'ಬಿಟ್ಟಿ ಭಾಗ್ಯ ಬೇಡ.. ನಮಗೆ ಹಿಂದುತ್ವವೇ ಸಾಕು': ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, 132 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರವನ್ನು ರಚಿಸಲಿದೆ. ಬಿಜೆಪಿ ಕೇವಲ 62 ಕ್ಷೇತ್ರದಲ್ಲಿ ಗೆದಿದ್ದು, ಮುಂದಿನ 5 ವರ್ಷದಲ್ಲಿ ವಿರೋಧ ಪಕ್ಷದಲ್ಲಿ ಇರಬೇಕಾಗಿದೆ.
ರಾಜ್ಯದ ಹಳೆ ಮೈಸೂರು, ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಜೆಪಿ ಹೆಚ್ಚಿನ ಸೀಟ್ ಪಡೆಯುವಲ್ಲಿ ವಿಫಲವಾದರೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭರ್ಜರಿಯಾಗಿ ಜಯಭೇರಿ ಬಾರಿಸಿದೆ. ಸದ್ಯ, ಇದೇ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

'ಇಡೀ ಕರ್ನಾಟಕದಲ್ಲಿ ಹಿಂದುತ್ವದ ಮೇಲೆ ಮತ ಹಾಕುವ ಜನರಿರುವುದು ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಾತ್ರ. ಉಳಿದೆಡೆ ಬಿಟ್ಟಿ ಭಾಗ್ಯಗಳಿಗೆ ಮರಳಾಗುತ್ತಾರೆ' ಎಂಬ ಹೇಳಿಕೆಯಿರುವ ವಾಟ್ಸಾಪ್ ಸ್ಟೇಟಸ್ ಗಳು ಕರಾವಳಿಯಲ್ಲಿ ಹರಿದಾಡುತ್ತಿವೆ. ಇದು ಮಾತ್ರವಲ್ಲದೆ, ಗಟ್ಟಿ ಹಿಂದುತ್ವವನ್ನು ಸಾರುವ ವಿವಿಧ ಸ್ಟೇಟಸ್ ಗಳು ಸಹ ವೈರಲ್ ಆಗುತ್ತಿವೆ.
ಇದಕ್ಕೆ ಕಾರಣವೆಂದರೆ, ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿರುವುದು. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 8 ಕ್ಷೇತ್ರಗಳಲ್ಲಿ 6 ರಲ್ಲಿ ಬಿಜೆಪಿ, ಹಾಗೂ ಎರಡರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿರುವುದು. ಇನ್ನುಳಿದಂತೆ ರಾಜ್ಯದ ಇತರೆಡೆಯ ಜನರು ಬಿಜೆಪಿಯನ್ನು ಅಷ್ಟರಮಟ್ಟಿಗೆ ಬೆಂಬಲಿಸದಿರುವುದು.
ಮೊದಲಿಗೆ ಉಡುಪಿ ಜಿಲ್ಲೆಯಲ್ಲಿ ಗೆದ್ದಿರುವ ಬಿಜೆಪಿ ಅಭ್ಯರ್ಥಿಗಳ ವಿವರವನ್ನು ನೋಡುವುದಾದರೆ, ಕಾರ್ಕಳದಲ್ಲಿ ಸಚಿವ, ಹಾಲಿ ಶಾಸಕ ಸುನೀಲ್ ಕುಮಾರ್, ಉಡುಪಿ ಕ್ಷೇತ್ರದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಯಶಪಾಲ್ ಸುವರ್ಣ, ಉಡುಪಿಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಂಬಲಿತ ಕಿರಣ್ ಕೊಡ್ಗಿ, ಬೈಂದೂರಿನಲ್ಲಿ ಗುರುರಾಜ ಗಂಟಿಹೊಳಿ ಗೆಲವು ಸಾಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಜಯಗಳಿಸಿರುವ ಕ್ಷೇತ್ರಗಳ ವಿವರ ತಿಳಿಯುವುದಾದರೆ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಡಿ.ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಭರತ್ ಶೆಟ್ಟಿ ವೈ, ಬಂಟ್ವಾಳ ವಿಧಾನಸಭಾ ಕ್ಷೇತ್ರ ರಾಜೇಶ್ ನಾಯ್ಕ್, ಪುತ್ತೂರು ಅಶೋಕ ರೈ, ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಭಾಗೀರಥಿ ಮುರುಳ್ಯ, ಮೂಡಬಿದ್ರೆಯಿಂದ ಉಮಾನಾಥ್ ಕೋಟ್ಯಾನ್, ಬೆಳ್ತಂಗಡಿಯಿಂದ ಹರೀಶ್‍ಪೂಂಜ ಜಯಶಾಲಿಯಾಗಿದ್ದಾರೆ.












Click it and Unblock the Notifications