ಬೇಸಿಗೆಯಲ್ಲಿ ಅತಿಯಾಗಿ ಕಾಡುವ ಸರ್ವೈಕಲ್ ನೋವು ಮತ್ತು ತಲೆ ಸುತ್ತುವ ಸಮಸ್ಯೆಗೆ ಇಲ್ಲಿದೆ ಪರಿಹಾರ
ಬೇಸಿಗೆ ತಾಪಮಾನ ಮಿತಿ ಮೀರುತ್ತಿದೆ. ಹೆಚ್ಚುತ್ತಿರುವ ತಾಪಮಾನವು ತಲೆಸುತ್ತುವುದು, ಕಣ್ಣು ಕತ್ತಲಾಗುವುದು ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ತಲೆಸುತ್ತುವುದರ ಜೊತೆಗೆ ಕುತ್ತಿಗೆ ನೋವಿನ ಸಮಸ್ಯೆ ಕೂಡಾ ಕೆಲವರನ್ನು ಕಾಡುತ್ತದೆ. ಈ ಲಕ್ಷಣಗಳು ಹೆಚ್ಚಾಗಿ ಸರ್‌ವೈಕಲ್ ಸ್ಪೈನ್‌ನ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿದ್ದು, ನೋವು ಬೇಸಿಗೆಯಲ್ಲಿ ಅತಿಯಾಗಿ ಕಾಡುತ್ತದೆ.
ಸರ್‌ವೈಕಲ್‌ನ ನೋವು ಹೆಚ್ಚಾಗಿ ಸರ್ವಿಕಲ್ ಸ್ಪಾಂಡಿಲೋಸಿಸ್ ನಂತಹ ಕಾಯಿಲೆಗಳಿಗೆ ಸಂಬಂಧಿಸಿದ್ದಾಗಿದೆ. ಬೇಸಿಗೆಯಲ್ಲಿ ಸ್ನಾಯುಗಳ ಆಯಾಸ ಮತ್ತು ಬಿಗಿತದಿಂದಾಗಿ ನೋವು ಉಲ್ಬಣಗೊಳ್ಳುತ್ತದೆ. ಹೆಚ್ಚಿನ ತಾಪಮಾನವು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದಕ್ಕೆ ಕಾರಣವಾಗಬಹುದು. ಇದು ಸ್ನಾಯುಗಳ ಕಾರ್ಯ ಮತ್ತು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ.

ಬೇಸಿಗೆಯಲ್ಲಿಯೇ ಅತಿಯಾಗಿ ಕಾಡುವುದೇಕೆ ಸರ್‌ವೈಕಲ್ ನೋವು?:
ಬೇಸಿಗೆಯಲ್ಲಿ ಈ ರೀತಿಯ ನೋವು ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಈ ಸಮಯದಲ್ಲಿ ನಮ್ಮ ದೈನಂದಿನ ಅಭ್ಯಾಸಗಳಲ್ಲಿ ನಾವು ಮಾಡಿಕೊಳ್ಳುವ ಬದಲಾವಣೆ. ಬಿಸಿಲ ಬೇಗೆ ತಪ್ಪಿಸಲು ಜನರು ಮನೆಯೊಳಗೆಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಹೀಗಾಗುವಾಗ ಸುಮ್ಮನೆಯಂತೂ ಮನೆಯಲ್ಲಿ ಕೂರುವುದಿಲ್ಲ. ಟಿವಿ, ಮೊಬೈಲ್, ಲ್ಯಾಪ್‌ಟಾಪ್‌ನಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ಹೀಗೆ ದೀರ್ಘಕಾಲದವರೆಗೆ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಬಳಸುವಾಗ ಕಳಪೆ ಭಂಗಿಯನ್ನೇ ಅನುಸರಿಸುತ್ತಾರೆ. ಇದು ಕುತ್ತಿಗೆಯ ಸ್ನಾಯುಗಳು ಮತ್ತು ಕುತ್ತಿಗೆ, ಬೆನ್ನುಮೂಳೆಯ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ನೋವು ಹೆಚ್ಚಾಗಲು ಇದೇ ಕಾರಣವಾಗುತ್ತದೆ.
ಚಲನಶೀಲತೆಯ ಕೊರತೆ:
ಅನೇಕ ಸಂದರ್ಭಗಳಲ್ಲಿ, ಚಲನಶೀಲತೆಯ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ತಪ್ಪಾದ ಭಂಗಿಯಲ್ಲಿ ಹವಾನಿಯಂತ್ರಿತ ವಾತಾವರಣದಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳುವುದರಿಂದ ಸ್ನಾಯುಗಳು ಬಿಗಿಯಾಗುವುದಕ್ಕೆ ಶುರುವಾಗುತ್ತದೆ. ಇದು ಸರ್‌ವೈಕಲ್ ನೋವಿನ ಅಪಾಯವನ್ನು ಹೆಚ್ಚಿಸುತ್ತದೆ . ಕುತ್ತಿಗೆ ತಣ್ಣನೆಯ ಗಾಳಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ನೋವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.
ಸರ್‌ವೈಕಲ್ ತಲೆಸುತ್ತುವುದಕ್ಕೆ ಕಾರಣವೇನು ?:
ಸರ್‌ವೈಕಲ್ ಸಮಸ್ಯೆಯಿಂದ ಉಂಟಾಗುವ ತಲೆತಿರುಗುವಿಕೆಯನ್ನು ಸೆರ್ವಿಕೋಜೆನಿಕ್ ವರ್ಟಿಗೋ ಎಂದು ಕರೆಯಲಾಗುತ್ತದೆ. ಇದು ಕುತ್ತಿಗೆಯ ಸ್ನಾಯುಗಳು ಬಿಗಿಯಾದಾಗ ಸಮತೋಲನ ತಪ್ಪುವಂತೆ ಮಾಡುತ್ತದೆ.ಆದರೆ ಇಲ್ಲಿ ನೆನಪಿನಲ್ಲಿಡಬೇಕಾದ ಅಂಶ ಎಂದರೆ ತಲೆಸುತ್ತುವುದು ಕೇವಲ ಸರ್‌ವೈಕಲ್ ಸಮಸ್ಯೆಗಳಿಂದ ಉಂಟಾಗುವುದಿಲ್ಲ. ಡಿ ಹೈಡ್ರೇಶನ್, ರಕ್ತದೊತ್ತಡದಲ್ಲಿನ ಬದಲಾವಣೆಗಳಿಂದಾಗಿಯೂ ತಲೆಸುತ್ತುವ ಸಮಸ್ಯೆ ಕಾಣಿಸಿಕೊಳ್ಳಬಹುದು.
ಸರ್‌ವೈಕಲ್ ನೋವನ್ನು ಗುರುತಿಸುವುದು ಹೇಗೆ ?:
ನಿರಂತರವಾಗಿ ತಲೆಸುತ್ತುವುದು, ತೀವ್ರ ಕುತ್ತಿಗೆ ನೋವು, ಕೈ ಮರಗಟ್ಟುವುದು, ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ತೊಂದರೆ ಎದುರಾಗುತ್ತಿದ್ದರೆ ನಿರ್ಲಕ್ಷಿಸಬಾರದು. ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಬೇಸಿಗೆಯಲ್ಲಿ ಸರ್‌ವೈಕಲ್ ನೋವು ತಪ್ಪಿಸಲು ಏನು ಮಾಡಬೇಕು?:
ಬೇಸಿಗೆಯಲ್ಲಿ ಸರ್‌ವೈಕಲ್ ನೋವು ಮತ್ತು ತಲೆಸುತ್ತುವ ಸಮಸ್ಯೆಯನ್ನು ತಪ್ಪಿಸಲು ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆಗಳ ಅಗತ್ಯವಿಲ್ಲ. ಸರಳ, ನಿಯಮಿತ ಅಭ್ಯಾಸಗಳು ಕೂಡಾ ದೊಡ್ಡ ವ್ಯತ್ಯಾಸವನ್ನುಂಟುಮಾಡಬಹುದು.
ಹೈಡ್ರೇಟೆಡ್ ಆಗಿರಿ - ಸಾಕಷ್ಟು ನೀರು ಕುಡಿಯುವುದರಿಂದ ಸ್ನಾಯುಗಳ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳಬಹುದು. ಇದು ಆಯಾಸವನ್ನು ಕಡಿಮೆ ಮಾಡುತ್ತದೆ.
ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳಿ - ಮೊಬೈಲ್, ಲ್ಯಾಪ್‌ಟಾಪ್ ನೋಡುವಾಗ ಪರದೆಯನ್ನು ಕಣ್ಣಿನ ಮಟ್ಟದಲ್ಲಿ ಇರಿಸಿ. ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ನಿಮ್ಮ ಬೆನ್ನು ಮತ್ತು ಕುತ್ತಿಗೆಗೆ ಸಪೋರ್ಟ್ ಸಿಗುವಂತೆ ನೋಡಿಕೊಳ್ಳಿ.
ಆಗಾಗ ವಿರಾಮ ತೆಗೆದುಕೊಳ್ಳಿ - ಒಂದೇ ಸ್ಥಾನದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದನ್ನು ತಪ್ಪಿಸಿ. ಪ್ರತಿ 30 ರಿಂದ 40 ನಿಮಿಷಗಳಿಗೊಮ್ಮೆ ನಿಮ್ಮ ಕುತ್ತಿಗೆ ಮತ್ತು ಭುಜಗಳನ್ನು ಹಿಗ್ಗಿಸಿ.
ದೈಹಿಕವಾಗಿ ಸಕ್ರಿಯರಾಗಿರಿ - ಲಘು ವ್ಯಾಯಾಮ, ಯೋಗ ಅಥವಾ ಕುತ್ತಿಗೆ ಬಲಪಡಿಸುವ ವ್ಯಾಯಾಮಗಳನ್ನು ಮಾಡಿ.
AC ಯೊಂದಿಗಿನ ನೇರ ಸಂಪರ್ಕವನ್ನು ಕಡಿಮೆ ಮಾಡಿ - ಕುತ್ತಿಗೆಯ ಮೇಲೆ ಎಸಿಯ ತಣ್ಣನೆಯ ಗಾಳಿ ದೀರ್ಘಕಾಲದವರಗೆ ಬೀಳದಂತೆ ನೋಡಿಕೊಳ್ಳಿ.
ರೋಗಲಕ್ಷಣಗಳನ್ನು ಮೊದಲೇ ಪರಿಹರಿಸುವುದು ಬಹಳ ಮುಖ್ಯ. ಸಮಸ್ಯೆಯ ಆರಂಭಿಕ ಹಂತದಲ್ಲಿಯೇ ಗಮನ ಹರಿಸಬೇಕಾಗಿರುವುದು ಅಗತ್ಯ. ಆರಂಭದಲ್ಲಿ ಈ ನೋವನ್ನು ನಿರ್ಲಕ್ಷಿಸಿದರೆ ಕ್ರಮೇಣ ನೋವು ಮತ್ತು ತಲೆಸುತ್ತುವ ಸಮಸ್ಯೆ ಉಲ್ಬಣವಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications