ಉತ್ತರ ಕರ್ನಾಟಕ ಶೈಲಿಯಲ್ಲಿ ಎಣ್ಣೆ ಬದನೆಕಾಯಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಬಿಟ್ಟರೆ ಅದರೊಂದಿಗೆ ನೆಂಚಿಕೊಂಡು ತಿನ್ನಲು ಎಣ್ಣೆ ಬದನೆಕಾಯಿ ತುಂಬಾನೇ ಫೇಮಸ್. ಬಿಸಿ ಬಸಿ ಜೋಳದ ರೊಟ್ಟಿ ಜೊತೆಗೆ ಎಣ್ಣೆ ಬದನೆಕಾಯಿ ಪಲ್ಯ ಇದ್ದರೆ ಅಬ್ಬಬ್ಬಾ.... ಅದರ ರುಚಿ ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ ಬಿಡಿ.
ಬೆಂಗಳೂರಿನಂತ ಸಿಟಿಯಲ್ಲಿ ಬದಕಾಯಿ ಕೊಂಡು ಪಲ್ಯ ಮಾಡುವುದಕ್ಕೂ ಉತ್ತರ ಕರ್ನಾಟಕದ ಕಡೆಗೆ ಸಿಗುವ ಜವಾರಿ ಬದನೆಕಾಯಿಗೂ ರುಚಿಯಲ್ಲಿ ತುಂಬಾ ವ್ಯತ್ಯಾಸವಿದೆ. ಅಲ್ಲಿ ಸಿಗುವ ಜವಾರಿ ಬದನೆಕಾಯಿಯಲ್ಲಿ ಎಣ್ಣೆ ಬದನೆಕಾಯಿ ಮಾತ್ರವಲ್ಲದೆ, ಬದನೆಕಾಯಿಯಿಂದ ಮಾಡುವ ಪ್ರತಿದೊಂದು ಖಾದ್ಯವೂ ಕೂಡ ನಾಲಿಗೆಗೆ ಇನ್ನೆಲ್ಲೂ ನೀಡಿದ ಸವಿಯನ್ನು ನೀಡುತ್ತದೆ.

ಹೀಗೆ ಎಣ್ಣೆ ಬದನೆಕಾಯಿ ತಿನ್ನುವುದಕ್ಕಾಗಿನೇ ಅದೆಷ್ಟೋ ಜನ ಖಾನವಳಿಗಳಿಗೆ ಹೋಗುತ್ತಾರೆ. ತಾವಿರುವ ಸ್ಥಳಗಳಲ್ಲಿ ಅದರ ರುಚಿ ಸವಿಯಲು ಬಯಸುತ್ತಾರೆ. ಆದರೆ ಇದ್ಯಾವುದರಲ್ಲೂ ನಿಮಗೆ ಮನೆಯಲ್ಲೇ ಮಾಡಿದ ಎಣ್ಣೆ ಬದನೆಕಾಯಿ ಪಲ್ಯದ ತರಹದ ರುಚಿ ಶುಚಿ ಸಿಗುವುದಿಲ್ಲ.
ಹೀಗಾಗಿ ನೀವೇನಾದ್ರೂ ಉತ್ತರ ಕರ್ನಾಟಕ ಭಾಗದ ಖಾದ್ಯಗಳನ್ನು ಇಷ್ಟಪಡುತ್ತಿದ್ದರೆ ಅದನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿ ತಿನ್ನುವುದು ಒಳ್ಳೆಯದು. ಹಾಗಾದರೆ ಉತ್ತರ ಕರ್ನಾಟಕ ಶೈಲಿಯಲ್ಲಿ ಎಣ್ಣೆ ಬದನೆಕಾಯಿ ಮಾಡುವುದು ಹೇಗೆ ಎಂದು ತಿಳಿಯೋಣ..?
ಎಣ್ಣೆ ಬದನೆಕಾಯಿ ಮಾಡಲು ಬೇಕಾಗುವ ಪದಾರ್ಥಗಳು:-
*ಜವಾರಿ ಬದನೆಕಾಯಿ- ಚಿಕ್ಕ ಗಾತ್ರದ 7-8
*ಶೆಂಗಾ ಅಥವಾ ಗೂರೆಳ್ಳು ಒಂದು ಕಪ್
*ಈರುಳ್ಳಿ- ಚಿಕ್ಕ ಗಾತ್ರದ ಮೂರು(ಸಣ್ಣಗೆ ಹೆಚ್ಚಿದ)
*ಟೊಮೊಟೊ- ಚಿಕ್ಕ ಗಾತ್ರದ ಮೂರು(ಸಣ್ಣಗೆ ಹೆಚ್ಚಿದ)
*ಕೊತ್ತೊಂಬರಿ ಸೊಪ್ಪು(ಸಣ್ಣಗೆ ಹೆಚ್ಚಿದ)
*ಖಾರದ ಪುಡಿ- ಮೂರು ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಅರಿಶಿಣ
* ಎಣ್ಣೆ- 15-20 ಟೇಬಲ್‌ಸ್ಪೂನ್
*ಹುಣಸೆಹಣ್ಣು ಸ್ವಲ್ಪ
*ಬೆಳ್ಳುಳ್ಳಿ ನಾಲ್ಕು

ಮಾಡುವ ವಿಧಾನ:-
* ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಸೀಳಿಕೊಳ್ಳಿ, ಉಪ್ಪು ನೀರಲ್ಲಿ ಹಾಕಿ ಬಿಡಿ
* ಒಲೆಯಲ್ಲಿ ಮೇಲೆ ಒಂದು ತವೆಯನ್ನು ಇಟ್ಟು ಅದರಲ್ಲಿ ಶೆಂಗಾ ಹಾಕಿ ಉರಿದುಕೊಳ್ಳಿ (ಶೆಂಗಾ ಬದಲಿಗೆ ಗೂರೆಳ್ಳು (ಕಪ್ಪು ಎಳ್ಳು) ಬಳಕೆ ಮಾಡಬಹುದು. ಇದು ಕೂಡ ತುಂಬಾ ರುಚಿಯಾಗಿರುತ್ತದೆ). ಅದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ.
* ಬಳಿಕ ಶೆಂಗಾ ಪುಡಿಗೆ ಮೂರು ಚಮಚ ಎಣ್ಣೆ ಹಾಕಿ ಅದಕ್ಕೆ ಹೆಚ್ಚಿದ ಊರುಳ್ಳಿ, ಟೊಮೊಟೊ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿಕೊಳ್ಳಿ
* ಬಳಿಕ ಬದನೆಕಾಯಿಯಲ್ಲಿ ಆ ಮಿಶ್ರವನ್ನು ತುಂಬಿ ಇಟ್ಟುಕೊಳ್ಳಿ.
* ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಹತ್ತು ಟೀಸ್ಪೂನ್ ಎಣ್ಣೆ ಹಾಕಿ. ಬೆಳ್ಳುಳ್ಳಿ ಹಾಕಿ ಬದನೆಕಾಯಿಯನ್ನು ಹಾಕಿ, ಉಳಿದ ಮಿಶ್ರಣವನ್ನು ಅದರಲ್ಲಿ ಹಾಕಿ ಬದನೆಕಾಯಿ ಅರ್ಧ ಮುಳುಗುವಷ್ಟು ನೀರು ಹಾಕಿ.
* ಬಳಿಕ ಅದಕ್ಕೆ ಅರಿಶಿಣ, ಕೊತ್ತಂಬರಿ ಸೊಪ್ಪು, ಹುಣಸೆಹಣ್ಣಿನ ರಸ ಹಾಕಿ ಒಂದು ಬಾರಿ ಮಾತ್ರ ಕಲಸಿ, ಪಾತ್ರೆಯನ್ನು ಮುಚ್ಚಿ. ಉರಿಯನ್ನು ಮಧ್ಯಮ ಗಾತ್ರದಲ್ಲಿ ಇಡಿ.
* 15 ನಿಮಿಷ ಬಿಟ್ಟು ಅದನ್ನು ನಿಧಾನವಾಗಿ ಮತ್ತೊಮ್ಮೆ ಕಲಸಿ, ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ. ಬದನೆಕಾಯಿ ತಳಹಿಡಿಯದಂತೆ ನೋಡಿಕೊಳ್ಳಬೇಕು
* ನೀರು ಆವಿಯಾಗಿ ಬದನೆಕಾಯಿ ಮೇಲೆ ಎಣ್ಣೆ ಕಾಣುವಂತಾದರೆ ಎಣ್ಣೆ ಬದನೆಕಾಯಿ ರೆಡಿ.












Click it and Unblock the Notifications