ಈ ಗಿಡಗಳಿಗೆ ಮಣ್ಣಿನ ಅವಶ್ಯಕತೆ ಇಲ್ಲ, ಗಾಜಿನ ಜಾರಿನಲ್ಲಿ ಬರೀ ನೀರಿನಲ್ಲೇ ಬೆಳೆಯುವ ಆಕರ್ಷಕ ಸಸ್ಯಗಳು
ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ ಗಿಡಗಳನ್ನು ಬೆಳೆಸುವ ಪ್ರವೃತಿ ಹೆಚ್ಚುತ್ತಿದೆ. ಅದರಲ್ಲೂ ಪಾಟ್‌ಗಳಲ್ಲಿ ಗಿಡಗಳನ್ನು ನೆಡುವ ಬದಲು ಗಾಜಿನ ಜಾರಿನಲ್ಲಿ ಜಲಸಸ್ಯಗಳನ್ನು ಅಥವಾ ವಾಟರ್ ಪ್ಲಾಂಟ್‌ಗಳನ್ನು ಬೆಳೆಸುವ ಟ್ರೆಂಡ್ ಜೋರಾಗಿದೆ. ಪಾಟ್‌ಗಳಲ್ಲಿ ಮಣ್ಣಿನ ಗಿಡಗಳನ್ನು ಬೆಳೆಸುವಾಗ ಅದರ ಆರೈಕೆಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಅಲ್ಲದೆ ಹೆಚ್ಚು ಜಾಗವನ್ನು ಕೂಡಾ ಅದು ತೆಗೆದುಕೊಳ್ಳುತ್ತದೆ. ಇಂಥ ಸಮಸ್ಯೆ ಇರುವವರು ಗಾಜಿನ ಜಾರಿನಲ್ಲಿ ಗಿಡ ಬೆಳೆಸುವ ವಿಧಾನವನ್ನು ಆರಿಸಿಕೊಳ್ಳಬಹುದು.
ಇದರ ಪ್ರಮುಖ ಅನುಕೂಲವೆಂದರೆ, ಇದಕ್ಕೆ ಹೆಚ್ಚಿನ ಪೋಷಣೆ ಅಥವಾ ನಿರ್ವಹಣೆಯ ಅಗತ್ಯವಿರುವುದಿಲ್ಲ. ಅಲ್ಲದೆ, ಪಾರದರ್ಶಕ ಗಾಜಿನ ಪಾತ್ರೆಗಳಲ್ಲಿ ಗಿಡಗಳ ಹಸಿರು ಎಲೆಗಳ ಜೊತೆಗೆ ಅವುಗಳ ಬೇರುಗಳೂ ಕಾಣಿಸುವುದರಿಂದ ಇದು ಮನೆಗೆ ಆಧುನಿಕ ಮತ್ತು ಆಕರ್ಷಕ ಲುಕ್ ನೀಡುತ್ತದೆ. ನಿಮ್ಮ ಲಿವಿಂಗ್ ರೂಮ್ ಟೇಬಲ್, ಕಚೇರಿಯ ಮೇಜು ಅಥವಾ ಬಾಲ್ಕನಿಯಲ್ಲಿ ಈ ವಾಟರ್ ಪ್ಲಾಂಟ್‌ಗಳನ್ನು ಇಡಬಹುದಾಗಿದೆ.

1. ಲಕ್ಕಿ ಬ್ಯಾಂಬೂ (Lucky Bamboo) - ಲಕ್ಕಿ ಬ್ಯಾಂಬೂವನ್ನು ಕಚೇರಿ ಮತ್ತು ಮನೆಗಳಲ್ಲಿ ಆರಾಮವಾಗಿ ಬೆಳೆಸಬಹುದು. ಗಾಜಿನ ಜಾರಿನಲ್ಲಿ ಬೆಳೆಸುವ ಅತ್ಯಂತ ಜನಪ್ರಿಯ ಸಸ್ಯವಾಗಿದೆ. ಇದರ ಕಾಂಪ್ಯಾಕ್ಟ್ ಗಾತ್ರ ಮತ್ತು ಆಕರ್ಷಕ ಹಸಿರು ಕಾಂಡಗಳು ಮನೆಗೆ ಐಶ್ವರ್ಯ ಹಾಗೂ ಧನಾತ್ಮಕ ಶಕ್ತಿಯನ್ನು ತರುತ್ತವೆ ಎಂಬ ನಂಬಿಕೆಯೂ ಇದೆ. ಇದಕ್ಕೆ ನೇರವಾದ ಸೂರ್ಯನ ಬೆಳಕಿನ ಅಗತ್ಯವಿರುವುದಿಲ್ಲ, ವಾರಕ್ಕೊಮ್ಮೆ ನೀರು ಬದಲಾಯಿಸಿದರೆ ಸಾಕು.

2. ಮನಿ ಪ್ಲಾಂಟ್ (Money Plant) - ಇದು ಕೂಡಾ ಸುಲಭವಾಗಿ ನಿರ್ವಹಿಸಬಹುದಾದ ಗಿಡ. ಈ ಗಿಡದ ಒಂದು ಸಣ್ಣ ಕಾಂಡವನ್ನು ಕತ್ತರಿಸಿ ನೀರಿರುವ ಜಾರಿನಲ್ಲಿ ಇಟ್ಟರೆ ಸಾಕು, ಕೆಲವೇ ದಿನಗಳಲ್ಲಿ ಬೇರು ಬಿಡುತ್ತದೆ. ಇದರ ಹೃದಯದ ಆಕಾರದ ಎಲೆಗಳು ಮತ್ತು ಕೆಳಗೆ ಹರಡುವ ಬಳ್ಳಿಗಳು ಗಾಜಿನ ಪಾತ್ರೆಯಲ್ಲಿ ಅದ್ಭುತವಾಗಿ ಕಾಣುತ್ತವೆ.
3. ಫಿಲೋಡೆಂಡ್ರಾನ್ (Philodendron) - ಹೊಳೆಯುವ ಹಸಿರು ಎಲೆಗಳನ್ನು ಹೊಂದಿರುವ ಫಿಲೋಡೆಂಡ್ರಾನ್ ಗಿಡಗಳು ಆಧುನಿಕ ಮನೆಗಳಿಗೆ ಹೇಳಿ ಮಾಡಿಸಿದಂತೆ ಇರುತ್ತವೆ. ನೀರಿನಲ್ಲಿ ಅತ್ಯಂತ ವೇಗವಾಗಿ ಬೇರು ಬಿಡುವ ಈ ಸಸ್ಯಕ್ಕೆ ಉತ್ತಮವಾದ ಪರೋಕ್ಷ ಬೆಳಕು ಬೇಕಾಗುತ್ತದೆ. ಮಾತ್ರವಲ್ಲ ನಿಯಮಿತವಾಗಿ ಇದರ ನೀರು ಬದಲಾಯಿಸುತ್ತಿರಬೇಕಾಗುತ್ತದೆ.

4. ಸ್ಪೈಡರ್ ಪ್ಲಾಂಟ್ (Spider Plant) - ಉದ್ದನೆಯ ಮತ್ತು ಗೆರೆಗಳಿಂದ ಕೂಡಿದ ಎಲೆಗಳನ್ನು ಹೊಂದಿರುವ ಸ್ಪೈಡರ್ ಪ್ಲಾಂಟ್ ನೋಡಲು ಅತ್ಯಂತ ಆಕರ್ಷಕವಾಗಿದೆ. ಈ ಗಿಡದ ಬೇಬಿ ಪ್ಲಾಂಟ್ ಅನ್ನು ಸುಲಭವಾಗಿ ನೀರಿನಲ್ಲಿ ಬೆಳೆಸಬಹುದು. ಯಾವುದೇ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳುವ ಈ ಸಸ್ಯವು ದೀರ್ಘಕಾಲ ಬಾಳಿಕೆ ಬರುತ್ತದೆ.
5. ಪೀಸ್ ಲಿಲ್ಲಿ (Peace Lily) - ಸಾಮಾನ್ಯವಾಗಿ ಪೀಸ್ ಲಿಲ್ಲಿಯನ್ನು ಮಣ್ಣಿನಲ್ಲಿ ಬೆಳೆಸುತ್ತಾರಾದರೂ, ಸೂಕ್ತ ಕಾಳಜಿ ವಹಿಸಿದರೆ ಇದನ್ನು ನೀರಿನಲ್ಲೂ ಬೆಳೆಸಬಹುದು. ಇದರ ದಟ್ಟ ಹಸಿರು ಎಲೆಗಳು ಮತ್ತು ಬಿಳಿ ಬಣ್ಣದ ಹೂವುಗಳು ಮನೆಗೆ ಪ್ರಶಾಂತತೆಯ ಅನುಭೂತಿ ನೀಡುತ್ತವೆ. ಗಾಜಿನ ಜಾರಿನಲ್ಲಿ ಇದರ ಬಿಳಿ ಬೇರುಗಳ ನೋಟ ನೋಡುಗರನ್ನು ಸೆಳೆಯುತ್ತದೆ.
6. ಇಂಗ್ಲಿಷ್ ಐವಿ (English Ivy) - ನಿಮ್ಮ ಮನೆಯ ಕಿಟಕಿ ಅಥವಾ ಶೆಲ್ಫ್‌ಗಳನ್ನು ಅಲಂಕರಿಸಲು ಇಂಗ್ಲಿಷ್ ಐವಿ ಅತ್ಯುತ್ತಮ ಆಯ್ಕೆ. ನೀರಿನಲ್ಲಿ ಸುಲಭವಾಗಿ ಬೇರುಬಿಡುವ ಈ ಬಳ್ಳಿ, ಗಾಜಿನ ಜಾರಿನಿಂದ ಕೆಳಗೆ ಹರಡುತ್ತಾ ಬೆಳೆಯುವುದರಿಂದ ಮನೆಗೆ ಸಾಂಪ್ರದಾಯಿಕ ಹಾಗೂ ಸುಂದರ ನೋಟವನ್ನು ನೀಡುತ್ತದೆ.
7. ಸಿಂಗೋನಿಯಂ (Syngonium) - 'ಆರೋಹೆಡ್' ಸಸ್ಯ ಎಂದೂ ಕರೆಯಲ್ಪಡುವ ಸಿಂಗೋನಿಯಂ ಸಸ್ಯವು ಹಸಿರು, ಕ್ರೀಮ್ ಮತ್ತು ಗುಲಾಬಿ ಬಣ್ಣದ ಎಲೆಗಳನ್ನು ಹೊಂದಿರುತ್ತದೆ. ನೀರಿನಲ್ಲಿ ಸಣ್ಣದಾಗಿ ಮತ್ತು ಕಾಂಪ್ಯಾಕ್ಟ್ ಆಗಿ ಬೆಳೆಯುವ ಕಾರಣ, ಸಣ್ಣ ಗಾಜಿನ ಬಾಟಲಿ ಅಥವಾ ಜಾರುಗಳಲ್ಲಿ ಇಡಲು ಇದು ಅತ್ಯಂತ ಸೂಕ್ತವಾಗಿದೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಒಂದಿದೆ. ಈ ಎಲ್ಲಾ ಜಲಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ನೀರನ್ನು ಬದಲಾಯಿಸುವುದು ಮತ್ತು ಗಿಡಗಳನ್ನು ನೇರ ಸೂರ್ಯನ ಬೆಳಕಿನಿಂದ ದೂರವಿಡುವುದು ಬಹಳ ಮುಖ್ಯವಾಗಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications