಯಾ?"
"ಹೌದು."
ಗುರು ನಗುತ್ತಾ ಹೇಳಿದರು: "ಹಾಗಿದ್ದರೆ ನೀನು ಸಾಕಷ್ಟು ಶ್ರೀಮಂತ. ಅದೇ ನಿನ್ನ ಶ್ರೀಮಂತಿಕೆ. ಉಳಿದದ್ದೆಲ್ಲ ಹಣದ ರೂಪದ ಹೆಣ. ಹಣವನ್ನು ಎಣಿಸಬೇಡ. ಜೀವಂತವಾಗಿರುವುದನ್ನು ಎಣಿಸು." ಶ್ರೀಮಂತ ಪಾಠ ಕಲಿತ.

ಇಂದು ನಮ್ಮಲ್ಲಿ ಹೆಚ್ಚಿನವರು ಇದೇ ತಪ್ಪು ಮಾಡುತ್ತಿದ್ದೇವೆ. ನಮ್ಮ ಜೀವನದಲ್ಲಿ ಇಲ್ಲದಿರುವುದರ ಬಗ್ಗೆ ಹೆಚ್ಚು ಯೋಚಿಸುತ್ತೇವೆ. ಆದರೆ ಈಗಾಗಲೇ ದೊರೆತಿರುವ ಸುಖ ಸೌಲಭ್ಯ ಕೃಪೆಗಳನ್ನು ಮರೆತುಬಿಡುತ್ತೇವೆ. ಈ ಮನಸ್ಥಿತಿಯನ್ನು ಬದಲಾಯಿಸುವ ಸರಳವಾದ ಮಾರ್ಗವೇ ಕೃತಜ್ಞತೆ.
ಕೃತಜ್ಞತೆ ಎಂದರೇನು?
ಕೃತಜ್ಞತೆ ಇರುವುದು ಬದುಕನ್ನು ನೋಡುವ ದೃಷ್ಟಿಕೋನದಲ್ಲಿ. ನಮಗೆ ಸಹಾಯ ಮಾಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳುವುದು, ನಮ್ಮ ಬಳಿ ಇರುವ ಅವಕಾಶಗಳನ್ನು ಗೌರವಿಸುವುದು, ಪ್ರತಿದಿನದ ಸಣ್ಣ ಸಂತೋಷಗಳನ್ನು ಅರಿತುಕೊಳ್ಳುವುದು- ಇವೆಲ್ಲವೂ ಕೃತಜ್ಞತೆಯ ಭಾಗ. ನಾವು ದಿನನಿತ್ಯ ಸೇವಿಸುವ ಗಾಳಿ, ಬಳಸುವ ವಿದ್ಯುತ್, ಕುಡಿಯುವ ನೀರು, ಸವಿಯುವ ಆಹಾರ, ಹೋಗುವ ರಸ್ತೆ, ಕಲಿಸುವ ಗುರುಗಳು, ಗುಣಪಡಿಸುವ ವೈದ್ಯರು, ಸ್ವಚ್ಛತಾ ಸಿಬ್ಬಂದಿ- ಇವರೆಲ್ಲರ ಪರಿಶ್ರಮದಿಂದಲೇ ನಮ್ಮ ಜೀವನ ಸುಗಮವಾಗಿದೆ. ಇದನ್ನು ಅರಿತ ಕ್ಷಣದಿಂದಲೇ ನಮ್ಮ ಕೃತಜ್ಞತೆಯ ಪ್ರಯಾಣ ಆರಂಭವಾಗುತ್ತದೆ.
ಇಂದು ವೇಗವಾಗಿ ಓಡುವ ಜಗತ್ತಿನಲ್ಲಿ ಹೋಲಿಕೆಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇತರರ ಯಶಸ್ಸು, ಪ್ರವಾಸ, ದುಬಾರಿ ಜೀವನಶೈಲಿ ಕಾಣುತ್ತಲೇ ಇರುತ್ತದೆ. ಪರಿಣಾಮವಾಗಿ ನಮ್ಮ ಜೀವನ ಅಪೂರ್ಣ ಎನ್ನುವ ಭಾವನೆ ಮೂಡುತ್ತದೆ. ಮನೋವಿಜ್ಞಾನಿಗಳು ಹೇಳುವಂತೆ, ಮನುಷ್ಯನ ಮೆದುಳು ಸಹಜವಾಗಿಯೇ ಸಮಸ್ಯೆಗಳತ್ತ ಹೆಚ್ಚು ಗಮನ ಕೊಡುತ್ತದೆ. ಅದಕ್ಕೇ ಒಳ್ಳೆಯ ಘಟನೆಗಳಿಗಿಂತ ಕೆಟ್ಟ ಅನುಭವಗಳು ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತವೆ. ಕೃತಜ್ಞತೆಯ ಅಭ್ಯಾಸ ಈ ಸ್ವಭಾವವನ್ನು ಸಮತೋಲನಗೊಳಿಸುತ್ತದೆ. ಅದು ನಮ್ಮ ಗಮನವನ್ನು ಕೊರತೆಯಿಂದ ಸಮೃದ್ಧಿಯ ಕಡೆಗೆ ತಿರುಗಿಸುತ್ತದೆ.
Science ಏನು ಹೇಳುತ್ತದೆ?
ಕಳೆದ ಎರಡು ದಶಕಗಳಲ್ಲಿ ಕೃತಜ್ಞತೆಯ ಬಗ್ಗೆ ಅನೇಕ ಮನೋವಿಜ್ಞಾನ ಮತ್ತು ನರ ವಿಜ್ಞಾನ ಅಧ್ಯಯನಗಳು ನಡೆದಿವೆ. ಅವುಗಳ ಪ್ರಕಾರ ಕೃತಜ್ಞತೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವವರಲ್ಲಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಆತಂಕ ಮತ್ತು ಖಿನ್ನತೆಯ ಲಕ್ಷಣಗಳು ಇಳಿಮುಖವಾಗಬಹುದು. ಉತ್ತಮ ನಿದ್ರೆ ದೊರೆಯುವ ಸಾಧ್ಯತೆ ಹೆಚ್ಚುತ್ತದೆ. ಸಂಬಂಧಗಳು ಹೆಚ್ಚು ಗಟ್ಟಿಯಾಗುತ್ತವೆ. ಜೀವನದ ಬಗ್ಗೆ ತೃಪ್ತಿಯ ಭಾವನೆ ಹೆಚ್ಚಾಗುತ್ತದೆ. ಕೃತಜ್ಞತೆ ಸಮಸ್ಯೆಗಳನ್ನು ಎದುರಿಸುವ ಮನೋಬಲವನ್ನು ಹೆಚ್ಚಿಸುತ್ತದೆ.
ಒಮ್ಮೆ ಯೋಚಿಸಿ. ನಾವು ಕೊನೆಯದಾಗಿ ನಮ್ಮ ತಂದೆ-ತಾಯಿಗೆ, ಜೀವನ ಸಂಗಾತಿಗೆ, ಶಿಕ್ಷಕರಿಗೆ ಅಥವಾ ಸ್ನೇಹಿತರಿಗೆ ಹೃದಯಪೂರ್ವಕವಾಗಿ "ಧನ್ಯವಾದ" ಹೇಳಿದ್ದು ಯಾವಾಗ? ಹೆಚ್ಚಿನ ಸಂದರ್ಭಗಳಲ್ಲಿ ನಾವು ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕಿಂತ ಅದನ್ನು ಸಹಜ ಎಂದುಕೊಂಡು ಬಿಡುತ್ತೇವೆ. ಆದರೆ ಒಂದು ಸಣ್ಣ ಧನ್ಯವಾದವೂ ಸಂಬಂಧಗಳನ್ನು ಗಟ್ಟಿಗೊಳಿಸಬಹುದು.
ಕಚೇರಿಯಲ್ಲಿ ಸಹೋದ್ಯೋಗಿಗೆ ಧನ್ಯವಾದ ಹೇಳುವುದು, ಮನೆಯಲ್ಲಿರುವ ಹಿರಿಯರ ಪರಿಶ್ರಮವನ್ನು ಮೆಚ್ಚುವುದು, ಮಕ್ಕಳ ಸಣ್ಣ ಸಾಧನೆಯನ್ನು ಅಭಿನಂದಿಸುವುದು- ಇವು ನಿಮ್ಮ ಆನಂದವನ್ನು, ವಿಶ್ವಾಸ ಮತ್ತು ಆತ್ಮೀಯತೆಯನ್ನು ಬೆಳೆಸುತ್ತವೆ.
ಭಾರತೀಯ ಸಂಸ್ಕೃತಿ
ಕೃತಜ್ಞತೆ ಎಂಬುದು ಭಾರತೀಯ ಸಂಸ್ಕೃತಿಯ ಹೃದಯದಲ್ಲೇ ಇದೆ. ನಾವು ಭೂಮಿಯನ್ನು "ಭೂಮಾತೆ" ಎಂದು ಗೌರವಿಸುತ್ತೇವೆ. ನದಿಗಳನ್ನು ದೇವಿಯಂತೆ ಪೂಜಿಸುತ್ತೇವೆ. ಮರಗಳನ್ನು ಸಂರಕ್ಷಿಸುತ್ತೇವೆ. ಅನ್ನ ತಿನ್ನುವ ಮೊದಲು ದೇವರನ್ನು ನೆನೆಯುತ್ತೇವೆ. ಗುರು, ತಾಯಿ-ತಂದೆ ಮತ್ತು ಪ್ರಕೃತಿಗೆ ಗೌರವ ಸಲ್ಲಿಸುವ ಸಂಪ್ರದಾಯ ನಮ್ಮ ಸಂಸ್ಕೃತಿಯ ವಿಶೇಷ. "ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ" ಎಂಬ ಸಂದೇಶಗಳು ಕೃತಜ್ಞತೆಯ ಅತ್ಯುನ್ನತ ರೂಪಗಳಾಗಿವೆ.
ಕೃತಜ್ಞತೆಯ ಅಭ್ಯಾಸಕ್ಕೆ ಯಾವುದೇ ದೊಡ್ಡ ಸಿದ್ಧತೆ ಬೇಕಾಗಿಲ್ಲ. ಹೀಗೆ ಆರಂಭಿಸಬಹುದು:
- ಪ್ರತಿದಿನ ರಾತ್ರಿ ಮಲಗುವ ಮೊದಲು ಆ ದಿನ ನಡೆದ ಮೂರು ಒಳ್ಳೆಯ ಘಟನೆಗಳನ್ನು ಬರೆಯಿರಿ.
- ಯಾರಾದರೂ ಸಹಾಯ ಮಾಡಿದರೆ ತಕ್ಷಣ ಧನ್ಯವಾದ ಹೇಳಿ.
- ವಾರಕ್ಕೊಮ್ಮೆ ಬಹಳ ದಿನಗಳಿಂದ ಮಾತನಾಡದ ಒಬ್ಬರಿಗೆ ಕರೆ ಮಾಡಿ ಅವರ ಬಗ್ಗೆ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ.
- ಆಹಾರ ಸೇವಿಸುವಾಗ, ಅದನ್ನು ಬೆಳೆದ ರೈತರಿಂದ ಹಿಡಿದು ನಿಮ್ಮ ಮನೆಗೆ ತಲುಪಿಸಿದ ಎಲ್ಲರನ್ನೂ ಒಂದು ಕ್ಷಣ ನೆನಪಿಸಿಕೊಳ್ಳಿ.
- ಬೆಳಗಿನ ಸೂರ್ಯೋದಯ, ಆರೋಗ್ಯಕರ ದೇಹ, ಕುಟುಂಬದ ನಗು, ಸ್ನೇಹಿತರ ಬೆಂಬಲ, ಕುಡಿಯಲು ನೀರು, ತಿನ್ನಲು ಆಹಾರ, ಕಲಿಯಲು ಅವಕಾಶ- ಇವುಗಳೆಲ್ಲವೂ ಬದುಕಿನ ಅಮೂಲ್ಯ ಉಡುಗೊರೆಗಳು.


Click it and Unblock the Notifications
