ಇಡ್ಲಿ ಮತ್ತು ವಡೆಯಲ್ಲಿ ಸಮಾನತೆ ತರುವ ಮಹತ್ವದ ಆದೇಶ
"ಇಡ್ಲಿಗೇಕೆ ತೂತಿಲ್ಲ?" ವಡೆಗೆ ತೂತಿರುವಾಗ ಇಡ್ಲಿಗೇಕೆ ತೂತಿಲ್ಲ ಎನ್ನುವ ದೂರೊಂದಕ್ಕೆ ಸಂಬಂಧಿಸಿದಂತೆ ಸುದೀರ್ಘ ಮೂರು ವರ್ಷಗಳ ವಿಚಾರಣೆ ನಡೆಸಿದ ಜಾಲಳ್ಳಿ ಕಟ್ಟೆ ಪಂಚಾಯ್ತಿ, ಸಮಾನತೆ ಕಾಯ್ದುಕೊಳ್ಳುವ ಸಲುವಾಗಿ ಇನ್ನುಮುಂದೆ ಇಡ್ಲಿಗೂ ತೂತು ಇಡಬೇಕೆಂದು ತಯಾರಕರಿಗೆ ಆದೇಶಿಸಿದೆ.
ಯುಎಸ್ ಪಿಜ್ಜಾ ಔಟ್ಲೆಟ್ ಒಂದರ ಪರಿಶೀಲನೆಗಾಗಿ ಆಗಮಿಸಿದ್ದ ವೇಳೆ ಅದರ ಹಿರಿಯ ಅಧಿಕಾರಿಯೊಬ್ಬರು ಇಡ್ಲಿವಡೆ ತಿನ್ನಲು ಜಾಲಳ್ಳಿ ಅಯ್ಯಪ್ಪ ದೇವಾಲಯದ ಸಮೀಪದ ದರ್ಶಿನಿಯೊಂದಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಇಡ್ಲಿಗೆ ತೂತಿಲ್ಲದಿರುವ ವಿಚಾರ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಆ ಅಸಮಾನತೆಯ ವಿರುದ್ಧ ಅವರು ಕಟ್ಟೆ ಪಂಚಾಯ್ತಿಯ ಕದ ತಟ್ಟಿದ್ದರು.
ಪ್ರತಿವಾದಿಗಳ ಪರ "ನಾವು ಹಿಂದಿನಿಂದಲೂ ಇಡ್ಲಿಯನ್ನು ಹಬೆಯಲ್ಲಿ ಬೇಯಿಸುತ್ತೇವೆ ಮತ್ತು ವಡೆಯನ್ನು ಎಣ್ಣೆಯಲ್ಲಿ ಕರಿಯುತ್ತಾ ಬಂದಿದ್ದೇವೆ, ಇಡ್ಲಿಗೆ ತೂತು ಮಾಡುವ ಸಂಪ್ರದಾಯ ನಮ್ಮಲ್ಲಿಲ್ಲ" ಎಂದು ಕೃಷ್ಣಭಟ್ಟರು ವಾದ ಮಂಡಿಸಿದರು.

ಕೃಷ್ಣಭಟ್ಟರನ್ನು ತರಾಟೆಗೆ ತೆಗೆದುಕೊಂಡ ಗೌಡ್ರು, ಪಟೇಲರು ಮತ್ತು ಶ್ಯಾನುಭೋಗರನ್ನೊಳಗೊಂಡ (ಇವು ಜಾತಿ ಸೂಚಕ ಪದಗಳಲ್ಲ) ತ್ರಿಸದಸ್ಯ ಕಟ್ಟೆ "ಹಿಂದಿನಿಂದಲೂ ಮಾಡುತ್ತಿರಲಿಲ್ಲ, ನಮ್ಮ ಸಂಪ್ರದಾಯದಲ್ಲಿಲ್ಲ ಎನ್ನುವ ಕಾರಣಗಳನ್ನು ನೀಡಿ ಅಸಮಾನತೆಯ ಸಮರ್ಥನೆಯನ್ನು ಒಪ್ಪಲಾಗದು ಎಂದು ತಮ್ಮ ಅಸಮಾಧಾನ ಹೊರಹಾಕಿತು.
ಬೇಕಿದ್ದರೆ ಇಡ್ಲಿಯನ್ನೂ ಎಣ್ಣೆಯಲ್ಲೇ ಕರಿಯಿರಿ, ಆದರೆ ಅದರಲ್ಲಿ ತೂತು ಮಾತ್ರ ಇರಲೇಬೇಕು ಎಂದು ಕಟ್ಟೆ ಸ್ಪಷ್ಟ ಆದೇಶ ನೀಡಿತು. ಇಂದು ಬೆಳಿಗ್ಗೆ ತಿಂಡಿಗೂ ಮೊದಲೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಕಟ್ಟೆಯು ತನ್ನ ಆದೇಶಪಾಲನೆಯ ಹೊಣೆಯನ್ನು ಊರಿನ ಚಿ.ತು.ಸಂಘಕ್ಕೆ ವಹಿಸಿದೆ.
ತಮ್ಮ ವ್ಯಾಪ್ತಿಗೆ ಬರುವ ಯಾವುದೇ ಹೋಟೆಲುಗಳಲ್ಲಿ ತನ್ನ ಆದೇಶಪಾಲನೆಯಾಗದಿದ್ದಲ್ಲಿ ಅದನ್ನು ನೇರವಾಗಿ ತನ್ನ ಗಮನಕ್ಕೆ ತರುವಂತೆ ಚಿ.ತು.ಸಂಘಕ್ಕೆ ಅದು ನಿರ್ದೇಶಿಸಿದೆ.
ಕಟ್ಟೆಯು, ಮುಂದಿನ ವಾರ ಗಣಿ ಉದ್ಯಮಿಯೊಬ್ಬರು ಸಲ್ಲಿಸಿರುವ " ಬಾಳೆಹಣ್ಣಿಗೆ ಬೀಜವೇಕಿಲ್ಲ?" ಎನ್ನುವ ದೂರನ್ನು ಕೈಗೆತ್ತಿಕೊಳ್ಳಲಿದೆ. (ವಾಟ್ಸಾಪ್ ನಲ್ಲಿ ಬಂದಿದ್ದು)












Click it and Unblock the Notifications