ಸೆಲೆಬ್ರಿಟಿಯಾಗಿದ್ದೂ ಫೋನ್, ಸೊಶಿಯಲ್ ಮಿಡಿಯಾ ಇಲ್ಲದೆ ಬೆಳೆದ ಆರಾಧ್ಯ:ಐಶ್ವರ್ಯಾ ರೈಯಿಂದ ಕಲಿಯಬೇಕಾದ ಪೇರೆಂಟಿಂಗ್ ಟಿಪ್ಸ್ ಇಲ್ಲ
ಇದು ಸ್ಮಾರ್ಟ್ ಯುಗ. ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬರ ಕೈಯ್ಯಲ್ಲಿಯೂ ಸ್ಮಾರ್ಟ್ ಪೋನ್ ಕಾಣಿಸುತ್ತದೆ.ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ತಮ್ಮ ಮೊದಲ ಸ್ಮಾರ್ಟ್‌ಫೋನ್ ಪಡೆಯುತ್ತಾರೆ. ಸ್ಮಾರ್ಟ್ ಫೋನ್ ಕೈಯ್ಯಲ್ಲಿ ಇದೆ ಎಂದ ಮೇಲೆ ಸಾಮಾಜಿಕ ಮಾಧ್ಯಮಗಳಿಗೆ ಮಕ್ಕಳು ತೆರೆದುಕೊಳ್ಳುವುದು ತೀರಾ ಸಾಮಾನ್ಯ. ಒಮ್ಮೆ ಸಾಮಾಜಿಕ ಮಾಧ್ಯಮದ ಗೀಳಿಗೆ ಬಿದ್ದರೆ ಮತ್ತೆ ಮಕ್ಕಳನ್ನು ಅದರಿಂದ ಹೊರ ತರುವುದು ಬಹಳ ಕಷ್ಟ. ಇದೆಲ್ಲಾ ವಿಷಯಗಳನ್ನು ಅರಿತಿರುವ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯಳಿಗಾಗಿ ಬೇರೆಯೇ ಹಾದಿಯನ್ನು ಹಿಡಿದಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯಾಳನ್ನು ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ದೂರವಿಟ್ಟಿದ್ದಾರೆ. ಪುಸ್ತಕಗಳು ಹಾಗೂ ನೈಜ ಪ್ರಪಂಚದೊಂದಿಗೆ ಬೆರೆಸುವ ಮೂಲಕ ವಿಭಿನ್ನ ಹಾಗೂ ಸಾಮಾನ್ಯ ಬಾಲ್ಯವನ್ನು ತಮ್ಮ ಮಗಳಿಗೆ ನೀಡಿದ್ದಾರೆ. ಸೆಲೆಬ್ರಿಟಿಯಾಗಿದ್ದುಕೊಂಡು ಐಶ್ವರ್ಯಾ ಅನುಸರಿಸಿರುವ ಈ ಕ್ರಮ ಮಕ್ಕಳ ಮಾನಸಿಕ ಆರೋಗ್ಯವನ್ನು ರಕ್ಷಿಸಲು ಪೋಷಕರು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಒತ್ತಿ ಹೇಳುತ್ತದೆ.
ರೆಡ್ ಸೀ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯಳ ಸಾಮಾಜಿಕ ಜಾಲತಾಣದ ಖಾತೆಗಳ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ನಕಲಿ ಪ್ರೊಫೈಲ್‌ಗಳ ಕುರಿತು ಮಾತನಾಡಿದ್ದಾರೆ. ಈ ಮೂಲಕ ಆರಾಧ್ಯ ಸಾಮಾಜಿಕ ಮಾಧ್ಯಮದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಗೌಪ್ಯತೆ, ಕುಟುಂಬದ ಜೊತೆಗಿನ ಸಂಬಂಧ ಮತ್ತು ಸಮತೋಲಿತ ಬಾಲ್ಯದ ಮೇಲೆ ಕೇಂದ್ರೀಕರಿಸಿರುವ ಬಗ್ಗೆ ಹೇಳಿದ್ದಾರೆ.

ಪೋಷಕರು ಅನುಸರಿಸಬಹುದಾದ ನಾಲ್ಕು ಪೇರೆಂಟಿಂಗ್ ಟಿಪ್ಸ್ ಇಲ್ಲಿದೆ:
ಸೋಶಿಯಲ್ ಮೀಡಿಯಾದಿಂದ ದೂರ:
ಬಾಲ್ಯದಿಂದಲೇ ಸಾಮಾಜಿಕ ಮಾಧ್ಯಮವನ್ನು ಮಕ್ಕಳಿಗೆ ಪರಿಚಯಿಸುವ ಅಗತ್ಯವಿಲ್ಲ. ಸಾಮಾಜಿಕ ಮಾಧ್ಯಮ ಬಾಲ್ಯದ ಭಾಗವಾಗಿರಬೇಕು ಎನ್ನುವುದು ಅನಿವಾರ್ಯವಲ್ಲ. ಎಲ್ಲರಲ್ಲಿಯೂ ಇದೆ ಎನ್ನುವ ಕಾರಣಕ್ಕೆ ಅನೇಕ ಪೋಷಕರು ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ಮಕ್ಕಳಿಗೂ ನೀಡುತ್ತಾರೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಖಾತೆ ತೆರೆಯಲು ಅನುಮತಿ ನೀಡುತ್ತಾರೆ. ಆದರೆ ಇದನ್ನು ನಿಭಾಯಿಸಲು ಮಗು ಮಾನಸಿಕವಾಗಿ ಪ್ರಬುದ್ಧವಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಪಡುವುದಿಲ್ಲ. ಇದು ಅವರ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಇದರ ಬದಲು ಈ ಒತ್ತಡವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಸಾಕಷ್ಟು ಪ್ರಬುದ್ಧವಾದಾಗ ಮಾತ್ರ ಡಿಜಿಟಲ್ ದುನಿಯಾವನ್ನು ಮಕ್ಕಳಿಗೆ ಪರಿಚಯಿಸಬಹುದು.
ಬಾಲ್ಯವು ಪರದೆಗಿಂತ ದೊಡ್ಡದಾಗಿರಲಿ:
ಆರಾಧ್ಯ ಪಾಲನೆಯು ಬಾಲ್ಯವು ಸಂಪೂರ್ಣವಾಗಿ ಡಿಜಿಟಲ್ ಸಾಧನಗಳ ಸುತ್ತ ಸುತ್ತಬಾರದು ಎಂಬ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಮಕ್ಕಳನ್ನು ಸ್ಕೀನ್‌ನಿಂದ ದೂರವಿಡುವುದು ಎಂದರೆ ಕೇವಲ ತಂತ್ರಜ್ಞಾನವನ್ನು ಸೀಮಿತಗೊಳಿಸುವುದಲ್ಲ. ಬದಲಿಗೆ ಅವರ ಬೆಳವಣಿಗೆಗೆ ಸಹಾಯ ಮಾಡುವ ಇತರ ಅನುಭವಗಳಿಗೆ ಅವಕಾಶ ಮಾಡಿಕೊಡುವುದು ಎಂದರ್ಥ. ಕುಟುಂಬ ಸಂಭಾಷಣೆಗಳು, ಹವ್ಯಾಸಗಳು, ಹೊರಾಂಗಣ ಚಟುವಟಿಕೆಗಳು, ಓದುವುದು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಇವೆಲ್ಲವೂ ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸ್ಕ್ರೀನ್ ಸಮಯವನ್ನು ಕಡಿತ ಮಾಡುವ ಮೂಲಕ ಪೋಷಕರು ಮಕ್ಕಳು ತಮ್ಮ ಸುತ್ತಲಿನ ನೈಜ ಪ್ರಪಂಚದ ಮೇಲೆ ಗಮನಹರಿಸಲು ಪ್ರೋತ್ಸಾಹಿಸಬಹುದು.
ಮಗುವಿನ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ:
ಆರಾಧ್ಯಳನ್ನು ಬೆಳೆಸುವಲ್ಲಿ ಐಶ್ವರ್ಯಾ ಅವರ ಪಾತ್ರದ ಬಗ್ಗೆ ಅಭಿಷೇಕ್ ಬಚ್ಚನ್ ಈ ಹಿಂದೆಯೂ ಅನೇಕ ಬಾರಿ ಮಾತನಾಡಿದ್ದಾರೆ. ಪೋಷಕರು ತಮ್ಮ ಮಕ್ಕಳ ದೈನಂದಿನ ಜೀವನದಲ್ಲಿ ನಿಕಟವಾಗಿ ತೊಡಗಿಸಿಕೊಂಡಾಗ ಮಕ್ಕಳು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಶಾಲಾ ಕೆಲಸದಲ್ಲಿ ಸಹಾಯ ಮಾಡುವುದು, ನಿಯಮಿತ ಸಂಭಾಷಣೆಗಳನ್ನು ನಡೆಸುವುದು ಮತ್ತು ಮಗುವಿನ ಆಸಕ್ತಿಗಳನ್ನು ಅರ್ಥಮಾಡಿಕೊಳ್ಳುವುದು ಮುಂತಾದ ಸರಳ ವಿಷಯಗಳು ಪೋಷಕ-ಮಕ್ಕಳ ಬಾಂಧವ್ಯವನ್ನು ಬಲಪಡಿಸುತ್ತದೆ.
ಮಗುವಿನ ಗೌಪ್ಯತೆಯನ್ನು ರಕ್ಷಿಸಿ:
ಸಾಮಾಜಿಕ ಮಾಧ್ಯಮದ ಯುಗದಲ್ಲಿ, ಮಗುವಿನ ಜೀವನದ ಹಲವು ಕ್ಷಣಗಳನ್ನು ಆನ್‌ಲೈನ್‌ನಲ್ಲಿ ತಕ್ಷಣವೇ ಹಂಚಿಕೊಳ್ಳಲಾಗುತ್ತದೆ. ಆರಾಧ್ಯಳನ್ನು ಸಾರ್ವಜನಿಕ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಿಂದ ದೂರವಿಡುವ ಐಶ್ವರ್ಯಾ ಅವರ ನಿರ್ಧಾರವು ಮಗುವಿನ ಗೌಪ್ಯತೆಯನ್ನು ರಕ್ಷಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ. ಪ್ರತಿ ಕ್ಷಣವನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡುವ ಪ್ರವೃತಿಯು ಮಕ್ಕಳು ಬೆಳೆಯಲು ಮತ್ತು ತಪ್ಪುಗಳನ್ನು ಮಾಡಲು ಅವಕಾಶ ನೀಡಿದಂತಾಗುತ್ತದೆ. ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಳ್ಳುವ ವಿಷಯಗಳ ಸುತ್ತಲೂ ಆರೋಗ್ಯಕರ ಗಡಿಗಳನ್ನು ಹೊಂದಿಸುವುದು, ಅವರ ವೈಯಕ್ತಿಕ ಸ್ಥಳ ಮತ್ತು ಗುರುತನ್ನು ರಕ್ಷಿಸಲು ಸಹಾಯ ಮಾಡುತ್ತದೆ.ಇದರರ್ಥ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಕ್ಕಳ ಫೋಟೋಗಳು, ವೀಡಿಯೊಗಳು ಅಥವಾ ವೈಯಕ್ತಿಕ ವಿವರಗಳನ್ನು ಪೋಸ್ಟ್ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಅನಿವಾರ್ಯ.
ಐಶ್ವರ್ಯಾ ರೈ ಮಗಳ ಆರೈಕೆ ಶೈಲಿ ಯಾಕೆ ಭಿನ್ನ:
ಐಶ್ವರ್ಯಾ ರೈ ಬಚ್ಚನ್ ಸೆಲೆಬ್ರಿಟಿಯಾಗಿದ್ದರೂ ಮಕ್ಕಳ ಆರೈಕೆಯಲ್ಲಿ ಅವರು ಅನುಸರಿಸುತ್ತಿರುವ ಫಿಲೋಸಫಿ ಎಲ್ಲರೂ ಅಳವಡಿಸಿಕೊಳ್ಳುವಂಥದ್ದು. ತನ್ನ ಮಗಳಿಗೆ ಅತ್ಯುತ್ತಮ ಬಾಲ್ಯವನ್ನು ನೀಡುವುದು, ಅನಗತ್ಯ ಆನ್‌ಲೈನ್ ಮಾನ್ಯತೆಯನ್ನು ಸೀಮಿತಗೊಳಿಸುವುದು ಮತ್ತು ನೈಜ ಜಗತ್ತಿನ ಅನುಭವಗಳಿಗೆ ಆದ್ಯತೆ ನೀಡುವುದರ ಮೇಲೆ ಐಶ್ವರ್ಯಾ ಗಮನ ಕೇಂದ್ರೀಕೃತವಾಗಿದೆ.
ಡಿಜಿಟಲ್ ಯುಗದಲ್ಲಿ ಮಕ್ಕಳನ್ನು ಬೆಳೆಸುವ ಸವಾಲುಗಳನ್ನು ಎದುರಿಸುತ್ತಿರುವ ಪೋಷಕರಿಗೆ, ಐಶ್ವರ್ಯಾ ಅನುಸರಿಸುವ ಈ ಪೇರೆಂಟಿಂಗ್ ಟಿಪ್ಸ್ ಉತ್ತಮ ಪಾಠವಾಗಬಹುದು. ಇಂಟರ್ನೆಟ್ ಮಕ್ಕಳ ಮೇಲೆ ಹಕ್ಕು ಸಾಧಿಸುವ ಮೊದಲು ನಿಜ ಜೀವನದಲ್ಲಿ ಪೋಷಕರು ಬೇರೂರುವಂತೆ ನೋಡಿಕೊಳ್ಳಬೇಕು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications