Happiness: ಬದುಕಿನ ಆ ಎರಡು ಆನಂದಗಳು ಯಾವುದು ಗೊತ್ತಾ?
ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಎರಡು ರೀತಿಯ ಆನಂದಗಳಿವೆಯಂತೆ ಅದರಲ್ಲಿ ಒಂದು ಲೋಕದ ಸುಖ-ಸಂತೋಷಗಳ ಮೂಲಕ ಪಡೆಯುವ ವಿಷಯಾನಂದ. ಇನ್ನೊಂದು ಭಗವಂತನ ಅರ್ಚನೆಯ ಮೂಲಕ ಒದಗಿ ಬರುವ ಭಜನಾನಂದ. ಇದೆರಡರ ನಡುವೆ ಮನುಷ್ಯ ಸುಖಾಪೇಕ್ಷೆ ಮತ್ತು ವಿಷಯಾಪೇಕ್ಷೆಗಳ ಬೆನ್ನು ಹತ್ತಿ ಹೋಗುತ್ತಾನೆ.
ಸುಖಾಪೇಕ್ಷೆ ಮತ್ತು ವಿಷಯಾಪೇಕ್ಷೆಗಳಿಂದ ನಿಜವಾಗಿಯೂ ಆನಂದ ಪಡೆಯಲು ಸಾಧ್ಯನಾ? ಎಂಬ ಪ್ರಶ್ನೆಗಳು ಮೂಡದಿರದು. ಯಾವುದರ ಬಗ್ಗೆ ಆಸಕ್ತಿ ಹುಟ್ಟುತ್ತದೆಯೋ ಅದೇ ವಿಷಯಾಪೇಕ್ಷೆ. ಇಲ್ಲಿ ನಾವು ಯಾವ ವಿಷಯದ ಬಗ್ಗೆ ಅಪೇಕ್ಷೆ ಹೊಂದಿದ್ದೇವೆ ಎನ್ನುವುದು ಬಹು ಮುಖ್ಯವಾಗುತ್ತದೆ. ಒಳ್ಳೆಯ ವಿಷಯ ಆದರೆ ಒಳ್ಳೆಯದ್ದೇ ಆಗುತ್ತದೆ. ಅದರಾಚೆಗೆ ಕೆಟ್ಟ ವಿಚಾರವಾದರೆ ಅದಕ್ಕೆ ಕಂದಾಯ ಕಟ್ಟಬೇಕಾಗುತ್ತದೆ.

ಇನ್ನು ಈ ವಿಷಯಾಪೇಕ್ಷೆ ಎನ್ನುವುದು ಮನುಷ್ಯನ ರಕ್ತ ಮಾಂಸ ಮಜ್ಜೆಯಲ್ಲಿ ಬೇರು ಬಿಟ್ಟಿದೆ. ಹೀಗಾಗಿ ಮನುಷ್ಯ ಸದಾ ವಿಷಯಾಪೇಕ್ಷೆಯಲ್ಲಿರುತ್ತಾನೆ. ಹಾಗೆಂದು ವಿಷಯಾಪೇಕ್ಷೆಗೆ ಒಳಗಾಗುವುದು ಕೆಟ್ಟದಲ್ಲ. ಬದಲಿಗೆ ನಾವು ಯಾವ ವಿಷಯಗಳಲ್ಲಿ ಅಪೇಕ್ಷೆಗೆ ಒಳಗಾಗುತ್ತೇವೆ ಎನ್ನುವುದರ ಮೇಲೆ ನಮ್ಮ ಬದುಕು ನಿಂತಿರುತ್ತದೆ. ಇದರ ಜತೆಗೆ ಸುಖಾಪೇಕ್ಷೆಯೂ ಅಷ್ಟೆ. ಕ್ಷಣಿಕ ಸುಖದ ಹಿಂದೆ ಬಿದ್ದವರು ಉದ್ಧಾರವಾದ ಉದಾಹರಣೆಗಳಿಲ್ಲ.
ಮನುಷ್ಯನ ಜೀವಶಕ್ತಿ ಯಾವುದು?
ಸುಖಾಪೇಕ್ಷೆ ಹಾಗೂ ವಿಷಯಾಪೇಕ್ಷೆಗಳು ಮನುಷ್ಯನ ಮೂಲಭೂತ ಜೀವಶಕ್ತಿಯಾಗಿದೆ. ಅಷ್ಟೇ ಅಲ್ಲ ಮನುಷ್ಯ ಬದುಕುತ್ತಿರುವುದೇ ಈ ಅಪೇಕ್ಷೆಯ ಪ್ರೇರಣೆಯಿಂದ. ಕೆಲವೊಮ್ಮೆ ಮನುಷ್ಯನ ಸಂಕಲ್ಪ ಶಕ್ತಿಯನ್ನು ವಿಷಯಾಪೇಕ್ಷೆಗಳು ಮೊಟಕುಗೊಳಿಸಿಬಿಡುತ್ತವೆ. ವಿಷಯಾಸಕ್ತರಾದವರನ್ನು ನೀವು ಲೌಕಿಕ ಸುಖಗಳ ಹಿಂದೆ ಹೋಗಬೇಡಿ ಎಂದು ಹೇಳುವುದು ಮೂರ್ಖತನವಾಗುತ್ತದೆ.

ಆತ್ಮಜ್ಞಾನಿಗಳು, ಮನುಷ್ಯನ ಮನೋಮಟ್ಟವನ್ನು ಅರಿತವರಾದ ಆಧ್ಯಾತ್ಮಿಕ ಚಿಂತಕರು ಹೇಳುವುದಿಷ್ಟೆ. ಸುಖಾನ್ವೇಷಿಯಾಗು, ಆದರೆ ಆ ನಿನ್ನ ಸುಖಾಪೇಕ್ಷೆ ನಿನ್ನ ಮಾನಸಿಕ ಮತ್ತು ಶಾರೀರಿಕ ಸೌಖ್ಯವನ್ನು ಹಾಳುಮಾಡುವಂತಿರಬಾರದು ಅಥವಾ ನಿನ್ನ ಊರ್ಧ್ವ ಗಮನಾಭಿಲಾಷೆಯನ್ನು ಕುಂಠಿತ ಗೊಳಿಸುವಂತಿರಬಾರದು. ಮಾನಸಿಕವಾದ ಸಂತೋಷಗಳ ಅನ್ವೇಷಣೆಯ ಮೂಲಕ ಆತ್ಮಾನಂದವನ್ನು ಪಡೆದುಕೊಳ್ಳಲು ಬೇಕಾದ ಶಕ್ತಿ, ಸಾಮರ್ಥ್ಯವನ್ನು ಗಳಿಸಿಕೋ. ನಿನ್ನ ಸುಖಾಪೇಕ್ಷೆಯು ಆತ್ಮ ಹಾನಿಗೆ ದಾರಿಯಾಗಬಾರದು. ಇದು ವಿಚಾರವಂತರಲ್ಲಿ ಮೂಡಬೇಕಾದ ಎಚ್ಚರಿಕೆಯಾಗಿದೆ.
ನೈತಿಕ ನಿಯಮ ಅಳವಡಿಕೆ ಅಗತ್ಯ
ನೈತಿಕ ನಿಯಮಗಳಾಗಲೀ, ಇನ್ನಿತರ ನಿಯಮಗಳಾಗಲೀ ಇವುಗಳೆಲ್ಲವೂ ಅಡ್ಡದಾರಿ ಹಿಡಿದು ಸುಖಾಪೇಕ್ಷೆಯ ಬೆನ್ನತ್ತಿ ಹೋಗುವ ಮನುಷ್ಯನನ್ನು ಕಾಪಾಡುವ ಸಲುವಾಗಿಯೇ ಮಾಡಲ್ಪಟ್ಟವುಗಳಾಗಿವೆ. ನಮ್ಮಲ್ಲಿ ಮೂಡುವಂತಹ ವಿಷಯಾಪೇಕ್ಷೆಯಾಗಲೀ, ಸೆಳೆಯುವಂತಹ ಸುಖಾಪೇಕ್ಷೆಯಾಗಲೀ ಇವುಗಳನ್ನು ಅನುಕೂಲವಾಗುವಂತಹ ಚೌಕಟ್ಟಿನಲ್ಲಿ ಪಳಗಿಸಿ ಬೇರೊಂದು ಸ್ಥಿತಿಗೆ ಸಿದ್ಧಗೊಳಿಸುವ ತಂತ್ರ ನಮ್ಮಲ್ಲಿಯೇ ಇದೆ ಎಂಬುದನ್ನು ಮರೆಯಬಾರದು.

ಮನಸ್ಸನ್ನು ಬೇರೊಂದು ಸ್ಥಿತಿಗೆ ಸಿದ್ಧಪಡಿಸುವುದೆಂದರೆ ಇಲ್ಲಿ ಆನಂದದ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದು ಎಂದರ್ಥ. ಮನುಷ್ಯನೊಬ್ಬ ಬೇಕೇ ಬೇಕು ಎಂದಾದರೆ ವಿಷಯಾನಂದದ ಹಿಂದೆ ಹೋಗಬಹುದು. ಆದರೆ ಅದು ಭಜನಾಂದಕ್ಕೆ ಎಂದೂ ಪ್ರತಿಕೂಲವಾಗಬಾರದು. ಇದು ಒಂದು ಬಗೆಯ ವಿವೇಚನೆ ಮತ್ತು ವಿಷಯಾನಂದದಲ್ಲಿ ಮಾಡಿಕೊಳ್ಳುವ ಆಯ್ಕೆ ಮೇಲೆ ಅವಲಂಬಿಸಿದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದೇನು?
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ ವಿಷಯಜನ್ಯ ಭೋಗಗಳು ಖಂಡಿತವಾಗಿಯೂ ದುಃಖಕ್ಕೆ ಕಾರಣವಾಗುತ್ತವೆ. ವಿಷಯಸುಖಗಳನ್ನು ಅನುಭವಿಸುವಾಗ ಕೂಡ ಈ ವಿಚಾರವನ್ನು ನೆನಪಿನಲ್ಲಿರಿಸಿಕೊಂಡಿದ್ದೇ ಆದರೆ ವಿವೇಚನೆಗೆ ಅನುಕೂಲವಾಗುತ್ತದೆ. ಆಗ ವಿಷಯಾಸಕ್ತನಾದವನು ಕೂಡಾ ನೈತಿಕ ನಿರ್ದಿಷ್ಟ ನೈತಿಕ ಕಟ್ಟುಪಾಡುಗಳ ಒಳಗೇ ವಿಷಯಾನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದರ ಜತೆಗೆ ಭಜನಾಂದವನ್ನೂ ಪಡೆದುಕೊಳ್ಳಲು ಅಗತ್ಯವಾದ ಆಧ್ಯಾತ್ಮಿಕ ಸಾಧನೆಗಳನ್ನು ಕೈಗೊಂಡರೆ, ಮನಸ್ಸು ಅನುಕ್ರಮವಾಗಿ ಪರಿಶುದ್ಧವಾಗುತ್ತಾ ವಿಷಯಾನಂದದ ಬಗೆಗಿನ ಆಸಕ್ತಿ ಕಡಿಮೆಯಾಗಿ ಭಜನಾನಂದದ ಕಡೆಗೆ ಮನಸ್ಸು ಗಮನಾರ್ಹವಾಗಿ ವಾಲುತ್ತದೆ.
ಶ್ರೀರಾಮಕೃಷ್ಣರು ಹೇಳುವಂತೆ ನಮ್ಮ ಮನಸ್ಸಿನ ಭಾವ-ರಾಗಗಳನ್ನು ನಾವು ವಿನಾಶಗೊಳಿಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಶುದ್ಧಗೊಳಿಸಿ ಒಂದು ನಿರ್ದಿಷ್ಟ ಗುರಿಯ ಕಡೆಗೆ ನೇರಗೊಳಿಸಬಹುದು. ನಮ್ಮ ರಾಗ-ಭಾವಗಳು ಕೀಳು ವಿಷಯಗಳ ಕಡೆ ತಿರುಗಿದರೆ ನಾವೂ ಕೀಳಾಗುತ್ತೇವೆ. ಅವುಗಳನ್ನು ಮೇಲ್ಮುಖವಾಗಿ ತಿರುಗಿಸಿದರೆ ನಾವು ಮೇಲಾದವರಾಗುತ್ತೇವೆ. ಅವುಗಳನ್ನು ಪರಬ್ರಹ್ಮಾಭಿಮುಖವಾಗಿ ನಿರ್ದೇಶಿಸಿದರೆ ಅವುಗಳ ಜತೆಗೆ ನಾವೂ ಆ ಹಂತಕ್ಕೆ ಏರುತ್ತೇವೆ. ಆಗ ಈ ಲೋಕದ ವಿಷಯ ಪ್ರವೃತ್ತಿಗಳು ಸುಶಿಕ್ಷಿತವಾಗಿ ಪರಿಣತವಾಗಿ ತಮ್ಮ ಮೊದಲಿನ ಗುಣ ಲಕ್ಷಣಗಳನ್ನು ಕಳೆದುಕೊಂಡು ಅಸಾಧಾರಣವಾಗುತ್ತವೆ.
ನಮ್ಮ ಆಸಕ್ತಿಗಳು ಸತ್ಯದ ಕಡೆಗಿರಲಿ
ಯಾವಾಗ ಒಬ್ಬ ಮನುಷ್ಯ ತಾನು ಕೇವಲ ಮನೋಬುದ್ದಿ ಅಹಂಕಾರಗಳಿಂದ ಕೂಡಿದ ದೇಹವಲ್ಲ. ನಾನು ನಿತ್ಯ ಶುದ್ಧವಾದ ಆತ್ಮಸ್ವರೂಪನೇ ಎಂದು ಅನುಭವಿಸಿ ತಿಳಿಯುತ್ತಾನೆಯೋ ಆಗ ಅವನ ಭಾವ-ರಾಗಗಳು ಸ್ತಬ್ಧವಾಗುತ್ತವೆ. ಏಕೆಂದರೆ ಈ ಭಾವ-ರಾಗಗಳು ವಾಸ್ತವವಾಗಿ ನೋಡಿದರೆ ತಪ್ಪುದಾರಿಗೆ ಬಿದ್ದ ನಮ್ಮ ಅಪೇಕ್ಷೆಗಳಲ್ಲದೆ ಬೇರೆ ಯೂವುದೂ ಅಲ್ಲ. ನಿಜ ಹೇಳಬೇಕೆಂದರೆ ಆಸೆಗಳು ನಮ್ಮ ಉದ್ದೇಶಕ್ಕೆ ಅನುಸಾರವಾಗಿ ಶತ್ರುಗಳೂ ಆಗಬಹುದು. ಮಿತ್ರರೂ ಆಗಬಹುದು.
ಯಾವಾಗ ನಮ್ಮ ಆಸಕ್ತಿಗಳು ಸತ್ಯದೆಡೆಗೆ ಉದ್ದೇಶಿತವಾಗುತ್ತವೆಯೋ ಆಗ ಅವು ನಮ್ಮ ಬಿಡುಗಡೆಯ ಹಾಗೂ ಆನಂದದ ಸಾಧನಗಳಾಗುತ್ತವೆ. ಯಾವಾಗ ಅವು ಮಿಥ್ಯದೆಡೆಗೆ ಉದ್ದೇಶಿತವಾಗುತ್ತವೆಯೋ ಆಗ ಅವು ಬಂಧನದ ಹಾಗೂ ದುಃಖದ ಸಾಧನಗಳಾಗುತ್ತವೆ. ಆನಂದ ಎನ್ನುವುದು ಕೇವಲ ಸುಖ ಅಲ್ಲ. ಅದು ಸುಖ, ದುಃಖಗಳಾಚೆಯದು ಮತ್ತು ಎಂದೂ ದೈಹಿಕ, ಮಾನಸಿಕ ಸ್ತರಗಳಲ್ಲಿ ಪ್ರತ್ಯೇಕಿಸಲಾರದಂತಹದ್ದಾಗಿದೆ.
-
ಕಣ್ಣು ಸಮಸ್ಯೆಗಳು ಹೆಚ್ಚುತ್ತಿವೆಯೇ? ಈ ಆಹಾರಗಳು ನಿಮ್ಮ ದೃಷ್ಟಿಯನ್ನು ರಕ್ಷಿಸುತ್ತವೆ -
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
Powerful Vastu Plants: ಮನೆಗೆ ಪಾಸಿಟಿವ್ ಎನರ್ಜಿ ಬೇಕಾ? ಈ ಸಸ್ಯಗಳನ್ನು ಇಡಿ, ಜೀವನವೇ ಬದಲಾಗುತ್ತದೆ -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications